‘ನೈಜ ಸುದ್ದಿ’ ನೀಡಲು ಬಿಜೆಪಿಯ 1,800 ವಾಟ್ಸ್‌ಆಪ್‌ ಗ್ರೂಪ್‌; ಎಲ್ಲದರಲ್ಲೂ ಅಮಿತ್‌ ಶಾಗೆ ಸದಸ್ಯತ್ವ
ಸುದ್ದಿ ಸಾರ

‘ನೈಜ ಸುದ್ದಿ’ ನೀಡಲು ಬಿಜೆಪಿಯ 1,800 ವಾಟ್ಸ್‌ಆಪ್‌ ಗ್ರೂಪ್‌; ಎಲ್ಲದರಲ್ಲೂ ಅಮಿತ್‌ ಶಾಗೆ ಸದಸ್ಯತ್ವ

ಸುಳ್ಳು ಸುದ್ದಿಗಳನ್ನು ತಡೆಗಟ್ಟಿ ತನ್ನ ಕಾರ್ಯಕರ್ತರಿಗೆ ನೇರವಾಗಿ ಸುದ್ದಿ ತಲುಪಿಸುವ ಉದ್ದೇಶದಿಂದ ಬಿಜೆಪಿ ದೆಹಲಿಯಲ್ಲಿ 1,800 ವಾಟ್ಸ್‌ಆಪ್‌ ಗುಂಪುಗಳನ್ನು ತೆರೆದಿದೆ. ಈ ಎಲ್ಲ ಗುಂಪುಗಳಲ್ಲೂ ಅಮಿತ್  ಶಾ ಸದಸ್ಯರಾಗಿದ್ದಾರೆ.

ಭಾರತೀಯ ಜನತಾ ಪಕ್ಷದ ದೆಹಲಿ ರಾಜ್ಯ ಘಟಕ ರಾಜ್ಯದ ಜನತೆಗೆ ‘ನೇರ ಮಾಹಿತಿ’ಯನ್ನು ತಲುಪಿಸಿ, ಸುಳ್ಳು ಸುದ್ದಿಗಳನ್ನು ತಡೆಯುವ ಉದ್ದೇಶದಿಂದ ತಾನೇ ನೇರ ಕಾರ್ಯಾಚರಣೆಗೆ ಮುಂದಾಗಿದೆ. ಅದಕ್ಕಾಗಿ ನೂರಾರು ವಾಟ್ಸ್‌ಆಪ್‌ ಗ್ರೂಪ್‌ಗಳನ್ನು ತೆರೆದಿದೆ. ವಿಶೇಷವೆಂದರೆ ಬಿಜೆಪಿಯ ರಾಷ್ಟ್ರಾಧ್ಯಕ್ಷರಾಗಿರುವ ಅಮಿತ್‌ ಶಾ ಕೂಡ ಈ ವಾಟ್ಸ್‌ಗ್ರೂಪ್‌ಗಳಲ್ಲಿ ಸದಸ್ಯರಾಗಿದ್ದಾರೆ.

ಇನ್ನೇನು ಹತ್ತಿರದಲ್ಲೇ ಇರುವ 2019ರ ಸಾರ್ವತ್ರಿಕ ಚುನಾವಣೆಗಾಗಿ ಮಂಡಲ ಮಟ್ಟದಲ್ಲಿ ಕಾರ್ಯಕರ್ತರನ್ನು ಗಟ್ಟಿಗೊಳಿಸಿ, ಕಾರ್ಯಕರ್ತರು ಮತ್ತು ಪಕ್ಷದ ಕಾರ್ಯಾಲಯದ ಮಧ್ಯದ ಅಂತರವನ್ನು ಕಡಿಮೆಗೊಳಿಸಿಕೊಳ್ಳುವ ಸಲುವಾಗಿ ಬಿಜೆಪಿ ನೇರ ಸಂಪರ್ಕದಲ್ಲಿರಲು ಚಿಂತಿಸಿದೆ. ಅದಕ್ಕಾಗಿ ಸಾಮಾಜಿಕ ಜಾಲತಾಣಗಳನ್ನು ನೆಚ್ಚಿಕೊಂಡಿದೆ. ಈ ಕಾರ್ಯದಲ್ಲಿ ಹೆಚ್ಚು ಬಳಕೆಯಾಗುತ್ತಿರುವ ಸಾಮಾಜಿಕ ಜಾಲತಾಣ ಎಂದರೆ ವಾಟ್ಸ್‌ಆಪ್‌ ಮೆಸೆಂಜರ್‌.

“ನಾವು ಬಿಜೆಪಿ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿರುವವರು ಮತ್ತು ಕಾರ್ಯಕರ್ತರನ್ನು ಒಂದೆಡೆ ತಂದು ಸಂವಹನವನ್ನು ಏರ್ಪಡಿಸಲು ಮುಂದಾಗಿದ್ದೇವೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಕೆಲಸ ನಡೆಯುತ್ತಿದೆ. ಈಗಾಗಲೇ ಇದಕ್ಕಾಗಿ 1,800 ವಾಟ್ಸ್‌ಆಪ್‌ ಗ್ರೂಪ್‌ಗಳು ತೆರೆಯಲ್ಪಟ್ಟಿವೆ. ಈ ಸಂಖ್ಯೆ ಇನ್ನೂ ಹೆಚ್ಚಲಿದೆ. ಸುಳ್ಳು ಸುದ್ದಿಗಳನ್ನು ತಡೆಗಟ್ಟಿ ನೇರ ಮಾಹಿತಿಗಳನ್ನು ನೀಡುವುದೂ ಕೂಡ ಈ ಗ್ರೂಪ್‌ಗಳ ಉದ್ದೇಶವಾಗಿದೆ,” ಎಂದು ಬಿಜೆಪಿ ದೆಹಲಿ ಘಟಕದ ಸಾಮಾಜಿಕ ಜಾಲತಾಣ ನಿರ್ವಹಣೆ ಗುಂಪಿನ ಜಂಟಿ ಕಾರ್ಯದರ್ಶಿ ಮತ್ತು ಮಾಧ್ಯಮ ವಿಭಾಗದ ಮುಖ್ಯಸ್ಥ ನೀಲಕಂಠ ಭಕ್ಷಿ ಸುದ್ದಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈ ಎಲ್ಲಾ ವಾಟ್ಸ್‌ಆಪ್‌ ಗ್ರೂಪ್‌ಗಳಲ್ಲೂ ಕೂಡ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ದೆಹಲಿ ಬಿಜೆಪಿ ರಾಜ್ಯಾಧ್ಯಕ್ಷ ಮನೋಜ್‌ ತಿವಾರಿ ಫೋನ್‌ ನಂಬರ್‌ಗಳನ್ನು ಸೇರಿಸಲಾಗಿದೆ.

ಕಳೆದ ತಿಂಗಳಿನಲ್ಲಿ ನಡೆದ ಸಭೆಯಲ್ಲಿ ಅಮಿತ್‌ ಶಾ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದನ್ನು, ಸಮಾಜದಲ್ಲಿ ತಪ್ಪು ಸಂದೇಶ ಬಿತ್ತುವುದನ್ನು ವಿರೋಧಿಸಿ ಎಚ್ಚರಿಕೆ ನೀಡಿದ್ದರು. ತಪ್ಪು ಸಂದೇಶಗಳನ್ನು ಪೋಸ್ಟ್‌ ಮಾಡದಂತೆ ಪಕ್ಷದ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ಎಚ್ಚರ ವಹಿಸುವಂತೆ ಸೂಚಿಸಿದ್ದರು. ಹೀಗೆ ತಪ್ಪು ಸಂದೇಶಗಳನ್ನು ಹಂಚುತ್ತಾ ಸಾಗುವುದು ಪಕ್ಷದ ವಿಶ್ವಾಸಾರ್ಹತೆಯನ್ನು ಕಡಿಮೆ ಮಾಡುತ್ತದೆ ಎಂದು ತಿಳಿಸಿದ್ದರು. ವಾಟ್ಸ್‌ಆಪ್‌ ಫೇಸ್‌ಬುಕ್‌ ಮಾತ್ರವಲ್ಲದೇ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲೂ ಕೂಡ ವದಂತಿಗಳನ್ನು ಹಬ್ಬಿಸದಂತೆ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದ್ದರು. ಹೀಗಾಗಿ ಸದ್ಯ ತೆರೆಯಲ್ಪಟ್ಟಿರುವ ವಾಟ್ಸ್‌ಆಪ್‌ ಗುಂಪುಗಳಲ್ಲಿ ಅಮಿತ್‌ ಶಾರನ್ನೂ ಕೂಡ ಸೇರಿಸಿರಬಹುದು ಎನ್ನಲಾಗಿದೆ.

ಈಗ ದೆಹಲಿ ಘಟಕದಿಂದ ತೆರೆಯಲ್ಪಟ್ಟಿರುವ ವಾಟ್ಸ್‌ಆಪ್‌ ಗುಂಪುಗಳಲ್ಲಿ ಕಚೇರಿಯಲ್ಲಿ ಕೆಲಸ ನಿರ್ವಹಿಸುವವರು ಮತ್ತು ಕಾರ್ಯಕರ್ತರ ನಡುವಿನ ಅಂತರ ಕಡಿಮೆ ಮಾಡುವ ಕೆಲಸವಷ್ಟೇ ಅಲ್ಲದೇ ದಿನನಿತ್ಯದ ಕೆಲಸಗಳ ಬಗ್ಗೆ ಮಾಹಿತಿ ಮತ್ತು ಕಾರ್ಯಕರ್ತರಿಗೆ ಅವರವರ ಕೆಲಸಗಳನ್ನು ಹಂಚಿಕೆ ಮಾಡಲು ಕೂಡ ಬಳಸಿಕೊಳ್ಳಲಾಗುವುದು ಎಂದು ದೆಹಲಿ ಬಿಜೆಪಿ ಸೋಷಿಯಲ್‌ ಮೀಡಿಯಾ ಮುಖ್ಯಸ್ಥ ನೀಲಕಂಠ ಭಕ್ಷಿ ತಿಳಿಸಿದ್ದಾರೆ.

ಇದರೆ ಜತೆಗೆ ಮಂದಿನ ತಿಂಗಳುಗಳಲ್ಲಿ ಜಿಲ್ಲಾ ಮತ್ತು ಮಂಡಲಗಳ ಮಟ್ಟದಲ್ಲಿ ‘ಸಾಮಾಜಿಕ ಜಾಲತಾಣ ಸಭೆ’ಗಳನ್ನು ನಡೆಸಲು ಪಕ್ಷ ನಿರ್ಧರಿಸಿದೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮಾಡಿರುವ ಸಾಧನೆಗಳು ಏನು ಎನ್ನುವುದರ ಮಾಹಿತಿಗಳನ್ನು ಜನರಿಗೆ ತಿಳಿಸುವುದು ಈ ‘ಸಾಮಾಜಿಕ ಜಾಲತಾಣ ಸಭೆ’ಗಳ ಮುಖ್ಯ ಉದ್ದೇಶವಾಗಿದೆ.

ಇಂದಿನ ಯುವಪೀಳಿಗೆಯ ಹೆಚ್ಚಿನ ಜನರು ಸುದ್ದಿಗಳಿಗಾಗಿ ಸಾಂಪ್ರದಾಯಿಕ ಸುದ್ದಿ ಮೂಲಗಳಾಗಿರುವ ವೃತ್ತ ಪತ್ರಿಕೆ, ಸುದ್ದಿ ವಾಹಿಗಳಿಗಿಂತ ಸಾಮಾಜಿಕ ಜಾಲತಾಣಗಳನ್ನು ಹೆಚ್ಚಿಗೆ ಅವಲಂಭಿಸಿದ್ದಾರೆ. ವಾಟ್ಸ್‌ಆಪ್‌ ಗುಂಪುಗಳು ಅಂತಹ ಯುವಜನರನ್ನು ತಲುಪಲು ಸಲಭ ದಾರಿಯಾಗಿವೆ ಎಂದು ನೀಲಕಂಠ ಭಕ್ಷಿ ಹೇಳಿದ್ದಾರೆ.

ಮುಂದಿನ ವರ್ಷ ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ಬಿಜೆಪಿ ಇದಾಗಲೇ ಪ್ರಚಾರ ಕಾರ್ಯ ಆರಂಭಿಸಿರುವುದು ಈ ವಾಟ್ಸ್‌ಆಪ್‌ ಗುಂಪುಗಳ ರಚನೆಯಲ್ಲೇ ತಿಳಿಯುತ್ತದೆ. ಸಾವಿರಾರು ಗ್ರೂಪ್‌ಗಳಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷರೂ ಕೂಡ ಸದಸ್ಯರಾಗಿರುವುದು ಸೋಜಿಗವನ್ನು ಹುಟ್ಟಿಸುತ್ತದೆ. ಇದರ ಜತಗೆಯೇ ಹಲವಾರು ಜನರಿಂದ ‘ಸುಳ್ಳಿನ ಫ್ಯಾಕ್ಟರಿ’ ಎಂಬ ಆರೋಪವನ್ನು ಹೊರಿಸಿಕೊಂಡ ಬಿಜೆಪಿ, ಈ ಆರೋಪದಿಂದ ಹೊರಬರುವ ಪ್ರಯತ್ನವನ್ನು ಈ ಮೂಲಕ ಮಾಡುತ್ತಿದೆಯೇ ಎಂಬ ಪ್ರಶ್ನೆಯೂ ಹುಟ್ಟುತ್ತದೆ.