ಮಹದಾಯಿ ಐ ತೀರ್ಪು; ಕರ್ನಾಟಕಕ್ಕೆ 13.42 ಟಿಎಂಸಿ ನೀರು ಹಂಚಿಕೆ
ಸುದ್ದಿ ಸಾರ

ಮಹದಾಯಿ ಐ ತೀರ್ಪು; ಕರ್ನಾಟಕಕ್ಕೆ 13.42 ಟಿಎಂಸಿ ನೀರು ಹಂಚಿಕೆ

ಮಹದಾಯಿ ನ್ಯಾಯಾಧಿಕರಣ ಕರ್ನಾಟಕಕ್ಕೆ ಒಟ್ಟು 13.42 ಟಿಎಂಸಿ ಅಡಿ ನೀರನ್ನು ಹಂಚಿಕೆ ಮಾಡಿದ್ದು, ಇದು ರಾಜ್ಯದ ಪಾಲಿಗೆ ತಕ್ಕಮಟ್ಟಿಗೆ ಸಮಾಧಾನ ತಂದಿದೆ.

ಮಹದಾಯಿ ನದಿ ನೀರು ಹಂಚಿಕೆ ವಿಚಾರವಾಗಿ ನ್ಯಾಯಮೂರ್ತಿ ಜೆ.ಎಂ. ಪಾಂಚಾಲ್‌ ಅವರ ನೇತೃತ್ವದ ನ್ಯಾಯಾಧಿಕರಣ ಮಂಗಳವಾರ ತನ್ನ ಅಂತಿಮ ತೀರ್ಪನ್ನು ಕೊಟ್ಟಿದ್ದು ಕರ್ನಾಟಕ್ಕೆ ಒಟ್ಟು 13.42 ಟಿಎಂಸಿ ಅಡಿ ನೀರನ್ನು ಹಂಚಿಕೆ ಮಾಡಲಾಗಿದೆ.

ಕರ್ನಾಟಕಕ್ಕೆ ಕುಡಿಯುವ ನೀರಿಗಾಗಿ 4 ಟಿಎಂಸಿ, ನದಿ ಪಾತ್ರಕ್ಕೆ 1.5 ಟಿಎಂಸಿ ಹಾಗೂ ಜಲವಿದ್ಯುತ್‌ ಯೋಜನೆಗೆ 8.2 ಟಿಎಂಸಿ ಅಡಿ ನೀರನ್ನು ರಾಜ್ಯದ ಪಾಲಿಗೆ ಹಂಚಿಕೆ ಮಾಡಲಾಗಿದೆ.

ಗೋವಾಕ್ಕೆ 24 ಟಿಎಂಸಿ ಮತ್ತು ಮಹಾರಾಷ್ಟ್ರಕ್ಕೆ 1.30 ಟಿಎಂಸಿ ಅಡಿ ನೀರನ್ನು ಹಂಚಿಕೆ ಮಾಡಲಾಗಿದೆ.

Also read: 'ಕಳಸಾ-ಬಂಡೂರಿ': ಕಿಚ್ಚು ಹೊತ್ತಿಸಿದ ಮಹದಾಯಿ 'ಮಧ್ಯಂತರ' ತೀರ್ಪು; ಏನಿದು ವಿವಾದ?

ಒಟ್ಟು 36.55 ಟಿಎಂಸಿ ಅಡಿ ನೀರನ್ನು ರಾಜ್ಯಕ್ಕೆ ಹಂಚಿಕೆ ಮಾಡುವಂತೆ ಕರ್ನಾಟಕ ನ್ಯಾಯಾಧಿಕರಣಕ್ಕೆ ಮನವಿ ಸಲ್ಲಿಸಿತ್ತು. ಕುಡಿಯುವ ನೀರಿಗಾಗಿ 7.5 ಟಿಎಂಸಿ ಅಡಿ ನೀರನ್ನು ಹೆಚ್ಚುವರಿಯಾಗಿ ಕೊಡಬೇಕೆಂಬುದು ರಾಜ್ಯದ ಬೇಡಿಕೆಯಾಗಿತ್ತು.

ನ್ಯಾಯಮಂಡಳಿ ಹಂಚಿಕೆ ಮಾಡಿರುವ ನೀರಿನ ಬಗ್ಗೆ ಕರ್ನಾಟಕ ಪರ ವಕೀಲರು ಹಾಗೂ ಮಹದಾಯಿ ಹೋರಾಟಗಾರರು ಸಮಾಧಾನ ವ್ಯಕ್ತಪಡಿಸಿದ್ದಾರೆ. “ಈ ತೀರ್ಪಿನಿಂದ ಕರ್ನಾಟಕಕ್ಕೆ ಭಾಗಶಃ ಯಶಸ್ಸು ಸಿಕ್ಕಂತಾಗಿದೆ” ಎಂದು ಹಿರಿಯ ವಕೀಲ ಮೋಹನ್‌ ಕಾತರಕಿ ಹೇಳಿದ್ದಾರೆ.

ಆದರೆ, ರಾಜ್ಯ ಮನವಿ ಸಲ್ಲಿಸಿದಷ್ಟು ನೀರನ್ನು ನ್ಯಾಯಾಧಿಕರಣ ಹಂಚಿಕೆ ಮಾಡಿಲ್ಲ ಎಂದು ಬೆಳಗಾವಿಯಲ್ಲಿ ರೈತ ಸಂಘಟನೆಗಳ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರಕಾರ ನ್ಯಾಯಾಧಿಕರಣದ ಮುಂದೆ ಸೂಕ್ತ ರೀತಿಯಲ್ಲಿ ವಾದ ಮಂಡಿಸಲು ವಿಫಲವಾಗಿದೆ ಎಂದು ಪ್ರತಿಭಟನಾನಿರತರರು ಹೇಳಿದ್ದಾರೆ.