ಪಾಕಿಸ್ತಾನ ಚುನಾವಣೆ: 18 ಗಂಟೆ ಕಳೆದರೂ ಹೊರಬೀಳದ ಫಲಿತಾಂಶ, ಅಧಿಕಾರದತ್ತ ಇಮ್ರಾನ್‌ ಖಾನ್‌
ಸುದ್ದಿ ಸಾರ

ಪಾಕಿಸ್ತಾನ ಚುನಾವಣೆ: 18 ಗಂಟೆ ಕಳೆದರೂ ಹೊರಬೀಳದ ಫಲಿತಾಂಶ, ಅಧಿಕಾರದತ್ತ ಇಮ್ರಾನ್‌ ಖಾನ್‌

‘ತಾಂತ್ರಿಕ ಕಾರಣಗಳಿಂದ ಫಲಿತಾಂಶ ಘೋಷಣೆ ವಿಳಂಬವಾಗಿದೆ’ ಎಂದು ಗುರುವಾರ ಬೆಳಿಗ್ಗೆ 4 ಗಂಟೆಗೆ ನಡೆಸಿದ ತುರ್ತು ಪತ್ರಿಕಾಗೋಷ್ಠಿಯಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳು ವಿವರಣೆ ನೀಡಿದ್ದಾರೆ.

ಬುಧವಾರ ಸಂಜೆಯಿಂದ ಆರಂಭವಾದ ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಇನ್ನೂ ಮುಂದುವರಿದಿದೆ. ಮತದಾನ ನಡೆದು ಸುಮಾರು 18 ಗಂಟೆಗಳು ಕಳೆದಿದ್ದು ಇನ್ನೂ ಫಲಿತಾಂಶ ಹೊರಬಿದ್ದಿಲ್ಲ. ಸದ್ಯ ಶೇಕಡಾ 47 ಮತಗಳ ಎಣಿಕೆ ನಡೆದಿದೆ ಎಂದು ‘ಡಾನ್‌’ ವರದಿ ಮಾಡಿದೆ. ಇಮ್ರಾನ್‌ ಖಾನ್‌ ನೇತೃತ್ವದ ‘ಪಾಕಿಸ್ತಾನ್ ತೆಹ್ರೀಕ್‌ ಇ ಇನ್ಸಾಫ್’ (ಪಿಟಿಐ) ಪಕ್ಷ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆ ಇದೆ.

ಒಟ್ಟು 272ರಲ್ಲಿ ಎರಡು ಕ್ಷೇತ್ರಗಳಲ್ಲಿ ಚುನಾವಣೆ ಮುಂದೂಡಿದ್ದರಿಂದ 270 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಇದರಲ್ಲಿ ಬಹುಮತಕ್ಕೆ 136 ಸ್ಥಾನಗಳು ಅಗತ್ಯವಾಗಿವೆ. ಸದ್ಯಕ್ಕೆ ಪಿಟಿಐ 113 ಸ್ಥಾನಗಳಲ್ಲಷೇ ಮುಂದಿದ್ದು ಸರಳ ಬಹುಮತಕ್ಕೆ 23 ಸ್ಥಾನಗಳ ಕೊರತೆ ಅನುಭವಿಸುತ್ತಿದೆ. ಇನ್ನು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್ ಅವರ ‘ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್‌’ (ಪಿಎಂಎಲ್‌-ಎನ್) 64 ಕ್ಷೇತ್ರಗಳಲ್ಲಿ ಮುಂದಿದೆ. ಷರೀಫ್ ತಮ್ಮ ಶೆಹಬಾಜ್‌ ಷರೀಫ್ ನೇತೃತ್ವದಲ್ಲಿ ಪಕ್ಷ ಚುನಾವಣೆಯನ್ನು ಎದುರಿಸಿತ್ತು.

ಮಾಜಿ ಪ್ರಧಾನಿ ಬೆನೆಜೀರ್‌ ಭುಟ್ಟೋ ಮತ್ತು ಮಾಜಿ ಅಧ್ಯಕ್ಷ ಆಸಿಫ್‌ ಅಲಿ ಝರ್ದಾರಿ ಪುತ್ರ ಬಿಲಾವಲ್‌ ಭುಟ್ಟೋ ಝರ್ದಾರಿ ನೇತೃತ್ವದ ಪಾಕಿಸ್ತಾನ ಪೀಪಲ್ಸ್‌ ಪಾರ್ಟಿ (ಪಿಪಿಪಿ) 43 ಸ್ಥಾನಗಳಲ್ಲಿ ಮುಂಚೂಣಿಯಲ್ಲಿದೆ. ಇತರರು 50 ಸ್ಥಾನಗಳಲ್ಲಿ ಮುಂದಿದ್ದಾರೆ. ಅತಂತ್ರ ಫಲಿತಾಂಶದ ಮುನ್ಸೂಚನೆ ಸಿಕ್ಕಿದ್ದು ಪಿಪಿಪಿ ಮತ್ತು ಇತರ ಪಕ್ಷಗಳಿಗೆ ಈಗ ಬೇಡಿಕೆ ಬಂದಿದೆ.

ಮತ ಎಣಿಕೆ ಬಹಿಷ್ಕರಿಸಿದ ಶೆಹಬಾಜ್‌ ಷರೀಫ್

ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆಡಳಿತರೂಢ ಪಿಎಂಎಲ್‌- ಎನ್‌ ಪಕ್ಷದ ಶೆಹಬಾಜ್‌ ಷರೀಫ್ ಹೇಳಿದ್ದು, ಫಲಿತಾಂಶವನ್ನು ಅವರು ತಿರಸ್ಕರಿಸಿದ್ದಾರೆ. ಈ ಕುರಿತು ಟ್ಟೀಟ್‌ ಮಾಡಿರುವ ಷರೀಫ್, “ಭಾರೀ ಅಕ್ರಮಗಳ ಕಾರಣಕ್ಕೆ 2018ರ ಸಾರ್ವತ್ರಿಕ ಚುನಾವಣೆಯ ಫಲಿತಾಂಶವನ್ನು ಪಾಕಿಸ್ತಾನ್ ಮುಸ್ಲಿಂ ಲೀಗ್ (ನವಾಜ್‌) ಪಕ್ಷ ತಿರಸ್ಕರಿಸುತ್ತದೆ. ನಮ್ಮ ಏಜೆಂಟ್‌ಗಳಿ ಫಾರ್ಮ್‌ 45 ನೀಡಿಲ್ಲ. ಫಲಿತಾಂಶವನ್ನು ತಡೆ ಹಿಡಿದು ನಮ್ಮ ಏಜೆಂಟ್‌ಗಳ ಅನುಪಸ್ಥಿತಿಯಲ್ಲಿ ಮತಗಳ ಎಣಿಕೆ ನಡೆಸಲಾಗಿದೆ. ಇದು ಸಹನೀಯವಲ್ಲ ಮತ್ತು ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ,” ಎಂದು ಕಿಡಿಕಾರಿದ್ದಾರೆ.

ಅಕ್ರಮದ ವಾಸನೆ

‘ಪಾಕಿಸ್ತಾನ ಚುನಾವಣೆಯಲ್ಲಿ ದೊಡ್ಡ ಮಟ್ಟದ ಸಂಚು ನಡೆದಿದೆ. ಈ ಕಾರಣಕ್ಕೆ ಫಲಿತಾಂಶವನ್ನು ತಡವಾಗಿ ನೀಡಲಾಗುತ್ತಿದೆ’ ಎಂಬ ಆರೋಪವನ್ನು ಅಲ್ಲಿನ ಚುನಾವಣಾ ಆಯೋಗ ತಳ್ಳಿ ಹಾಕಿದೆ. “ಇದರಲ್ಲಿ ಯಾವುದೇ ಸಂಚು ಇಲ್ಲ. ಚುನಾವಣಾ ಫಲಿತಾಂಶ ತಡವಾಗಿರುವುದಕ್ಕೆ ಯಾವುದೇ ಒತ್ತಡ ಇಲ್ಲ,” ಎಂದು ಪಾಕಿಸ್ತಾನ ಚುನಾವಣಾ ಆಯೋಗದ ಕಾರ್ಯದರ್ಶಿ ಬಾಬಾರ್‌ ಯಾಕೂಬ್‌ ಸ್ಪಷ್ಟನೆ ನೀಡಿದ್ದಾರೆ.

ತಾಂತ್ರಿಕ ಕಾರಣಗಳಿಂದ ಫಲಿತಾಂಶ ಘೋಷಣೆ ವಿಳಂಬವಾಗಿದೆ. ‘ರಿಸಲ್ಟ್ಸ್ ಟ್ರಾನ್ಸ್‌ಮಿಷನ್‌ ಸಿಸ್ಟಂ’ನಲ್ಲಾದ ತೊಂದರೆ ಇದಕ್ಕೆ ಕಾರಣ ಎಂದು ಗುರುವಾರ ಬೆಳಿಗ್ಗೆ 4 ಗಂಟೆಗೆ ನಡೆಸಿದ ತುರ್ತು ಪತ್ರಿಕಾಗೋಷ್ಠಿಯಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳು ವಿವರಣೆ ನೀಡಿದ್ದಾರೆ.

“ನಾವು ನಿಮಗೆ ನಿಖರವಾದ ಫಲಿತಾಂಶವನ್ನು ನೀಡಲು ಬಯಸಿದ್ದೇವೆ ಮತ್ತು ಆದಷ್ಟು ಬೇಗ ನಾವಿದನ್ನು ನೀಡಲಿದ್ದೇವೆ,” ಎಂದು ಬಾಬರ್ ಯಾಕೂಬ್‌ ಮುಂಜಾನೆ 4 ಗಂಟೆಗೆ ಘೋಷಿಸಿದ್ದರು. ಈ ಹೇಳಿಕೆ ನೀಡಿ 8 ಗಂಟೆ ಕಳೆದಿದ್ದು ಇನ್ನೂ ಒಂದೇ ಒಂದು ಕ್ಷೇತ್ರದ ಫಲಿತಾಂಶವನ್ನೂ ಅಧಿಕೃತವಾಗಿ ಘೋಷಣೆ ಮಾಡಿಲ್ಲ.