ಪೂರ್ವಾಂಚಲ ಪ್ರತ್ಯೇಕಕ್ಕೆ ಬೇಡಿಕೆ; ರಾಜ್ಯ 4 ಭಾಗ ಮಾಡಿ ಎಂದ ಯುಪಿ ಸಚಿವ
ಸುದ್ದಿ ಸಾರ

ಪೂರ್ವಾಂಚಲ ಪ್ರತ್ಯೇಕಕ್ಕೆ ಬೇಡಿಕೆ; ರಾಜ್ಯ 4 ಭಾಗ ಮಾಡಿ ಎಂದ ಯುಪಿ ಸಚಿವ

ಉತ್ತರ ಕರ್ನಾಟಕ ಪ್ರತ್ಯೇಕತೆಯ ಕೂಗು ಇತ್ತ ತಣ್ಣಗಾಗುತ್ತಿದ್ದಂತೆ ಅತ್ತ ಉತ್ತರ ಪ್ರದೇಶವನ್ನು ನಾಲ್ಕು ಭಾಗ ಮಾಡುವ ಬೇಡಿಕೆ ಕೇಳಿಬರುತ್ತಿದೆ.

ಕರ್ನಾಟಕವನ್ನು ಎರಡು ಭಾಗವಾಗಿಸಬೇಕು ಎಂಬ ವಾದ ಇತ್ತೀಚೆಗೆ ದೇಶಾದ್ಯಂತ ಸುದ್ದಿ ಮಾಡಿತ್ತು. ಈ ಸುದ್ದಿ ಸ್ವಲ್ಪ ತಣ್ಣಗಾಗುವ ಮೊದಲೇ ಉತ್ತರ ಪ್ರದೇಶವನ್ನು 4 ಭಾಗ ಮಾಡಬೇಕು ಎಂಬ ಧ್ವನಿ ಕೇಳಿ ಬಂದಿದೆ. ಉತ್ತರ ಪ್ರದೇಶದ ಸಚಿವರೊಬ್ಬರು ಈ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.

ಉತ್ತರ ಪ್ರದೇಶದ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಓಂ ಪ್ರಕಾಶ್‌ ರಾಜಭಾರ್‌ ಪೂರ್ವಾಂಚಲ ಭಾಗವನ್ನು ಉತ್ತರ ಪ್ರದೇಶದಿಂದ ವಿಭಜಿಸಿ ಪ್ರತ್ಯೇಕ ರಾಜ್ಯದ ಸ್ಥಾನಮಾನ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಪೂರ್ವಾಂಚಲ ಪ್ರತ್ಯೇಕ ರಾಜ್ಯವಾಗದಿದ್ದರೆ ಅನಕ್ಷರತೆ, ಬಡತನ ಮತ್ತು ನಿರುದ್ಯೋಗದ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಉತ್ತರ ಪ್ರದೇಶ ದೊಡ್ಡ ಭೂ ವಿಸ್ತೀರ್ಣವನ್ನು ಹೊಂದಿರುವ ರಾಜ್ಯ ಆಗಿರುವುದರಿಂದ ಒಂದೇ ಅಡಳಿತದಡಿ ಇಡೀ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ, ಆದ್ದರಿಂದ ರಾಜ್ಯವನ್ನು ನಾಲ್ಕು ಭಾಗವಾಗಿಸಬೇಕು ಎಂದಿದ್ದಾರೆ ಓಂ ಪ್ರಕಾಶ್‌.

“ಪೂರ್ವಾಂಚಲದಲ್ಲಿ ಅನಕ್ಷರತೆ, ಬಡತನ ಮತ್ತು ನಿರುದ್ಯೋಗ ತಾಂಡವವಾಡುತ್ತಿದೆ. ಈ ಸಮಸ್ಯೆಗಳನ್ನು ಹೋಗಲಾಡಿಸಲು ಸಾಧ್ಯವಾಗಬೇಕಾದರೆ ರಾಜ್ಯವನ್ನು ವಿಭಜಿಸಬೇಕು” ಎಂದು ಓಂ ಪ್ರಕಾಶ್ ರಾಜಭಾಗ್‌ ಹೇಳಿದ್ದಾರೆ. ಈ ಮುಂಚೆ ರಾಜ್ಯ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆಯನ್ನು ಹೊಂದಿರುವ ಕೇಂದ್ರ ಸಚಿವ ರಾಮದಾಸ್‌ ಉತ್ತರ ಪ್ರದೇಶದಿಂದ ಪೂರ್ವಾಂಚಲ ಮತ್ತು ವಿದರ್ಭಗಳನ್ನು 2 ಪ್ರತ್ಯೇಕ ರಾಜ್ಯಗಳಾಗಿ ವಿಭಜಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಜತೆ ಮಾತನಾಡುವುದಾಗಿ ತಿಳಿಸಿದ್ದರು.

ಸಚಿವರ ಈ ಹೇಳಿಕೆಗಳ ಜತೆಗೆ ಹಲವಾರು ತಿಂಗಳುಗಳಿಂದ ರಾಜ್ಯವನ್ನು ವಿಭಜಿಸಬೇಕು ಎಂಬ ಮಾತುಗಳು ಜನರಿಂದಲೂ ಕೇಳಿಬರುತ್ತಿವೆ. ಉತ್ತರ ಪ್ರದೇಶವನ್ನು ಬುಂದೇಲ್‌ಖಂಡ್‌, ಪೂರ್ವಾಂಚಲ, ಅವಧ್‌ ಪ್ರದೇಶ್‌ ಮತ್ತು ಪಶ್ಚಿಮ ಪ್ರದೇಶ್‌ ಎಂಬ ನಾಲ್ಕು ರಾಜ್ಯಗಳನ್ನಾಗಿ ಮಾಡಬೇಕು ಎಂದು ಅಲ್ಲಿನ ಜನ ಮನವಿ ಸಲ್ಲಿಸುತ್ತಾ ಬಂದಿದ್ದಾರೆ.

ಒಟ್ಟಾರೆ 2,43,290 ಚದರ ಕಿಲೋಮೀಟರ್‌ ವಿಸ್ತೀರ್ಣವನ್ನು ಹೊಂದಿರುವ ಉತ್ತರ ಪ್ರದೇಶ ಭೂವ್ಯಾಪ್ತಿಯಿಂದ ನೋಡುವುದಾದರೆ ದೇಶದ 4ನೇ ಅತಿ ದೊಡ್ಡ ರಾಜ್ಯವಾಗಿದೆ. ನೇಪಾಳದೊಂದಿಗೆ ಅಂತರರಾಷ್ಟ್ರೀಯ ಗಡಿಯನ್ನು ಹಂಚಿಕೊಂಡಿರುವ ಉತ್ತರ ಪ್ರದೇಶದ ಉತ್ತರ ಭಾಗದ ಗಡಿಯಲ್ಲಿ ಹಿಮಾಲಯ ಪರ್ವತಗಳಿವೆ.

ರಾಜ್ಯದಲ್ಲಿ ಒಟ್ಟು 75 ಜಿಲ್ಲೆಗಳಿದ್ದು 18 ವಿಭಾಗಗಳ ಅಡಿಯಲ್ಲಿ ಈ ಜಿಲ್ಲೆಗಳನ್ನು ವರ್ಗೀಕರಿಸಲಾಗಿದೆ. ಜನಸಂಖ್ಯಾ ದೃಷ್ಟಿಯಿಂದ ದೇಶದ ಅತಿದೊಡ್ಡ ರಾಜ್ಯ ಎನಿಸಿರುವ ಉತ್ತರ ಪ್ರದೇಶದಲ್ಲಿ ಸರಿಸುಮಾರು 20 ಕೋಟಿ ಜನ ವಾಸವಿದ್ದಾರೆ. ಒಂದು ಚದರ ಕಿಲೋ ಮೀಟರ್‌ ವ್ಯಾಪ್ತಿಯಲ್ಲಿ 828 ಜನ ನೆಲೆ ನಿಂತಿದ್ದು, ಅತಿಹೆಚ್ಚು ಜನಸಂಖ್ಯಾ ಸಾಂದ್ರತೆಯನ್ನು ಹೊಂದಿದೆ.

ಈಗ ರಾಜ್ಯವನ್ನು 4 ಭಾಗವಾಗಿಸಲು ಉತ್ತರ ಪ್ರದೇಶದ ಹಲವರು ಪ್ರಸ್ತಾವ ಮುಂದಿಟ್ಟಿದ್ದಾರೆ. ಉತ್ತರ ಪ್ರದೇಶ 4 ಭಾಗವಾದರೆ ಪೂರ್ವಾಂಚಲ ಪ್ರತ್ಯೇಕ ರಾಜ್ಯವಾಗುತ್ತದೆ. ಇದು ಉತ್ತರ ಪ್ರದೇಶದ 5 ವಿಭಾಗಗಳಲ್ಲಿನ 17ಜಿಲ್ಲೆಗಳನ್ನು ಹೊಂದಿರುವ ಭೂ ಭಾಗ. ಭಾರತದ ಪ್ರಾಚೀನ ನಗರಗಳಾದ ವಾರಣಾಸಿ ಮತ್ತು ಗೋರಕ್‌ಪುರ ನಗರಗಳು ಈ ಭಾಗದಲ್ಲಿಯೇ ಬರುತ್ತವೆ.

ಎರಡನೇ ರಾಜ್ಯವಾಗಿ ಕಾಣಿಸಿಕೊಳ್ಳುವುದು ಬುಂದೇಲ್‌ಖಂಡ್‌ ಪ್ರದೇಶ. 2010ರಿಂದಲೂ ಕೂಡ ಬುಂದೇಲ್‌ಖಂಡ್‌ ಭಾಗವನ್ನು ಪ್ರತ್ಯೇಕ ರಾಜ್ಯವನ್ನಾಗಿ ಘೋಷಿಸಬೇಕು ಎಂಬ ಮಾತುಗಳು ಕೇಳಿಬರುತ್ತಿವೆ.

ಉತ್ತರದಲ್ಲಿ ಗಂಗಾ ನದಿ ಬಯಲು ಮತ್ತು ದಕ್ಷಿಣದಲ್ಲಿ ವಿಂಧ್ಯ ಪರ್ವತಗಳನ್ನು ಹೊಂದಿರುವ ಬುಂದೇಲ್‌ಖಂಡ್‌ ಉತ್ತರ ಪ್ರದೇಶದ 2 ವಿಭಾಗಗಳ ಒಟ್ಟು 7 ಜಿಲ್ಲೆಗಳನ್ನು ಹೊಂದಿದೆ. ಇಷ್ಟೇ ಅಲ್ಲದೇ ಮಧ್ಯಪ್ರದೇಶದ 7 ಜಿಲ್ಲೆಗಳನ್ನು ಕೂಡ ಬುಂದೇಲ್‌ಖಂಡ್‌ನ ಭಾಗವಾಗಿ ಗುರುತಿಸಲಾಗಿದೆ. ಜತೆಗೆ ಮಧ್ಯ ಪ್ರದೇಶ ಮತ್ತು ರಾಜಸ್ಥಾನ ಇತರೆ 6 ಜಿಲ್ಲೆಗಳೂ ಕೂಡ ಕೆಲವೊಂದು ವಿಷಯಗಳಲ್ಲಿ ಬುಂದೇಲ್‌ಖಂಡ್‌ನ ಭಾಗವಾಗಿ ಕಾಣಿಸುತ್ತವೆ.

ಮೂರನೇ ರಾಜ್ಯ ಅವಧ್‌ ಪ್ರದೇಶ. ಅವಧಿ ಎಂಬ ಪುರಾತ ನಗರದ ಕಾರಣದಿಂದಾಗಿ ಈ ಪ್ರದೇಶವನ್ನು ಅವಧ್‌ ಎಂದು ಕರೆಯಲಾಗಿದೆ. ಉತ್ತರ ಪ್ರದೇಶದ 24 ಜಿಲ್ಲೆಗಳು ಅವಧ್‌ ಪ್ರಾಂತ್ಯದಲ್ಲಿ ಗುರುತಿಸಿಕೊಂಡಿವೆ. ಉತ್ತರ ಪ್ರದೇಶದ 2 ರಾಜಧಾನಿಗಳ ಪೈಕಿ ಒಂದಾದ ಅಲಹಾಬಾದ್‌ ಈ ಪ್ರಾಂತ್ಯಕ್ಕೆ ಸೇರುತ್ತದೆ.

ನಾಲ್ಕನೆಯದು ಪಶ್ಚಿಮ ಪ್ರದೇಶ. ಈ ಭಾಗ ದೆಹಲಿ, ಹರಿಯಾಣ, ಉತ್ತರಾಖಂಡ್‌, ಮಧ್ಯಪ್ರದೇಶ ಮತ್ತು ರಾಜಸ್ತಾನ್‌ ರಾಜ್ಯಗಳ ಗಡಿಗೆ ಹೊಂದಿಕೊಂಡಿದೆ. ಉತ್ತರ ಪ್ರದೇಶದ ಉಳಿದ ಜಿಲ್ಲೆಗಳು ಈ ಭಾಗಕ್ಕೆ ಸೇರಿವೆ. ನೋಯ್ಡಾ, ಗ್ರೇಟರ್‌ ನೋಯ್ಡಾ, ಆಗ್ರಾ, ಮಥುರಾ ಇತ್ಯಾದಿ ನಗರಗಳನ್ನು ಈ ಭಾಗ ಹೊಂದಿದೆ.

ಉತ್ತರ ಪ್ರದೇಶ ಜನ ಏನಾದರೂ ಪ್ರತ್ಯೇಕ ರಾಜ್ಯದ ಅಸ್ತಿತ್ವಕ್ಕಾಗಿ ಉಗ್ರ ಹೋರಾಟಕ್ಕಿಳಿದರೆ ಒಂದು ರಾಜ್ಯದ ಜಾಗದಲ್ಲಿ ನಾಲ್ಕು ರಾಜ್ಯಗಳು ಅಸ್ತಿತ್ವಕ್ಕೆ ಬರುತ್ತವೆ. ಜನರು ಇಟ್ಟಿರುವ ಬೇಡಿಕೆಯ ಜತೆಗೆ ಈಗ ಸಚಿವರೂ ಕೂಡ ಈ ಕುರಿತು ಮಾತನಾಡಿರುವುದರಿಂದ ಪ್ರತ್ಯೇಕ ರಾಜ್ಯಗಳ ಕೂಗಿಗೆ ಮತ್ತಷ್ಟು ಬಲ ಬಂದಂತಾಗಿದೆ.