ಪ್ರಾಣಿ ಪಕ್ಷಿಗಳೇ ಹುಷಾರ್; ಮೋದಿ, ಅಮಿತ್‌ ಶಾ, ಬಿಎಸ್‌ವೈ ತೋಟ ಕಾಯುತ್ತಿದ್ದಾರೆ!
ಸುದ್ದಿ ಸಾರ

ಪ್ರಾಣಿ ಪಕ್ಷಿಗಳೇ ಹುಷಾರ್; ಮೋದಿ, ಅಮಿತ್‌ ಶಾ, ಬಿಎಸ್‌ವೈ ತೋಟ ಕಾಯುತ್ತಿದ್ದಾರೆ!

ರೈತರ ತೋಟಗಳಿಗೆ ದಾಳಿಯಿಡುವ ಪ್ರಾಣಿ ಪಕ್ಷಿಗಳನ್ನೆಲ್ಲಾ ಎದುರಿಸಿ ನಿಂತಿರುವ ಯಡಿಯೂರಪ್ಪ, ಮೋದಿ ಹಾಗೂ ಅಮಿತ್‌ ಶಾ ಹಗಲಿರುಳೆನ್ನದೇ ಇಲ್ಲಿ ತೋಟ ಕಾಯುತ್ತಿದ್ದಾರೆ. 

‘ರೈತ ನಾಯಕ’ ಎಂಬ ಬಿರುದಿಗಾಗಿ ಬಡಿದಾಡಿಕೊಂಡು ಬಂದಿರುವ ಮಾಜಿ ಮುಖ್ಯಮಂತ್ರಿ, ಬಿಜಿಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಈಗ ರೈತರ ಹೊಲಕ್ಕಿಳಿದಿದ್ದಾರೆ. ದಿನ, ಗಂಟೆಗಳ ಪರಿವೇ ಇಲ್ಲದೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ 24 ಗಂಟೆ ಹೊಲ ತೋಟಗಳಲ್ಲೇ ಬೀಡುಬಿಟ್ಟಿದ್ದಾರೆ!

ಮೊನ್ನೆ ಮೊನ್ನೆ ತಾನೇ ನಡೆದ ವಿಧಾನಸಭಾ ಚುನಾವಣೆಯಲ್ಲಿ 104 ಕ್ಷೇತ್ರಗಳಲ್ಲಿ ಗೆದ್ದು, ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರೂ ಕೂಡ ಬಹುಮತವಿಲ್ಲದೇ ರಾಜೀನಾಮೆ ನೀಡಿ ದುರಂತ ನಾಯಕ ಎನಿಸಿಕೊಂಡಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಈಗ ರೈತರ ಬೆಳೆ ಕಾಯುವ ಕೆಲಸ ಮಾಡುತ್ತಿದ್ದಾರೆ.

ವಿಶ್ವಾಸ ಮತ ಸಾಬೀತು ಮಾಡುವ ಗೋಜಿಗೇ ಹೋಗದೆ ರಾಜೀನಾಮ ನೀಡಿದ ಯಡಿಯೂರಪ್ಪ, ರಾಜ್ಯದ ಜನತೆಯ ಮನ ಕಲಕುವಂತೆ ಮಾತನಾಡಿದ್ದರು. ಮುಖ್ಯಮಂತ್ರಿಯಾಗಿ ರಾಜ್ಯದ ರೈತರಿಗೆ ನರೆವಾಗಬೇಕು ಎಂಬ ಬಯಕೆಯಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಆದರೂ ಕೂಡ ಕೊನೆಯವರೆಗೂ ರೈತರಿಗಾಗಿ ದುಡಿಯುತ್ತೇನೆ ಎಂದಿದ್ದರು.

ಈಗ ಬಿಎಸ್‌ವೈ ಅದೇ ಕೆಲಸಕ್ಕೆ ಮುಂದಾಗಿದ್ದಾರೆ. ಹಗಲಿರುಳೆನ್ನದೇ ರೈತರ ಜಮೀನು ಕಾಯುತ್ತಿದ್ದಾರೆ. ಇವರೊಟ್ಟಿಗೆ ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಕೂಡ ಕೈಜೋಡಿಸಿದ್ದಾರೆ. ರೈತನ ಬೆಳೆಯನ್ನು ತಿನ್ನಲು ಬರುವ ಪ್ರಾಣಿ ಪಕ್ಷಿಗಳಿಗೆ ರಕ್ಷಣೆಯಾಗಿ ನಿಂತಿದ್ದಾರೆ!

ವಿರೋಧ ಪಕ್ಷದ ನಾಯಕರಾಗಿ ವಿಧಾನಸೌಧದಲ್ಲಿರುವ ಬದಲು ಬಿಎಸ್‌ವೈ ಜಮೀನಿಗಿಳಿದ್ದಾರೆಯೇ ಎಂಬ ಉದ್ಘಾರವೇ? ಹೌಹಾರಬೇಡಿ, ನೇರವಾಗಿ ರೈತನೊಟ್ಟಿಗೆ ದುಡಿಯಲು ಸಾಧ್ಯವಿಲ್ಲದ ಈ ಮೂರೂ ಜನ ಬೆದರು ಬೊಂಬೆಗಳಾಗಿ ಹೊಲ ಕಾಯುತ್ತಿದ್ದಾರೆ. ‘ವಿಜಯ ಕರ್ನಾಟಕ’ ಪತ್ರಿಕೆ ಈ ಕುರಿತು ವರದಿ ಮಾಡಿದೆ.

ಬೆಳೆ ಕಾಯುತ್ತಿರುವ ಬಿಜೆಪಿ ನಾಯಕರು / 
ಬೆಳೆ ಕಾಯುತ್ತಿರುವ ಬಿಜೆಪಿ ನಾಯಕರು / 
ಚಿತ್ರಕೃಪೆ: ವಿಜಯ ಕರ್ನಾಟಕ

ಚುನಾವಣಾ ಪ್ರಚಾರದ ಸಮಯದಲ್ಲಿ ರಾಜ್ಯದೆಲ್ಲೆಡೆ ಬಿಜೆಪಿಯ ಈ ನಾಯಕರ ಕಟೌಟ್‌ಗಳನ್ನು ನಿಲ್ಲಿಸಲಾಗಿತ್ತು. ಪ್ರಚಾರ ನಡೆದು ಚುನಾವಣೆಗಳು ಮುಗಿದ ಮೇಲೆ ಚಿಕ್ಕಮಗಳೂರು ಜಿಲ್ಲೆಯ ಮಳವಳ್ಳಿ ತಾಲೂಕಿನ ಲಕ್ಕವಳ್ಳಿ ರೈತರು ಈ ನಾಯಕರುಗಳನ್ನೆಲ್ಲಾ ತಮ್ಮ ಹೆಗಲ ಮೇಲೆ ಹೊತ್ತು ತಂದಿದ್ದರು. ಹಾಗೆ ಹೊತ್ತೊಯ್ಯುವಾಗ ಅಭಿಮಾನವಿರಬಹುದು ಎಂದು ಬಿಜೆಪಿ ಬೆಂಬಲಿಗರೂ ಕೂಡ ಸುಮ್ಮನಾಗಿದ್ದಿರಬಹುದು. ಆದರೆ ರೈತರು ಮಾತ್ರ ಈ ನಾಯಕರನ್ನು ಸರಿಯಾಗಿಯೇ ದುಡಿಸಿಕೊಳ್ಳುತ್ತಿದ್ದಾರೆ. ಬಿಸಿಲು, ಚಳಿ, ಗಾಳಿ, ಮಳೆಯನ್ನದೇ ಈ ಮೂವರನ್ನು ಜಮೀನು ಕಾಯಲು ಹಚ್ಚಿದ್ದಾರೆ.

ಈ ರೈತ ಬಂಧುಗಳಿಂದ ದೊರೆಯುತ್ತಿರುವ ಪ್ರತಿಫಲವೂ ಕೂಡ ಹೆಚ್ಚಾಗಿಯೇ ಇದೆ. ಈ ಹಿಂದೆ ಬೆದರು ಬೊಂಬೆಗಳ ಬದಲು ಸಿನಿಮಾ ಸ್ಟಾರ್‌ಗಳು ರೈತರ ಹೊಲ ಕಾಯುತ್ತಿದ್ದರು. ಈಗ ಈ ಕೆಲಸಕ್ಕೆ ರಾಜಕಾರಣಿಗಳು ಮುಂದಾಗಿದ್ದಾರೆ. ಈ ರಾಷ್ಟ್ರೀಯ ನಾಯಕರನ್ನು ಕಂಡು ಬೆಳೆ ತಿನ್ನಲು ಬರುವ ಖಗ ಮೃಗಗಳೆಲ್ಲ ಬೆಚ್ಚಿ ಬಿದ್ದಿರಬಹುದು. ವಿಐಪಿ, ವಿವಿಐಪಿ ಸೆಕ್ಯೂರಿಟಿಯ ಈ ಮುಖಂಡರು ಇಲ್ಲಿ ತಾವೇ ಬೆಳೆಗಳಿಗೆ ಸೆಕ್ಯೂರಿಟಿಗಳಾಗಿದ್ದಾರೆ!