samachara
www.samachara.com
ಬಿಜೆಪಿ ಶಾಸಕರ ಕಚೇರಿ ಮೇಲೆ ದಾಳಿ ಪ್ರಕರಣ; ಹಾರ್ದಿಕ್‌ ಪಟೇಲ್‌ಗೆ 2 ವರ್ಷ ಜೈಲು
ಸುದ್ದಿ ಸಾರ

ಬಿಜೆಪಿ ಶಾಸಕರ ಕಚೇರಿ ಮೇಲೆ ದಾಳಿ ಪ್ರಕರಣ; ಹಾರ್ದಿಕ್‌ ಪಟೇಲ್‌ಗೆ 2 ವರ್ಷ ಜೈಲು

ಪಾಟೀದಾರ್‌ ಅನಾಮತ್‌ ಆಂದೋಲನ್ ಸಮಿತಿ (ಪಾಸ್‌) ನಾಯಕ ಹಾರ್ದಿಕ್‌ ಪಟೇಲ್‌ಗೆ 2 ವರ್ಷಗಳ ಜೈಲು ಶಿಕ್ಷೆ ನೀಡಿ ಗುಜರಾತ್‌ನ ವಿಸ್ನಾಗರ್‌ ಸೆಷನ್ಸ್‌ ನ್ಯಾಯಾಲಯ ತೀರ್ಪು ನೀಡಿದೆ.

ಜುಲೈ 20ರಂದು 25 ವರ್ಷ ಪೂರೈಸಿ ಚುನಾವಣೆಗೆ ನಿಲ್ಲುವ ಅರ್ಹತೆ ಗಿಟ್ಟಿಸಿಕೊಂಡ ನಾಲ್ಕು ದಿನಗಳ ತರುವಾಯ ಹಾರ್ದಿಕ್‌ ಪಟೇಲ್‌ಗೆ ನ್ಯಾಯಾಲಯದಿಂದ ಆಘಾತದ ಸುದ್ದಿ ಬಂದಿದೆ. ಪಾಟೀದಾರ್‌ ಅನಾಮತ್‌ ಆಂದೋಲನ್ ಸಮಿತಿ (ಪಾಸ್‌) ನಾಯಕ ಹಾರ್ದಿಕ್‌ ಪಟೇಲ್‌ಗೆ 2 ವರ್ಷಗಳ ಜೈಲು ಶಿಕ್ಷೆ ನೀಡಿ ಗುಜರಾತ್‌ನ ವಿಸ್ನಾಗರ್‌ ಸೆಷನ್ಸ್‌ ನ್ಯಾಯಾಲಯ ತೀರ್ಪು ನೀಡಿದೆ.

2015ರ ಪಟೇಲ್ ಮೀಸಲಾತಿ ಹೋರಾಟದ ಸಂದರ್ಭಲ್ಲಿ 3 ರಿಂದ 5 ಸಾವಿರ ಜನರ ಗುಂಪು ವಿಸ್ನಾಗರ್‌ನಲ್ಲಿದ್ದ ಬಿಜೆಪಿ ಶಾಸಕ ಋಷಿಕೇಶ್ ಪಟೇಲ್‌ ಕಚೇರಿ ಮೇಲೆ ನುಗ್ಗಿ ಕಚೇರಿಯನ್ನು ಧ್ವಂಸಗೊಳಿಸಿತ್ತು. ಜತೆಗೆ ಕಾರಿಗೂ ಉದ್ರಿಕ್ತರು ಬೆಂಕಿ ಹಚ್ಚಿದ್ದರು. ಪ್ರಕರಣದಲ್ಲಿ ಹಾರ್ದಿಕ್‌ ಪಟೇಲ್‌ ಸೇರಿ 17 ಜನರನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿತ್ತು. ಪ್ರಕರಣದಲ್ಲಿ ಹಾರ್ದಿಕ್‌ ಪಟೇಲ್‌ರನ್ನು ಬಂಧಿಸಲಾಗಿತ್ತು. ನಂತರ ಅವರು ಜಾಮೀನಿನ ಮೇಲೆ ಹೊರ ಬಂದಿದ್ದರು. ಈ ಸಂದರ್ಭದಲ್ಲಿ ಮೆಹ್ಸಾನಾ ಜಿಲ್ಲೆ ಪ್ರವೇಶಿಸದಂತೆ ಹಾರ್ದಿಕ್‌ ಪಟೇಲ್‌ಗೆ ನ್ಯಾಯಾಲಯ ನಿಷೇಧವನ್ನೂ ಹೇರಿತ್ತು.

ಇದೀಗ ಮೂರು ವರ್ಷದ ನಂತರ ಪ್ರಕರಣದಲ್ಲಿ ಕೋರ್ಟ್‌ ತೀರ್ಪು ನೀಡಿದೆ. 17 ಜನ ಆರೋಪಿಗಳಲ್ಲಿ ಹಾರ್ದಿಕ್‌ ಪಟೇಲ್‌ ಮತ್ತು ಅವರ ಸಹವರ್ತಿಗಳಾದ ಲಾಲ್ಜೀ ಪಟೇಲ್ ಮತ್ತು ಎ.ಕೆ. ಪಟೇಲ್‌ ದೋಷಿಗಳು ಎಂದು ನ್ಯಾಯಾಧೀಶ ವಿ.ಪಿ. ಅಗರ್ವಾಲ್‌ ತೀರ್ಪು ನೀಡಿದ್ದು, ಜೈಲು ಶಿಕ್ಷೆಯ ಜತೆಗೆ 50 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ಸರಿಯಾದ ಸಾಕ್ಷ್ಯಗಳಿಲ್ಲದ ಹಿನ್ನೆಲೆಯಲ್ಲಿ ಉಳಿದ 14 ಜನರನ್ನು ಪ್ರಕರಣದಲ್ಲಿ ಖುಲಾಸೆಗೊಳಿಸಲಾಗಿದೆ.

ಶಿಕ್ಷೆಗೆ ಗುರಿಯಾದ ಬೆನ್ನಿಗೆ ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಹಾರ್ದಿಕ್‌ ಪಟೇಲ್, “ನಾನು ಸಾಮಾಜಿಕ ನ್ಯಾಯ ಮತ್ತು ಸಾಮಾಜಿಕ ಹಕ್ಕುಗಳಿಗಾಗಿ ಹೋರಾಡುವಾಗ ತಪ್ಪಿತಸ್ಥನಾಗಿದ್ದೇನೆ. ಸತ್ಯ ಮತ್ತು ಸರಿಯಾದ ದಾರಿಯಲ್ಲಿ ಹೋರಾಡುವಾಗ ನಾನು ಖೈದಿಯಾಗಿದ್ದೇನೆ. ವಿದ್ಯಾರ್ಥಿಗಳು, ರೈತರು ಮತ್ತು ಬಡವರಿಗಾಗಿ ಹೋರಾಡುವ ಸತ್ಯದ ಧ್ವನಿಯನ್ನು ಬಿಜೆಪಿಯಿಂದ ನಿಗ್ರಹಿಸಲು ಸಾಧ್ಯವಿಲ್ಲ,” ಎಂದಿದ್ದಾರೆ.