ನಾನು ಪಕ್ಷವನ್ನೇ ಮದುವೆಯಾಗಿದ್ದೇನೆ: ರಾಹುಲ್‌ ಗಾಂಧಿ
ಸುದ್ದಿ ಸಾರ

ನಾನು ಪಕ್ಷವನ್ನೇ ಮದುವೆಯಾಗಿದ್ದೇನೆ: ರಾಹುಲ್‌ ಗಾಂಧಿ

ಮಂಗಳವಾರ ಹೈದರಾಬಾದ್‌ನಲ್ಲಿ ಸುದ್ದಿಗಾರರೊಂದಿಗೆ ಸಂವಾದ ನಡೆಸಿದ ರಾಹುಲ್‌ ಗಾಂಧಿ ತಾವು ಕಾಂಗ್ರೆಸ್‌ ಪಕ್ಷವನ್ನೇ ಮದುವೆ ಆಗಿರುವುದಾಗಿ ತಿಳಿಸಿದ್ದಾರೆ.

ಮಂಗಳವಾರ ಹೈದರಾಬಾದ್‌ನಲ್ಲಿ ಸುದ್ದಿಗಾರರ ಜತೆ ಒಂದು ಗಂಟೆಗೂ ಹೆಚ್ಚು ಕಾಲ ಸಂವಾದ ನಡೆಸಿದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ತಾವು ಕಾಂಗ್ರೆಸ್‌ ಪಕ್ಷವನ್ನೇ ಮದುವೆ ಆಗಿರುವುದಾಗಿ ತಿಳಿಸಿದ್ದಾರೆ. “ನಿಮ್ಮ ಮದುವೆ ಯಾವಾಗ” ಎಂಬ ಮಾಧ್ಯಮ ಪ್ರತಿನಿಧಿಯೊಬ್ಬರ ಪ್ರಶ್ನೆಗೆ ರಾಹುಲ್‌ ಗಾಂಧಿ ಈ ಉತ್ತರ ನೀಡಿದ್ದಾರೆ.

“ಮದುವೆಯಾಗುವುದಕ್ಕಿಂತ ಹೆಚ್ಚಾಗಿ ಮುಂಬರಲಿರುವ 2019ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರನ್ನು ಸೋಲಿಸುವುದೇ ನಮ್ಮ ಮುಖ್ಯ ಉದ್ದೇಶ. ಮದುವೆಯಾಗುವ ಯೋಚನೆ ಸದ್ಯಕ್ಕಂತೂ ಇಲ್ಲ” ಎಂದು ರಾಹುಲ್‌ ಗಾಂಧಿ ತಿಳಿಸಿದ್ದಾರೆ.

“ನಾವು ಹಲವಾರು ಸಮಾನ ಮನಸ್ಕ ಪಕ್ಷಗಳೊಂದಿಗೆ ಮಾತನಾಡುತ್ತಿದ್ದೇವೆ. ಹಿಂದೆ ಬೆಂಬಲ ನೀಡಿದ್ದ ಪಕ್ಷಗಳ ಜತೆಗೆ ಹೊಸ ಪಕ್ಷಗಳನ್ನು ಒಟ್ಟುಗೂಡಿಸಿಕೊಂಡು ದೊಡ್ಡ ಒಕ್ಕೂಟವನ್ನು ರಚಿಸಿಕೊಳ್ಳುವುದರ ಮೂಲಕ ಮುಂದಿನ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರನ್ನು ಸೋಲಿಸಲಿದ್ದೇವೆ,” ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

ಒಂದು ವೇಳೆ ಕರ್ನಾಟಕದಲ್ಲಿ ಆದಂತೆ ಕೇಂದ್ರದಲ್ಲೂ ಕೂಡ ಅತಂತ್ರ ಪರಿಸ್ಥಿತಿ ಉಂಟಾದರೆ ಯಾರು ಪ್ರಧಾನಿ ಆಗುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ರಾಹುಲ್‌ ಗಾಂಧಿ, “ನಾವೆಲ್ಲರೂ ಈಗ ಒಟ್ಟುಗೂಡಿ ಬಿಜೆಪಿ ಪಕ್ಷವನ್ನು ಸೋಲಿಸುವ ನಿರ್ಧಾರ ಕೈಗೊಂಡಿದ್ದೇವೆ. ನಾವು ನಮ್ಮ ಗುರಿಯನ್ನು ತಲುಪಿದ ನಂತರವಷ್ಟೇ ಪ್ರಧಾನಿ ಯಾರಾಗಬೇಕು ಎಂಬ ಮಾತು ಮುನ್ನೆಲೆಗೆ ಬರಲಿದೆ,” ಎಂದಿದ್ದಾರೆ. ಜತೆಗೆ 2019ರಲ್ಲಿ ಕಾಂಗ್ರೆಸ್‌ ನೇತೃತ್ವದ ಒಕ್ಕೂಟ ಗೆದ್ದೇ ಗೆಲ್ಲುತ್ತದೆ ಎಂಬ ಭರವಸೆಯನ್ನು ರಾಹುಲ್‌ ಗಾಂಧಿ ವ್ಯಕ್ತಪಡಿಸಿದ್ದಾರೆ.

Also read: ಆಹಾ ರಾಹುಲ್ ಗಾಂಧಿ ಮದುವೆ ಅಂತೆ: ರಾಯ್‌ಬರೇಲಿಯಿಂದ ಹೊಸ ಗಾಳಿಸುದ್ದಿ!

“ಮುಂದಿನ ಬಾರಿ ಮೋದಿ ಪ್ರಧಾನಿಯಾಗುವ ಪ್ರಮೇಯವೇ ಬರುವುದಿಲ್ಲ. ಶಿವಸೇನೆ ಸೇರಿದಂತೆ ಇನ್ನಿತರೆ ಮಿತ್ರ ಪಕ್ಷಗಳನ್ನು ಬಿಜೆಪಿ ಕಳೆದುಕೊಂಡಿದೆ. ಆದ್ದರಿಂದ ಮೋದಿ 2ನೇ ಬಾರಿ ಪ್ರಧಾನಿಯಾಗಲು ಸಾಧ್ಯವಿಲ್ಲ” ಎಂದು ರಾಹುಲ್‌ ಗಾಂಧಿ ಅಭಿಪ್ರಾಯ ಪಟ್ಟಿದ್ದಾರೆ.

“ಬಿಜೆಪಿ ರಾಷ್ಟ್ರಾದ್ಯಂತ 230 ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲಬಹುದು. ಮೋದಿ ಪ್ರಧಾನಿಯಾಗಬೇಕು ಎಂದರೆ ಉತ್ತರ ಪ್ರದೇಶ ಮತ್ತು ಬಿಹಾರದ ಎಲ್ಲಾ ಕ್ಷೇತ್ರಗಳಲ್ಲಿ ಗೆಲ್ಲಬೇಕು. ಕಾಂಗ್ರೆಸ್‌ ಪಕ್ಷ ಇವೆರಡೂ ರಾಜ್ಯಗಳಲ್ಲಿ ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷ ಮತ್ತು ರಾಷ್ಟ್ರೀಯ ಜನತಾ ದಳಗಳ ಜತೆಗೆ ಮೈತ್ರಿ ಮಾಡಿಕೊಂಡಿದೆ. ಈ ರಾಜ್ಯಗಳಲ್ಲಿನ ಹೆಚ್ಚಿನ ಕ್ಷೇತ್ರಗಳಲ್ಲಿ ನಾವೇ ಜಯಗಳಿಸಲಿದ್ದೇವೆ,” ಎಂದು ರಾಹುಲ್‌ ಗಾಂಧಿ ತಿಳಿಸಿದ್ದಾರೆ.