ಪಾಕಿಸ್ತಾನ ಚುನಾವಣೆ ಅಂತಿಮ ಫಲಿತಾಂಶ, ಮ್ಯಾಜಿಕ್‌ ನಂಬರ್‌ನಲ್ಲಿ ಎಡವಿದ ಇಮ್ರಾನ್‌ ಖಾನ್‌
ಸುದ್ದಿ ಸಾರ

ಪಾಕಿಸ್ತಾನ ಚುನಾವಣೆ ಅಂತಿಮ ಫಲಿತಾಂಶ, ಮ್ಯಾಜಿಕ್‌ ನಂಬರ್‌ನಲ್ಲಿ ಎಡವಿದ ಇಮ್ರಾನ್‌ ಖಾನ್‌

ಇಮ್ರಾನ್ ಖಾನ್ ಪಕ್ಷ ದೇಶದ ಚುಕ್ಕಾಣಿ ಹಿಡಿದಿರುವುದಲ್ಲದೆ ಪ್ರಾಂತ್ಯಗಳಿಗೆ ನಡೆದ ವಿಧಾನಸಭೆ ಚುನಾವಣೆಯಲ್ಲೂ ಶಕ್ತಿ ಪ್ರದರ್ಶನ ನಡೆಸಿದೆ. ಕೆಲವು ಅಚ್ಚರಿಗಳೊಂದಿಗೆ ಅಂತಿಮ ಫಲಿತಾಂಶ ಹೊರಬಿದ್ದಿದೆ. 

ಬರೋಬ್ಬರಿ 48 ಗಂಟೆಗಳ ನಂತರ ಬುಧವಾರ ನಡೆದ ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಜಾಗತಿಕ ಗಮನವನ್ನು ಸೆಳೆದಿದ್ದ ಚುನಾವಣೆಯಲ್ಲಿ ಇಮ್ರಾನ್ ಖಾನ್ ನೇತೃತ್ವದ ‘ಪಾಕಿಸ್ತಾನ್‌ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ)’ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಒಟ್ಟು 270 ರಲ್ಲಿ 117 ಸ್ಥಾನಗಳನ್ನು ಪಕ್ಷ ಗೆದ್ದುಕೊಂಡಿದೆ. ಬಹುಮತಕ್ಕೆ 136 ಸ್ಥಾನಗಳು ಅಗತ್ಯವಾಗಿದ್ದು 19 ಸ್ಥಾನಗಳ ಕೊರತೆಯನ್ನು ಪಕ್ಷ ಅನುಭವಿಸುತ್ತಿದೆ. ಹೀಗಾಗಿ ಪ್ರಧಾನಿಯಾಗಲು ಇಮ್ರಾನ್‌ ಖಾನ್‌ ಇತರರ ಬೆಂಬಲ ಪಡೆಯುವುದು ಅನಿವಾರ್ಯವಾಗಿದೆ.

ಫಲಿತಾಂಶದಲ್ಲಿ ಕೇವಲ 64 ಸ್ಥಾನಗಳನ್ನು ಗೆದ್ದಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್ ಅವರ ‘ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್‌ (ಪಿಎಂಎಲ್‌-ಎನ್)’ ಪಕ್ಷ ಭಾರೀ ಮುಖಭಂಗ ಅನುಭವಿಸಿದೆ. ಇದರಿಂದ ಪ್ರಧಾನಿಯಾಗುವ ಷರೀಫ್ ತಮ್ಮ ಶೆಹಬಾಜ್‌ ಷರೀಫ್ ಆಸೆ ಕನಸಾಗಿಯೇ ಉಳಿದಿದೆ.

ಮಾಜಿ ಪ್ರಧಾನಿ ಬೆನೆಜೀರ್‌ ಭುಟ್ಟೋ ಮತ್ತು ಮಾಜಿ ಅಧ್ಯಕ್ಷ ಆಸಿಫ್‌ ಅಲಿ ಝರ್ದಾರಿ ಪುತ್ರ ಬಿಲಾವಲ್‌ ಭುಟ್ಟೋ ಝರ್ದಾರಿ ನೇತೃತ್ವದ ‘ಪಾಕಿಸ್ತಾನ್ ಪೀಪಲ್ಸ್‌ ಪಾರ್ಟಿ’ (ಪಿಪಿಪಿ) 43 ಸ್ಥಾನಗಳನ್ನಷ್ಟೇ ಗೆದ್ದುಕೊಂಡಿದೆ. ಸ್ವತಃ ಬಿಲಾವಲ್‌ ಗೆಲ್ಲಲು ಪರದಾಡಿ ಮೂರು ಸ್ಥಾನಗಳಲ್ಲಿ ಕೇವಲ ಒಂದರಲ್ಲಿ ಗೆಲುವು ಸಾಧಿಸಿದ್ದಾರೆ.

ಇನ್ನು ಇತರರು 46 ಸ್ಥಾನಗಳಲ್ಲಿ ಗೆದ್ದಿದ್ದಾರೆ. ಒಟ್ಟಾರೆ ಅತಂತ್ರ ಫಲಿತಾಂಶ ಬಂದಿದ್ದು ಸರಕಾರ ರಚನೆಗೆ ಇಮ್ರಾನ್‌ ಖಾನ್‌ ಇತರ ಪಕ್ಷಗಳ ಬೆಂಬಲ ಗಿಟ್ಟಿಸಬೇಕಾಗಿದೆ. ಈಗಾಗಲೇ ಮೈತ್ರಿಗೆ ಸಂಬಂಧಿಸಿದಂತೆ ಇತರ ಪಕ್ಷಗಳ ಜತೆ ಅವರ ಪ್ರತಿನಿಧಿಗಳು ಮಾತುಕತೆ ಆರಂಭಿಸಿದ್ದಾರೆ.

ಪ್ರಾಂತ್ಯಗಳಲ್ಲೂ ಪಿಟಿಐ ರಾಜ್ಯಭಾರ

ಇಮ್ರಾನ್ ಖಾನ್ ಪಕ್ಷ ದೇಶದ ಚುಕ್ಕಾಣಿ ಹಿಡಿದಿರುವುದಲ್ಲದೆ ಪ್ರಾಂತ್ಯಗಳಿಗೆ ನಡೆದ ವಿಧಾನಸಭೆ ಚುನಾವಣೆಯಲ್ಲೂ ಶಕ್ತಿ ಪ್ರದರ್ಶನ ನಡೆಸಿದೆ. ಇದೇ ಮೊದಲ ಬಾರಿಗೆ ಪಾಕಿಸ್ತಾನದ ಅತೀ ದೊಡ್ಡ ರಾಜ್ಯ ಪಂಜಾಬ್‌ನಲ್ಲಿ 289ರಲ್ಲಿ 123 ಸ್ಥಾನಗಳನ್ನು ಗೆದ್ದುಕೊಂಡಿದೆ. ಇಲ್ಲಿ ಪಿಎಂಎಲ್‌-ಎನ್‌ 127 ಸ್ಥಾನಗಳನ್ನು ಗೆದ್ದು ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ನಾವೇ ಸರಕಾರ ರಚಿಸುತ್ತೇವೆ ಎಂದು ಇಮ್ರಾನ್‌ ಖಾನ್‌ ಘೋಷಿಸಿದ್ದಾರೆ.

ಖೈಬರ್‌ ಪಂಖ್ತುಖ್ವಾದಲ್ಲಿ ಪಿಟಿಐ ಏಕಸ್ವಾಮ್ಯ ಮೆರೆದಿದ್ದು 95 ರಲ್ಲಿ 67 ಸ್ಥಾನಗಳನ್ನು ಬಾಚಿಕೊಂಡಿದೆ. ಈ ಮೂಲಕ ಇಲ್ಲಿ ಮತ್ತೆ ಅಧಿಕಾರಕ್ಕೇರಿದೆ. ಪ್ರಾಂತ್ಯದಲ್ಲಿ ‘ಎಂಎಂಎ’ 10 ಸ್ಥಾನಗಳನ್ನು ಗೆದ್ದು ಎರಡನೇ ಸ್ಥಾನ ಪಡೆದುಕೊಂಡಿದೆ.

ಸಿಂಧ್‌ನಲ್ಲಿ ಪ್ರಾಂತ್ಯದಲ್ಲಿ ಮಾತ್ರ ಪಿಪಿಪಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಇಲ್ಲಿರುವ 118 ಸ್ಥಾನಗಳಲ್ಲಿ ಬಿಲಾವಲ್‌ ಪಕ್ಷ 74 ಸ್ಥಾನಗಳನ್ನು ಗೆದ್ದುಕೊಂಡಿದೆ. 23 ಕ್ಷೇತ್ರಗಳಲ್ಲಿ ಗೆದ್ದಿರುವ ಪಿಟಿಐ ಎರಡನೇ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಇನ್ನುಳಿದಿರುವ ಅತೀ ಸಣ್ಣ ಪ್ರಾಂತ್ಯ ಬಲೂಚಿಸ್ತಾನದಲ್ಲಿ ‘ಬಲೂಚಿಸ್ತಾನ ಅವಾಮಿ ಪಕ್ಷ’ 45ರಲ್ಲಿ 13 ಸ್ಥಾನಗಳನ್ನು ಗೆದ್ದುಕೊಂಡಿದೆ. ಇಲ್ಲಿಯೂ ಎಂಎಂಎ 8 ಸ್ಥಾನಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಉಗ್ರ ಚಟುವಟಿಕೆಗಳಿಂದಲೇ ಖ್ಯಾತವಾಗಿರುವ, ಕಾಶ್ಮೀರಕ್ಕೆ ಹೋಲಿಸಬಹುದಾದ ಬಲೂಚಿಸ್ತಾನದಲ್ಲಿ ಅಧಿಕಾರಕ್ಕೇರಲು ಯಾವ ಪಕ್ಷಕ್ಕೂ ಅಗತ್ಯ ಸಂಖ್ಯಾಬಲ ಸಿಕ್ಕಿಲ್ಲ. ಹೀಗಾಗಿ ಇಲ್ಲಿಯೂ ಮೈತ್ರಿ ಸರಕಾರವೇ ಅಂತಿಮವಾಗಿದೆ.