ಒಬ್ಬರಲ್ಲ, ಇಬ್ಬರಲ್ಲ; ಆರ್ಥಿಕ ಅಪರಾಧಕ್ಕಾಗಿ ದೇಶ ಬಿಟ್ಟವರು 28 ಜನ!
ಸುದ್ದಿ ಸಾರ

ಒಬ್ಬರಲ್ಲ, ಇಬ್ಬರಲ್ಲ; ಆರ್ಥಿಕ ಅಪರಾಧಕ್ಕಾಗಿ ದೇಶ ಬಿಟ್ಟವರು 28 ಜನ!

ಈವರೆಗೆ ದೇಶ ಬಿಟ್ಟು ವಿದೇಶ ಸೇರಿರುವ ಆರ್ಥಿಕ ಅಪರಾಧಿಗಳ ಸಂಖ್ಯೆ 28. ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ಈ ಆರ್ಥಿಕ ಅಪರಾಧಿಗಳನ್ನು ದೇಶಕ್ಕೆ ವಾಪಸ್‌ ಕರೆ ತರುವ ಪ್ರಯತ್ನ ನಡೆಸುತ್ತಿವೆ.

ಒಟ್ಟು 28 ಮಂದಿ ಆರ್ಥಿಕ ಅಪರಾಧಿಗಳು ಭಾರತದಿಂದ ಪರಾರಿಯಾಗಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ಹೇಳಿದೆ. ವಿಜಯ್‌ ಮಲ್ಯ, ನೀರವ್‌ ಮೋದಿ, ಲಲಿತ್‌ ಮೋದಿ ಸೇರಿದಂತೆ ಒಟ್ಟು 28 ಮಂದಿಯನ್ನು ದೇಶ ಬಿಟ್ಟಿರುವ ಆರ್ಥಿಕ ಅಪರಾಧಿಗಳು ಎಂದು ಇಲಾಖೆ ತಿಳಿಸಿದೆ.

ಸಿಬಿಐ ಮತ್ತು ಜಾರಿ ನಿರ್ದೇಶನಾಲಯಗಳು ಈ 28 ಮಂದಿ ಆರ್ಥಿಕ ಅಪರಾಧಿಗಳನ್ನು ಭಾರತಕ್ಕೆ ಕರೆತರಲು ಕಾನೂನು ರೀತಿಯಲ್ಲಿ ಪ್ರಯತ್ನ ನಡೆಸುತ್ತಿವೆ. ಈ 28 ಮಂದಿಯ 6 ಮಂದಿ ಮಹಿಳೆಯರೂ ಇದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆಯ ರಾಜ್ಯ ಸಚಿವ ವಿ.ಕೆ. ಸಿಂಗ್‌ ಹೇಳಿದ್ದಾರೆ.

ಸಂಸದ ಪ್ರೊ. ಕೆ.ವಿ. ಥಾಮಸ್‌ ಅವರು ಕೇಳಿದ್ದ ಪ್ರಶ್ನೆಗೆ ಜುಲೈ 25ರಂದು ಲೋಕಸಭೆಗೆ ಸಲ್ಲಿಸಿದ ಲಿಖಿತ ಉತ್ತರದಲ್ಲಿ 28 ಮಂದಿಯ ಹೆಸರನ್ನು ಉಲ್ಲೇಖಿಸಲಾಗಿದೆ. 28 ಮಂದಿಯಲ್ಲಿ ಬಹುತೇಕರು 2015ರಿಂದಲೇ ವಿದೇಶಗಳಲ್ಲಿ ನೆಲೆಸಿದ್ದಾರೆ ಎನ್ನಲಾಗಿದೆ.

“ದೇಶ ಬಿಟ್ಟಿರುವ ಎಲ್ಲಾ ಆರ್ಥಿಕ ಅಪರಾಧಿಗಳನ್ನು ಭಾರತಕ್ಕೆ ವಾಪಸ್‌ ಕರೆ ತಂದು ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಪ್ರಕ್ರಿಯೆ ಜಾರಿಯಲ್ಲಿದೆ. ಆರ್ಥಿಕ ಅಪರಾಧಿಗಳ ವಿರುದ್ಧ ಲುಕ್‌ ಔಟ್‌ ಹಾಗೂ ರೆಡ್‌ ಕಾರ್ನರ್‌ ನೋಟಿಸ್‌ ಹೊರಡಿಸಲಾಗಿದೆ” ಎಂದು ವಿ.ಕೆ. ಸಿಂಗ್‌ ತಿಳಿಸಿದ್ದಾರೆ.

28 ಮಂದಿಯ ಪೈಕಿ 23 ಅಪರಾಧಿಗಳ ವಿರುದ್ಧ ಸಿಬಿಐ ಕಾರ್ಯಾಚರಣೆ ನಡೆಸುತ್ತಿದೆ. 13 ಮಂದಿ ವಿರುದ್ಧ ಜಾರಿ ನಿರ್ದೇಶನಾಲಯ ಕಾರ್ಯಾಚರಣೆ ನಡೆಸುತ್ತಿದೆ. ವಿಜಯ್‌ ಮಲ್ಯ, ಮೆಹುಲ್‌ ಚೋಸ್ಕಿ, ನೀರವ್‌ ಮೋದಿ, ಜತಿನ್‌ ಮೆಹ್ತಾ, ಆಶಿಶ್‌ ಜೊಬನ್‌ಪುತ್ರ, ಚೇತನ್‌ ಜಯಂತಿಲಾಲ್‌ ಸಂದೇಸರ, ನಿತಿನ್‌ ಜಯಂತಿಲಾಲ್‌ ಸಂದೇಸರ ಮತ್ತು ದೀಪ್ತಿಬೆನ್‌ ಚೇತನ್‌ಕುಮಾರ್‌ ಸಂದೇಸರ – ಈ 8 ಜನರ ವಿರುದ್ಧ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಎರಡೂ ಕಾರ್ಯಾಚರಣೆ ನಡೆಸುತ್ತಿವೆ ಎಂದು ಸಿಂಗ್‌ ಹೇಳಿದ್ದಾರೆ.

28 ಮಂದಿ ಆರ್ಥಿಕ ಅಪರಾಧಿಗಳು ಇವರು:

  1. ಪುಷ್ಪೇಶ್‌ ಬೇದ್‌
  2. ಆಶಿಶ್‌ ಜೊಬನ್‌ಪುತ್ರ
  3. ಪ್ರೀತಿ ಆಶೀಶ್‌ ಜೋಬನ್‌ಪುತ್ರ
  4. ವಿಜಯ್‌ ಮಲ್ಯ
  5. ಸನ್ನಿ ಕಾರ್ಲಾ
  6. ಸಂಜಯ್‌ ಕಾರ್ಲಾ
  7. ಸುಧೀರ್‌ ಕುಮಾರ್‌ ಕಾರ್ಲಾ
  8. ಆರ್ತಿ ಕಾರ್ಲಾ
  9. ವರ್ಷಾ ಕಾರ್ಲಾ
  10. ಜತಿನ್‌ ಮೆಹತಾ
  11. ಉಮೇಶ್‌ ಪಾರೇಖ್‌
  12. ಕಮಲೇಶ್‌ ಪಾರೇಖ್‌
  13. ನೀಲೇಶ್‌ ಪಾರೇಖ್‌
  14. ಏಕಲವ್ಯ ಗರ್ಗ್‌
  15. ವಿನಯ್‌ ಮಿತ್ತಲ್‌
  16. ಚೇತನ್‌ ಜಯಂತಿಲಾಲ್‌ ಸಂದೇಸರ
  17. ನಿತಿನ್‌ ಜಯಂತಿಲಾಲ್‌ ಸಂದೇಸರ
  18. ದೀಪ್ತಿಬೆನ್‌ ಚೇತನ್‌ಕುಮಾರ್‌ ಸಂದೇಸರ
  19. ನೀರವ್‌ ಮೋದಿ
  20. ನೀಶಲ್‌ ಮೋದಿ
  21. ಮೇಹುಲ್‌ ಚೋಸ್ಕಿ
  22. ಸಬ್ಯಾ ಸೇಠ್‌
  23. ರಾಜೀವ್‌ ಗೋಯಲ್‌
  24. ಅಲ್ಕಾ ಗೋಯಲ್‌
  25. ಲಲಿತ್‌ ಮೋದಿ
  26. ರಿತೇಶ್ ಜೈನ್‌
  27. ಹಿತೇಶ್‌ ನರೇಂದ್ರಭಾಯ್‌ ಪಟೇಲ್‌
  28. ಮಯೂರಿಬೆನ್‌ ಪಟೇಲ್‌