ಜು. 23 ಮತ್ತೆ ಪ್ರಧಾನಿ ವಿದೇಶ ಪ್ರವಾಸ: ಈವರೆಗೆ ಖರ್ಚಾಗಿದ್ದು ಬರೋಬ್ಬರಿ 1,484 ಕೋಟಿ! 
ಸುದ್ದಿ ಸಾರ

ಜು. 23 ಮತ್ತೆ ಪ್ರಧಾನಿ ವಿದೇಶ ಪ್ರವಾಸ: ಈವರೆಗೆ ಖರ್ಚಾಗಿದ್ದು ಬರೋಬ್ಬರಿ 1,484 ಕೋಟಿ! 

ಪ್ರಧಾನಿ ಮೋದಿ ಅಧಿಕಾರಕ್ಕೆ ಏರಿದಾಗಿನಿಂದ ಒಟ್ಟು 42 ವಿದೇಶ ಪ್ರವಾಸ ನಡೆಸಿದ್ದು, 84 ದೇಶಗಳನ್ನು ಸುತ್ತಿದ್ದಾರೆ. ಈ ಭೇಟಿಗಾಗಿ ಖರ್ಚಾಗಿರುವ ಒಟ್ಟು ಹಣ 1,484 ಕೋಟಿ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ವಿ.ಕೆ. ಸಿಂಗ್‌ ತಿಳಿಸಿದ್ದಾರೆ. 

ಪ್ರಧಾನ ಮಂತ್ರಿ ನರೇಂದ್ರ ಮೋದಿ 2014ರ ಮೇ 26ರಂದು ದೇಶದ ಪ್ರಧಾನಿಯಾಗಿ ಪದಗ್ರಹಣ ಮಾಡಿದಂದಿನಿಂದ ಇಂದಿನಿವರೆಗೂ 42 ವಿದೇಶ ಪ್ರವಾಸಗಳನ್ನು ಕೈಗೊಂಡಿದ್ದು, ಒಟ್ಟು 84 ದೇಶಗಳಿಗೆ ಭೇಟಿ ನೀಡಿದ್ದಾರೆ. ಈ ವಿದೇಶ ಪ್ರವಾಸಗಳಲ್ಲಿನ ವಿಮಾನದ ಖರ್ಚು, ಒದಗಿಸಿದ ಸೌಲಭ್ಯಗಳ ಒಟ್ಟು ಖರ್ಚು ಬರೋಬ್ಬರಿ 1,484 ಕೋಟಿ.

ಪ್ರಧಾನಿ ಮೋದಿ ವಿದೇಶ ಪ್ರವಾಸಗಳ ಖರ್ಚು ವೆಚ್ಚಗಳ ಲೆಕ್ಕವನ್ನು ವಿದೇಶಾಂಗ ವ್ಯವಹಾರಗಳ ಸಚಿವ ಮತ್ತು ನಿವೃತ್ತ ಜನರಲ್‌ ವಿ.ಕೆ. ಸಿಂಗ್‌ ರಾಜ್ಯ ಸಭೆಯ ಮುಂದಿಟ್ಟಿದ್ದಾರೆ. ಸರಕಾರವೇ ನೀಡಿರುವ ಈ ಲೆಕ್ಕದ ಪ್ರಕಾರ ಪ್ರಧಾನಿಗಳ ವಿಮಾನದ ನಿರ್ವಹಣೆಗಾಗಿ ಒಟ್ಟು 1,088.42 ಕೋಟಿ ರೂಪಾಯಿಗಳು ಖರ್ಚಾಗಿವೆ. ಚಾರ್ಟರ್ಡ್ ವಿಮಾನಕ್ಕಾಗಿ (ಸರಕುಗಳನ್ನು ಹೊಯ್ಯುವ ವಿಮಾನ) 387.26 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ಉಳಿದ 9.12 ಕೋಟಿ ರೂಪಾಯಿಗಳು ನೇರ ಸಂಪರ್ಕ ವ್ಯವಸ್ಥೆಗಾಗಿ ಖರ್ಚಾಗಿದೆ.

ಈ ಲೆಕ್ಕದ ಬಾಬ್ತು 2017-18 ಮತ್ತು 2018-19ನೇ ಸಾಲಿನ ನೇರ ಸಂಪರ್ಕ ವೆಚ್ಚವನ್ನು ಒಳಗೊಂಡಿಲ್ಲ. 2018-19ರ ಚಾರ್ಟರ್ಡ್ ವಿಮಾನದ ಖರ್ಚುಗಳನ್ನೂ ಕೂಡ ಈ ಲೆಕ್ಕದಲ್ಲಿ ಸೇರಿಸಿಲ್ಲ.

ಮೋದಿ ಪ್ರಧಾನಿಯಾದ ನಂತರ 2014ರ ಜೂನ್‌ ತಿಂಗಳಿನಲ್ಲಿ ವಿದೇಶ ಪ್ರವಾಸ ಆರಂಭಿಸಿದ್ದರು. ಭೂತಾನ್‌ನಿಂದ ಅವರ ಪ್ರಪಂಚ ಪರ್ಯಟನೆ ಆರಂಭಗೊಂಡಿತ್ತು. ಮೊದಲನೇ ವರ್ಷದಲ್ಲೇ(2014-15) ಮೋದಿ 13 ದೇಶಗಳನ್ನು ಕಣ್ತುಂಬಿಕೊಂಡಿದ್ದರು. 2015-16ರ ಅವಧಿಯಲ್ಲಿ ಒಟ್ಟು 24 ದೇಶಗಳಿಗೆ ಭೇಟಿ ನೀಡಿದ್ದರು. 2016-17ರಲ್ಲಿ 18 ದೇಶಗಳನ್ನು ಸುತ್ತಿದ್ದು, 2017-18ರ ಅವಧಿಯಲ್ಲಿ ಒಟ್ಟು 19 ದೇಶಗಳನ್ನು ನೋಡಿಕೊಂಡು ಬಂದಿದ್ದಾರೆ. 2018 ಅರ್ಧ ಮುಗಿಯುವ ವೇಳೆಗೆ 10 ದೇಶಗಳ ಮಣ್ಣಿನ ಮೇಲೆ ನಡೆದಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮೋದಿಯವರ ಪಾದ ಸೋಕಿಸಿಕೊಂಡ ಕೊನೆಯ ದೇಶ ಚೀನಾ.

ಈಗ ಮತ್ತೆ ಜುಲೈ 23ರಿಂದ ಆಫ್ರಿಕಾ ಖಂಡದ 3 ದೇಶಗಳಿಗೆ ಪ್ರವಾಸ ಹೊರಟಿದ್ದಾರೆ.

ಸಾಗರದಾಚೆಯ ಸ್ಥಳಗಳಿಗೆ ಮೋದಿಯ ಸರಂಜಾಮುಗಳನ್ನು ಹೊತ್ತು ಸಾಗಿದ ಚಾರ್ಟರ್ಡ್‌ ವಿಮಾನಗಳು 2014-15ರಲ್ಲಿ 93.76 ಕೋಟಿ ಖರ್ಚು ವೆಚ್ಚಕ್ಕೆ ಕಾರಣವಾಗಿದ್ದವು. 2015-16ರಲ್ಲಿ ಈ ಮೊತ್ತ 117 ಕೋಟಿಗೆ ಏರಿಕೆಯಾಗಿತ್ತು. 2017-18ರಲ್ಲಿ ಈ ವೆಚ್ಚದ ಒಟ್ಟು ಮೊತ್ತ 100 ಕೋಟಿಗೆ 68 ಲಕ್ಷವಷ್ಟೇ ಕಡಿಮೆ(99.32 ಕೋಟಿ).

“ಈ ಮುಂಚೆ ಕೇಂದ್ರ ಸರಕಾರದ ಪ್ರಮುಖರ ಮಟ್ಟದಲ್ಲಿ ಯಾರೂ ಕೂಡ ಇಷ್ಟು ದೇಶಗಳಿಗೆ ರಾಜತಾಂತ್ರಿಕ ಭೇಟಿಯನ್ನು ನೀಡಿರಲಿಲ್ಲ,” ಎಂದು ವಿ.ಕೆ.ಸಿಂಗ್‌ ಹೇಳಿದ್ದಾರೆ. ಈ ಭೇಟಿಗಳು ವಿದೇಶಗಳೊಟ್ಟಿಗಿನ ಭಾರತದ ಸಾಂಗತ್ಯವನ್ನು ಹೆಚ್ಚಿಸಿವೆ ಎನ್ನುವುದು ಅವರ ಅಭಿಪ್ರಾಯ.