ಇಂಡೋನೇಷ್ಯಾದಲ್ಲಿ ಮತ್ತೊಂದು ಪ್ರಬಲ ಭೂಕಂಪ, 91 ಜನ ಬಲಿ
ಸುದ್ದಿ ಸಾರ

ಇಂಡೋನೇಷ್ಯಾದಲ್ಲಿ ಮತ್ತೊಂದು ಪ್ರಬಲ ಭೂಕಂಪ, 91 ಜನ ಬಲಿ

ಇಂಡೋನೇಷ್ಯಾದ ಸಮೀಪ ಆಗಾಗ ಭೂ ಪದರಗಳಲ್ಲಿ ಚಲನೆ ಕಂಡು ಬರುತ್ತದೆ. ಈ ಕಾರಣಕ್ಕೆ ಇಲ್ಲಿ ಹೆಚ್ಚಾಗಿ ಭೂ ಕಂಪನಗಳು ಸಂಭವಿಸುತ್ತಿರುತ್ತವೆ.

ಸದಾ ಭೂಕಂಪಕ್ಕೆ ಗುರಿಯಾಗುವ ಇಂಡೋನೇಷ್ಯಾದಲ್ಲಿ ಮತ್ತೊಂದು ಕಂಪನ ಸಂಭವಿಸಿದ್ದು ಕನಿಷ್ಠ 91 ಜನರು ಸಾವನ್ನಪ್ಪಿದ್ದಾರೆ. ಇಲ್ಲಿನ ಪ್ರವಾಸೋದ್ಯಮಕ್ಕೆ ಜನಪ್ರಿಯವಾದ ಲೊಂಬಾಕ್‌ ದ್ವೀಪದಲ್ಲಿ ಈ ಭೂಕಂಪ ಸಂಭವಿಸಿದೆ.

ಕಂಪನದ ಕೇಂದ್ರ ಇಲ್ಲಿನ ಲೊಲಾನ್‌ನಲ್ಲಿ 3 ಕಿಲೋಮೀಟರ್‌ ಆಳದಲ್ಲಿ ಇತ್ತು ಎಂದು ಅಮೆರಿಕಾದ ಭೂವಿಜ್ಞಾನ ಇಲಾಖೆ ಹೇಳಿದೆ. ಇಂಡೋನೇಷ್ಯಾದ ಕಾಲಮಾನ ಬೆಳಿಗ್ಗೆ 2.30ಕ್ಕೆ ಭೂಕಂಪ ಸಂಭವಿಸಿದ್ದು, ರಿಕ್ಟರ್‌ ಮಾಪಕದಲ್ಲಿ 6.9 ರಷ್ಟು ಕಂಪನದ ತೀವ್ರತೆ ದಾಖಲಾಗಿದೆ. ಒಟ್ಟು 130 ಬಾರಿ ಭೂಮಿ ಕಂಪಿಸಿದೆ ಎಂದು ತಜ್ಞರು ಹೇಳಿದ್ದಾರೆ.

ಇಲ್ಲಿಯವರೆಗೆ 91 ಜನರು ಭೂಕಂಪದಿಂದ ಸಾವನ್ನಪ್ಪಿದ್ದರೆ, ನೂರಾರು ಜನರು ಗಾಯಗೊಂಡಿದ್ದಾರೆ. ಸಾವಿರಾರು ಮನೆಗಳು ಧರಶಾಯಿಯಾಗಿವೆ. ಭೂಕಂಪದ ವೇಳೆ ಜನರು ನಿದ್ರಿಸುತ್ತಿದ್ದರಿಂದ ಮನೆ ಕುಸಿದು ಹೆಚ್ಚಿನ ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ವಿಕೋಪ ನಿರ್ವಹಣಾ ಸಂಸ್ಥೆಯ ಮುಖ್ಯಸ್ಥ ಮುಹಮ್ಮದ್‌ ರಮ್‌ ಹೇಳಿದ್ದಾರೆ.

ಆರಂಭದಲ್ಲಿ ಭೂಕಂಪದ ತೀವ್ರತೆಯಿಂದ ಸುನಾಮಿಯ ಮುನ್ನೆಚ್ಚರಿಕೆ ನೀಡಲಾಗಿತ್ತು ನಂತರ ಇದನ್ನು ಹಿಂತೆಗೆದುಕೊಳ್ಳಲಾಯಿತು. ಭೂಕಂಪದಿಂದ ದೊಡ್ಡ ದೊಡ್ಡ ಅಲೆಗಳು ಸಮುದ್ರದಲ್ಲಿ ಉಂಟಾಗಿದ್ದು, ಮೂರು ಗ್ರಾಮಗಳಿಗೆ ಸಮುದ್ರದ ನೀರು ನುಗ್ಗಿದೆ ಎಂದು ತಿಳಿದು ಬಂದಿದೆ. ಆದರೆ ಸಮುದ್ರದ ಅಲೆಗಳಿಂದ ಹೆಚ್ಚಿನ ಹಾನಿ ಸಂಭವಿಸಿಲ್ಲ.

ಇಂಡೋನೇಷ್ಯಾದಲ್ಲಿ ಮತ್ತೊಂದು ಪ್ರಬಲ ಭೂಕಂಪ, 91 ಜನ ಬಲಿ
ಚಿತ್ರ ಕೃಪೆ: ನ್ಯೂಸ್‌ ಡಾಟ್‌ ಕಾಂ

ಇಲ್ಲಿಂದ ನೂರು ಕಿಲೋಮೀಟರ್‌ ದೂರದಲ್ಲಿರುವ ಬಾಲಿ ದ್ವೀಪದಲ್ಲೂ ಹಲವು ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ ಅನುಭವವಾಗಿದ್ದು, ಇಲ್ಲಿಗೆ ದೇಶ, ವಿದೇಶಗಳಿಂದ ಬಂದಿದ್ದ ಸಾವಿರಾರು ಪ್ರವಾಸಿಗರು ಎತ್ತರದ ಸ್ಥಳಗಳಿಗೆ ಓಡಿ ಹೋಗಿದ್ದಾರೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಇದೇ ವೇಳೆ ಲ್ಯಾಂಬಕ್‌ನಲ್ಲಿ ಬಂದು ಉಳಿದುಕೊಂಡಿದ್ದ 1 ಸಾವಿರಕ್ಕೂ ಅಧಿಕ ಪ್ರವಾಸಿಗರನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಲಾಗುತ್ತಿದೆ.

ಇದೇ ಇಂಡೋನೇಷ್ಯಾದಲ್ಲಿ ಕಳೆದ ವಾರ 6.4 ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದರಲ್ಲಿ 17 ಜನರು ಸಾವನ್ನಪ್ಪಿ, 160ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಕಳೆದ ವಾರದ ಭೂಕಂಪದಲ್ಲಿ ಮನೆ ಕಳೆದುಕೊಂಡವರು ಬೀದಿಗಳಲ್ಲೇ ವಾಸಿಸುತ್ತಿದ್ದರು. ಇವರ ಅಳಿದುಳಿದ ಮನೆಗಳೂ ಇದೀಗ ಧರಶಾಯಿಯಾಗಿವೆ ಎಂದು ಅಲ್‌ಜಝೀರಾ ವರದಿ ಮಾಡಿದೆ.

ಟೆಕ್ಟೋನಿಕ್‌ ಫಲಕಗಳು ಕಾರಣ

ಶಿಲೆಯಲ್ಲಿ ಪದರಗಳಿದ್ದಂತೆ, ಭೂಮಿಯ ಮೇಲೈ ಕುಡ ಪದರಗಳಿಂದ ಕೂಡಿದೆ. ಇಂಡೋನೇಷ್ಯಾದ ಸಮೀಪ ಆಗಾಗ ಈ ಭೂ ಪದರಗಳಲ್ಲಿ ಚಲನೆ ಕಂಡು ಬರುತ್ತದೆ. ಈ ಕಾರಣಕ್ಕೆ ಇಲ್ಲಿ ಹೆಚ್ಚಾಗಿ ಭೂ ಕಂಪನಗಳು ಸಂಭವಿಸುತ್ತಿರುತ್ತವೆ. ಇದೇ ರೀತಿ ದೊಡ್ಡ ಮಟ್ಟದ ಭೂ ಪದರದ ಚಲನೆ 2004ರಲ್ಲಿ ಸುಮಾತ್ರಾ ದ್ವೀಪದ ಸಮೀಪ ಸಂಭವಿಸಿತ್ತು. ಇತ್ತೀಚೆಗೆ ನಡೆದ ಅತ್ಯಂತ ಪ್ರಬಲ ಭೂಕಂಪ ಇದಾಗಿತ್ತು, ಇದರಲ್ಲಿ ಏಷ್ಯಾ ಖಂಡದ ಸುಮಾರು 2.27 ಲಕ್ಷ ಜನರು ಪ್ರಾಣಿ ಕಳೆದುಕೊಂಡಿದ್ದರು.