samachara
www.samachara.com
‘ಬುದ್ಧಿಜೀವಿಗಳಿಂದ ದೇಶ ಹಾಳು’ ಎಂದ ಯತ್ನಾಳ್ ಮೇಲಿತ್ತು ‘ದೇಶದ್ರೋಹ’ದ ಆರೋಪ!
ಸುದ್ದಿ ಸಾರ

‘ಬುದ್ಧಿಜೀವಿಗಳಿಂದ ದೇಶ ಹಾಳು’ ಎಂದ ಯತ್ನಾಳ್ ಮೇಲಿತ್ತು ‘ದೇಶದ್ರೋಹ’ದ ಆರೋಪ!

ಬುದ್ಧಿಜೀವಿಗಳ ಮೇಲೆ ದೇಶದ್ರೋಹದ ಆರೋಪ ಹೊರಿಸಿದ ಶಾಸಕರ ವಿರುದ್ಧವೇ ಒಂದು ಕಾಲದಲ್ಲಿ ದೇಶದ್ರೋಹದ ಪ್ರಕರಣ ದಾಖಲಾಗಿತ್ತು!

ವಿಜಯಪುರದಲ್ಲಿ ಗುರುವಾರ ಕಾರ್ಗಿಲ್‌ ವಿಜಯ ದಿವಸ ಕಾರ್ಯಕ್ರಮದಲ್ಲಿ ಮಾತನಾಡಿರುವ ಶಾಸಕ ಬಸವರಾಜ್‌ ಪಾಟೀಲ್‌ ಯತ್ನಾಳ್ ಬುದ್ಧಿಜೀವಿಗಳ ವಿರುದ್ಧ ಹರಿಹಾಯ್ದಿದ್ದಾರೆ. “ನಮ್ಮಲ್ಲಿರುವ ಕೆಲ ಬುದ್ದಿಜೀವಿಗಳಿಂದ ದೇಶ ಹಾಳಾಗುತ್ತಿದೆ. ಇವರೆಲ್ಲಾ ಪಾಕಿಸ್ತಾನದಂತೆ ಅಪಾಯಕಾರಿಯಾಗಿ ಪರಿಣಮಿಸುತ್ತಿದ್ದಾರೆ. ನಾನೇದರೂ ಗೃಹಮಂತ್ರಿಯಾಗಿರುತ್ತಿದ್ದರೆ ಇವರನ್ನು ಗುಂಡಿಕ್ಕಿ ಕೊಲ್ಲಲು ಆದೇಶ ನೀಡುತ್ತಿದ್ದೆ,” ಎಂದು ಯತ್ನಾಳ್ ವೀರಾವೇಶದ ಭಾಷಣ ಬಿಗಿದಿದ್ದಾರೆ.

ವಿಜಯಪುರದ ಕನ್ನಡ ಸಾಹಿತ್ಯ ಭವನದಲ್ಲಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಮತ್ತು ಮಾಜಿ ಸೈನಿಕರ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ 19ನೇ ಕಾರ್ಗಿಲ್‌ ವಿಜಯ ದಿವಸ ಕಾರ್ಯಕ್ರಮದಲ್ಲಿ ಯತ್ನಾಳ್ ಕೊಲ್ಲುವ ಮಾತುಗಳನ್ನಾಡಿದ್ದರು.

‘ನಮ್ಮದೇ ಗಾಳಿ, ನೀರು, ಅನ್ನ ಸೇವಿಸಿ ದೇಶದ ವಿರುದ್ಧ ಘೋಷಣೆ ಕೂಗುತ್ತಾರೆ’ ಎಂದು ಬುದ್ಧಿ ಜೀವಿಗಳ ವಿರುದ್ಧ ತಮ್ಮ ಪ್ರತಾಪ ತೋರಿದ್ದರು. ಹೀಗೆ ಬುದ್ಧಿಜೀವಿಗಳ ಮೇಲೆ ದೇಶದ್ರೋಹದ ಆರೋಪ ಹೊರಿಸಿದ ಶಾಸಕರ ವಿರುದ್ಧವೇ ಒಂದು ಕಾಲದಲ್ಲಿ ದೇಶದ್ರೋಹದ ಪ್ರಕರಣ ದಾಖಲಾಗಿತ್ತು, ಅಂದರೆ ನೀವು ನಂಬಲೇಬೇಕು.

ಬಸವರಾಜ್‌ ಪಾಟೀಲ್ ಯತ್ನಾಳ್ ವಿರುದ್ಧ ಐಪಿಸಿ ಸೆಕ್ಷನ್‌ 489ಸಿ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ನಕಲಿ ಅಥವಾ ಖೋಟಾ ನೋಟುಗಳನ್ನು ಅಸಲಿಯ ಹೆಸರಿನಲ್ಲಿ ಬಳಸಲು ಇಟ್ಟುಕೊಂಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ನಕಲಿ ನೋಟುಗಳನ್ನು ಬಳಸಿ ದೇಶದ ಆರ್ಥಿಕತೆಯನ್ನೇ ಬುಡಮೇಲು ಮಾಡುವ ಈ ಗಂಭೀರ ಅಪರಾಧಕ್ಕೆ 7 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಅವರ ಮೇಲೆ ಇದ್ದ ಈ ಅಪರಾಧಗಳಿಗೆ ಸಂಬಂಧಿಸಿದಂತೆ 2013ರ ಚುನಾವಣೆಗೂ ಮುನ್ನ ಸಲ್ಲಿಸಿದ ಅಫಿಡವಿಟ್‌ನಲ್ಲಿ ಅವರು ಈ ವಿವರಗಳನ್ನು ನೀಡಿದ್ದರು. ‘ಮೈನೇತಾ’ದಲ್ಲಿ ಈ ಕುರಿತಾದ ವಿವರಗಳಿವೆ.

ಬಸವರಾಜ ಪಾಟೀಲ್‌ ಯತ್ನಾಳ್‌ ಮೇಲಿರುವ ಪ್ರಕರಣಗಳ ವಿವಿರ. 
ಬಸವರಾಜ ಪಾಟೀಲ್‌ ಯತ್ನಾಳ್‌ ಮೇಲಿರುವ ಪ್ರಕರಣಗಳ ವಿವಿರ. 

ಬುದ್ಧಿಜೀವಿಗಳ ಮೇಲೆ ದೇಶದ್ರೋಹದ ಆರೋಪ ಹೊರಿಸಿದ ಬಸವರಾಜ್‌ ಪಾಟೀಲ್ ಯತ್ನಾಳ್ ಮೇಲಿರುವ ಆರೋಪಗಳ ಸರಣಿ ಇಲ್ಲಿಗೆ ಕೊನೆಯಾಗುವುದಿಲ್ಲ. 2018ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನೀಡಿದ ಅಫಿಡವಿಟ್‌ನಲ್ಲಿ ಈ ಹಳೆ ಪ್ರಕರಣದ ವಿವರಗಳಿಲ್ಲ. ಆದರೆ ಇನ್ನೂ 7 ಪ್ರಕರಣಗಳು ತಮ್ಮ ವಿರುದ್ಧ ವಿಚಾರಣೆಗೆ ಬಾಕಿ ಇರುವುದಾಗಿ ಅವರೇ ತಿಳಿಸಿದ್ದಾರೆ. ಡಕಾಯಿತಿ, ಕಳ್ಳತನ, ಗಲಭೆ, ಕೊಲೆ ಯತ್ನ, ವಂಚನೆ ಸೇರಿದಂತೆ ಹಲವು ಗಂಭೀರ ಪ್ರಕರಣಗಳು ಅವರ ವಿರುದ್ಧ ದಾಖಲಾಗಿದ್ದು, ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆ ಹಂತದಲ್ಲಿದೆ.

ದೇಶದ್ರೋಹದ ಆರೋಪವನ್ನು ಹೊತ್ತವಲೇ ಈಗ ಬುದ್ಧಿ ಜೀವಿಗಳಿಂದ ದೇಶ ಹಾಳು ಎನ್ನುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯೆಗಾಗಿ ಅವರ ಸರಕಾರಿ ಸಂಖ್ಯೆಗೆ ಕರೆ ಮಾಡಲಾಯಿತಾದರೂ, ಶಾಸಕರು ಲಭ್ಯರಾಗಲಿಲ್ಲ.