ಇಳೀ ವಯಸ್ಸಿನಲ್ಲಿ ಪದವಿ ಪರೀಕ್ಷೆ ಬರೆದ ಬಿಜೆಪಿ ಶಾಸಕ
ಸುದ್ದಿ ಸಾರ

ಇಳೀ ವಯಸ್ಸಿನಲ್ಲಿ ಪದವಿ ಪರೀಕ್ಷೆ ಬರೆದ ಬಿಜೆಪಿ ಶಾಸಕ

ಶಿಕ್ಷಣದ ಅಗತ್ಯವನ್ನು ಮನಗಂಡ ರಾಜಸ್ಥಾನದ ಉದಯ್‌ಪುರ ಕ್ಷೇತ್ರದ ಶಾಸಕ ಪೂಲ್‌ ಸಿಂಗ್‌ ಮೀನಾ, ತಮ್ಮ 55ನೇ ವಯಸ್ಸಿನಲ್ಲಿ ಬಿಎ ಮೊದಲನೇ ವರ್ಷದ ಪರೀಕ್ಷೆ ಬರೆಯುತ್ತಿದ್ದಾರೆ.

ಉನ್ನತ ಶಿಕ್ಷಣ ಪಡೆಯದೇ ಶಾಲಾ ಕಾಲೇಜುಗಳಲ್ಲಿ ಶಿಕ್ಷಣದ ಬಗ್ಗೆ ಭಾಷಣ ಮಾಡುವ ರಾಜಕಾರಣಿಗಳಿಗೆ ರಾಜಸ್ಥಾನ ಶಾಸಕರೋರ್ವರು ಮಾದರಿಯಾಗಿದ್ದಾರೆ. 55ನೇ ವಯಸ್ಸಿನಲ್ಲಿ ಬ್ಯಾಚುಲರ್‌ ಆಫ್‌ ಆರ್ಟ್ಸ್‌ ವಿಭಾಗದಲ್ಲಿ ಮೊದಲನೇ ವರ್ಷದ ಪರೀಕ್ಷೆ ಬರೆಯುತ್ತಿದ್ದಾರೆ.

ರಾಜಸ್ತಾನದ ಉದಯ್‌ಪುರ್‌ ವಿಧಾನಸಭಾ ಕ್ಷೇತ್ರದ ಶಾಸಕ ಮತ್ತು ಬಿಜೆಪಿ ನಾಯಕ ಪೂಲ್‌ ಸಿಂಗ್‌ ಮೀನಾರವರಿಗೆ ಜುಲೈ 18ರಿಂದ ಬಿಎ ಪರೀಕ್ಷೆಗಳು ಶುರುವಾಗಿವೆ. ಬಿಡುವಿಲ್ಲದ ಕೆಲಸದ ಮಧ್ಯೆಯೂ ಪಾಠಗಳನ್ನು ಕೇಳಿ, ಓದಿಕೊಂಡಿರುವ ಪೂಲ್‌ ಸಿಂಗ್‌ ಮೀನಾ, ಉದಯ್‌ಪುರದ ಕಾಲೇಜೊಂದರಲ್ಲಿ 18-19 ವರ್ಷದ ವಿದ್ಯಾರ್ಥಿಗಳ ಜತೆ ಕುಳಿತು ಪರೀಕ್ಷೆ ಬರೆಯುತ್ತಿದ್ದಾರೆ.

ರಾಜಸ್ಥಾನದ ಬೈಲ್ವಾರ ಪ್ರದೇಶದ ಗಡೋಲಿಯಲ್ಲಿ 1959ರ ಆಗಸ್ಟ್ 15ರಂದು ಜನಿಸಿದ ಪೂಲ್‌ ಸಿಂಗ್‌ ಮೀನಾ 1972ರಲ್ಲಿ 7ನೇ ತರಗತಿಗೇ ಶಾಲೆ ಬಿಟ್ಟಿದ್ದರು. ಕೇಂದ್ರ ಮೀಸಲು ಪೊಲೀಸ್‌ ಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪೂಲ್‌ ಸಿಂಗ್‌ ಮೀನಾರ ತಂದೆ ಅಕಾಲಿಕ ಮೃತ್ಯುವಿಗೆ ಒಳಗಾದ ನಂತರ ಪೂಲ್‌ ಸಿಂಗ್‌ರಿಗೆ ಮುಂದೆ ಓದಲು ಸಾಧ್ಯವಾಗಿರಲಿಲ್ಲ. ಇಬ್ಬರು ಅಣ್ಣಂದಿರೂ ಕೂಡ ಭಾರತೀಯ ಸೈನ್ಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಾರಣ ಕುಟುಂಬ ನಿರ್ವಹಣೆಯ ಭಾರವನ್ನು ಹೊತ್ತು ವ್ಯವಸಾಯಕ್ಕೆ ಇಳಿದಿದ್ದರು.

ವ್ಯವಸಾಯದ ಜತೆ ಜತೆಗೆ ಊರಿನಲ್ಲಿ ಪ್ರಾಮುಖ್ಯತೆ ಗಳಿಸುತ್ತ ಸಾಗಿದ್ದ ಪೂಲ್‌ ಸಿಂಗ್‌, ಭಾರತೀಯ ಜನತಾ ಪಕ್ಷದಿಂದ ರಾಜಕಾರಣಕ್ಕೆ ಇಳಿದಿದ್ದರು. ಶಾಂತಿ ದೇವಿ ಎನ್ನುವವರನ್ನು ಮದುವೆಯಾದ ಪೂಲ್‌ ಸಿಂಗ್‌ಗೆ 5 ಹೆಣ್ಣು ಮಕ್ಕಳು ಜನಿಸಿದ್ದರು. 2013ರಲ್ಲಿ ರಾಜಸ್ಥಾನದ ವಿಧಾನಸಭಾ ಚುನಾವಣೆಯಲ್ಲಿ ಉದಯ್‌ಪುರ ಕ್ಷೇತ್ರದಿಂದ ಬಿಜೆಪಿಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಶಾಸಕ ಸ್ಥಾನಕ್ಕೂ ಏರಿದ್ದರು.

ಪೂಲ್‌ ಸಿಂಗ್‌ ಮೀನಾ ಶಾಸಕರಾದ ನಂತರ ಅವರ ಪುತ್ರಿಯರು ವಿದ್ಯಾಭ್ಯಾಸವನ್ನು ಮುಂದುವರೆಸುವಂತೆ ಒತ್ತಾಯವನ್ನು ಹೇರತೊಡಗಿದ್ದರು. ನೀವೀಗ ಶಾಸಕರಾಗಿದ್ದೀರಿ, ಹಲವಾರು ಜನರ ಜತೆ ಮಾತನಾಡಬೇಕಾಗುತ್ತದೆ. ಹಿರಿಯ ಅಧಿಕಾರಿಗಳು, ರಾಜಕೀಯ ಮುಖಂಡರ ಜತೆ ವ್ಯವಹರಿಸಬೇಕಾಗುತ್ತದೆ, ಅದಕ್ಕಾಗಿ ಶಿಕ್ಷಣ ಬೇಕು ಎಂದು ದುಂಬಾಲು ಬಿದ್ದಿದ್ದರು.

ಪ್ರಾರಂಭದಲ್ಲಿ ಈ ವಯಸ್ಸಿನಲ್ಲಿ ಓದು ಮುಂದುವರೆಸುವುದು ಹೇಗೆ ಎಂದು ಹಿಂದೇಟು ಹಾಕಿದ ಪೂಲ್‌ ಸಿಂಗ್‌ ಮೀನಾರಿಗೆ, ವಿದ್ಯಾಭ್ಯಾಸ ಅಗತ್ಯ ಎನ್ನಿಸತೊಡಗಿತ್ತು. ಶಾಸಕನಾಗಿ ಶಾಲಾ ಕಾಲೇಜುಗಳಲ್ಲಿ ವಿದ್ಯಾಭ್ಯಾಸದ ಬಗ್ಗೆ ಮಾತನಾಡುವ ಮೊದಲು ನಾನು ವಿದ್ಯಾಭ್ಯಾಸವನ್ನು ಪಡೆಯಬೇಕು ಎನಿಸಲು ಪ್ರಾರಂಭವಾಗಿತ್ತು. ಅದೇ ವರ್ಷ ಪೂಲ್‌ ಸಿಂಗ್‌ ಮೀನಾ ವಿದ್ಯಾಭ್ಯಾಸ ಮುಂದುವರೆಸುವ ನಿರ್ಧಾರ ಕೈಗೊಂಡಿದ್ದರು.

ತಂದೆಯ ವಿದ್ಯಾಭ್ಯಾಸದ ಬಗ್ಗೆ ಕುರಿತು ‘ಹಿಂದೂಸ್ತಾನ್‌ ಟೈಮ್ಸ್’ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿ ಹರ್ಷ ವ್ಯಕ್ತ ಪಡಿಸಿದ ಪೂಲ್‌ ಸಿಂಗ್‌ರ 3ನೇ ಮಗಳು ದೀಪಿಕಾ, “ತನ್ನ ತಂದೆ ಅತಿಯಾದ ಶ್ರದ್ಧೆಯಿಂದ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಅವರ ಬಗ್ಗೆ ನಮಗೆ ಹೆಮ್ಮೆ ಎನಿಸುತ್ತದೆ,” ಎಂದಿದ್ದಾರೆ.

ಪೂಲ್‌ ಸಿಂಗ್‌ ಮೀನಾ ಈಗಾಗಲೇ 10ನೇ ಮತ್ತು 12ನೇ ತರಗತಿಗಳನ್ನು ಪೂರೈಸಿದ್ದಾರೆ. ಈಗ ಪ್ರಥಮ ಬಿಎ ಪರೀಕ್ಷೆಯನ್ನು ಬರೆಯುತ್ತಿದ್ದಾರೆ. ರಾಜಕೀಯ ಕೆಲಸಗಳ ಮಧ್ಯೆ ಪೂಲ್‌ ಸಿಂಗ್‌ ಮೀನಾರಿಗೆ ಕಾಲೇಜಿಗೆ ತೆರಳಿ ಪಾಠ ಕಲಿಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಉದಯ್‌ಪುರ ಬಳಿಯ ಮಾನ್ವಖೇಡ ಸರಕಾರಿ ಹಿರಿಯ ಮಾಧ್ಯಮಿ ಶಾಲೆಯ ಮುಖ್ಯೋಪಾಧ್ಯಾಯ ಮತ್ತು ಪೂಲ್‌ ಸಿಂಗ್‌ರ ಶಿಕ್ಷಕ ಸಂಜಯ್‌ ಲುನಾವತ್‌, ಪೂಲ್‌ ಸಿಂಗ್‌ಗೆ ಪಠ್ಯವನ್ನು ಕಲಿಸಲು ಹೊಸ ದಾರಿಗಳನ್ನು ಹುಡುಕಿಕೊಂಡಿದ್ದಾರೆ.

“ನಾನು ಮತ್ತು ಪೂಲ್‌ ಸಿಂಗ್‌ ಮೀನಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಜತೆಯಾಗಿ ಸಂಚರಿಸುವಾಗ ನಾನು ಅವರಿಗೆ ಬೋಧನೆ ಮಾಡುತ್ತೇನೆ. ಅದು ಸಾಧ್ಯವಾಗದಿದ್ದರೆ ಪಠ್ಯವನ್ನು ರೆಕಾರ್ಡ್‌ ಮಾಡಿ ಅವರ ವಾಟ್ಸ್‌ಆಪ್‌ಗೆ ಕಳುಹಿಸುತ್ತೇನೆ. ದೂರದ ಪ್ರಯಾಣ ಮಾಡುವಾಗ ಅಥವಾ ಜೈಪುರಕ್ಕೆ ಹೋಗುವಾಗ ಅವರು ಅದನ್ನು ಕೇಳುತ್ತಾ ಪ್ರಯಾಣ ಮಾಡುತ್ತಾರೆ,” ಎಂದು ಸಂಜಯ್‌ ಲುನಾವತ್‌ ‘ಹಿಂದುಸ್ತಾನ್‌ ಟೈಮ್ಸ್’ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡಿರುವ ವಿದ್ಯಾರ್ಥಿಗಳಿಗೆ ಬೋಧನಾ ತರಗತಿಗಳನ್ನು ನಡೆಸುವ ಸಂಜಯ್‌ ಲುನಾವತ್‌ ಪ್ರಕಾರ ಪೂಲ್‌ ಸಿಂಗ್‌ ಮೀನಾ ಒಬ್ಬ ಶ್ರದ್ಧೆಯುಳ್ಳ ವಿನಮ್ರ ವಿದ್ಯಾರ್ಥಿ. “ಸತತ 40 ವರ್ಷಗಳು ಕಳೆದ ನಂತರ ಮತ್ತೆ ವಿದ್ಯಾಭ್ಯಾಸವನ್ನು ಆರಂಭಿಸಿರುವ ಪೂಲ್‌ ಸಿಂಗ್‌ ಮೀನಾ, ಈ ವಯಸ್ಸಿನಲ್ಲೂ ಕೂಡ ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಚುನಾವಣಾ ವರ್ಷದಲ್ಲೂ ಕೂಡ ತಪ್ಪದೇ ಪರೀಕ್ಷೆ ಬರೆಯುವುದು ಅವರ ಆಸಕ್ತಿ ಎಷ್ಟಿದೆ ಎನ್ನುವುದನ್ನು ತೋರಿಸುತ್ತದೆ,” ಎನ್ನುತ್ತಾರೆ.

ಈಗಿನ್ನೂ ಮೊದಲ ವರ್ಷದ ಬಿಎ ಪರೀಕ್ಷೆ ಬರೆಯುತ್ತಿರುವ ಪೂಲ್‌ ಸಿಂಗ್‌ ಮೀನಾರಿಗೆ ಉನ್ನತ ಶಿಕ್ಷಣ ಪೂರೈಸುವ ಮನಸ್ಸಿದೆ. ಜತೆಗೆ ಪಿಎಚ್‌ಡಿ ಮಾಡಬೇಕೆಂಬ ಕನಸನ್ನೂ ಕೂಡ ಹೊತ್ತುಕೊಂಡಿದ್ದಾರೆ.