ಶೆಹ್ಲಾ ರಶೀದ್‌
ಸುದ್ದಿ ಸಾರ

ರವಿ ಪೂಜಾರಿ ಹೆಸರಲ್ಲಿ ಜೆಎನ್‌ಯು ವಿದ್ಯಾರ್ಥಿ ನಾಯಕಿ ಶೆಹ್ಲಾ ರಶೀದ್‌ಗೆ ಕೊಲೆ ಬೆದರಿಕೆ ಸಂದೇಶ

ಭೂಗತ ಪಾತಕಿ ರವಿ ಪೂಜಾರಿ ಹೆಸರಲ್ಲಿ ತಮಗೆ ಬೆದರಿಕೆ ಸಂದೇಶ ಬಂದಿರುವುದಾಗಿ ಹೇಳಿರುವ ಜೆಎನ್‌ಯು ವಿದ್ಯಾರ್ಥಿ ನಾಯಕಿ ಶೆಹ್ಲಾ ರಶೀದ್‌ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.

ಭೂಗತ ಪಾತಕಿ ರವಿ ಪೂಜಾರಿ ತಮಗೆ ಕೊಲೆ ಬೆದರಿಕೆ ಹಾಕಿರುವುದಾಗಿ ಜೆಎನ್‌ಯು ವಿದ್ಯಾರ್ಥಿ ನಾಯಕಿ ಶೆಹ್ಲಾ ರಶೀದ್‌ ಜಮ್ಮು – ಕಾಶ್ಮೀರ ಪೊಲೀಸರಿಗೆ ದೂರು ನೀಡಿದ್ದಾರೆ.

ರವಿ ಪೂಜಾರಿ ಹೆಸರಿನಲ್ಲಿ ಬಂದಿರುವ ಸಂದೇಶವನ್ನು ಶೆಹ್ಲಾ ಟ್ವೀಟ್‌ ಮಾಡಿದ್ದಾರೆ. “ನಿನ್ನ ಬಾಯಿ ಮುಚ್ಚು. ಇಲ್ಲವಾದರೆ ನಾವು ಶಾಶ್ವತವಾಗಿ ನಿನ್ನ ಬಾಯಿ ಮುಚ್ಚುತ್ತೇವೆ. ಇದನ್ನು ಉಮರ್‌ ಖಾಲಿದ್‌ ಮತ್ತು ಜಿಗ್ನೇಶ್‌ ಮೇವಾನಿಗೂ ಹೇಳು” ಎಂದು ರವಿ ಪೂಜಾರಿ ಹೆಸರಿನಲ್ಲಿ ಕಳಿಸಿರುವ ಸಂದೇಶದಲ್ಲಿ ಬೆದರಿಸಲಾಗಿದೆ.

ದೂರು ಸ್ವೀಕರಿಸಿರುವ ಜಮ್ಮು- ಕಾಶ್ಮೀರ ಪೊಲೀಸರು ರವಿ ಪೂಜಾರಿ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ ಎಂದು ಮತ್ತೊಂದು ಟ್ವೀಟ್‌ನಲ್ಲಿ ಶೆಹ್ಲಾ ಹೇಳಿದ್ದಾರೆ.

ಜೆಎನ್‌ಯು ವಿದ್ಯಾರ್ಥಿ ನಾಯಕ ಉಮರ್‌ ಖಾಲಿದ್‌ ಮೇಲೆ ಸೋಮವಾರ ದೆಹಲಿಯಲ್ಲಿ ಗುಂಡಿನ ದಾಳಿ ನಡೆದಿತ್ತು. ಈ ದಾಳಿಯಿಂದ ಉಮರ್‌ ಖಾಲಿದ್‌ ಪಾರಾಗಿದ್ದರು.

ರವಿ ಪೂಜಾರಿ ಹೆಸರಿನಲ್ಲಿ ಶೆಹ್ಲಾಗೆ ಬಂದಿರುವ ಸಂದೇಶಕ್ಕೂ, ಉಮರ್‌ ಖಾಲಿದ್‌ ಮೇಲೆ ನಡೆದ ಗುಂಡಿನ ದಾಳಿಗೂ ನಂಟು ಇದೆಯೇ ಎಂಬ ಅನುಮಾನ ಈಗ ಮೂಡಿದೆ.