samachara
www.samachara.com
ಕೇರಳ ಪ್ರವಾಹ: ಕೊಂಚ ಬಿಡುವು ಪಡೆದ ಮಳೆ; ಸತ್ತವರ ಸಂಖ್ಯೆ 37ಕ್ಕೆ ಏರಿಕೆ
ಸುದ್ದಿ ಸಾರ

ಕೇರಳ ಪ್ರವಾಹ: ಕೊಂಚ ಬಿಡುವು ಪಡೆದ ಮಳೆ; ಸತ್ತವರ ಸಂಖ್ಯೆ 37ಕ್ಕೆ ಏರಿಕೆ

ಕೇರಳದಲ್ಲಿ ಸುರಿಯುತ್ತಿರುವ ಬಾರಿ ಮಳೆ ಈವರೆಗೂ ಒಟ್ಟು 37 ಜನರನ್ನು ಬಲಿಪಡೆದಿದೆ. ರಾಜ್ಯದಲ್ಲಿನ 35,874 ಜನರ ಬದುಕು ಅಂತಂತ್ರ ಸ್ಥಿತಿಯಲ್ಲಿದ್ದು, 341 ನಿರಾಶ್ರಿತ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.

ಕೇರಳದಲ್ಲಿ ಸರಿದ ಭಾರಿ ಮಳೆಯಿಂದಾಗಿ ಈವರೆಗೂ 37 ಜನ ಮೃತಪಟ್ಟಿದ್ದು, ಮಳೆ ಕಡಿಮೆಯಾದರೂ ಕೂಡ ಹೆಚ್ಚಿನ ಮುನ್ನೆಚ್ಚರಿಕೆಯನ್ನು ವಹಿಸುವಂತೆ ಜನತೆಗೆ ಸೂಚಿಸಲಾಗಿದೆ. ಸದ್ಯ ಮಳೆ ಕೊಂಚ ಬಿಡುವು ಪಡೆದಿದ್ದರೂ ಸಹ ಮುಂದಿನ 4 ದಿನಗಳ ಕಾಲ ಅಬ್ಬರಿಸಬಹುದಾದ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಕಳೆದ 3 ದಿನಗಳಿಂದ ಧಾರಾಕಾರವಾಗಿ ಸುರಿದು ಕೇರಳಿಗರ ಬದುಕನ್ನು ಕಾಡಿದ ಕುಂಭದ್ರೋಣ ಮಳೆ ಆಗಸ್ಟ್‌ 12ರ ಭಾನುವಾರದ ವೇಳೆಗೆ ಕೊಂಚ ಕಡಿಮೆಯಾಗಿದೆ. ಇದೇ ಮೊದಲ ಭಾರಿಗೆ ಸಂಪೂರ್ಣ ಭರ್ತಿಯಾಗಿರುವ ಏಷ್ಯಾದ ಅತಿ ದೊಡ್ಡ ಜಲಾಶಯವಾಗಿರುವ ಇಡುಕ್ಕಿ ಜಲಾಶಯದ 5 ಗೇಟ್‌ಗಳನ್ನು ತೆರೆದು ನೀರನ್ನು ಹೊರಗೆ ಹರಿಸಲಾಗುತ್ತಿದೆ. ಇಡುಕ್ಕಿ ಜಲಾಶಯದ ಜತೆಗೆ ರಾಜ್ಯದಲ್ಲಿನ ಇನ್ನಿತರ 27 ಡ್ಯಾಮ್‌ಗಳಿಂದಲೂ ಕೂಡ ನೀರನ್ನು ಹೊರಬಿಡಲಾಗುತ್ತಿದೆ.

ಸಂಪೂರ್ಣವಾಗಿ ಭರ್ತಿಯಾಗಿರುವ ಇಡುಕ್ಕಿ ಜಲಾಶಯ
ಸಂಪೂರ್ಣವಾಗಿ ಭರ್ತಿಯಾಗಿರುವ ಇಡುಕ್ಕಿ ಜಲಾಶಯ
/ಎನ್‌ಡಿ ಟಿವಿ

ಭಾನುವಾರ ಬೆಳಗ್ಗೆ 6 ಗಂಟೆಯ ವೇಳೆಗೆ ಇಡುಕ್ಕಿ ಜಲಾಶಯದ ಒಳಹರಿವು ಸ್ವಲ್ಪಮಟ್ಟಿಗೆ ಇಳಿದಿದ್ದು, ಜಲಾನಯನ ಪ್ರದೇಶದಲ್ಲಿ ಮಳೆ ಸ್ವಲ್ಪ ಬಿಡುವು ತೆಗೆದುಕೊಂಡಿದೆ. ಮತ್ತೆ ಇಡುಕ್ಕಿ, ವಯನಾಡು, ಕಣ್ಣೂರು, ಎರ್ನಾಕುಲಂ, ಪಲಕ್ಕಾಡ್‌ ಹಾಗೂ ಮಲಪ್ಪುರಂ ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಗಳಿವೆ. ನೆರೆ ಪೀಡಿತ ಪ್ರದೇಶಗಳಲ್ಲಿ ಭೂಸೇನೆ, ವಾಯುಸೇನೆ, ನೌಕಾ ಸೇನೆ ಮತ್ತು ಎನ್‌ಡಿಆರ್‌ಎಫ್‌ ಸಿಬ್ಬಂದಿ ಬಿಡುವಿಲ್ಲದ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಶನಿವಾರ ನೆರೆ ಪೀಡಿತ ಇಡುಕ್ಕಿ ಹಾಗೂ ವೈನಾಡು ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಕೇರಳದ ಮುಖ್ಯಮಂತ್ರಿ ಪಿಣಾರಾಯಿ ವಿಜಯನ್‌, ನೆರೆಯಿಂದಾಗಿ ಮನೆ ಮತ್ತು ಜಮೀನುಗಳನ್ನು ಕಳೆದುಕೊಂಡು ನಿರಾಶ್ರಿತರಾದ ಕುಟುಂಬಗಳಿಗೆ ತಲಾ 10 ಲಕ್ಷ ಪರಿಹಾರವನ್ನು ಘೋಷಿಸಿದ್ದಾರೆ. ನೆರೆಯಲ್ಲಿ ಕೊಚ್ಚಿಹೋದವರ ಕುಟುಂಬಗಳಿಗೆ 4 ಲಕ್ಷ ರೂಪಾಯಿಗಳ ಪರಿಹಾರವನ್ನೂ ಕೂಡ ಒದಗಿಸುವುದಾಗಿ ತಿಳಿಸಿದ್ದಾರೆ.

ಶನಿವಾರ ಇಬ್ಬರು ಮೀನುಗಾರರು ತಿರುವನಂತಪುರಂ ಕರಾವಳಿ ಪ್ರದೇಶದಲ್ಲಿ ದೋಣಿ ಮುಳುಗಿದ ಕಾರಣದಿಂದಾಗಿ ಸಾವನ್ನಪ್ಪಿದ್ದಾರೆ. ಅಲಪ್ಪುಝಾ ಜಿಲ್ಲೆಯ ಕುತ್ತಾನಾಡ್‌ ಎಂಬ ಹಳ್ಳಿಯಲ್ಲಿ ಇಬ್ಬರು ಮಹಿಳೆಯರ ಶವಗಳು ಅವರ ಮನೆಯ ಹಿಂದೆಯೇ ಪತ್ತೆಯಾಗಿವೆ. ಇನ್ನಿತರ ಪ್ರದೇಶಗಳಲ್ಲಿ ಒಟ್ಟು ನಾಲ್ಕು ಜನರ ಮೃತದೇಹಗಳು ಪತ್ತೆಯಾಗಿದ್ದು, ಸಾವಿನ ಸಂಖ್ಯೆ 37ಕ್ಕೆ ಏರಿಕೆಯಾಗಿದೆ.

ನೆರೆ ಪೀಡಿತ ಪ್ರದೇಶಗಳಲ್ಲಿನ 35,874 ಜನರ ಬದುಕು ಅಂತಂತ್ರ ಸ್ಥಿತಿ ತಲುಪಿದ್ದು, ಇವರೆಲ್ಲರನ್ನು ಕೂಡ 341 ನಿರಾಶ್ರಿತ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಜನರ ಮನೆ, ಸರಕು, ಸಂರಾಜಾಮುಗಳ ಜತೆ 1,301 ಹೆಕ್ಟೇರ್‌ ಪ್ರದೇಶದಲ್ಲಿನ ಬೆಳೆಗಳು ನಾಶವಾಗಿವೆ ಎಂದು ರಾಜ್ಯದ ವಿಪತ್ತು ನಿರ್ವಹಣಾ ಕೇಂದ್ರ ಮಾಹಿತಿ ನೀಡಿದೆ.

ಭಾನುವಾರ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಕೊಚ್ಚಿಯಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಜತೆ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.