samachara
www.samachara.com
- ಸಾಂದರ್ಭಿಕ ಚಿತ್ರ
ಸುದ್ದಿ ಸಾರ

ಆಫ್ಘಾನಿಸ್ತಾನದಲ್ಲಿ ಆತ್ಮಹತ್ಯಾ ದಾಳಿ; ಕನಿಷ್ಠ 25 ಮಂದಿ ಸಾವು

ಆಫ್ಘಾನಿಸ್ತಾನದಲ್ಲಿ ಶಿಯಾಗಳನ್ನು ಗುರಿಯಾಗಿಸಿಕೊಂಡ ದಾಳಿಗಳು ಹೆಚ್ಚಾಗುತ್ತಿವೆ. ಶುಕ್ರವಾರ ನಡೆದಿರುವ ಆತ್ಮಹತ್ಯಾ ದಾಳಿಯಲ್ಲಿ ಕನಿಷ್ಠ 25 ಮಂದಿ ಮೃತಪಟ್ಟಿದ್ದಾರೆ.

ಪೂರ್ವ ಆಫ್ಘಾನಿಸ್ತಾನದ ಶಿಯಾ ಮಸೀದಿಯ ಮೇಲೆ ಶುಕ್ರವಾರ ಪ್ರಾರ್ಥನೆ ವೇಳೆ ನಡೆದಿರುವ ಆತ್ಮಹತ್ಯಾ ದಾಳಿಯಲ್ಲಿ 25 ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಕನಿಷ್ಠ 40 ಮಂದಿ ಗಾಯಗೊಂಡಿದ್ದಾರೆ.

ಪಕ್ತಿಯಾ ಪ್ರಾಂತ್ಯದ ಗಾರ್ಡೆಸ್‌ ನಗರದ ಕವಾಜಾ ಹಸನ್‌ ಮಸೀದಿಯಲ್ಲಿ ಶುಕ್ರವಾರ ಹೆಚ್ಚಿನ ಸಂಖ್ಯೆಯಲ್ಲಿ ಜನ ಪ್ರಾರ್ಥನೆಯಲ್ಲಿ ತೊಡಗಿದ್ದ ವೇಳೆ ಆತ್ಮಹತ್ಯಾ ಬಾಂಬರ್‌ ತನ್ನನ್ನು ಸ್ಫೋಟಿಸಿಕೊಂಡಿದ್ದಾನೆ. ಮತ್ತೊಬ್ಬ ದಾಳಿಕೋರ ಮನಬಂದಂತೆ ಗುಂಡು ಹಾರಿಸಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

“ಘಟನೆಯಲ್ಲಿ 25 ಮಂದಿ ಮೃತಪಟ್ಟಿದ್ದಾರೆ. ಗಾಯಗೊಂಡಿದ್ದ 40 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ” ಎಂದು ಆಫ್ಘನ್‌ ಸರಕಾರದ ಅಧಿಕಾರಿ ಅಬ್ದುಲ್‌ ಹಜರತ್‌ ತಿಳಿಸಿದ್ದಾರೆ.

ಇತ್ತೀಚೆಗೆ ಆಫ್ಘಾನಿಸ್ತಾನದಲ್ಲಿ ಶಿಯಾ ಮುಸ್ಲಿಮರನ್ನು ಗುರಿಯಾಗಿಸಿಕೊಂಡ ದಾಳಿಗಳು ಹೆಚ್ಚಾಗಿವೆ. ವಿಶ್ವಸಂಸ್ಥೆಯ ಮಾಹಿತಿಯ ಪ್ರಕಾರ ಈ ವರ್ಷದ ಮೊದಲರ್ಧದಲ್ಲಿ ಭಯೋತ್ಪಾದನಾ ದಾಳಿಗಳಿಗೆ 1,692 ಜನ ಮೃತಪಟ್ಟು, 3,430 ಮಂದಿ ಗಾಯಗೊಂಡಿದ್ದಾರೆ.