samachara
www.samachara.com
‘ದ್ರಾವಿಡ ಸೂರ್ಯ’ನಿಗೆ ಮರೀನಾ ಬೀಚ್‌ನಲ್ಲೇ ಅಂತಿಮ ವಿದಾಯ; ಮುಂದುವರಿದ ಶೋಕಾಚರಣೆ...
ಚಿತ್ರ ಕೃಪೆ: ಇಂಡಿಯನ್‌ ಎಕ್ಸ್‌ಪ್ರೆಸ್‌
ಸುದ್ದಿ ಸಾರ

‘ದ್ರಾವಿಡ ಸೂರ್ಯ’ನಿಗೆ ಮರೀನಾ ಬೀಚ್‌ನಲ್ಲೇ ಅಂತಿಮ ವಿದಾಯ; ಮುಂದುವರಿದ ಶೋಕಾಚರಣೆ...

ದ್ರಾವಿಡ ಚಳುವಳಿಯ ಸೂರ್ಯ ಮುತ್ತುವೇಲು ಕರುಣಾನಿಧಿ ಅಸ್ತಂಗತರಾದ ಬಳಿಕ ಅವರ ಅಂತ್ಯಸಂಸ್ಕಾರವೂ ಚರ್ಚೆಗೆ ಗ್ರಾಸವಾಗಿತ್ತು. ಇದಕ್ಕೀಗ ಮದ್ರಾಸ್‌ ಹೈಕೋರ್ಟ್‌ ಅಂತಿಮ ಮುದ್ರೆ ಒತ್ತಿದೆ. 

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

‘ದ್ರಾವಿಡ ಚಳುವಳಿಯ ಸೂರ್ಯ’ ಮುತ್ತುವೇಲು ಕರುಣಾನಿಧಿ ಅಸ್ತಂಗತರಾದ ಬಳಿಕ ಅವರ ಅಂತ್ಯಸಂಸ್ಕಾರವೂ ಚರ್ಚೆಗೆ ಗ್ರಾಸವಾಗಿತ್ತು. ಇದಕ್ಕೀಗ ಮದ್ರಾಸ್‌ ಹೈಕೋರ್ಟ್‌ ತೆರೆ ಎಳೆದಿದೆ.

ಚೆನ್ನೈನ ಖ್ಯಾತ ಮರೀನಾ ಬೀಚ್‌ನಲ್ಲಿ ಕರುಣಾನಿಧಿ ಶವ ಸಂಸ್ಕಾರಕ್ಕೆ ಅವಕಾಶ ನೀಡಬೇಕು ಎಂದು ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ. ಸ್ಟಾಲಿನ್‌ ಖುದ್ದು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿಗೆ ಮಂಗಳವಾರ ಮನವಿ ಸಲ್ಲಿಸಿದ್ದರು. ಇದಕ್ಕೆ ಒಪ್ಪದ ಸಿಎಂ ಸರ್ದಾರ್‌ ಪಟೇಲ್‌ ರಸ್ತೆಯಲ್ಲಿರುವ ಕೆ. ಕಾಮರಾಜ್‌ ಮತ್ತು ಸಿ. ರಾಜಗೋಪಾಲಾಚಾರಿ ಸಮಾಧಿ ಪಕ್ಷದಲ್ಲಿ ಅಂತ್ಯ ಸಂಸ್ಕಾರಕ್ಕೆ ಅವಕಾಶ ನೀಡಿ 2 ಎಕರೆ ಜಾಗವನ್ನು ಮಂಜೂರು ಮಾಡಿದರು.

ಇದಕ್ಕೆ ಒಪ್ಪದ ಕಾರಣ ಡಿಎಂಕೆ ನಾಯಕರು ಮದ್ರಾಸ್‌ ಹೈಕೋರ್ಟ್‌ ಮೊರೆ ಹೋಗಿದ್ದರು. ಇದಕ್ಕೆ ಆಡಳಿತರೂಢ ಎಐಎಡಿಎಂಕೆ ಸರಕಾರ ತಕರಾರು ತೆಗೆಯುವ ಮೂಲಕ ನ್ಯಾಯಾಲಯ ಸಂಕೀರ್ಣ ರಾತ್ರಿ ಕಾರ್ಯಾಚರಣೆಗೂ ಸಾಕ್ಷಿಯಾಯಿತು. ರಾತ್ರಿ 10.30ರಿಂದ ವಿಚಾರಣೆ ಆರಂಭವಾಯಿತು. ನಂತರ ವಿಚಾರಣೆಯನ್ನು ಇಂದು ಬೆಳಿಗ್ಗೆ 8 ಗಂಟೆಗೆ ಮುಂದೂಡಲಾಯಿತು. ಇದೀಗ ಮುಂಜಾನೆಯಿಂದ ಮದ್ರಾಸ್‌ ಹೈಕೋರ್ಟ್‌ನಲ್ಲಿ ಸಮಾಧಿ ಸ್ಥಳಕ್ಕಾಗಿ ಕಾವೇರಿದ ವಾದ ವಿವಾದ ನಡೆದು ಕೊನೆಗೂ ದ್ರಾವಿಡ ಸೂರ್ಯನಿಗೆ ಮರೀನಾ ಬೀಚ್‌ನಲ್ಲಿ ಚಿರನಿದ್ರೆಗೆ ಜಾರಲು ಕೋರ್ಟ್‌ ಅವಕಾಶ ಕಲ್ಪಿಸಿದೆ.

ಒಂದು ಕಡೆ ಕೋರ್ಟ್‌ನಲ್ಲಿ ಈ ಎಲ್ಲಾ ಬೆಳವಣಿಗೆಗಳು ನಡೆಯುತ್ತಿದ್ದರೆ, ಅತ್ತ ಅಂತಿಮ ದರ್ಶನ ಭರದಿಂದ ಸಾಗಿತ್ತು. ಅಗಸ್ಟ್‌ 7ರಂದು ಸಂಜೆ ಕರುಣಾನಿಧಿ ಕಾವೇರಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದರು. ನಂತರ ಅವರ ಪಾರ್ಥಿವ ಶರೀರವನ್ನು ರಾತ್ರಿ 8.30ಕ್ಕೆ ಗೋಪಾಲಪುರಂ ನಿವಾಸಕ್ಕೆ ತರಲಾಯಿತು. ಅಲ್ಲಿಂದ ರಾತ್ರಿ 1ರಿಂದ 3 ಗಂಟೆ ಕಾಲ ಸಿಐಟಿ ಕಾಲೋನಿಯಲ್ಲಿ ಸಾರ್ವಜನಿಕರ ದರ್ಶನಕ್ಕೆ ಶವವನ್ನು ಇಡಲಾಗಿತ್ತು. ಬಳಿಕ ಮುಂಜಾನೆ 4 ಗಂಟೆಗೆ ರಾಜಾಜಿ ಹಾಲ್‌ಗೆ ಕರುಣಾನಿಧಿ ಪಾರ್ಥಿವ ಶರೀರವನ್ನು ತರಲಾಗಿದ್ದು, ಅಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ರಾಜಾಜಿ ಹಾಲ್‌ ಹೊರಗಡೆ ಅಸಂಖ್ಯಾತ ಜನರು ಅಂತಿಮ ದರ್ಶನಕ್ಕಾಗಿ ಕಾದಿದ್ದು 200 ಜನರ ಬ್ಯಾಚ್‌ನಲ್ಲಿ ಅವರನ್ನು ಒಳಗೆ ಬಿಡಲಾಗುತ್ತಿದೆ.

ಸಂತಾಪ

ಕರುಣಾನಿಧಿಯವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮ್‌ನಾಥ್‌ ಕೋವಿಂದ್‌ ಸೇರಿದಂತೆ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, ತೆಲಂಗಾಣ ಮುಖ್ಯಮಂತ್ರಿ ಕೆ.ಸಿ. ಚಂದ್ರಶೇಖರ್‌ ರಾವ್‌, ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು, ಕರ್ನಾಟಕ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಒಡಿಶಾ ಸಿಎಂ ನವೀನ್‌ ಪಟ್ನಾಯಕ್, ತಮಿಳು ಸಿನಿಮಾದ ಸೂಪರ್‌ಸ್ಟಾರ್‌ಗಳಾದ ರಜನೀಕಾಂತ್‌, ಕಮಲ್‌ ಹಾಸನ್‌, ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್‌ ಕೂಡ ಸಂತಾಪ ಸೂಚಕರಲ್ಲಿ ಸೇರಿದ್ದಾರೆ.

ಕರುಣಾನಿಧಿ ನಿಧನದ ಹಿನ್ನೆಲೆಯಲ್ಲಿ ಮಮತಾ ಬ್ಯಾನರ್ಜಿ, ಪಿ ಚಿದಂಬರಂ, ಮತ್ತು ರಜನೀಕಾಂತ್ ಮಂಗಳವಾರವೇ ಚೆನ್ನೈಗೆ ಧಾವಿಸಿ ಅಂತಿಮ ದರ್ಶನ ಪಡೆದಿದ್ದಾರೆ. ಇನ್ನು ಇಂದು ಬೆಳಿಗ್ಗೆ ಕಮಲ್‌ ಹಾಸನ್‌, ಅಜಿತ್‌, ರಾಜ್ಯಪಾಲ ಬನ್ವಾರಿಲಾಲ್‌ ಪುರೋಹಿತ್‌, ಕೇರಳ ಮಾಜಿ ಮುಖ್ಯಮಂತ್ರಿ ಉಮ್ಮನ್‌ ಚಾಂಡಿ, ಎಡಪ್ಪಾಡಿ ಪಳನಿಸ್ವಾಮಿ ಕರುಣಾನಿಧಿಯವರ ಅಂತಿಮ ದರ್ಶನ ಪಡೆದರು. ಇದೀಗ ನರೇಂದ್ರ ಮೋದಿಯೂ ಕರುಣಾನಿಧಿಯವರಿಗೆ ಅಂತಿಮ ನಮನ ಸಲ್ಲಿಸಿದ್ದು, ರಾಹುಲ್‌ ಗಾಂಧಿ ಮೊದಲಾದ ಅಸಂಖ್ಯಾತ ನಾಯಕರು ಇಂದು ಪಾರ್ಥಿವ ಶರೀರಕ್ಕೆ ನಮನ ಸಲ್ಲಿಸಲಿದ್ದಾರೆ.

ಇನ್ನು ಮದ್ರಾಸ್‌ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಮರೀನಾ ಬೀಚ್‌ನಲ್ಲಿರುವ ಅಣ್ಣಾದೊರೈ ಸಮಾಧಿ ಸುತ್ತ ರಾಪಿಡ್‌ ಆಕ್ಷನ್‌ ಫೋರ್ಸ್‌ ನಿಯೋಜನೆ ಮಾಡಲಾಗಿತ್ತು. ಇದೀಗ ಮರೀನಾ ಬೀಚ್‌ನಲ್ಲೇ ಅಂತ್ಯ ಸಂಸ್ಕಾರಕ್ಕೆ ಕೋರ್ಟ್‌ ಆದೇಶ ನೀಡಿರುವುದು ಇದರ ಸುತ್ತ ಭದ್ರತೆಯನ್ನು ಮತ್ತಷ್ಟು ಬಿಗಿ ಗೊಳಿಸಲಾಗಿದೆ.

ಕರುಣಾನಿಧಿ ಸಾವಿನ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ 7 ದಿನಗಳ ಶೋಕಾಚರಣೆ ಘೋಷಿಸಲಾಗಿದೆ. ಮತ್ತು ಇಂದು ಎಲ್ಲಾ ಶಾಲಾ-ಕಾಲೇಜು, ಸರಕಾರಿ ಕಚೇರಿಗಳಿಗೆ ರಜೆ ಘೋಷಿಸಲಾಗಿದ್ದು ಚೆನ್ನೈ ಸೇರಿದಂತೆ ರಾಜ್ಯದಾದ್ಯಂತ ಅಘೋಷಿತ ಬಂದ್‌ ಜಾರಿಯಲ್ಲಿದೆ. ಕರ್ನಾಟಕದಲ್ಲಿಯೂ ಇಂದು ಒಂದು ದಿನದ ಶೋಕಾಚರಣೆ ಇರಲಿದೆ.