ವಾಟ್ಸ್‌ಆಪ್‌ ಬಳಕೆದಾರರ ಗಮನಕ್ಕೆ: ವದಂತಿ ತಡೆಯಲು ಹೊಸ ಫೀಚರ್ ಇಂದು ಬಿಡುಗಡೆ
ಸುದ್ದಿ ಸಾರ

ವಾಟ್ಸ್‌ಆಪ್‌ ಬಳಕೆದಾರರ ಗಮನಕ್ಕೆ: ವದಂತಿ ತಡೆಯಲು ಹೊಸ ಫೀಚರ್ ಇಂದು ಬಿಡುಗಡೆ

ವದಂತಿಗಳ ಕಾರಣದಿಂದ ದೇಶಾದ್ಯಂತ ನಡೆಯುತ್ತಿರುವ ಅಮಾಯಕರ ಹತ್ಯೆಯನ್ನು ತಡೆಯಲು ವಾಟ್ಸ್ಆಪ್‌ ಹೊಸ ಫೀಚರ್‌ ತರಲು ಮುಂದಾಗಿದೆ. ಇನ್ನು ಮುಂದೆ ಒಬ್ಬ ವ್ಯಕ್ತಿ ಕೇವಲ 5 ಜನರಿಗಷ್ಟೇ ಒಂದು ಸಂದೇಶವನ್ನು ಫಾರ್ವರ್ಡ್ ಮಾಡಬಹುದು.

ತನ್ನ ಮೂಲಕ ಹರಿದಾಡುತ್ತಿರುವ ವಂದತಿಗಳನ್ನು ತಡೆಯುವ ಸಲುವಾಗಿ ವಾಟ್ಸ್‌ಆಪ್‌ ಸಂಸ್ಥೆ ಹೊಸ ಫೀಚರ್‌ಗಳನ್ನು ತರುವ ಮಾತುಗಳನ್ನು ಆಡಲಾರಂಭಿಸಿದೆ. ಈ ಹಿಂದೆ ಸುಳ್ಳು ಸುದ್ದಿಗಳನ್ನು ಕಂಡು ಹಿಡಿಯುವುದು ಹೇಗೆ ಎಂದು ಪ್ರಮುಖ ಪತ್ರಿಕೆಗಳಲ್ಲಿ ಒಂದು ಪುಟದ ಜಾಹಿರಾತು ನೀಡಿತ್ತು. ಸಂದೇಶಗಳ ಮೇಲೆ ‘ಫಾರ್ವರ್ಡೆಡ್‌’ ಎಂಬ ಲೇಬಲ್ ಹಾಕುವುದಾಗಿ ಹೇಳಿತ್ತು.

ಈಗ ಮತ್ತೊಂದು ಹೊಸ ಫೀಚರ್ ಅಳವಡಿಸಲು ಅದು ಮುಂದಾದ ಸುದ್ದಿ ಬಂದಿದೆ. ಒಂದು ಬಾರಿ ಕೇವಲ ಐವರಿಗೆ ಮಾತ್ರವೇ ಮೆಸೇಜ್ ಫಾರ್ವರ್ಡ್ ಮಾಡುವ ಅವಕಾಶ ನೀಡಲಿರುವ ವಾಟ್ಸ್‌ಆಪ್‌, ಬೇಕಾಬಿಟ್ಟಿ ಸಂದೇಶಗಳನ್ನು ಹರಿಯಬಿಡಲು ಇದ್ದ ಅವಕಾಶವನ್ನು ಕಿತ್ತುಕೊಳ್ಳಲಿದೆ.

ಕೆಲವು ತಿಂಗಳುಗಳಿಂದ ಹರಿದಾಡುತ್ತಿರುವ ವದಂತಿಗಳು ದೇಶದ ನಾನಾ ರಾಜ್ಯಗಳಲ್ಲಿ ಅಮಾಯಕರ ಮೇಲೆ ಹಲ್ಲೆ ನಡೆಯಲು ಕಾರಣವಾಗಿದ್ದವು. ಹತ್ತಾರು ಜನ ವಂದತಿಗಳಿಂದಾಗಿ ಪ್ರಾಣವನ್ನೂ ಕೂಡ ಕಳೆದುಕೊಳ್ಳಬೇಕಾಯಿತು. ಈ ಬೆನ್ನಲ್ಲೇ ಕೇಂದ್ರ ಸರಕಾರ ವದಂತಿಗಳನ್ನು ತಡೆಯುವ ಸಲುವಾಗಿ ಕ್ರಮ ಕೈಗೊಳ್ಳುವಂತೆ ವಾಟ್ಸ್‌ಆಪ್‌ಗೆ ಸೂಚಿಸಿತ್ತು. ಇಲ್ಲವಾದರೆ ನಿಮ್ಮ ಮೇಲೆಯೇ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿತ್ತು. ಈ ಹಿನ್ನಲೆಯಲ್ಲಿ ವಾಟ್ಸ್‌ಆಪ್‌ ವದಂತಿಗಳನ್ನು ತಡೆಯಲು ಮುಂದಾಗಿದೆ.

ಒಂದು ಸಂದೇಶವನ್ನು ಒಬ್ಬ ವ್ಯಕ್ತಿ 5 ಜನಕ್ಕಷ್ಟೇ ಫಾರ್ವರ್ಡ್‌ ಮಾಡಲು ಅವಕಾಶ ನೀಡಲಾಗುತ್ತಿದೆ. ಯಾವುದೇ ಫೋಟೋ, ವಿಡಿಯೋ, ಸಂದೇಶಗಳನ್ನು ಈಗ ಎಷ್ಟು ಜನರಿಗೆ, ಎಷ್ಟು ಗುಂಪುಗಳಿಗೆ ಬೇಕಾದರೂ ಒಂದೇಟಿಗೆ ಕಳುಹಿಸಬಹುದಾಗುತ್ತು. ಆದರೆ ಇನ್ನು ಮುಂದೆ ಕಡಿವಾಣ ರಹಿತ ಇಂತಹ ಫಾರ್ವರ್ಡ್‌ ಅವಕಾಶಕ್ಕೆ ಮೊಟಕುಗೊಳ್ಳಲಿದೆ. ಅಂದಹಾಗೆ, ವಾಟ್ಸ್‌ಆಪ್‌ ಈ ಫೀಚರ್‌ಅನ್ನು ಪರಿಚಯಿಸುತ್ತಿರುವುದು ಭಾರತದಲ್ಲಿ ಮಾತ್ರ.

ಭಾರತ ವಾಟ್ಸ್‌ಆಪ್‌ನ ಅತಿ ದೊಡ್ಡ ಮಾರುಕಟ್ಟೆಯಾಗಿದೆ. ಭಾರತದಲ್ಲಿ 25 ಕೋಟಿ ವಾಟ್ಸ್‌ಆಪ್‌ ಬಳಕೆದಾರರಿದ್ದಾರೆ. ಅತಿಹೆಚ್ಚು ವಾಟ್ಸ್‌ಆಪ್‌ ಸಂದೇಶಗಳು ಫಾರ್ವರ್ಡ್‌ ಆಗುತ್ತಿರುವುದು ಕೂಡ ಭಾರತದಲ್ಲಿಯೇ.

ಈ ಕುರಿತು ದೇಶದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯಕ್ಕೆ ಪತ್ರ ಬರೆದಿರುವ ಫೇಸ್‌ಬುಕ್ ಒಡೆತನದ ವಾಟ್ಸ್‌ಆಪ್‌, ವಂದತಿಗಳಿಂದಾಗಿ ಜನ ಸಮೂಹ ನಡೆಸುತ್ತಿರುವ ಹತ್ಯೆಗಳ ವರದಿಯನ್ನು ನೋಡಿ ಗಾಬರಿಯಾಗುತ್ತಿದೆ ಎಂದಿದೆ. ಜತೆಗೆ ವದಂತಿಗಳನ್ನು ತಡೆಯಲು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿರುವುದಾಗಿಯೂ ತಿಳಿಸಿದೆ.

ತನ್ನ ಬ್ಲಾಗ್‌ಸ್ಪಾಟ್‌ನಲ್ಲಿ ಫಾರ್ವರ್ಡಿಂಗ್‌ ಮೆಸೇಜ್‌ಗಳ ಮೇಲೆ ನಿಯಂತ್ರಣ ಹೇರುವುದರ ಕುರಿತು ಮಾಹಿತಿ ನೀಡಿರುವ ವಾಟ್ಸ್ಆಪ್, “ಶುಕ್ರವಾರದಿಂದ ನಾವು ಮೆಸೇಜ್‌ ಫಾರ್ವರ್ಡ್‌ ಮೇಲೆ ನಿಯಂತ್ರಣ ಹೇರಲು ಮುಂದಾಗಿದ್ದು, ದೇಶಾದ್ಯಂತ ವಾಟ್ಸ್ಆಪ್‌ ಬಳಕೆದಾರರೆರಿಗೂ ಕೂಡ ಈ ಹೊಸ ಫೀಚರ್‌ ಅನ್ವಯಿಸುತ್ತದೆ. ವಿಶ್ವದ ಇತರೆ ಎಲ್ಲಾ ದೇಶಗಳಿಂಗಿಲೂ ಕೂಡ ಭಾರತೀಯರು ಅತಿ ಹೆಚ್ಚಿನ ವಿಡಿಯೋ, ಫೋಟೋ, ಸಂದೇಶಗಳನ್ನು ಫಾರ್ವರ್ಡ್‌ ಮಾಡುತ್ತಾರೆ. ಅದರಿಂದಾಗಿ ಕೇವಲ 5 ಜನರಿಗಷ್ಟೇ ಫಾರ್ವರ್ಡ್‌ ಮಾಡಲು ಸಾಧ್ಯವಾಗುವಂತ ಫೀಚರ್‌ ಕುರಿತು ಪ್ರಯೋಗ ನಡೆಸುತ್ತಿದ್ದೇವೆ. ಒಂದು ಮೇಸೇಜ್‌ 5 ಜನರಿಗೆ ಶೇರ್‌ ಆದ ನಂತರ ಮತ್ತೆ ಫಾರ್ವರ್ಡ್‌ ಮಾಡಲು ಸಾಧ್ಯವಾಗುವುದಿಲ್ಲ,” ಎಂದಿದೆ.

ಈ ಫೀಚರ್‌ನ ಕಾರಣದಿಂದ ವಾಟ್ಸ್‌ಆಪ್‌ ಬಳಕೆದಾರರ ಖಾಸಗಿತನಕ್ಕೆ ಯಾವುದೇ ದಕ್ಕೆ ಉಂಟಾಗುವುದಿಲ್ಲ. ಜತೆಗೆ ಸುಳ್ಳು ಸುದ್ದಿಗಳ ಅಪಾರ ಪ್ರಮಾಣದಲ್ಲಿ ಹಂಚಿಕೆಯಾಗುವುದೂ ಕೂಡ ನಿಲ್ಲುತ್ತದೆ. ಆದರೆ ಬಳಕೆದಾರರು ಟೆಕ್ಟ್‌ ಸಂದೇಶವನ್ನು ಕಾಪಿ ಮಾಡಿ ಇತರರಿಗೆ ಕಳುಹಿಸಬಹುದು. ಆಗ ‘ಫಾರ್ವರ್ಡೆಡ್‌’ ಎಂಬ ಲೇಬಲ್‌ ಕಾಣಿಸುವುದಿಲ್ಲ ಎಂದು ವಾಟ್ಸ್‌ಆಪ್‌ ಸಂಸ್ಥೆ ತಿಳಿಸಿದೆ.

ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸುಧಾರಿತ ಫೀಚರ್‌ಗಳನ್ನು ತರುವ ಯೋಚನೆಯನ್ನೂ ಕೂಡ ವಾಟ್ಸ್‌ಆಪ್‌ ಹೊಂದಿದೆ. ವಾಟ್ಸ್‌ಆಪ್‌ನಲ್ಲಿ ಶೇರ್‌ ಆಗುವ ಲಿಂಕ್‌ಗಳಲ್ಲಿ ಅನುಮಾನಾಸ್ಪದ ಎನಿಸುವ ಲಿಂಕ್‌ಗಳನ್ನು ಪತ್ತೆ ಹಚ್ಚಿ, ಬಳಕೆದಾರರು ಈ ಲಿಂಕ್‌ಗಳನ್ನು ಕ್ಲಿಕ್ಕಿಸುವ ಮುನ್ನ ಎಚ್ಚರಿಕೆ ನೀಡುವ ಪ್ರಯತ್ನವನ್ನೂ ಕೂಡ ವಾಟ್ಸ್‌ಆಪ್‌ ನಡೆಸುತ್ತಿದೆ.

ವಾಟ್ಸ್‌ಆಪ್‌ ಈಗಾಗಲೇ ಹೆಚ್ಚು ಬಾರಿ ಶೇರ್‌ ಆಗುವ ಮೆಸೇಜ್‌ಗಳ ಮೇಲ್‌ ‘ಫಾರ್ವರ್ಡೆಡ್‌’ ಎಂದು ನಮೂದಿಸುವ ಕೆಲಸವನ್ನು ಆರಂಭಿಸಿದೆ. ಬಳಕೆದಾರರು ಪಡೆದಿರುವ ಸಂದೇಶ ಕಳುಹಿಸದ ವ್ಯಕ್ತಿಯೇ ರಚಿಸುವಂತದ್ದಲ್ಲ ಎಂದು ಇದರಿಂದ ತಿಳಿಯುತ್ತದೆ. ಸಂದೇಶ ಪಡೆದವರು ಇದರಿಂದ ಸ್ವಲ್ಪ ಜಾಗೃತರಾಗುತ್ತಾರೆ ಎಂದು ವಾಟ್ಸ್ಆಪ್‌ ತಿಳಿಸಿದೆ. ಆದರೆ ಎಷ್ಟು ಜನ ಈ ಬಗ್ಗೆ ಗಮನ ಹರಿಸುತ್ತಿದ್ದಾರೆ ಎನ್ನುವುದೇ ಸದ್ಯದ ಪ್ರಶ್ನೆ. ಇಷ್ಟೆಲ್ಲಾ ಹೊಸ ಸಾಧ್ಯತೆಗಳನ್ನು ಆಪ್‌ ಅಪ್‌ಡೇಟ್ ಆದರೆ ಮಾತ್ರವೇ ಲಭ್ಯವಿದೆ. ಬಳಕೆದಾರರಿಗೆ ಸರದಿಯಲ್ಲಿ ಅಪ್‌ಡೇಟ್ ಮಾಡಿಸಲು ವಾಟ್ಸ್‌ಆಪ್‌ ಮುಂದಾಗಿದೆ.