ಮಹಿಳಾ ಅಭಿವ್ಯಕ್ತಿಗಾಗಿ ‘ಮುನ್ನಡೆ’ ಸಂಪಾದಿಸಿದ ಹೊಸ ತಲೆಮಾರು
ಸುದ್ದಿ ಸಾರ

ಮಹಿಳಾ ಅಭಿವ್ಯಕ್ತಿಗಾಗಿ ‘ಮುನ್ನಡೆ’ ಸಂಪಾದಿಸಿದ ಹೊಸ ತಲೆಮಾರು

‘ಮಹಿಳಾ ಮುನ್ನಡೆ’ ಸಂಘಟನೆಯ ಸದಸ್ಯೆಯರು ತಮ್ಮ ಅಭಿವ್ಯಕ್ತಿ ಪ್ರಚುರ ಪಡಿಸಲು, ಸಮಕಾಲೀನ ಸಮಸ್ಯೆಗಳಿಗೆ ಮಹಿಳಾ ದೃಷ್ಟಿಕೋನ ನೀಡಲು ತಮ್ಮದೇ ಆದ ಪತ್ರಿಕೆಯೊಂದನ್ನು ಹೊರತಂದಿದ್ದಾರೆ.

ಕರ್ನಾಟಕದ ಪತ್ರಿಕಾ ಲೋಕಕ್ಕೆ ಮಂಗಳವಾರ (ಆಗಸ್ಟ್‌ 14) ಹೊಸ ದ್ವೈಮಾಸಿಕ ಪತ್ರಿಕೆಯೊಂದು ಸೇರ್ಪಡೆಗೊಂಡಿದೆ. ಹೊಸ ಆಶಯ ಮತ್ತು ಭಿನ್ನ ನೆಲಗಟ್ಟಿನ ಯೋಚನೆಗಳೊಂದಿಗೆ ಬಿಡುಗಡೆಗೊಂಡಿರುವ, ಯುವತಿಯರ ನೇತೃತ್ವದಲ್ಲಿ ಮೂಡಿಬರುತ್ತಿರುವ ಈ ಪತ್ರಿಕೆಯ ಹೆಸರು ‘ಮುನ್ನಡೆ’.

ಮಂಗಳವಾರ ಬೆಳಿಗ್ಗೆ ಬೆಂಗಳೂರಿನಲ್ಲಿ ಲೇಖಕಿ ಡಾ. ವಿಜಯಾ, ‘ಮುನ್ನಡೆ’ ಪತ್ರಿಕೆಯನ್ನು ಲೋಕಾರ್ಪಣೆಗೊಳಿಸಿದರು. ಈ ವೇಳೆ ಮಾತನಾಡಿದ ಅವರು, “ಈ ಮುಂಚೆಯೂ ಕೂಡ ಮಹಿಳಾ ದೃಷ್ಟಿಕೋನದ ಪತ್ರಿಕೆಗಳು ಬಂದಿವೆ. ಆದರೆ ಯಾವುವೂ ಕೂಡ ದೀರ್ಘಕಾಲ ಉಳಿದಿಲ್ಲ. ಈಗ ಈ ಪತ್ರಿಕೆಯನ್ನು ಹೊರತರುತ್ತಿರುವ ಮಹಿಳಾ ಮುನ್ನಡೆ ಸಘಂಟನೆ ಮತ್ತು ಸದಸ್ಯೆಯರನ್ನು ನಾನೂ ಹಲವು ಕಾಲಗಳಿಂದ ನೋಡಿದ್ದೇನೆ. ಈ ಯುವತಿಯರು ಗಟ್ಟಿಯಾಗಿ ನಿಂತು ಪತ್ರಿಕೆಯನ್ನು ಮುನ್ನಡೆಸುತ್ತಾರೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪತ್ರಿಕೆಯ ಕುರಿತು ಪ್ರಾಸ್ತಾವಿಕ ನುಡಿಗಳನ್ನು ಆಡಿದ ಮಹಿಳಾ ಮುನ್ನಡೆಯ ಸದಸ್ಯೆ ಪುಷ್ಪಲತಾ, “ಇಂದಿನ ಮಹಿಳೆಯರ ಸಮಸ್ಯೆಗಳೇನು, ಅತ್ಯಾಚಾರಗಳೇಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ, ಸಮಸ್ಯೆಗಳೇಕೆ ಜಡ್ಡುಗಟ್ಟುತ್ತಿವೆ, ದೌರ್ಜನ್ಯಗಳೇಕೆ ಹೆಚ್ಚುತ್ತಿವೆ ಎನ್ನುವುದರ ಬಗ್ಗೆ ಬಹುಪಾಲು ಜನರಲ್ಲಿ ನಿರ್ದಿಷ್ಟವಾದ ನಿಲುವಿಲ್ಲ. ಸಾಕಷ್ಟು ಜನ ಗೊಂದಲಗಳಿಂದ ತುಂಬಿ ಹೋಗಿದ್ದಾರೆ. ಇವುಗಳ ಬಗ್ಗೆ ಸ್ಪಷ್ಟ ನಿಲುವು ತಾಳುವುದರ ಜತೆಗೆ ಇವೆಲ್ಲವನ್ನೂ ಕುಡ ಮಹಿಳಾ ದೃಷ್ಟಿಕೋನದಿಂದ ನೋಡುವ ಅಗತ್ಯವಿದೆ. ಈ ಕೆಲಸವನ್ನು ‘ಮುನ್ನಡೆ’ ಪತ್ರಿಕೆ ಮಾಡಲಿದೆ” ಎಂದರು.

ಮಹಿಳಾ ಅಭಿವ್ಯಕ್ತಿಗಾಗಿ ‘ಮುನ್ನಡೆ’ ಸಂಪಾದಿಸಿದ ಹೊಸ ತಲೆಮಾರು

ಇತಿಹಾಸದಲ್ಲಿ ಮಹಿಳೆಯರ ಅಸ್ತಿತ್ವವನ್ನು ಸತತವಾಗಿ ಕಡೆಗಣಿಸಿಕೊಂಡು ಬರಲಾಗಿದೆ. ಇಂದಿನ ದಿನಮಾನಗಳಲ್ಲೂ ಕೂಡ ಇದರಲ್ಲಿ ಹೆಚ್ಚಿನ ಬದಲಾವಣೆಗಳೇನೂ ಆಗಿಲ್ಲ. ಮಹಿಳೆಯರು ಇತಿಹಾಸವನ್ನು ಮರು ದಾಖಲಿಸುವ ಅಗತ್ಯವಿದ್ದು ಪತ್ರಿಕೆಯೂ ಕೂಡ ಅದರ ಭಾಗವೇ ಎನ್ನುತ್ತಾರೆ ಮಹಿಳಾ ಮುನ್ನಡೆಯ ಸದಸ್ಯೆಯರು.

‘ಮುನ್ನಡೆ’ ದ್ವೈಮಾಸಿಕ ಪತ್ರಿಕೆ ಹಲವಾರು ವಿಶೇಷತೆಗಳನ್ನೂ ಒಳಗೊಂಡಿದೆ. ಮಹಿಳೆಯರ ಅಭ್ಯುದಯಕ್ಕಾಗಿಯೇ ಅಸ್ತಿತ್ವ ಪಡೆದುಕೊಂಡಿರುವ ಈ ಪತ್ರಿಕೆಯನ್ನು ಈ ತಲೆಮಾರಿನ ಯುವತಿಯರೇ ಮುನ್ನಡೆಸಲಿದ್ದಾರೆ. ಸಂಘಟನೆಗಳ ಹಿರಿಯ ನಾಯಕ ನಾಯಕಿಯರು ಹೊಸ ಹುಮ್ಮಸ್ಸಿನಲ್ಲಿರುವ ಯುವತಿಯರಿಗೆ ಬೆಂಬಲವಾಗಿಯಷ್ಟೇ ನಿಲ್ಲಲಿದ್ದಾರೆ.

ಪತ್ರಿಕೆಯಲ್ಲಿ ಎಲ್ಲಾ ವರ್ಗದ ಮಹಿಳೆಯರನ್ನು ಒಳಗೊಳ್ಳಿಸಿಕೊಳ್ಳುವ ಯೋಚನೆಯನ್ನು ಸಂಘಟನೆ ಹೊಂದಿದೆ. ಮನೆಗೆಲಸ ನಿರ್ವಹಿಸುವವರು, ಸಾಮಾನ್ಯ ಮಹಿಳೆಯರು ಸೇರಿದಂತೆ ಎಲ್ಲಾ ಉದ್ಯೋಗಗಳಲ್ಲಿ ದುಡಿಯುತ್ತಿರುವ ಮಹಿಳೆಯರ ಲೇಖನಗಳಿಗೆ ಈ ಪತ್ರಿಕೆಯಲ್ಲಿ ಜಾಗವಿದೆ. ತಮ್ಮ ಅಭಿವ್ಯಕ್ತಿಯನ್ನು ಅಕ್ಷರ ರೂಪಕ್ಕಿಳಿಸಲು ಇಚ್ಚಿಸುವ ಮಹಿಳೆಯರಿಗೆ ಪತ್ರಿಕೆ ವೇದಿಕೆ ಕಲ್ಪಿಸಿಕೊಡಲಿದೆ. ಜತೆಗೆ ಜನರನ್ನು ಚಿಂತನೆಗೆ ಹಚ್ಚುವ, ರಾಜಕೀಯವಾಗಿ ಅರಿವು ಮೂಡಿಸುವ ಪ್ರಯತ್ನವನ್ನೂ ಕೂಡ ಮಾಡಲಿದೆ.

ಸಾಧನೆ ಮಾಡಿರುವ ಮಹಿಳೆಯರ ಸಾಲಿನಲ್ಲಿ ಕೆಲ ಮಹಿಳೆಯರ ಹೆಸರನ್ನಷ್ಟೇ ಗುರುತಿಸಲಾಗುತ್ತದೆ. ಆದರೆ ಮನೆಯಲ್ಲಿರುವ ಅಮ್ಮನೂ ಕೂಡ ಒಬ್ಬ ಸಾಧಕಿಯೇ. ಇಡೀ ಮನೆಯನ್ನು ನಿಭಾಯಿಸುವುದರ ಜತೆಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ಬೆಂಬಲವಾಗಿ ನಿಲ್ಲುವುದೂ ಕೂಡ ಸಾಧನೆಯೇ. ಅಂತಹವರ ಪರಿಚಯ ಹೊರ ಜಗತ್ತಿಗಿರುವುದಿಲ್ಲ. ಈ ಪತ್ರಿಕೆಯ ಮೂಲಕ ಅಂತಹ ಮಹಿಳೆಯರನ್ನು ಜನರಿಗೆ ಪರಿಚಯ ಮಾಡಿಸುವ ಉದ್ದೇಶವಿದೆ.
ಕಾವ್ಯ, ಮಹಿಳಾ ಮುನ್ನಡೆ ಸದಸ್ಯೆ

‘ಮುನ್ನಡೆ’ ಮಹಿಳಾ ದೃಷ್ಟಿಕೋನದ ಪತ್ರಿಕೆಯಾದರೂ ಕೂಡ ಕೇವಲ ಮಹಿಳೆಯರು ಮಾತ್ರ ಇದರಲ್ಲಿ ಲೇಖನಗಳನ್ನು ಬರೆಬೇಕು ಎಂದೇನೂ ಇಲ್ಲ. ಮಹಿಳಾ ಮಹಿಳಾ ದೃಷ್ಟಿಕೋನದಲ್ಲಿ ಪುರುಷರು ಬರೆದ ಲೇಖನಗಳನ್ನು ಪ್ರಕಟಿಸುವ ನಿಲುವನ್ನು ಸಂಘಟನೆ ತೆಗೆದುಕೊಂಡಿದೆ. ಆದರೆ ಮಹಿಳೆರಿಗೇ ಮೊದಲ ಪ್ರಾಶಸ್ತ್ಯ.

ಮುಖ್ಯವಾಗಿ ಶೋಷಿತ ಸಮುದಾಯಗಳಿಂದ ಬಂದ ಮಹಿಳೆಯರ ಲೇಖನಗಳಿಗೆ ‘ಮುನ್ನಡೆ’ ಪತ್ರಿಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಿದೆ. ಪುರುಷ ಪ್ರಧಾನ ಸಮಾಜದೊಳಗೆ ತಮ್ಮ ಅಸ್ತಿತ್ವವನ್ನು ಪ್ರತಿಪಾದಿಸುವ ನಿಟ್ಟಿನಲ್ಲಿ ಮಹಿಳೆಯರೇ ಹೊರತರುತ್ತಿರುವ ‘ಮುನ್ನಡೆ’ ಪತ್ರಿಕೆ ಹೊಸ ತಲೆಮಾರುಗಳಿಗೆ ಸ್ಪೂರ್ಥಿಯಾಗಿ ನಿಂತು, ಭರವಸೆ ತುಂಬಿದೆ.