ದೇಶದ ಎಲ್ಲಾ ಜಿಪಿಗಳಿಗೆ ಹೈಸ್ಪೀಡ್‌ ಇಂಟರ್‌ನೆಟ್: ‘ಡಿಜಿಟಲ್ ಇಂಡಿಯಾ’ಗೆ ಡೆಡ್‌ಲೈನ್‌
ಸುದ್ದಿ ಸಾರ

ದೇಶದ ಎಲ್ಲಾ ಜಿಪಿಗಳಿಗೆ ಹೈಸ್ಪೀಡ್‌ ಇಂಟರ್‌ನೆಟ್: ‘ಡಿಜಿಟಲ್ ಇಂಡಿಯಾ’ಗೆ ಡೆಡ್‌ಲೈನ್‌

ಬುಧವಾರ ಲೋಕಸಭೆಯಲ್ಲಿ ಮಾತನಾಡಿದ ಕೇಂದ್ರ ದೂರ ಸಂಪರ್ಕ ಸಚಿವ ಮನೋಜ್‌ ಸಿನ್ಹಾ, ಸಂಸದರು ದತ್ತು ಪಡೆದಿರುವ ಗ್ರಾಮಗಳಿಗೆ ಉಚಿತ ವೈಫೈ ಸೌಲಭ್ಯ ಕಲ್ಪಿಸುವ ಯೋಜನೆಯನ್ನು ಕೇಂದ್ರ ಸರಕಾರ ಹೊಂದಿದೆ ಎಂದಿದ್ದಾರೆ.

ಜುಲೈ 25ರ ಬುಧವಾರ ಲೋಕಸಭೆಯಲ್ಲಿ ಮಾತನಾಡಿದ ಕೇಂದ್ರ ದೂರ ಸಂಪರ್ಕ ಸಚಿವ ಮನೋಜ್‌ ಸಿನ್ಹಾ, ಸಂಸದರು  ‘ಸಂಸದರ ಆದರ್ಶ ಗ್ರಾಮ ಯೋಜನೆ’ಯ ಅಡಿಯಲ್ಲಿ ದತ್ತು ತೆಗೆದುಕೊಂಡಿರುವ ಎಲ್ಲಾ ಹಳ್ಳಿಗಳಿಗೆ ಉಚಿತ ವೈಫೈ ಕಲ್ಪಿಸುವ ಯೋಜನೆಯನ್ನು ಕೇಂದ್ರ ಸರಕಾರ ಹಮ್ಮಿಕೊಂಡಿದೆ ಎಂದು ತಿಳಿಸಿದ್ದಾರೆ.

ಹಿಮಾಚಲ ಪ್ರದೇಶದ ಶಿಮ್ಲಾ ಲೋಕ ಸಭಾ ಕ್ಷೇತ್ರದ ಸಂಸದ ವೀರೇಂದರ್‌ ಕಶ್ಯಪ್‌ ಬುಧವಾರ ಲೋಕಸಭೆಯಲ್ಲಿ ಗ್ರಾಮಗಳಿಗೆ ಉಚಿತ ವೈಫೈ ಸೌಲಭ್ಯ ಕಲ್ಪಿಸುವ ಕುರಿತು ಪ್ರಶ್ನಿಸಿದ್ದರು. ವೀರೇಂದರ್‌ ಕಶ್ಯಪ್‌ ಪ್ರಶ್ನೆಗೆ ಉತ್ತರವಾಗಿ ಮನೋಜ್‌ ಸಿನ್ಹಾ ಈ ಅಂಕಿ ಅಂಶಗಳನ್ನು ನೀಡಿದ್ದಾರೆ.

ಮನೋಜ್‌ ಸಿನ್ಹಾ ಹೇಳಿರುವಂತೆ, ಕೇಂದ್ರ ಸರಕಾರವು ಮುಂದಿನ ದಿನಗಳಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಬಿಎಸ್‌ಎನ್‌ಎಲ್‌ನ ಸ್ಥಳೀಯ ಎಕ್ಸ್‌ಚೇಂಜ್‌ಗಳಲ್ಲಿ ಸಮಗ್ರ ದೂರಸಂಪರ್ಕ ಅಭಿವೃದ್ಧಿ ಯೋಜನೆಯನ್ನು ಜಾರಿಗೊಳಿಸಲಿದೆ. ಇದರ ಅಡಿಯಲ್ಲಿ ಉಚಿತ ವೈಫೈಗಳನ್ನು ಅಳವಡಿಸಲಾಗುತ್ತದೆ. ಎಲ್ಲಾ ಖಾಸಗಿ ಟೆಲಿಕಾಂ ಕಂಪನಿಗಳನ್ನೂ ಒಳಗೊಂಡು ಭಾರತದ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವೈಫೈ ಸೌಲಭ್ಯ ಕಲ್ಪಿಸಲಾಗುತ್ತದೆ. ‘ಭಾರತ್‌ ನೆಟ್’ ಹೆಸರಿನಲ್ಲಿ ಅಡಿಯಲ್ಲಿ ಆಪ್ಟಿಕಲ್‌ ಫೈಬರ್‌ ನೆಟ್‌ವರ್ಕ್‌ ಮೂಲಕ ದೇಶದ 2.5 ಲಕ್ಷ ಗ್ರಾಮ ಪಂಚಾಯಿತಿಗಳಿಗೆ ಅಂತರಸಂಪರ್ಕವನ್ನು ಕಲ್ಪಿಸುವ ಗುರಿಯನ್ನು ಕೇಂದ್ರ ಸರಕಾರ ಹೊಂದಿದೆ.

ಸಿನ್ಹಾ ಹೇಳಿರುವಂತೆ, 2017ರ ಡಿಸೆಂಬರ್‌ ಅಂತ್ಯದೊಳಗೆ ಭಾರತದ 1 ಲಕ್ಷ ಗ್ರಾಮ ಪಂಚಾಯಿತಿಗಳಿಗೆ ದಿಜಿಟಲ್‌ ಇಂಡಿಯಾ ಯೋಜನೆಯ ಅಡಿಯಲ್ಲಿ ಅಂತರಸಂಪರ್ಕ ಕಲ್ಪಿಸಲಾಗಿದೆ. ಉಳಿದಿರುವ 1.5 ಲಕ್ಷ ಗ್ರಾಮ ಪಂಚಾಯಿತಿಗಳಿಗೆ 2019ರ ಮಾರ್ಚ್‌ ಅವಧಿಯೊಳಗೆ ಹೈ ಸ್ಪೀಡ್‌ ಅಂತರ್ಜಾಲ ಸೇವೆಯನ್ನು ಒದಗಿಸಲಾಗುತ್ತದೆ. ಜುಲೈ 15ರವೆರೆಗೆ ಈಗಾಗಲೇ ದೇಶದ 1,13,091 ಗ್ರಾಮ ಪಂಚಾಯಿತಿಗಳು ಹೈ ಸ್ಪೀಡ್‌ ಅಂತರ್ಜಾಲ ಸೇವೆಯನ್ನು ಪಡೆದುಕೊಂಡಿವೆ.

ಸಿನ್ಹಾ ನೀಡಿರುವ ಮಾಹಿತಿ ಪ್ರಕಾರ, ದೂರ ಸಂಪರ್ಕ ಇಲಾಖೆಯು ಎಡಪಂಥೀಯ ಉಗ್ರಗಾಮಿಗಳಿಂದ ತೊಂದರೆಗೆ ಒಳಪಟ್ಟಿರುವ 10 ರಾಜ್ಯಗಳಲ್ಲಿನ ಕೆಲವು ಪ್ರದೇಶಗಳಿಗೆ ಮೊಬೈಲ್‌ ಸೇವೆ ಒದಗಿಸುವ ಯೋಜನೆಯನ್ನು ಕಾರ್ಯಗತಗೊಳಿಸಿದೆ. ಮಾವೋವಾದಿಗಳು ಗಟ್ಟಿಯಾಗಿರುವ 2,355 ಪ್ರದೇಶಗಳನ್ನು ಗುರುತಿಸಲಾಗಿದ್ದು, ಮೊದಲನೇ ಹಂತದಲ್ಲಿ ಮೊಬೈಲ್‌ ಟವರ್‌ ನಿರ್ಮಿಸುವ ಕೆಲಸ ನಡೆಯುತ್ತಿದೆ. ಈಗಾಗಲೇ 2,335 ಮೊಬೈಲ್‌ ಟವರ್‌ಗಳು ನಿರ್ಮಾಣಗೊಂಡಿವೆ. ಈ ಯೋಜನೆಯ 2ನೇ ಹಂತದಲ್ಲಿ ಒಟ್ಟು 4,027 ಮೊಬೈಲ್‌ ಟವರ್‌ಗಳ ನಿರ್ಮಾಣ ಮಾಡಲಿದ್ದು, ಕೇಂದ್ರ ಸರಕಾರ ಮೇ 23ರಂದು 2ನೇ ಹಂತದ ಮೊಬೈಲ್‌ ಟವರ್‌ಗಳ ನಿರ್ಮಾಣಕ್ಕೆ ಅಸ್ತು ಎಂದಿದೆ.

ಮನೋಜ್‌ ಸಿನ್ಹಾ ಮಾತುಗಳ ನಂತರ ಪ್ರತಿಕ್ರಿಯಿಸಿದ ಸಂಸದ ವೀರೇಂದರ್‌ ಕಶ್ಯಪ್‌, ಹಿಮಾಚಲ ಪ್ರದೇಶಗಳಂತಹ ಗುಡ್ಡಗಾಡು ಪ್ರದೇಶಗಳಲ್ಲಿ ದೂರ ಸಂಪರ್ಕ ಒದಗಿಸುವ ಕಾರ್ಯ ನಿಧಾನಗತಿಯಲ್ಲಿದೆ. ಸೇವೆ ಒದಗಿಸುವ ಕೆಲಸ ಚುರುಕುಗೊಳಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. 2019ರ ಮಾರ್ಚ್‌ ತಿಂಗಳೊಳಗೆಯೇ ಬ್ರಾಡ್‌ಬ್ಯಾಂಡ್‌ ಸೇವೆ ಒದಗಿಸಬೇಕು ಎಂದಿದ್ದಾರೆ.

ದೂರ ಸಂಪರ್ಕ ಸಚಿವ ಮನೋಜ್‌ ಸಿನ್ಹಾ ಕೂಡ ವೀರೇಂದರ್‌ ಸಿನ್ಹಾ ಬೇಡಿಕೆಗೆ ಸಕಾರಾತ್ಮಕ ಸ್ಪಂದನೆ ನೀಡಿದ್ದು, ಗುಡ್ಡಗಾಡು ಪ್ರದೇಶಗಳಿಗೆ ವೈಫೈ ಸೌಲಭ್ಯ ಕಲ್ಪಿಸಲು ಸಮಯದ ಮಿತಿಯನ್ನು ನಿಗಧಿಗೊಳಿಸಿ ಯೋಜನೆಯನ್ನು ಪೂರ್ಣಗೊಳಿಸಲಾಗುವುದು ಎಂದಿದ್ದಾರೆ.

ಈ ಹಿಂದೆ ಮಾರ್ಚ್‌ 31ರಂದು ಭಾರತದಲ್ಲಿನ ಅಂತರ್ಜಾಲ ಬಳಕೆದಾರರ ಬಗ್ಗೆ ಮನೋಜ್‌ ಸಿನ್ಹಾ ಮಾಹಿತಿ ನೀಡಿದ್ದರು. ಭಾರತದಲ್ಲಿ ಒಟ್ಟು 47.27 ಕೋಟಿ ಜನ ಅಂತರ್ಜಾಲ ಬಳಕೆದಾರರಿದ್ದಾರೆ. ಇದರಲ್ಲಿ 32.88 ಕೋಟಿ ಜನ ನಗರ ನಿವಾಸಿಗಳು ಮತ್ತು 14.39 ಕೋಟಿ ಜನ ಗ್ರಾಮೀಣ ಭಾಗದವರು. ಭಾರತದ ಶೇ.30.44ರಷ್ಟು ಹಳ್ಳಿಗರು ಅಂತರ್ಜಾಲ ಸೇವೆಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಮನೋಜ್‌ ಸಿನ್ಹಾ ಹೇಳಿದ್ದರು.

ಈ ಸಮಯದಲ್ಲಿಯೇ ಕೇಂದ್ರ ಸರಕಾರ ಈಶಾನ್ಯ ಭಾರತದ ರಾಜ್ಯಗಳಿಗೆ ಸೇರುವ ದೂರ ಸಂಪರ್ಕ ವ್ಯವಸ್ಥೆಗೆ ತೆರೆದುಕೊಳ್ಳದ 8,600 ಗ್ರಾಮಗಳಿಗೆ ದೂರ ಸಂಪರ್ಕ ಸೌಲಭ್ಯ ಒದಗಿಸುವುದಾಗಿ ತಿಳಿಸಿದ್ದರು. ಇದಕ್ಕಾಗಿ ಒಟ್ಟು 7,000 ಮೊಬೈಲ್‌ ಟವರ್‌ಗಳನ್ನು ನಿರ್ಮಿಸುವುದಾಗಿ ಹೇಳಿದ್ದರು.