‘ಸ್ಮಾರ್ಟ್‌ ಫೋನ್‌ ಚೆಕ್ ಮಾಡ್ಕೊಳ್ಳಿ’: ಯುಐಡಿಎಐ ಹೆಸರಿನಲ್ಲಿ ನಕಲಿ ನಂಬರ್ ಆಟೋ ಸೇವ್ ಆಗಿದೆ!
ಸುದ್ದಿ ಸಾರ

‘ಸ್ಮಾರ್ಟ್‌ ಫೋನ್‌ ಚೆಕ್ ಮಾಡ್ಕೊಳ್ಳಿ’: ಯುಐಡಿಎಐ ಹೆಸರಿನಲ್ಲಿ ನಕಲಿ ನಂಬರ್ ಆಟೋ ಸೇವ್ ಆಗಿದೆ!

ಆಧಾರ್‌ ಸಹಾಯವಾಣಿಯ ಹೆಸರಿನಲ್ಲಿ 11 ಡಿಜಿಟ್‌ಗಳ ನಕಲಿ ಟಾಲ್ ಫ್ರೀ ನಂಬರ್‌ ಒಂದು ಭಾರತದ ಬಹುತೇಕರ ಆಂಡ್ರಾಯ್ಡ್‌ ಹಾಗೂ ಆಪಲ್ ಮೊಬೈಲ್‌ಗಳಲ್ಲಿ ಶುಕ್ರವಾರ ಆಟೊ ಸೇವ್‌ ಆಗಿದೆ.

1800-300-1947

ನಿಮ್ಮ ಮೊಬೈಲ್‌ನ ಕಾಂಟ್ಯಾಕ್ಟ್ಸ್‌ನಲ್ಲಿ UIDAI ಹೆಸರಿನಲ್ಲಿ ಈ ನಂಬರ್‌ ಸೇವ್‌ ಆಗಿದೆಯೇ ಒಮ್ಮೆ ಪರೀಕ್ಷಿಸಿ. ಆಧಾರ್‌ ಯೋಜನೆಯ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ (UIDAI) ಹೆಸರಿನಲ್ಲಿ ಭಾರತದ ಬಹುತೇಕರ ಆಂಡ್ರಾಯ್ಡ್‌ ಹಾಗೂ ಆಪಲ್ ಸ್ಮಾರ್ಟ್‌ ಫೋನ್‌ ಮೊಬೈಲ್‌ಗಳಲ್ಲಿ ಈ ಸಂಖ್ಯೆ ಶುಕ್ರವಾರ ಆಟೊ ಸೇವ್‌ ಆಗಿದೆ.

ಈ ನಂಬರ್‌ ಆಟೊ ಸೇವ್‌ ಆದ ಬಗ್ಗೆ ಮಾಧ್ಯಮ ವರದಿಗಳ ಬೆನ್ನಲ್ಲೇ UIDAI ಈ ಬಗ್ಗೆ ಸ್ಪಷ್ಟೀಕರಣ ನೀಡಿದೆ. “ಇದು ಕಿಡಿಗೇಡಿಗಳ ಕೃತ್ಯ. ಜನರಲ್ಲಿ ಗೊಂದಲ ಉಂಟು ಮಾಡುವ ಸಲುವಾಗಿ ಕಾಣದ ಕೈಗಳು ಈ ಕೃತ್ಯ ಎಸಗಿವೆ” ಎಂದು UIDAI ಹೇಳಿದೆ.

“ಇದು UIDAI ಟೋಲ್‌ ಫ್ರೀ ನಂಬರ್‌ ಅಲ್ಲ. ಎರಡು ವರ್ಷದಿಂದ ಕಾರ್ಯನಿರ್ವಹಿಸುತ್ತಿರುವ ಆಧಾರ್‌ ಟೋಲ್‌ ಫ್ರೀ ನಂಬರ್‌ 1947. UIDAI ಟೆಲಿಕಾಂ ಕಂಪೆನಿಗಳಿಗಾಗಲಿ, ಸೇವಾದಾರರಿಗಾಗಲಿ ಅಥವಾ ಸ್ಮಾರ್ಟ್‌ ಫೋನ್‌ ಡೆವಲಪರ್‌ಗಳಿಗಾಗಲೀ ನಂಬರ್‌ ಅಪ್‌ಡೇಟ್‌ ಮಾಡುವಂತೆ ಯಾವುದೇ ಮನವಿ ಮಾಡಿಲ್ಲ” ಎಂದು UIDAI ಸ್ಪಷ್ಟನೆ ನೀಡಿದೆ.

1800-300-1947 ನಂಬರ್‌ಗೆ ಡಯಲ್‌ ಮಾಡಿದರೆ ಈ ಸಂಖ್ಯೆಯ ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ ಎಂಬ ಸಂದೇಶ ಕೇಳಿಸುತ್ತದೆ. ಆಧಾರ್ ಅಧಿಕೃತ ಸಹಾಯವಾಣಿ 1947 ಎಂದಿನಂತೆ ಕಾರ್ಯಾಚರಣೆಯಲ್ಲಿದೆ.

ಆಂಡ್ರಾಯ್ಡ್‌ ಮತ್ತು ಆಪಲ್ ಮೊಬೈಲ್‌ಗಳಲ್ಲಿ 11 ಡಿಜಿಟ್‌ಗಳ ನಂಬರ್‌ ಅನ್ನು UIDAI ಹೆಸರಿನಲ್ಲಿ ಆಟೊ ಸೇವ್‌ ಆಗುವಂತೆ ಮಾಡಿರುವ ಹ್ಯಾಕರ್‌ಗಳು ನಿಮ್ಮ ಮೊಬೈಲ್‌ನಲ್ಲಿರುವ ಖಾಸಗಿ ಮಾಹಿತಿಗೆ ಕನ್ನ ಹಾಕುವುದಿಲ್ಲ ಎಂಬ ಗ್ಯಾರಂಟಿ ಏನೂ ಇಲ್ಲ.

ಆಧಾರ್ ಡೇಟಾ ಭದ್ರವಾಗಿದೆ, ಡೇಟಾಗೆ ಕನ್ನ ಹಾಕಲು ಸಾಧ್ಯವಿಲ್ಲ ಎಂದು UIDAI ಹೇಳುತ್ತಲೇ ಬರುತ್ತಿದೆ. ಆದರೆ, ಆಧಾರ್‌ ಸಂಖ್ಯೆ ಸಿಕ್ಕರೂ ಸಾಕು ವೈಯಕ್ತಿಕ ಮಾಹಿತಿಯನ್ನು ಹೆಕ್ಕಬಹುದು ಎಂಬುದನ್ನು ಕೆಲ ಪ್ರೊಫೆಷನಲ್‌ ಹ್ಯಾಕರ್‌ಗಳು ಈಗಾಗಲೇ ಸಾಬೀತು ಪಡಿಸಿದ್ದಾರೆ. ಅದಕ್ಕೆ ಕಳೆದ ವಾರ ನಡೆದ ಆರ್‌. ಎಸ್‌. ಶರ್ಮಾ ಎಪಿಸೋಡಿಗೆ ದೇಶ ಸಾಕ್ಷಿಯಾಗಿತ್ತು.

ಇದರ ಬೆನ್ನಿಗೇ ನಡೆದ ಈ ಘಟನೆ, ಆಧಾರ ಬಗೆಗಿನ ವಿಶ್ವಾಸಾರ್ಹತೆಯನ್ನು, ತಂತ್ರಜ್ಞಾನದ ಮೇಲೆ ಸರಕಾರ ಸಾಧಿಸಿದೆ ಎಂದು ಹೇಳಿಕೊಳ್ಳುವ ಹಿಡಿತವನ್ನು ಪ್ರಶ್ನಿಸಿದೆ.