samachara
www.samachara.com
ಸಾಗಣೆದಾರರ ಸ್ಟ್ರೈಕ್‌: ಬೇಡಿಕೆ ಪೂರೈಕೆಗಾಗಿ ರಾಷ್ಟ್ರವ್ಯಾಪಿ ಮುಷ್ಕರದ ಬಿಸಿ
ಸುದ್ದಿ ಸಾರ

ಸಾಗಣೆದಾರರ ಸ್ಟ್ರೈಕ್‌: ಬೇಡಿಕೆ ಪೂರೈಕೆಗಾಗಿ ರಾಷ್ಟ್ರವ್ಯಾಪಿ ಮುಷ್ಕರದ ಬಿಸಿ

ಸಾಗಣೆದಾರರ ರಾಷ್ಟ್ರವ್ಯಾಪಿ ಸಂಘಟನೆ ಆಲ್‌ ಇಂಡಿಯಾ ಮೋಟರ್‌ ಟ್ರಾನ್ಸ್‌ಪೋರ್ಟ್‌ ಕಾಂಗ್ರೆಸ್‌ 93 ಲಕ್ಷದಷ್ಟು ಸದಸ್ಯರ ಬಲವನ್ನು ಹೊಂದಿದೆ. ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲು ಸಂಘಟನೆ ತೀರ್ಮಾನಿಸಿದೆ.

ಭಾರತದಲ್ಲಿನ ಲಕ್ಷಾಂತರ ಸಾಗಾಣಿಕಾದಾರರು ಶುಕ್ರವಾರ ದೇಶಾದ್ಯಂತ ಅನಿರ್ಧಿಷ್ಟಾವಧಿ ಮುಷ್ಕರವನ್ನು ಕೈಗೊಂಡಿದ್ದಾರೆ. ಡೀಸೆಲ್‌ ಬೆಲೆ ಮತ್ತು ಟೋಲ್‌ಗಳಲ್ಲಿನ ಸುಂಕದ ಮೊತ್ತವನ್ನು ಕಡಿಮೆಗೊಳಿಸುವುದರ ಜತಗೆ ಇನ್ನೂ ಹಲವು ಬೇಡಿಕೆಗಳನ್ನು ಪೂರೈಸಲು ಒತ್ತಾಯಿಸಿ ಈ ಮುಷ್ಕರವನ್ನು ನಡೆಸುತ್ತಿದ್ದಾರೆ.

ಟ್ರಕ್‌ ಚಾಲಕರ, ಸಾಗಣೆದಾರರ ರಾಷ್ಟ್ರವ್ಯಾಪಿ ಸಂಘಟನೆ ಆಲ್‌ ಇಂಡಿಯಾ ಮೋಟರ್‌ ಟ್ರಾನ್ಸ್‌ಪೋರ್ಟ್‌ ಕಾಂಗ್ರೆಸ್‌ ಸುಮಾರು 93 ಲಕ್ಷದಷ್ಟು ಸದಸ್ಯರ ಬಲವನ್ನು ಹೊಂದಿದೆ. ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ಸಲುವಾಗಿ ರಾಷ್ಟ್ರವ್ಯಾಪಿ ಮುಷ್ಕರ ನಡೆಸಲು ಸಂಘಟನೆ ತೀರ್ಮಾನಿಸಿದೆ.

ಆಲ್‌ ಇಂಡಿಯಾ ಮೋಟರ್‌ ಟ್ರಾನ್ಸ್‌ಪೋರ್ಟ್ ಕಾಂಗ್ರೆಸ್‌ ಜುಲೈ 17ರಂದೇ ರಾಷ್ಟ್ರವ್ಯಾಪಿ ಮುಷ್ಕರ ನಡೆಸುವುದಾಗಿ ತಿಳಿಸಿತ್ತು. ಸುದ್ದಿ ಸಂಸ್ಥೆ ‘ಪಿಟಿಐ’ ಜತೆ ಮಾತನಾಡಿದ ಸಂಘಟನೆಯ ಕೇಂದ್ರ ಸಮಿತಿಯ ಅಧ್ಯಕ್ಷ ಬಾಲ್‌ ಮಲ್ಕಿಟ್‌ ಸಿಂಗ್‌, “ನಿನ್ನೆಯಷ್ಟೇ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಜತೆ ಸಭೆ ನಡೆದಿದೆ. ಆದರೆ ಯಾವುದೇ ಉಪಯೋಗವಾಗಿಲ್ಲ. ಹಣಕಾಸು ಮಂತ್ರಿ ಪಿಯೂಷ್‌ ಗೋಯಲ್‌ ಜತೆಗೂ ಕೂಡ ಮಾತುಕತೆ ನಡೆಸಲಾಗಿದೆ. ರಾತ್ರಿ ವೇಳೆಗಾದರೂ ಏನಾದರೂ ಪರಿಹಾರ ದೊರೆಯಬಹುದು ಎಂಬ ನಿರೀಕ್ಷೆಯಿತ್ತು. ಆದರೆ ಏನೂ ದೊರೆಯದ ಕಾರಣ ಮುಷ್ಕರ ಅರಂಭಿಸಲಾಗಿದೆ” ಎಂದಿದ್ದಾರೆ.

ಬಾಲ್ ಮಲ್ಕಿಟ್ ಸಿಂಗ್‌ ಹೇಳಿರುವಂತೆ ಶುಕ್ರವಾರ ಬೆಳಗ್ಗೆ 6 ಗಂಟೆಯಿಂದಲೇ ಮುಷ್ಕರ ಅರಂಭಗೊಂಡಿದೆ. ಈ ಮುಷ್ಕರದಿಂದಾಗಿ ರಾಷ್ಟ್ರದಲ್ಲಿರುವ ಸಾಗಣೆದಾರರಿಗೂ ಕೂಡ ಪ್ರತಿ ದಿನ 4,000 ಕೋಟಿ ರೂಪಾಯಿಗಳು ನಷ್ಟವಾಗುತ್ತದೆ.

“ಡಿಸೇಲ್‌ ಅನ್ನು ಜಿಎಸ್‌ಟಿ ಅಡಿಗೆ ತಂದು ರಾಜ್ಯ ಮತ್ತು ಕೇಂದ್ರ ಸರಕಾರಗಳು ಎರಡಕ್ಕೂ ಕೂಡ ಕಟ್ಟುತ್ತಿರುವ ತೆರಿಗೆಯ ಹೊರೆಯನ್ನು ಕಡಿಮೆಯಾಗಿಸಬೇಕು ಎನ್ನುವುದು ಈ ಮುಷ್ಕರದ ಪ್ರಮುಖ ಬೇಡಿಕೆ. ಜತಗೆ ಹೆದ್ದಾರಿಗಳಲ್ಲಿನ ಟೋಲ್‌ಗಳಲ್ಲಿ ಪಾರದರ್ಶಕತೆಯನ್ನು ತರಬೇಕಿದೆ. ಹೆದ್ದಾರಿಗಳಲ್ಲಿನ ಟೋಲ್‌ಗಳ ಬಳಿ ಕಾಯುವ ಸಮಯ ಮತ್ತು ವ್ಯರ್ಥವಾಗುವ ತೈಲದ ಒಟ್ಟು ಮೊತ್ತ ವರ್ಷಕ್ಕೆ 1.5 ಲಕ್ಷ ಕೋಟಿಗಳನ್ನು ತಲುಪುತ್ತದೆ,” ಎಂದು ಹೇಳುತ್ತಾರೆ ಬಾಲ್ ಮಲ್ಕಿಟ್‌ ಸಿಂಗ್‌.

ಈ ಬೇಡಿಕೆಗಳ ಜತೆಗೆ ನೇರ ತೆರಿಗೆಗಳಿಂದ ವಿನಾಯಿತಿ, ರಾಜ್ಯಗಳಲ್ಲಿ ಸಂಚರಿಸುವ ಬಸ್ಸು ಮತ್ತು ಟ್ರಕ್‌ಗಳಿಗೆ ರಾಷ್ಟ್ರವ್ಯಾಪಿ ಸಂಚರಿಸಲು ಮಾನ್ಯತೆ ನೀಡುವಂತೆ ಪ್ರತಿಭಟನಾಕಾರರು ಒತ್ತಾಯಿಸುತ್ತಿದ್ದಾರೆ.

“ಸಾಗಣೆದಾರರ ಮುಷ್ಕರದಿಂದ ಆರ್ಥಿಕ ಹಿನ್ನಡೆಯುಂಟಾಗುತ್ತದೆ. ಆದ್ದರಿಂದ ಮುಷ್ಕರವನ್ನು ಹಿಂತೆಗೆದುಕೊಳ್ಳುವಂತೆ ಮನವೊಲಿಸಲು ಕೊನೆ ಹಂತದ ಪ್ರಯತ್ನ ಮಾಡುತ್ತಿದ್ದೇವೆ,” ಎಂದು ಸರಕಾರಿ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ‘ಎನ್‌ಡಿ ಟಿವಿ’ ವರದಿ ಮಾಡಿದೆ.

ಮುಷ್ಕರದ ಕುರಿತು ‘ಎನ್‌ಡಿ ಟಿವಿ’ ಸುದ್ದಿ ಸಂಸ್ಥೆಯ ಜತೆ ಮಾತನಾಡಿದ ಕೇಂದ್ರ ಸಾರಿಗೆ ಸಚಿವಾಲಯದ ಅಧಿಕಾರಿಯೊಬ್ಬರು, “ಸಭೆಯ ವೇಳೆಯಲ್ಲಿಯೇ ಸಾಗಣೆದಾರರಿಗೆ ನಿಮ್ಮ ಬೇಡಿಕೆಗಳನ್ನು ಈಗಲೇ ಈಡೇರಿಸಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಲಾಗಿದೆ. ಸರಕಾರ ಸೂಕ್ಷ್ಮವಾಗಿ ನಿಮ್ಮ ಸಮಸ್ಯೆಗಳತ್ತ ಗಮನ ಹರಿಸುತ್ತದೆ ಎಂದು ಹೇಳಲಾಗಿದೆ,” ಎಂದು ಮಾಹಿತಿ ನೀಡಿದ್ದಾರೆ.

ಆದರೆ ಕಾಯಲು ಸಾಧ್ಯವಿಲ್ಲ ಎಂದಿರುವ ಆಲ್‌ ಇಂಡಿಯಾ ಮೋಟರ್‌ ಟ್ರಾನ್ಸ್‌ಪೋರ್ಟ್ ಕಾಂಗ್ರೆಸ್‌ ಅನಿರ್ಧಿಷ್ಠಾವಧಿ ಹೋರಾಟವನ್ನು ಪ್ರಾರಂಭಿಸಿದೆ. 1936ರಲ್ಲಿ ಸ್ಥಾಪನೆಗೊಂಡ ಈ ಸಂಘಟನೆ ದೇಶದ ಅತಿದೊಡ್ಡ ಸಾಗಣೆದಾರರ ಸಂಘಟನೆ ಎಂದು ಗುರುತಿಸಿಕೊಂಡಿದೆ. 93 ಲಕ್ಷ ಸಾಗಣೆದಾರರ ಜತೆಗೆ 50 ಲಕ್ಷ ಬಸ್‌ಗಳು, ಪ್ರವಾಸಿ ಟ್ಯಾಕ್ಸಿ ಮತ್ತು ಕ್ಯಾಬ್‌ಗಳನ್ನು ಇದು ಪ್ರತಿನಿಧಿಸುತ್ತದೆ.

ಆಲ್‌ ಇಂಡಿಯಾ ಮೋಟರ್‌ ಟ್ರಾನ್ಸ್‌ಪೋರ್ಟ್ ಕಾಂಗ್ರೆಸ್‌ನ ಹೋರಾಟಕ್ಕೆ ಮಹಾರಾಷ್ಟ್ರದ ಸ್ಕೂಲ್‌ ಬಸ್‌ ಮತ್ತು ಕಂಪನಿ ಬಸ್‌ಗಳ ಸಂಘಟನೆಯೂ ಕೂಡ ಬೆಂಬಲ ಸೂಚಿಸಿದ್ದು, ಶುಕ್ರವಾರದ ದಿನ ಸಂಘಟನೆ ಜತೆ ಗುರುತಿಸಿಕೊಂಡಿರುವ ಬಸ್‌ಗಳು ಬೀದಿಗಿಳಿದಿಲ್ಲ. ಈ ಸಂಘಟನೆಯ ಸದಸ್ಯರ ಸುಮಾರು 8,000 ಬಸ್‌ಗಳು ಮುಂಬೈ ನಗರದ ಸುತ್ತ ಸಂಚರಿಸುತ್ತವೆ. ಸುಮಾರು 40,000ದಷ್ಟು ಬಸ್‌ಗಳು ಮಹಾರಾಷ್ಟ್ರದಾದ್ಯಂತ ಸಂಚಾರ ವ್ಯವಸ್ಥೆಯನ್ನು ಕಲ್ಪಿಸಿವೆ.