samachara
www.samachara.com
ಸ್ಟೆರ್‌ಲೈಟ್‌ ಸುತ್ತಮುತ್ತ ‘ಮಿತಿ ಮೀರಿದ’ ಮಾಲಿನ್ಯ: ಕೇಂದ್ರ ಅಂತರ್ಜಲ ಮಂಡಳಿ
ಸುದ್ದಿ ಸಾರ

ಸ್ಟೆರ್‌ಲೈಟ್‌ ಸುತ್ತಮುತ್ತ ‘ಮಿತಿ ಮೀರಿದ’ ಮಾಲಿನ್ಯ: ಕೇಂದ್ರ ಅಂತರ್ಜಲ ಮಂಡಳಿ

ಸ್ಥಳೀಯರ ತೀವ್ರ ಪ್ರತಿಭಟನೆಯಿಂದ ಸದ್ಯ ಮುಚ್ಚಿರುವ ತಮಿಳುನಾಡಿನ ಸ್ಟೆರ್‌ಲೈಟ್‌ ತಾಮ್ರ ಕಾರ್ಖಾನೆಯ ಸುತ್ತಮುತ್ತಲಿನ ಪ್ರದೇಶದ ಅಂತರ್ಜಲ ಮಾಲಿನ್ಯವಾಗಿದ್ದು, ಕುಡಿಯಲು ಯೋಗ್ಯವಾಗಿಲ್ಲ ಎಂದು ಕೇಂದ್ರೀಯ ಅಂತರ್ಜಲ ಮಂಡಳಿ ಹೇಳಿದೆ.

ತಮಿಳುನಾಡಿನ ತೂತುಕುಡಿಯಲ್ಲಿನ ವೇದಾಂತ ಸಮೂಹದ ಸ್ಟೆರ್‌ಲೈಟ್‌ ತಾಮ್ರ ಕಾರ್ಖಾನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಮಲಿನವಾಗಿದೆ ಎಂದು ಕೇಂದ್ರೀಯ ಅಂತರ್ಜಲ ಮಂಡಳಿಯ (ಸಿಜಿಡಬ್ಲ್ಯುಬಿ) ಅಧ್ಯಯನ ಹೇಳಿದೆ. ಕಾರ್ಖಾನೆ ಹಾಗೂ ಸುತ್ತಮುತ್ತಲಿನ ಪ್ರದೇಶದ ಅಂತರ್ಜಲ ಅತಿ ಹೆಚ್ಚು ಖನಿಜಾಂಶ ಹೊಂದಿದ್ದು, ಈ ನೀರು ಕುಡಿಯಲು ಯೋಗ್ಯವಲ್ಲ ಎಂದು ತಿಳಿಸಿದೆ.

ರಾಜ್ಯಸಭೆಯಲ್ಲಿ ತಮಿಳುನಾಡಿನ ಸಂಸದೆ ಶಶಿಕಲಾ ಪುಷ್ಪಾ ಕೇಳಿದ್ದ ಪ್ರಶ್ನೆಗೆ ಉತ್ತರಿಸಿರುವ ಕೇಂದ್ರ ಜಲಸಂಪನ್ಮೂಲ ಇಲಾಖೆಯ ರಾಜ್ಯ ಖಾತೆ ಸಚಿವ ಅರ್ಜುನ್‌ ರಾಮ್‌ ಮೇಘ್ವಾಲ್‌, “ಸ್ಟೆರ್‌ಲೈಟ್‌ ಕಾರ್ಖಾನೆ ಪ್ರದೇಶದಲ್ಲಿ ಅಂತರ್ಜಲ ಮಲಿನವಾಗಿದೆ. ಕೇಂದ್ರ ಅಂತರ್ಜಲ ಮಂಡಳಿಯ ಅಧ್ಯಯನ ಈ ಅಂಶ ಬಹಿರಂಗ ಪಡಿಸಿದೆ” ಎಂಬ ಮಾಹಿತಿ ನೀಡಿದ್ದಾರೆ.

“ಸ್ಟೆರ್‌ಲೈಟ್‌ ಕಾರ್ಖಾನೆ ಪ್ರದೇಶದಲ್ಲಿ ಅಂತರ್ಜಲ ಮಲಿನವಾಗಿದೆ ಎಂಬ ಕಾರಣಕ್ಕೆ ಸ್ಥಳೀಯರು ದೊಡ್ಡ ಪ್ರತಿಭಟನೆ ನಡೆಸಿದ್ದರು. ಕಾರ್ಖಾನೆ ಪ್ರದೇಶದ ಅಂತರ್ಜಲ ಮಲಿನವಾಗಿದೆಯೇ? ಈ ಪ್ರದೇಶದ ಅಂತರ್ಜಲ ಕುಡಿಯಲು ಯೋಗ್ಯವೆ? ಈ ಬಗ್ಗೆ ಸರಕಾರ ಏನು ಕ್ರಮ ಕೈಗೊಂಡಿದೆ?” ಎಂದು ಶಶಿಕಲಾ ಪುಷ್ಪಾ ಪ್ರಶ್ನಿಸಿದ್ದರು.

“ಸ್ಟೆರ್‌ಲೈಟ್‌ ಕಾರ್ಖಾನೆ ಇರುವ ಪ್ರದೇಶದಲ್ಲಿ ಅಂತರ್ಜಲ ಮಲಿನವಾಗಿದೆ ಎಂಬುದನ್ನು ಕೇಂದ್ರೀಯ ಅಂತರ್ಜಲ ಮಂಡಳಿ ಅಧ್ಯಯನ ಖಚಿತ ಪಡಿಸಿದೆ. ಕುಡಿಯುವ ನೀರಿನ ಬಗ್ಗೆ ಭಾರತೀಯ ಮಾನಕ ಬ್ಯೂರೋ (ಬಿಐಎಸ್‌) ನಿಗದಿ ಪಡಿಸಿರುವ ಪ್ರಮಾಣಕ್ಕಿಂತ ಇಲ್ಲಿನ ನೀರಿನಲ್ಲಿ ವಿಷಕಾರಿ ಖನಿಜಾಂಶಗಳ ಪ್ರಮಾಣ ಹೆಚ್ಚಾಗಿದೆ. ಇಲ್ಲಿನ ನೀರು ಕುಡಿಯಲು ಯೋಗ್ಯವಲ್ಲ” ಎಂದು ಮೇಘ್ವಾಲ್‌ ತಿಳಿಸಿದ್ದಾರೆ.

“ಸ್ಟೆರ್‌ಲೈಟ್‌ ಕಾರ್ಖಾನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಸಂಗ್ರಹಿಸಿದ ಅಂತರ್ಜಲ ಮಾದರಿಗಳ ಪರೀಕ್ಷೆಯಲ್ಲಿ ನಿಗದಿಗಿಂತ ಹೆಚ್ಚು ಖನಿಜ ಪ್ರಮಾಣ ಇರುವುದು ಗೊತ್ತಾಗಿದೆ. ಸೀಸ, ಕ್ರೋಮಿಯಂ, ಮ್ಯಾಂಗನೀಸ್‌, ಫ್ಲೋರೈಡ್‌, ಆರ್ಸನಿಕ್‌ ಪ್ರಮಾಣ ಇಲ್ಲಿನ ಅಂತರ್ಜಲದಲ್ಲಿ ಹೆಚ್ಚಾಗಿದೆ” ಎಂದಿದ್ದಾರೆ.

“ಕಾರ್ಖಾನೆ ವಿರುದ್ಧ ಸರಕಾರ ಕ್ರಮ ಕೈಗೊಂಡಿದೆ. ಮಾಲಿನ್ಯದ ಕಾರಣಕ್ಕೆ ಕಾರ್ಖಾನೆಯನ್ನು ಮುಚ್ಚಲಾಗಿದೆ. ತಮಿಳುನಾಡು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಈ ವರ್ಷದ ಮೇ 23ರಂದು ಕಾರ್ಖಾನೆಯನ್ನು ಮುಚ್ಚಲು ಆದೇಶ ನೀಡಿದೆ” ಎಂದು ಮೇಘ್ವಾಲ್‌ ಹೇಳಿದ್ದಾರೆ.

Also read: ಹನ್ನೊಂದು ಜನರನ್ನು ಬಲಿ ಪಡೆದ ವೇದಾಂತ ಕಂಪನಿ: ಜನ ಪ್ರತಿಭಟನೆ ಸಾಗಿ ಬಂದ ಹಾದಿ

ಕಾರ್ಖಾನೆಯಿಂದ ವಿಪರೀತ ಮಾಲಿನ್ಯವಾಗುತ್ತಿದ್ದು, ಇದು ಸ್ಥಳೀಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಸ್ಥಳೀಯರು ಎರಡು ತಿಂಗಳ ಹಿಂದೆ ಭಾರೀ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಪೊಲೀಸರು ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ್ದರು. ಪೊಲೀಸರ ಗುಂಡಿಗೆ 13 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದರು.

ತೀವ್ರ ಪ್ರತಿಭಟನೆಗೆ ಮಣಿದ ತಮಿಳುನಾಡು ಸರಕಾರ ಪರಿಸರ ಸಂರಕ್ಷಣಾ ನಿಯಮಗಳನ್ನು ಪಾಲಿಸದ ಕಾರಣ ನೀಡಿ ಕಾರ್ಖಾನೆಯನ್ನು ಶಾಶ್ವತವಾಗಿ ಮುಚ್ಚಲು ಆದೇಶ ನೀಡಿತ್ತು. ಆದರೆ, ಈ ಕಾರ್ಖಾನೆ ಪುನರಾರಂಭಕ್ಕೆ ವೇದಾಂತ ಸಮೂಹ ಪ್ರಯತ್ನಿಸುತ್ತಲೇ ಇದೆ.

Also read: ವೇದಾಂತ ಒಡೆತನದ ಸ್ಟೆರ್ಲೈಟ್‌ ಕಾರ್ಖಾನೆ ಶಾಶ್ವತವಾಗಿ ಮುಚ್ಚಲು ತಮಿಳುನಾಡು ಆದೇಶ