samachara
www.samachara.com
‘ನೊರೆ ನೀರಿ’ಗೆ ಹೈಕೋರ್ಟ್‌ ಬರೆ: ಕೆಸಿ ವ್ಯಾಲಿ ನೀರು ಪಂಪ್‌ ಮಾಡದಂತೆ ಮಧ್ಯಂತರ ಆದೇಶ
ಸುದ್ದಿ ಸಾರ

‘ನೊರೆ ನೀರಿ’ಗೆ ಹೈಕೋರ್ಟ್‌ ಬರೆ: ಕೆಸಿ ವ್ಯಾಲಿ ನೀರು ಪಂಪ್‌ ಮಾಡದಂತೆ ಮಧ್ಯಂತರ ಆದೇಶ

ಕೆ. ಸಿ. ವ್ಯಾಲಿ ಯೋಜನೆಯ ವಿವಾದಿತ ನೊರೆ ನೀರನ್ನು ಕೋಲಾರ ಮತ್ತು ಚಿಕ್ಕಬಳ್ಳಾಪುರದ ಕೆರೆಗಳಿಗೆ ಹರಿಸದಂತೆ ಹೈಕೋರ್ಟ್‌ ಮಂಗಳವಾರ ಆದೇಶ ನೀಡಿದೆ.

ಬೆಂಗಳೂರಿನ ನೊರೆ ನೀರು ಕೋಲಾರ ಮತ್ತು ಚಿಕ್ಕಬಳ್ಳಾಪುರದ ಕೆರೆಗಳಿಗೆ ತುಂಬದಂತೆ ಹೈಕೋರ್ಟ್‌ ಮಧ್ಯಪ್ರವೇಶಿಸಿದೆ. ಕೆ.ಸಿ. ವ್ಯಾಲಿ ಯೋಜನೆಯ ನೀರನ್ನು ಈ ಜಿಲ್ಲೆಗಳ ಕೆರೆಗಳಿಗೆ ಪಂಪ್‌ ಮಾಡದಂತೆ ಹೈಕೋರ್ಟ್‌ ಮಂಗಳವಾರ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ.

ಕೆ. ಸಿ. ವ್ಯಾಲಿ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಹೇಶ್ವರಿ ಮತ್ತು ನ್ಯಾಯಮೂರ್ತಿ ಆರ್‌.ದೇವ್‌ದಾಸ್ ಅವರಿದ್ದ ನ್ಯಾಯಪೀಠವು ಮುಂದಿನ ವಿಚಾರಣೆವರೆಗೆ ಈ ಯೋಜನೆಯ ನೀರನ್ನು ಪಂಪ್‌ ಮಾಡದಂತೆ ಮಧ್ಯಂತರ ಆದೇಶ ನೀಡಿದೆ.

Also read: ‘ಕೆಸಿ ವ್ಯಾಲಿ’ಯ ಅಪಾಯಕಾರಿ ನಡೆ: ಛೀಮಾರಿ ಹಾಕಿದ ಹೈಕೋರ್ಟ್

“ಈ ಯೋಜನೆಯಿಂದ ಹರಿಸುತ್ತಿರುವ ನೀರು ಎರಡು ಜಿಲ್ಲೆಗಳ ಸುಮಾರು 50 ಲಕ್ಷ ಜನರ ಮೇಲೆ ಪರಿಣಾಮ ಬೀರಲಿದೆ” ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು.

“ಯೋಜನೆಯ ನೀರನ್ನು ಕೆರೆಗಳಿಗೆ ಹರಿಸುವ ಮುನ್ನಾ ಇದರ ಸಾಧಕ- ಬಾಧಕಗಳನ್ನು ಅಧ್ಯಯನ ಮಾಡಲಾಗಿದೆ. ಅಂತರ್ಜಲ ಹಾಗೂ ಜನರ ಮೇಲೆ ಕೆಟ್ಟ ಪರಿಣಾಮ ಬೀರದಂತೆ ಈ ಯೋಜನೆ ಜಾರಿಗೆ ತರಲಾಗಿದೆ” ಎಂದು ರಾಜ್ಯ ಸರಕಾರದ ಪರ ವಕೀಲರು ಸಮರ್ಥಿಸಿಕೊಂಡಿದ್ದರು.

Also read: ಕೋಲಾರದ ಲಕ್ಷ್ಮೀಸಾಗರ ಕೆರೆಯಲ್ಲಿ ಬಿಳಿನೊರೆ: ರಮೇಶ್ ಕುಮಾರ್ ಏನಂತಾರೆ? 

ಯೋಜನೆಯ ನೀರಿನಲ್ಲಿ ನೊರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜುಲೈ 13ರಂದು ನೀರು ಪಂಪ್‌ ಮಾಡುವುದನ್ನು ನಿಲ್ಲಿಸಲಾಗಿತ್ತು. ಪೈಪ್‌ಗಳನ್ನು ಶುದ್ಧೀಕರಿಸಿ ಮತ್ತೆ ಪಂಪಿಂಗ್‌ ಶುರು ಮಾಡುವ ಬಗ್ಗೆ ರಾಜ್ಯ ಸರಕಾರ ಚಿಂತನೆ ನಡೆಸಿತ್ತು. ಆದರೆ, ಹೈಕೋರ್ಟ್‌ ಈಗ ನೊರೆ ನೀರಿಗೆ ಕಡಿವಾಣ ಹಾಕಿದೆ.

ಬುಧವಾರ ಸಣ್ಣ ನೀರಾವರಿ ಸಚಿವ ಪುಟ್ಟರಾಜು ನಾಳೆ ಕೆ. ಸಿ. ವ್ಯಾಲಿ ಯೋಜನೆ ಜಾಗಕ್ಕೆ ನಾಳೆ ಭೇಟಿ ನೀಡಲಿದ್ದಾರೆ.