samachara
www.samachara.com
ಎಚ್‌ಎಎಲ್‌ಗೆ ರಫೇಲ್‌ ಇಲ್ಲ; ಯಲಹಂಕದಲ್ಲಿ ‘ಏರೋ ಇಂಡಿಯಾ ಪ್ರದರ್ಶನ’ವೂ ಇಲ್ಲ...
ಸುದ್ದಿ ಸಾರ

ಎಚ್‌ಎಎಲ್‌ಗೆ ರಫೇಲ್‌ ಇಲ್ಲ; ಯಲಹಂಕದಲ್ಲಿ ‘ಏರೋ ಇಂಡಿಯಾ ಪ್ರದರ್ಶನ’ವೂ ಇಲ್ಲ...

ಪ್ರಾರಂಭದಿಂದಲೂ ಕೂಡ ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿದ್ದ ‘ಏರೋ ಇಂಡಿಯಾ’ ಪ್ರದರ್ಶನವನ್ನು ಉತ್ತರ ಪ್ರದೇಶದಲ್ಲಿ ನಡೆಸಲು ಚಿಂತಿಸಿರುವ ಕೇಂದ್ರದ ವಿರುದ್ಧ ಸಿಎಂ ಮತ್ತು ಡಿಸಿಎಂ ಗುಡುಗಿದ್ದಾರೆ. 

ಬೆಂಗಳೂರಿನ ಯಲಹಂಕದ ಬಳಿಯಿರುವ ವಾಯುನೆಲೆದಲ್ಲಿ ನಡೆಯಬೇಕಿದ್ದ ಏರೋ ಇಂಡಿಯಾ ಪ್ರದರ್ಶನವನ್ನು ಉತ್ತರ ಪ್ರದೇಶಕ್ಕೆ ವರ್ಗಾಯಿಸುವ ನಿರ್ಧಾರಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಜ್ಯ ಬಿಜೆಪಿ ನಾಯಕರು ಏಕೆ ಕುರಿತು ತುಟಿ ಬಿಚ್ಚುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ?

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕುಮಾರಸ್ವಾಮಿ, ಏರೋ ಇಂಡಿಯಾ ಪ್ರದರ್ಶನವನ್ನು ಲಕ್ನೋಗೆ ಸ್ಥಳಾಂತರಿಸುವ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಏರೋ ಇಂಡಿಯಾ ಪ್ರದರ್ಶನಕ್ಕೆ ಬೆಂಗಳೂರೇ ಅತ್ಯುತ್ತಮವಾದ ಸ್ಥಳ ಎಂದು ಕುಮಾರಸ್ವಾಮಿ ತಿಳಿಸಿದ್ದು, ವಾಯು ಸೇನೆಯ ಪ್ರದರ್ಶನಕ್ಕೆ ಅಗತ್ಯವಿರುವ ಎಲ್ಲಾ ಸೌಕರ್ಯಗಳು ಕೂಡ ಬೆಂಗಳೂರಿನಲ್ಲಿವೆ ಎಂದಿದ್ದಾರೆ.

ಏರೋ ಇಂಡಿಯಾ ಪ್ರದರ್ಶನ ಪ್ರಾರಂಭವಾಗಿದ್ದು 1996ರಲ್ಲಿ. ಅಂದಿನಿಂದಲೂ ಕೂಡ ಪ್ರದರ್ಶನವನ್ನು ಬೆಂಗಳೂರಿನಲ್ಲಿಯೇ ನಡೆಸಿಕೊಂಡು ಬರಲಾಗುತ್ತಿದೆ. ಭಾರತದ ರಕ್ಷಣಾ ಸಚಿವಾಲಯ, ಭಾರತೀಯ ವಾಯು ಸೇನೆ, ಸೇನಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ, ಅಂತರಿಕ್ಷ ಇಲಾಖೆ ಹಾಗೂ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಗಳು ಒಟ್ಟಾಗಿ ಸೇರಿ ಏರೋ ಇಂಡಿಯಾ ಪ್ರದರ್ಶನವನ್ನು ನಡೆಸಿಕೊಂಡು ಬರುತ್ತಿವೆ.

ಪ್ರದರ್ಶನದ ವೇಳೆ ವಿವಿಧ ವಿಮಾನಯಾನ ಸೇವೆ ಒದಗಿಸುತ್ತಿರುವ ಸಂಸ್ಥೆಗಳು ಹಾಗೂ ವಿಮಾನಗಳಿಗೆ ಸಂಬಂಧಿಸಿದ ವಸ್ತುಗಳ ಉತ್ಪಾದಕರು ಗ್ರಾಹಕರನ್ನು ಆಕರ್ಷಿಸುತ್ತಾರೆ. ಏರೋ ಇಂಡಿಯಾ ಪ್ರದರ್ಶನ ಅರಂಭಗೊಂಡ ಕಾಲದಿಂದಲೂ ಕೂಡ ಯಲಹಂಕ ವಾಯುನೆಲೆಯಲ್ಲಿಯೇ ಪ್ರದರ್ಶನವನ್ನು ಏರ್ಪಡಿಸಿಕೊಂಡು ಬರಲಾಗುತ್ತಿತ್ತು. ಆದರೆ ಈ ಬಾರಿ ಮಾತ್ರ ಕೇಂದ್ರ ಸರಕಾರ ಪ್ರದರ್ಶನವನ್ನು ಉತ್ತರ ಪ್ರದೇಶದ ಲಕ್ನೋನಲ್ಲಿ ನಡೆಸಲು ಉದ್ದೇಶಿಸಿರುವ ಸೂಚನೆಗಳಿವೆ.

ಈ ಕಾರಣಕ್ಕಾಗಿಯೇ ಕರ್ನಾಟಕದ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್‌ ಕೇಂದ್ರದ ವಿರುದ್ಧ ಹರಿಹಾಯ್ದಿದ್ದಾರೆ. ಮಾಧ್ಯಮಗಳ ಮುಂದೆ ಮಾತನಾಡಿರುವ ಕುಮಾರಸ್ವಾಮಿ, “ನಾವು ಕೇಂದ್ರ ರಕ್ಷಣಾ ಸಚಿವರ ಜತೆ ಮಾತನಾಡಿದ್ದೇವೆ. ಏರೋ ಇಂಡಿಯಾ ಪ್ರದರ್ಶನಕ್ಕೆ ಬೆಂಗಳೂರು ಸೂಕ್ತವಾದ ಪ್ರದೇಶ ಎನ್ನುವುದನ್ನು ಮನವರಿಕೆ ಮಾಡಲು ಪ್ರಯತ್ನಿಸಿದ್ದೇವೆ. ಪ್ರದರ್ಶನಕ್ಕೆ ಅಗತ್ಯವಿರುವ ಎಲ್ಲಾ ಸೌಕರ್ಯಗಳ ಇಲ್ಲಿ ಇದ್ದರೂ ಕೂಡ ಏಕೆ ಕೇಂದ್ರ ಸರಕಾರ ಲಕ್ನೋದಲ್ಲಿ ಪ್ರದರ್ಶನ ನಡೆಸಲು ತೀರ್ಮಾನಿಸಿದೆ ಎನ್ನುವುದು ತಿಳಿಯುತ್ತಿಲ್ಲ. ರಾಜ್ಯದ ಬಿಜೆಪಿ ಸ್ನೇಹಿತರು ಈ ಪ್ರಶ್ನೆಗೆ ಉತ್ತರಿಸಬೇಕು.” ಎಂದಿದ್ದಾರೆ.

ಉಪ ಮುಖ್ಯಮಂತ್ರಿ ಪರಮೇಶ್ವರ್‌ ಕೂಡ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “1966ರಿಂದಲೂ ಕೂಡ ಕರ್ನಾಟಕ ಏರೋ ಇಂಡಿಯಾ ಪ್ರದರ್ಶನವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ಆದರೆ ಕೇಂದ್ರ ಸರಕಾರ ರಕ್ಷಣಾ ವಲಯದಲ್ಲಿ ಬೆಂಗಳೂರಿನ ಪ್ರಾಬಲ್ಯವನ್ನು ಮುರಿಯಲು ಪ್ರಯತ್ನ ಮಾಡುತ್ತಿರುವಂತೆ ಕಾಣಿಸುತ್ತಿದೆ,” ಎಂದು ಮಾಧ್ಯಮಗಳಿಗೆ ಹೇಳಿದ್ದಾರೆ.

ಈ ಕುರಿತು ರಾಜ್ಯ ಬಿಜೆಪಿ ನಾಯಕರೂ ಕೂಡ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಪತ್ರ ಬರೆದಿದ್ದಾರೆ. ವಿಷಯವು ರಾಜಕಾರಣದತ್ತ ತಿರುಗಿದ ಬೆನ್ನಲ್ಲೇ ಏರೋ ಇಂಡಿಯಾ ಪ್ರದರ್ಶನವನ್ನು ಬೆಂಗಳೂರಿನಲ್ಲಿಯೇ ನಡೆಸಬೇಕೆಂದು ಬಿಜೆಪಿಯ ಕೆಲ ನಾಯಕರು ಪತ್ರ ಮುಖೇನ ಬೇಡಿಕೆ ಸಲ್ಲಿಸಿದ್ದಾರೆ.

ಈ ಬಾರಿಯ ಏರೋ ಇಂಡಿಯಾ ಪ್ರದರ್ಶನ ಅಕ್ಟೋಬರ್‌ ಅಥವಾ ನವೆಂಬರ್‌ ತಿಂಗಳಿನಲ್ಲಿ ಲಕ್ನೋದಲ್ಲಿ ನಡೆಯಬಹುದಾದ ಸೂಚನೆಗಳನ್ನು ಮಾತ್ರ ವರದಿಗಳು ನೀಡಿವೆ. ಆದರೆ ಈ ಕುರಿತ ಯಾವುದೇ ಅಧಿಕೃತ ಸ್ಪಷ್ಟನೆಯನ್ನು ಅಥವಾ ಔಪಚಾರಿಕ ಘೋಷಣೆಯನ್ನು ಕೇಂದ್ರ ರಕ್ಷಣಾ ಸಚಿವಾಲಯ ಮಾಡಿಲ್ಲ. ಹಾಗೇನಾದರೂ ಕೇಂದ್ರ ಸರಕಾರ ಪ್ರದರ್ಶನವನ್ನು ಉತ್ತರ ಪ್ರದೇಶದ ಲಕ್ನೋನಲ್ಲೇ ಮಾಡಲು ತೀರ್ಮಾನಿಸಿದರೆ 1996ರಿಂದಲೂ ಬೆಂಗಳೂರಿಗೆ ಕೀರ್ತಿ ತಂದುಕೊಟ್ಟಿದ್ದ ಏರೋ ಇಂಡಿಯಾ ಪ್ರದರ್ಶನ ಈ ಬಾರಿ ಕರ್ನಾಟಕದ ಕೈತಪ್ಪಲಿದೆ.