samachara
www.samachara.com
ಪ್ರತ್ಯೇಕ ಉತ್ತರ ಕರ್ನಾಟಕದ ಕೂಗು; ಬಂದ್‌ ಬದಲಿಗೆ ಹುಬ್ಬಳ್ಳಿಯಲ್ಲಷ್ಟೆ ಪ್ರತಿಭಟನೆ
ಸುದ್ದಿ ಸಾರ

ಪ್ರತ್ಯೇಕ ಉತ್ತರ ಕರ್ನಾಟಕದ ಕೂಗು; ಬಂದ್‌ ಬದಲಿಗೆ ಹುಬ್ಬಳ್ಳಿಯಲ್ಲಷ್ಟೆ ಪ್ರತಿಭಟನೆ

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಆಗ್ರಹಿಸಿ ಕರೆ ನೀಡಿದ್ದ ಬಂದ್‌ ಅನ್ನು ಸಂಘಟನೆಗಳು ವಾಪಸ್‌ ಪಡೆದಿದ್ದರೂ ಹುಬ್ಬಳ್ಳಿಯಲ್ಲಿ ರೈತ ಸಂಘದ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿದರು.

Team Samachara

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಕರೆ ನೀಡಿದ್ದ ಬಂದ್‌ ಅನ್ನು ಸಂಘಟನೆಗಳು ವಾಪಸ್‌ ಪಡೆದಿವೆ. ಆದರೂ ಗುರುವಾರ ಹುಬ್ಬಳ್ಳಿಯಲ್ಲಿ ಉತ್ತರ ಕರ್ನಾಟಕ ರೈತ ಸಂಘದ ಸದಸ್ಯರು ಪ್ರತ್ಯೇಕ ರಾಜ್ಯಕ್ಕಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ಸೇರಿದ ಪ್ರತಿಭಟನಾಕಾರರು ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಪರವಾಗಿ ಹಾಗೂ ರಾಜ್ಯ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

“ಉತ್ತರ ಕರ್ನಾಟಕದೊಂದಿಗೆ ಸರಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಉತ್ತರ ಕರ್ನಾಟಕವನ್ನು ಸರಕಾರ ಎಲ್ಲಿಯವರೆಗೂ ನಿರ್ಲಕ್ಷಿಸುತ್ತಿರುತ್ತದೆಯೋ ಅಲ್ಲಿಯವರೆಗೂ ಪ್ರತ್ಯೇಕ ರಾಜ್ಯ ಬೇಡಿಕೆಯ ಹೋರಾಟ ನಿಲ್ಲುವುದಿಲ್ಲ” ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.

Also read: ಉತ್ತರ ಕರ್ನಾಟಕಕ್ಕೆ ಬಜೆಟ್ ತಾರತಮ್ಯ; ಮತ್ತೆ ಧ್ವನಿಸಿದ ಪ್ರತ್ಯೇಕ ರಾಜ್ಯದ ಕೂಗು

ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ಬೇಡಿಕೆ ಮುಂದಿಟ್ಟಿದ್ದ ಸಂಘಟನೆಗಳ ಮುಖಂಡರೊಂದಿಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸಭೆ ನಡೆಸಿ ಅವರ ಮನವೊಲಿಸಿದ್ದರು. ಬಳಿಕ ಸಂಘಟನೆಗಳು ಗುರುವಾರ ನಡೆಸಲು ಉದ್ದೇಶಿದ್ದ ಬಂದ್‌ ಅನ್ನು ವಾಪಸ್‌ ಪಡೆದಿದ್ದವು.

ಬಂದ್‌ಗೆ ಕರೆ ನೀಡಿದ್ದ ಸಂಟನೆಗಳು ತಮ್ಮ ನಿರ್ಧಾರವನ್ನು ವಾಪಸ್‌ ಪಡೆದ ಕಾರಣ ಉತ್ತರ ಕರ್ನಾಟಕದ ಜನಜೀವನ ಗುರುವಾರ ಎಂದಿನಂತಿತ್ತು. ಹುಬ್ಬಳ್ಳಿಯಲ್ಲಿ ಮಾತ್ರ ಸ್ವಲ್ಪ ಪ್ರಮಾಣದಲ್ಲಿ ಪ್ರತಿಭಟನಾಕಾರರು ಬೀದಿಗಿಳಿದಿದ್ದರು.

Also read: ಮತ್ತೆ ಉತ್ತರ ಕರ್ನಾಟಕದಲ್ಲಿ ಪ್ರತ್ಯೇಕ ರಾಜ್ಯದ ಕೂಗು: ಬಜೆಟ್‌ನಲ್ಲಿ ನಿಜಕ್ಕೂ ಸಿಕ್ಕಿದ್ದೆಷ್ಟು? 

ಬಜೆಟ್‌ನಲ್ಲಿ ಉತ್ತರ ಕರ್ನಾಟಕವನ್ನು ಕಡೆಗಣಿಸಲಾಗಿದೆ ಎಂಬ ಕಾರಣಕ್ಕೆ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಕೂಗು ಕೇಳಿಬಂದಿತ್ತು. ಆದರೆ, ಹೋರಾಟಗಾರರೊಂದಿಗೆ ಕುಮಾರಸ್ವಾಮಿ ಮಾತುಕತೆ ನಡೆಸಿದ ಬಳಿಕ ಪ್ರತ್ಯೇಕತೆಯ ಬಿಸಿ ಸ್ವಲ್ಪಮಟ್ಟಿಗೆ ತಣ್ಣಗಾಗಿದೆ.

ಪ್ರತ್ಯೇಕ ಉತ್ತರ ಕರ್ನಾಟಕದ ಬೇಡಿಕೆ ಅಖಂಡ ಕರ್ನಾಟಕದ ಹಿತದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಉತ್ತರ ಕರ್ನಾಟಕ ಬಂದ್‌ ವಿರೋಧಿಸಿ ದೊಡ್ಡಬಳ್ಳಾಪುರದಲ್ಲಿ ಕನ್ನಡಪರ ಸಂಘಟನೆಗಳ ಸದಸ್ಯರು ಬುಧವಾರ ಪ್ರತಿಭಟನೆ ನಡೆಸಿದ್ದರು.

Also read: ‘ನಂಜುಂಡಪ್ಪ ವರದಿ ಹೈಲೈಟ್ಸ್’: ಯಾರ್ ಹೇಳಿದ್ದು ಉತ್ತರ ಕರ್ನಾಟಕ ಮಾತ್ರ ಹಿಂದುಳಿದಿದೆ ಅಂತ?