
ಗೌರಿ ಲಂಕೇಶ್ ಹತ್ಯೆ ಪ್ರಕರಣ; ಶೀಘ್ರದಲ್ಲೇ ಮುಂಬೈಗೆ ಎಸ್ಐಟಿ
ಗೌರಿ ಲಂಕೇಶ್ ಹತ್ಯೆಗೆ ಮುಂಬೈನಿಂದ ಬಂದೂಕು ಪೂರೈಕೆಯಾಗಿರಬಹುದು ಎಂಬ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೂ ಮಹಾರಾಷ್ಟ್ರದ ಸನಾತನ ಸಂಸ್ಥೆಯ ಕಾರ್ಯಕರ್ತರಿಗೂ ನಂಟಿರುವ ಅನುಮಾನದ ಮೇಲೆ ಕರ್ನಾಟಕದ ವಿಶೇಷ ತನಿಖಾ ದಳದ (ಎಸ್ಐಟಿ) ಅಧಿಕಾರಿಗಳು ಮುಂಬೈಗೆ ಭೇಟಿ ನೀಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮಹಾರಾಷ್ಟ್ರದ ಭಯೋತ್ಪಾದನ ನಿಗ್ರಹಾ ದಳ (ಎಟಿಎಸ್) ಇತ್ತೀಚೆಗೆ ಮುಂಬೈನ ನಳಾ ಸೋಪಾರ ಪ್ರದೇಶದಲ್ಲಿರುವ ಸನಾತನ ಸಂಸ್ಥೆಯ ಕಾರ್ಯಕರ್ತ ವೈಭವ್ ರಾವತ್ ಎಂಬಾತನ ಮನೆಯ ಮೇಲೆ ಆಗಸ್ಟ್ 9ರಂದು ದಾಳಿ ನಡೆಸಿತ್ತು. ದಾಳಿಯ ವೇಳೆ ಭಾರೀ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳು ಹಾಗೂ ಬಾಂಬ್ ತಯಾರಿಕೆಗೆ ಬೇಕಾದ ಕಚ್ಛಾವಸ್ತುಗಳು ಸಿಕ್ಕಿದ್ದವು.
ರಾವತ್ ಸೇರಿದಂತೆ ಮೂರು ಮಂದಿಯನ್ನು ಬಂಧಿಸಿರುವ ಎಟಿಎಸ್ ತಂಡ ಗೌರಿ ಲಂಕೇಶ್ ಪ್ರಕರಣಕ್ಕೂ ಈ ಮೂವರಿಗೂ ನಂಟಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ. ಈ ಸಂಬಂಧ ಕರ್ನಾಟಕದ ಎಸ್ಐಟಿ ಅಧಿಕಾರಿಗಳು ಮುಂಬೈಗೆ ತೆರಳಿ ಈ ಆರೋಪಿಗಳ ವಿಚಾರಣೆ ನಡೆಸಲಿದ್ದಾರೆ ಎನ್ನಲಾಗಿದೆ.
2017ರ ಸೆಪ್ಟೆಂಬರ್ 5ರಂದು ಗೌರಿ ಲಂಕೇಶ್ ಅವರನ್ನು ಅವರ ಮನೆಯ ಹೊರಗೆ ಗುಂಡಿಟ್ಟು ಕೊಲ್ಲಲಾಗಿತ್ತು. ಪರಶುರಾಮ್ ವಾಗ್ಮೋರೆ ಈ ಹತ್ಯೆ ನಡೆಸಿದ ಹಂತಕ ಎಂದು ಸದ್ಯಕ್ಕೆ ಎಸ್ಐಟಿ ಅಧಿಕಾರಿಗಳು ತೀರ್ಮಾನಕ್ಕೆ ಬಂದಿದ್ದಾರೆ. ಆದರೆ, ಈ ಹತ್ಯೆಯ ಸಂಚಿನ ಹಿಂದೆ ಯಾರೆಲ್ಲಾ ಇದ್ದರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ವಾಗ್ಮೋರೆಗೆ ಮುಂಬೈನ ಸನಾತನ ಸಂಸ್ಥೆಯ ಕಾರ್ಯಕರ್ತರೇ ಬಂದೂಕು ಪೂರೈಕೆ ಮಾಡಿರಬಹುದು ಎಂಬ ಅನುಮಾನವನ್ನೂ ಪೊಲೀಸರು ವ್ಯಕ್ತಪಡಿಸಿದ್ದಾರೆ. ಎಸ್ಐಟಿ ಅಧಿಕಾರಿಗಳು ಮುಂಬೈಗೆ ಹೋಗಿ ಬಂಧಿತ ಆರೋಪಿಗಳ ವಿಚಾರಣೆ ನಡೆಸಿದ ಬಳಿಕ ಈ ಪ್ರಕರಣದಲ್ಲಿ ಮುಂಬೈ ನಂಟೇನು ಎಂಬುದು ಗೊತ್ತಾಗಲಿದೆ.