ಶಿಶು ಮಾರಾಟ; ಮದರ್‌ ಥೆರೇಸಾ ಶಿಶುಪಾಲನಾ ಕೇಂದ್ರಗಳಲ್ಲಿ ತಪಾಸಣೆಗೆ ಸೂಚನೆ
ಸುದ್ದಿ ಸಾರ

ಶಿಶು ಮಾರಾಟ; ಮದರ್‌ ಥೆರೇಸಾ ಶಿಶುಪಾಲನಾ ಕೇಂದ್ರಗಳಲ್ಲಿ ತಪಾಸಣೆಗೆ ಸೂಚನೆ

ಜಾರ್ಖಂಡ್‌ನಲ್ಲಿನ ಮದರ್‌ ಥೆರೇಸಾ ಮಿಷನರಿಯ ಶಿಶು ಪಾಲನಾ ಕೇಂದ್ರದಲ್ಲಿ ಅಕ್ರಮವಾಗಿ ಶಿಶುಗಳ ಮಾರಾಟ ಮಾಡಿದ ಪ್ರಕರಣ ವರದಿಯಾಗಿತ್ತು. ಈ ಬೆನ್ನಲ್ಲೇ ಕೇಂದ್ರ ಸರಕಾರ ದೇಶದ ಎಲ್ಲಾ ಮದರ್‌ ಥೆರೇಸಾ ಮಿಷನರಿಗಳ ತಪಾಸಣೆ ನಡೆಸುವಂತೆ ಸೂಚಿಸಿದೆ. 

ರಾಂಚಿ ಮೂಲದ ಶಿಶುಪಾಲನಾ ಕೇಂದ್ರದ ಸಿಬ್ಬಂದಿಗಳು 4ನೇ ಮಗುವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದನ್ನು ಜಾರ್ಖಂಡ್‌ ಪೊಲೀಸರು ಭೇದಿಸಿದ್ದಾರೆ. ಈ ಸಂಸ್ಥೆ ಮದರ್‌ ಥೆರೇಸಾ ಸ್ಥಾಪಿಸಿದ ನಿರ್ಮಲ್‌ ಹೃದಯ್‌ ಮಿಷನರಿಗೆ ಸೇರಿದ್ದಾಗಿದೆ. ದೇಶಾದ್ಯಂತ ಮದರ್‌ ಥೆರೇಸಾ ಮಿಷನರಿ ನಡೆಸುತ್ತಿರುವ ಶಿಶು ಪಾಲನಾ ಕೇಂದ್ರಗಳಲ್ಲಿ ಶೀಘ್ರವಾಗಿ ತಪಾಸಣೆ ನಡೆಸುವಂತೆ ಕೇಂದ್ರ ಸರಕಾರ ರಾಜ್ಯಗಳಿಗೆ ಸೂಚಿಸಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕೇಂದ್ರ ಸಚಿವೆ ಮೇನಕಾ ಗಾಂಧಿ ಈ ಕುರಿತು ರಾಜ್ಯಗಳಿಗೆ ಸೂಚನೆ ನೀಡಿದ್ದಾರೆ. ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಶಿಶು ಪಾಲನಾ ಕೇಂದ್ರಗಳು ಕೇಂದ್ರೀಯ ದತ್ತು ಸಂಪನ್ಮೂಲ ಪ್ರಾಧಿಕಾರದಲ್ಲಿ(CARA) ನೋಂದಣಿ ಮಾಡಿಕೊಂಡಿದ್ದಾರೆಯೇ ಎನ್ನುವುದನ್ನು ತಿಂಗಳ ಅವಧಿಯೊಳಗೆ ಪರಿಶೀಲಿಸಲು ತಿಳಿಸಿದ್ದಾರೆ.

ತಿಂಗಳ ಪ್ರಾರಂಭದಲ್ಲಿ ಮದರ್‌ ಥೆರೇಸಾ ಚಾರಿಟಿ ನಡೆಸುತ್ತಿರುವ ರಾಂಚಿಯಲ್ಲಿನ ನಿರ್ಮಲ್‌ ಹೃದಯ್‌ ಶಿಶು ಪಾಲನಾ ಕೇಂದ್ರದ ಸ್ಯನ್ಯಾಸಿನಿ ಮತ್ತು ಮಹಿಳಾ ಉದ್ಯೋಗಿಯೊಬ್ಬರು ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದರು. ಶಿಶುಪಾಲನಾ ಕೇಂದ್ರದಲ್ಲಿನ ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಬಯಸುವವರಿಗೆ ಮಾರಾಟ ಮಾಡಿದ ಅರೋಪ ಇವರ ಮೇಲಿತ್ತು. ಈ ಪ್ರಕರಣ ಬೆಳಕಿಗೆ ಬಂದ ನಂತರ ಇಡೀ ರಾಜ್ಯದಲ್ಲಿ ಮಿಷನರಿ ಸಂಸ್ಥೆ ನಡೆಸುತ್ತಿರುವ ಎಲ್ಲಾ ಶಿಶು ಪಾಲನಾ ಕೇಂದ್ರಗಳ ತಪಾಸಣೆ ನಡೆಸಲಾಗಿತ್ತು.

ಜಾರ್ಖಂಡ್‌ನ ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗದ ಮುಖ್ಯಸ್ಥೆ ಆರತಿ ಕುಜುರ್‌ ‘ರಾಯಿಟರ್ಸ್’ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿ, “ರಾಜ್ಯ ಸರಕಾರವು ಶಿಶುಪಾಲನಾ ಕೇಂದ್ರಗಳ ತನಿಖೆಗೆಂದು ತಂಡವೊಂದನ್ನು ರಚಿಸಿದೆ. ಈ ತಂಡ ಆಗಸ್ಟ್‌ ತಿಂಗಳ ಪ್ರಾರಂಭದಲ್ಲಿ ವರದಿ ನೀಡುವ ನಿರೀಕ್ಷೆಯಿದೆ. ಯಾರಾದರೂ ಅಕ್ರಮವಾಗಿ ಶಿಶುಪಾಲನಾ ಕೇಂದ್ರಗಳನ್ನು ನಡೆಸುತ್ತಿರುವುದು ಗಮನಕ್ಕೆ ಬಂದರೆ, ಅವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು,” ಎಂದಿದ್ದಾರೆ.

ಮಹಿಳಾ ಮತ್ತು ಮಕ್ಕಳ ಕ್ಲಯಾಣ ಇಲಾಖೆ ಅಧಿಕಾರಿಗಳು ಮಾತನಾಡಿ, ಬಾಲ ನ್ಯಾಯ ಕಾಯ್ದೆಯ ಅಡಿ ಎಲ್ಲಾ ಶಿಶುಪಾಲನಾ ಕೇಂದ್ರಗಳು ಕೇಂದ್ರೀಯ ದತ್ತು ಸಂಪನ್ಮೂಲ ಪ್ರಾಧಿಕಾರದಲ್ಲಿ ನೋಂದಾವಣೆ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ ಎಂದು ತಿಳಿಸಿದ್ದಾರೆ.

ಕಳೆದ ವರ್ಷ ಡಿಸೆಂಬರ್‌ ತಿಂಗಳಿನಿಂದ ಇಲ್ಲಿಯವರೆಗೆ ಸುಮಾರು 2,300 ಶಿಶು ಪಾಲನಾ ಸಂಸ್ಥೆಗಳು ಕೇಂದ್ರೀಯ ದತ್ತು ಸಂಪನ್ಮೂಲ ಪ್ರಾಧಿಕಾರದಲ್ಲಿ ನೋಂದಾವಣೆ ಮಾಡಿಕೊಂಡಿವೆ. ಇನ್ನೂ 4,000 ಶಿಶು ಪಾಲನಾ ಸಂಸ್ಥೆಗಳು ನೋಂದಾವಣೆ ಮಾಡಿಕೊಳ್ಳಬೇಕಿದೆ. ಆದರೆ ಈ 2,300 ಶಿಶುಪಾಲನಾ ಸಂಸ್ಥೆಗಳಲ್ಲಿನ ಮಕ್ಕಳು ದತ್ತು ವ್ಯವ್ಯಸ್ಥೆಯ ಪರಿಧಿಯೊಳಗೆ ಬಂದಿಲ್ಲ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ ಬೇಸರ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಕೇಂದ್ರೀಯ ದತ್ತು ಸಂಪನ್ಮೂಲ ಪ್ರಾಧಿಕಾರದಲ್ಲಿ ನೋಂದಾವಣೆ ಮಾಡಿಕೊಂಡಿರುವ ಮತ್ತು ಮಾಡಿಕೊಳ್ಳದ ಎಲ್ಲಾ ಶಿಶು ಪಾಲನಾ ಸಂಸ್ಥೆಗಳಲ್ಲಿ ಅಂದಾಜು 2.3 ಲಕ್ಷ ಮಕ್ಕಳಿದ್ದಾರೆ.

ಅನಿಮಾ ಇಂದ್ವಾರ್‌ ಎಂಬ ‘ನಿರ್ಮಲ್‌ ಹೃದಯ್‌’ ಸಂಸ್ಥೆಯ ಉದ್ಯೋಗಿ, ಪಲಮು ಜಿಲ್ಲೆಯ ಚಾತರ್‌ಪುರ ಪ್ರದೇಶದ ದಂಪತಿಗಳಿಗೆ 50,000 ರೂಪಾಯಿಗಳುಗೆ ಶಿಶುವನ್ನು ಮಾರಿದ್ದರು. ಈ ಮೊದಲು ಹೀಗೆ ಮೂರು ಮಕ್ಕಳ ಮಾರಾಟ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಅನಿಮಾ ಇಂದ್ವಾರ್‌ ಜತೆ ಕ್ರೈಸ್ತ ಸನ್ಯಾಸಿನಿ ಸಿಸ್ಟರ್‌ ಕೋನ್ಸಾಲಿಯಾ ಎನ್ನುವವರನ್ನೂ ಕೂಡ ಬಂದಿಸಲಾಗಿದೆ.