‘ಕೆಸಿ ವ್ಯಾಲಿ’: ಕಾಲುವೆಯಲ್ಲಿ ಹರಿದ ನೊರೆ; ವಿವರಣೆಗೆ ಇನ್ನೂ 10 ದಿನ ಬೇಕಂತೆ
ಸುದ್ದಿ ಸಾರ

‘ಕೆಸಿ ವ್ಯಾಲಿ’: ಕಾಲುವೆಯಲ್ಲಿ ಹರಿದ ನೊರೆ; ವಿವರಣೆಗೆ ಇನ್ನೂ 10 ದಿನ ಬೇಕಂತೆ

ಜುಲೈ 24ರಂದು ಕೆಸಿ ವ್ಯಾಲಿ ಕುರಿತು ವಿಚಾರಣೆ ನಡೆಸಿದ್ದ ಹೈಕೋರ್ಟ್‌ ನೀರಿನ ಗುಣಮಟ್ಟ ಮತ್ತು ಸಮರ್ಪಕ ಶುದ್ದೀಕರಣದ ಕುರಿತು ವರದಿ ನೀಡುವಂತೆ ಸೂಚಿಸಿತ್ತು. ಆದರೆ ವರದಿ ಸಲ್ಲಿಸಲು ಸರಕಾರ ವಿಫಲವಾಗಿರುವುದರಿಂದ ವಿಚಾರಣೆಯನ್ನು ಮುಂದೂಡಲಾಗಿದೆ.

ಬರಪೀಡಿತ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕೆಸಿ ವ್ಯಾಲಿ ಮತ್ತು ಎಚ್‌ಎನ್‌ ವ್ಯಾಲಿ ಯೋಜನೆಗಳ ಮೂಲಕ ಬೆಂಗಳೂರಿನ ಕೊಳಚೆ ನೀರನ್ನು ಶುದ್ಧೀಕರಿಸಿ ಹರಿಸುವ ಕಾರ್ಯಕ್ಕೆ ಹೈಕೋರ್ಟ್‌ ನೀಡಿದ ತಡೆಯಾಜ್ಞೆಯನ್ನು ಮುಂದುವರೆಸಿದೆ. 

ಅವಿಭಜಿತ ಕೋಲಾರ ಜಿಲ್ಲೆಯ 6 ತಾಲೂಕುಗಳ ಕೆರೆಗೆ ಬೆಂಗಳೂರಿನ ಕೊಳಚೆ ನೀರನ್ನು ಶುದ್ಧೀಕರಿಸಿ ಹರಿಸುವ ಕಾರ್ಯ ಜೂನ್‌ ತಿಂಗಳ 2ನೇ ತಾರೀಕಿನಿಂದ ಆರಂಭಗೊಂಡಿತ್ತು. ಆದರೆ ಕೆಲವು ದಿನಗಳು ಕಳೆಯುವ ಮೊದಲೇ ಕೆಸಿ ವ್ಯಾಲಿಯಲ್ಲಿ ಹರಿದ ನೀರಿನಲ್ಲಿ ನೊರೆ ಕಾಣಿಸಿತ್ತು. ನಂತರ ನೀರು ಹರಿಸುವುದನ್ನು ನಿಲ್ಲಿಸಲಾಗಿತ್ತು. ನೊರೆ ಕಾಣಿಸುವ ಮೊದಲೇ ಕೆಸಿ ವ್ಯಾಲಿ ನೀರಿನ ಗುಣಮಟ್ಟದ ಕುರಿತು ಸಂದೇಹ ವ್ಯಕ್ತವಾಗಿ, ಕೋರ್ಟ್‌ನಲ್ಲಿ ಯೋಜನೆಯನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿತ್ತು.

Also read: ಕೋಲಾರದ ಲಕ್ಷ್ಮೀಸಾಗರ ಕೆರೆಯಲ್ಲಿ ಬಿಳಿನೊರೆ: ರಮೇಶ್ ಕುಮಾರ್ ಏನಂತಾರೆ? 

ಯೋಜನೆಯ ನೀರಿನಲ್ಲಿ ನೊರೆ ಕಾಣಿಸಿಕೊಂಡ ಬೆನ್ನಲ್ಲೇ ಜುಲೈ 13ರಿಂದ ಕಾಲುವೆಗಳಲ್ಲಿ ಶುದ್ದೀಕರಿಸಿದ ನೀರನ್ನು ಹರಿಸುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಜುಲೈ 24ರಂದು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಹೇಶ್ವರಿ ಮತ್ತು ನ್ಯಾಯಮೂರ್ತಿ ಆರ್‌. ದೇವ್‌ದಾಸ್ ಅವರಿದ್ದ ನ್ಯಾಯಪೀಠವು ಮುಂದಿನ ವಿಚಾರಣೆಯವರೆಗೆ ಈ ಯೋಜನೆಯ ನೀರನ್ನು ಪಂಪ್‌ ಮಾಡದಂತೆ ಮಧ್ಯಂತರ ಆದೇಶ ನೀಡಿತ್ತು. ನೀರಿನ ಸುರಕ್ಷತೆಯ ಗುಣಮಟ್ಟದ ಕುರಿತು ವರದಿ ಸಲ್ಲಿಸುವಂತೆ ರಾಜ್ಯ ಸರಕಾರಕ್ಕೆ ಸೂಚಿಸಿತ್ತು.

Also read: ‘ಕೆಸಿ ವ್ಯಾಲಿ’ಯ ಅಪಾಯಕಾರಿ ನಡೆ: ಛೀಮಾರಿ ಹಾಕಿದ ಹೈಕೋರ್ಟ್

ಬುಧವಾರ (ಆಗಸ್ಟ್‌ 1) ಯೋಜನೆಗೆ ಸಂಬಂಧಿಸಿದಂತೆ ವಿಚಾರಣೆ ನಡೆದಿದ್ದು, ವರದಿಯನ್ನು ಸಲ್ಲಿಸಲು ರಾಜ್ಯ ಸರಕಾರ ವಿಫಲವಾಗಿದೆ. ವರದಿ ಸಲ್ಲಿಸಲು ಇನ್ನೂ 10 ದಿನಗಳ ಕಾಲಾವಕಾಶ ನೀಡುವಂತೆ ನ್ಯಾಯಾಲಯದ ಮುಂದೆ ಮನವಿ ಮಾಡಿದೆ.

ರಾಜ್ಯ ಸರಕಾರಕ್ಕೆ ಕಾಲಾವಕಾಶವನ್ನು ನೀಡಿರುವ ಹೈಕೋರ್ಟ್‌, “ರಾಸಾಯನಿಕಯುಕ್ತ ನೀರು ಅಂತರ್ಜಲಕ್ಕೆ ಸೇರುವ ಸಾಧ್ಯತೆಯಿದ್ದು, ಬೆಂಗಳೂರಿನ ತ್ಯಾಜ್ಯ ಕೊಳಚೆ ನಿರನ್ನು ಸಮರ್ಪಕವಾಗಿ ಶುದ್ದೀಕರಣ ಮಾಡದೇ ಕೆರೆಗಳಿಗೆ ಹರಿಸಿರುವುದರ ಜತೆಗೆ ಸರಿಯಾದ ದಾಖಲೆಗಳು ಇಲ್ಲದೇ ಇರುವುದು ವಿಪರ್ಯಾಸ,” ಎಂದಿದೆ.

ಮುಂದಿನ ವಿಚಾರಣೆಯನ್ನು ಆಗಸ್ಟ್‌ 16ರಂದು ನಡೆಸುವುದಾಗಿ ಹೈಕೋರ್ಟ್‌ ತಿಳಿಸಿದ್ದು, ಅಲ್ಲಿಯವರೆಗೂ ನೀರು ಹರಿಸುವುದಕ್ಕೆ ತಡೆಯಾಜ್ಞೆಯನ್ನು ಮುಂದುವರೆಸಲಾಗಿದೆ.

Also read: ‘ಕೆಸಿ ವ್ಯಾಲಿ ಫಾಲೋಅಪ್‌’: ಬರದ ನಾಡಿಗೆ ನೀರುಣಿಸಲು ಹೊರಟ ಬೆಳ್ಳಂದೂರು ಕೆರೆಯ ನರಕ ದರ್ಶನ