ಕೆ.ಸಿ. ವ್ಯಾಲಿ ಎಫೆಕ್ಟ್‌; ನರಸಾಪುರದ ಗ್ರಾಮದ ಜನರ ಕುಡಿಯುವ ನೀರು ಈಗ ‘ಕಲುಷಿತ’
ಸುದ್ದಿ ಸಾರ

ಕೆ.ಸಿ. ವ್ಯಾಲಿ ಎಫೆಕ್ಟ್‌; ನರಸಾಪುರದ ಗ್ರಾಮದ ಜನರ ಕುಡಿಯುವ ನೀರು ಈಗ ‘ಕಲುಷಿತ’

ಶ್ರೀಮಂತರೇನೋ ಫಿಲ್ಟರ್‌ ನೀರನ್ನು ಆಶ್ರಯಿಸಬಹುದು. ಆದರೆ ಬಡವರ ಕಥೆ ಏನು ಎಂಬುದಕ್ಕೆ ಸದ್ಯ ಸರಕಾರದಿಂದ ಯಾವುದೇ ಉತ್ತರವಿಲ್ಲ.

ಬರಪೀಡಿತ ಕೋಲಾರ ಮತ್ತು ಚಿಕ್ಕಬಳ್ಳಾಪುರಕ್ಕೆ ಹರಿದ ಬೆಂಗಳೂರಿನ ಸೋ ಕಾಲ್ಡ್‌ ಶುದ್ಧೀಕರಿಸಿದ ನೀರು ಮೊದಲ ಸಮಸ್ಯೆಯನ್ನು ಸೃಷ್ಟಿಸಿದೆ. ಕೋಲಾರದ ನರಸಾಪುರ ಕೆರೆಗೆ ಕೆ.ಸಿ.ವ್ಯಾಲಿ (ಕೋರಮಂಗಲ ಮತ್ತು ಚಲ್ಲಘಟ್ಟ) ಮೂಲಕ ಶುದ್ಧೀಕರಿಸಿದ ನೀರು ಕಳೆದ ಕೆಲವು ದಿನಗಳಿಂದ ಹರಿದಿತ್ತು. ಇದೀಗ ಈ ನೀರು ಅಲ್ಲಿನ ಜನರ ಜೀವಜಲವನ್ನೇ ಕಿತ್ತುಕೊಂಡಿದೆ.

ಗ್ರಾಮದ ನೀರು ಕಲುಷಿತಗೊಂಡಿರುವುದನ್ನು ಸ್ವತಃ ಗ್ರಾಮ ಪಂಚಾಯತ್‌ ಖಚಿತಪಡಿಸಿದ್ದು, ನೀರನ್ನು ಕುಡಿಯದಂತೆ ಜನರಿಗೆ ಬಿಟ್ಟಿ ಸಲಹೆ ನೀಡಿದೆ. ನರಸಾಪುರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ನರಸಾಪುರ, ಕುರ್ಕಿ ಮತ್ತು ಖಾಜಿಕಲ್ಲಹಳ್ಳಿಗೆ ಪಂಚಾಯತ್‌ ವ್ಯಾಪ್ತಿಯಿಂದ ಪೂರೈಕೆ ಮಾಡುವ ನೀರಿನ ಕೊಳವೆ ಬಾವಿಗಳು ನರಸಾಪುರ ಕೆರೆಯ ವ್ಯಾಪ್ತಿಯಲ್ಲಿವೆ. ಕಳೆದ ಕೆಲವು ದಿನಗಳಿಂದ ಈ ಕೆರೆಗೆ ಬೆಂಗಳೂರಿನ ಅರೆ ಶುದ್ಧೀಕರಿಸಿದ ನೀರು ಹರಿದಿರುವುದರಿಂದ ಕೆರೆಯ ನೀರು ವಾಸನೆ ಬರುತ್ತಿತ್ತು.

ಈ ಹಿನ್ನೆಲೆಯಲ್ಲಿ ನೀರನ್ನು ಗ್ರಾಮ ಪಂಚಾಯತ್‌ ಕಡೆಯಿಂದ ಪರೀಕ್ಷೆ ಮಾಡಿಸಲಾಗಿದೆ. ಈ ಸಂದರ್ಭ ಎಲ್ಲಾ ಕೊಳವೆ ಬಾವಿಗಳ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂಬ ವರದಿ ಬಂದಿದೆ. ಆದರೆ ದಿನ ನಿತ್ಯದ ಉಪಯೋಗಕ್ಕೆ ಇದನ್ನು ಬಳಸಬಹುದು ಎಂದಷ್ಟೇ ಕೋಲಾರದ ‘ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ’ದವರು ಹೇಳಿದ್ದಾರೆ.

ಈ ವರದಿ ಸಿಕ್ಕಿದ ಬೆನ್ನಿಗೆ ಗ್ರಾಮ ಪಂಚಾಯತ್‌, ತಮ್ಮ ಕಡೆಯಿಂದ ಸರಬರಾಜು ಆಗುತ್ತಿರುವ ನೀರನ್ನು ಯಾವುದೇ ಕಾರಣಕ್ಕೂ ಕುಡಿಯದಂತೆ ಸೂಚನೆ ನೀಡಿದೆ. ಬದಲಿಗೆ ‘ಫಿಲ್ಟರ್‌ ನೀರ’ನ್ನು ಬಳಸುವಂತೆ ಹೇಳಿ ಕೈ ತೊಳೆದುಕೊಂಡಿದೆ. ಇಲ್ಲಿನ ಹಳ್ಳಿಗಳಲ್ಲಿ ಕೆಲವು ಕಡೆ ಮಾತ್ರ ಫಿಲ್ಟರ್‌ ನೀರಿನ (ಆರ್.ಒ) ಘಟಕಗಳಿವೆ. ಹಾಗಂಥ ಅದನ್ನೇ ಅಡುಗೆಗೆಲ್ಲಾ ಬಳಸುವುದು ಕಾರ್ಯಸಾಧುವಲ್ಲ ಎನ್ನುತ್ತಾರೆ ಶಾಶ್ವತ ನೀರಾವರಿ ಹೋರಾಟಗಾರ ಆಂಜನೇಯ ರೆಡ್ಡಿ. ಆರ್.ಒ ಫಿಲ್ಟರ್‌ ಇಲ್ಲದ ಊರಿನ ಜನರು ಏನು ಮಾಡಬೇಕು ಎಂಬ ಪ್ರಶ್ನೆಯನ್ನೂ ಅವರು ಮುಂದಿಡುತ್ತಾರೆ.

ಇದಲ್ಲದೆ ದನ ಕರುಗಳು ಮತ್ತು ಜಾನುವಾರುಗಳಿಗೂ ಕೆರೆಯ ನೀರನ್ನು ಬಳಸದಂತೆ ಪಂಚಾಯತ್‌ ಸೂಚನೆ ನೀಡಿದೆ. ಆದರೆ ಪರೋಕ್ಷವಾಗಿ ಪಂಚಾಯತ್‌ನಿಂದ ಹರಿದ ನೀರನ್ನು ಜಾನುವಾರುಗಳಿಗೆ ನೀಡಬಹುದು, ನೀವು ಮಾತ್ರ ಕುಡಿಯಬೇಡಿ ಎಂದಿದೆ. ಹಾಗಿದ್ದರೆ ಹಾಲು ಕೊಡುವ ಹಸುಗಳಿಗೆ, ಕುರಿ ಮೇಕೆ, ಪ್ರಾಣಿ ಪಕ್ಷಿಗಳಿಗೆ ಫಿಲ್ಟರ್ ವಾಟರ್ ಬೇಡವೇ? ಎಂದು ಪ್ರಶ್ನಿಸುತ್ತಾರೆ ರೆಡ್ಡಿ.

ಜನರಿಗೆ ಕುಡಿಯುವ ನೀರಿಗೆ ಸರಿಯಾದ ವ್ಯವಸ್ಥೆಗಳನ್ನು ಮಾಡದೇ, ಕೇವಲ ಫಿಲ್ಟರ್‌ ನೀರು ಬಳಕೆ ಮಾಡಿ ಎಂದು ಹೇಳುವ ಮೂಲಕ ಪಂಚಾಯತ್‌ ಮುಂದೆ ನಡೆಯಬಹುದಾದ ಅನಾಹುತಗಳು ರಕ್ಷಣಾತ್ಮಕ ಕ್ರಮ ಕೈಗೊಂಡಿದೆ ಅಷ್ಟೇ ಎಂದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ಸುರಿದ ಮಳೆಯ ನೀರು ಕೆರೆಯಲ್ಲಿ ಅರ್ಧ ಇತ್ತು. ಊರಿನ ಜನರಿಗೆ ಕುಡಿಯಲು ನೀರು ಸಿಗುತ್ತಿತ್ತು. ಇದೀಗ ನೀರು ಕೊಡುತ್ತೇವೆ ಎಂದು ಹೇಳಿ ಇರುವ ನೀರನ್ನು ಕಲುಷಿತಗೊಳಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಅವರು.

ಶ್ರೀಮಂತರೇನೋ ಫಿಲ್ಟರ್‌ ನೀರನ್ನು ಆಶ್ರಯಿಸಬಹುದು. ಆದರೆ ಬಡವರ ಕಥೆ ಏನು ಎಂಬುದಕ್ಕೆ ಸದ್ಯ ಸರಕಾರದಿಂದ ಯಾವುದೇ ಉತ್ತರವಿಲ್ಲ.