ಮಿನಿಮಮ್‌ ಬ್ಯಾಲೆನ್ಸ್‌ ನೀತಿ; 1 ವರ್ಷದಲ್ಲಿ ಬ್ಯಾಂಕ್‌ಗಳು ವಸೂಲಿ ಮಾಡಿದ್ದು 4,998 ಕೋಟಿ!
ಸುದ್ದಿ ಸಾರ

ಮಿನಿಮಮ್‌ ಬ್ಯಾಲೆನ್ಸ್‌ ನೀತಿ; 1 ವರ್ಷದಲ್ಲಿ ಬ್ಯಾಂಕ್‌ಗಳು ವಸೂಲಿ ಮಾಡಿದ್ದು 4,998 ಕೋಟಿ!

ಭಾರತದ ಪ್ರಮುಖ ಸಾರ್ವಜನಿಕ ಹಾಗೂ ಖಾಸಗಿ ಬ್ಯಾಂಕ್‌ಗಳು 2017-18ರ ಆರ್ಥಿಕ ವರ್ಷದಲ್ಲಿ ಕನಿಷ್ಠ ಠೇವಣಿಯಿಡದ ಗ್ರಾಹಕರಿಂದ 4,998 ಕೋಟಿ ದಂಡವನ್ನು ವಸೂಲಿ ಮಾಡಿವೆ.

ಭಾರತದ ಬ್ಯಾಂಕ್‌ಗಳು 2017-18ರ ಆರ್ಥಿಕ ವರ್ಷದಲ್ಲಿ ಖಾತೆಗಳಲ್ಲಿ ಕನಿಷ್ಠ ಠೇವಣಿಯನ್ನು ಇಡದ ಖಾತೆದಾರರಿಂದ ಸುಮಾರು 4,998 ಕೋಟಿ ರೂಪಾಯಿ ದಂಡ ವಸೂಲಿ ಮಾಡಿವೆ. ದೇಶದಲ್ಲಿನ ಒಟ್ಟು 30.8 ಕೋಟಿ ಉಳಿತಾಯ ಖಾತೆಗಳಿಂದ ಈ ದಂಡ ಪಡೆಯಲಾಗಿದೆ. ಜನಧನ್‌ ಯೋಜನೆಯ ಅಡಿಯಲ್ಲಿ ತೆರೆದ ಉಳಿತಾಯ ಖಾತೆಗಳು ಈ ಖಾತೆಗಳೊಳಗೆ ಸೇರಿಲ್ಲ.

ತನ್ನ ಖಾತೆದಾರರಿಂದ ಅತಿ ಹೆಚ್ಚು ದಂಡ ವಸೂಲಿ ಮಾಡಿರುವುದು ಭಾರತೀಯ ಸ್ಟೇಟ್‌ ಬ್ಯಾಂಕ್‌. ಒಂದು ವರ್ಷದ ಅವಧಿಯಲ್ಲಿ ಎಸ್‌ಬಿಐ ಬರೋಬ್ಬರಿ 2,433 ಕೋಟಿ ರೂಪಾಯಿ ದಂಡವನ್ನು ಪಡೆದಿದ್ದು, ಒಟ್ಟಾರೆ ದಂಡದ ಸುಮಾರು ಅರ್ಧದಷ್ಟನ್ನು ತನ್ನ ಖಜಾನೆಗೆ ಸೇರಿಸಿಕೊಂಡಿದೆ. ಶೇ.30ರಷ್ಟು ದಂಡವನ್ನು ಭಾರತದ ಪ್ರಮುಖ ಖಾಸಗಿ ಬ್ಯಾಂಕ್‌ಗಳಾದ ಆಕ್ಸಿಸ್‌ ಬ್ಯಾಂಕ್‌, ಎಚ್‌ಡಿಎಫ್‌ಸಿ ಬ್ಯಾಂಕ್‌ ಮತ್ತು ಐಸಿಐಸಿಐ ಬ್ಯಾಂಕ್‌ಗಳು ವಸೂಲಿ ಮಾಡಿವೆ.

ಹಲವಾರು ವರ್ಷಗಳಿಂದ ಭಾರತೀಯ ಸ್ಟೇಟ್‌ ಬ್ಯಾಂಕ್‌ ತಮ್ಮ ಖಾತೆಗಳಲ್ಲಿ ಕನಿಷ್ಠ ಠೇವಣಿ ಇಡದ ಗ್ರಾಹಕರ ಮೇಲೆ ದಂಡ ಹಾಕಿರಲಿಲ್ಲ. ಆದರೆ ಕಳೆದ ವರ್ಷ ತನ್ನ ನಿರ್ಧಾರವನ್ನು ಬದಲಿಸಿ ದಂಡ ವಿಧಿಸಲು ತೀರ್ಮಾನಿಸಿತ್ತು. ಹಲವಾರು ವರ್ಷಗಳ ನಂತರ ಏಕಾಏಕಿ ದಂಡವನ್ನು ವಿಧಿಸಿದ ಕಾರಣ ಎಸ್‌ಬಿಐಗೆ 2 ಪಟ್ಟು ಹೆಚ್ಚು ದಂಡದ ಹಣ ದೊರೆತಿದೆ. 2018ರ ಜನವರಿ ತಿಂಗಳಿಂದಲೇ ಭಾರತೀಯ ಸ್ಟೇಟ್‌ ಬ್ಯಾಂಕ್‌ 1,700 ಕೋಟಿ ರೂಪಾಯಿ ದಂಡ ವಸೂಲು ಮಾಡಿದೆ.

ಆಕ್ಸಿಸ್‌ ಬ್ಯಾಂಕ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌ಗಳ ಶೇಕಡಾವಾರು ದಂಡದ ಪ್ರಮಾಣ ಎಸ್‌ಬಿಐಗಿಂತಲೂ ಹೆಚ್ಚಿದೆ. ಈ ಬ್ಯಾಂಕ್‌ಗಳಿಂತಲೂ ಹೆಚ್ಚು ಜನಧನ್‌ ಯೋಜನೆಯ ಖಾತೆಗಳನ್ನು ಎಸ್‌ಬಿಐ ಹೊಂದಿದೆ. ಆದಾಗ್ಯೂ ಕೂಡ ಈ ಎಲ್ಲಾ ಬ್ಯಾಂಕ್‌ಗಳಿಗಿಂತಲೂ ಹೆಚ್ಚು ದಂಡ ಎಸ್‌ಬಿಐ ಬೊಕ್ಕಸಕ್ಕೆ ಜಮೆಯಾಗಿದೆ.

ಎಸ್‌ಬಿಐ ಬೊಕ್ಕಸಕ್ಕೆ 2,434 ಕೋಟಿ ರೂಪಾಯಿ ದಂಡ ಜಮೆಯಾಗಿದ್ದರೆ, ಎಚ್‌ಡಿಎಫ್‌ಸಿ ಬ್ಯಾಂಕ್‌ 590 ಕೋಟಿ, ಆಕ್ಸಿಸ್‌ ಬ್ಯಾಂಕ್‌ 530 ಕೋಟಿ, ಐಸಿಐಸಿಐ ಬ್ಯಾಂಕ್‌ 317 ಕೋಟಿ ಹಾಗೂ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ 211 ಕೋಟಿ ರೂಪಾಯಿ ದಂಡವನ್ನು ಕನಿಷ್ಠ ಠೇವಣಿಯಿಡದ ಗ್ರಾಹಕರಿಂದ ವಸೂಲಿ ಮಾಡಿವೆ. ಈ ಅಂಕಿ ಅಂಶಗಳನ್ನು ಕೇಂದ್ರದ ಆರ್ಥಿಕ ಇಲಾಖೆಯ ರಾಜ್ಯ ಸಚಿವ ಶಿವ ಪ್ರತಾಪ್‌ ಶುಕ್ಲಾ ಲೋಕಸಭೆಯ ಮುಂದಿಟ್ಟಿದ್ದಾರೆ.