samachara
www.samachara.com
‘ಕುಟ್ಟಿ ರಾಮಾಯಣ’: ಪೌರಾಣಿಕ ಕತೆಗೆ ಹೊಸ ವ್ಯಾಖ್ಯಾನ ನೀಡಲು ಮುಂದಾದ ಎಡಪಕ್ಷ
ಸುದ್ದಿ ಸಾರ

‘ಕುಟ್ಟಿ ರಾಮಾಯಣ’: ಪೌರಾಣಿಕ ಕತೆಗೆ ಹೊಸ ವ್ಯಾಖ್ಯಾನ ನೀಡಲು ಮುಂದಾದ ಎಡಪಕ್ಷ

ವಿಚಾರಗೋಷ್ಠಿಗಳ ಮೂಲಕ ನಾನಾ ರಾಮಾಯಣ ಕೃತಿಗಳ ಬಗ್ಗೆ ಚರ್ಚೆ ನಡೆಸಲು ಸಿಪಿಐ(ಎಂ) ಪಕ್ಷ  ಕೇರಳದಲ್ಲಿ ನಿರ್ಧರಿಸಿದೆ. ರಾಮಾಯಣದ ಬಗ್ಗೆ ಜನರಲ್ಲಿರುವ ‘ತಪ್ಪು ತಿಳುವಳಿಕೆ’ಗಳನ್ನು ತಿದ್ದುವುದು ಈ ವಿಚಾರಗೋಷ್ಠಿಗಳ ಉದ್ದೇಶ ಎನ್ನಲಾಗಿದೆ.

ಕೇರಳದ ಆಡಳಿತ ಪಕ್ಷ ಕಮ್ಯುನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾ(ಮಾರ್ಕ್ಸಿಸ್ಟ್) ಆಶ್ರಯದಲ್ಲಿ ಕಳೆದ ವರ್ಷ ಸ್ಥಾಪನೆಗೊಂಡ ‘ಸಂಸ್ಕೃತ ಸಂಗಮ’ ಸಂಘಟನೆ ರಾಮಾಯಣದ ವಿವಿಧ ಆವೃತ್ತಿಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಮುಂದಾಗಿದೆ. ಸಂಘಪರಿವಾರ ರಾಮಾಯಣದಿಂದ ರಾಜಕೀಯ ಲಾಭ ಪಡೆಯುತ್ತಿದೆ. ಈ ಕುರಿತು ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಈ ನಿರ್ಧಾರ ಕೈಗೊಂಡಿರುವುದಾಗಿ ‘ಸಂಸ್ಕೃತ ಸಂಗಮ’ದ ಸದಸ್ಯರು ಸುದ್ದಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಜುಲೈ 15ರಿಂದ ಆರಂಭಗೊಳ್ಳಲಿರುವ ಈ ಕಾರ್ಯಕ್ರಮ ಒಂದು ತಿಂಗಳ ಕಾಲ ನಡೆಯಲಿದ್ದು, ರಾಜ್ಯದ 14 ಜಿಲ್ಲಾ ಕೇಂದ್ರಗಳಲ್ಲಿ 'Thoughts of Ramayana' ಹೆಸರಿನ ಸರಣಿ ವಿಚಾರ ಗೋಷ್ಠಿಗಳನ್ನು ನಡೆಸಲು ತೀರ್ಮಾನ ಮಾಡಲಾಗಿದೆ.

ಈ ಕುರಿತು ‘ದಿ ಸ್ಕ್ರೋಲ್‌’ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ‘ಸಂಸ್ಕೃತ ಸಂಗಮ’ದ ಸಂಚಾಲಕ ಟಿ. ತಿಲಕ್‌ರಾಜ್, ಈ ಸಂಘಟನೆ ಸಂಸ್ಕೃತ ಭಾಷೆಯನ್ನು ಪ್ರೀತಿಸುವ ವ್ಯಕ್ತಿಗಳ ಒಕ್ಕೂಟ ಎಂದಿದ್ದಾರೆ. “ಸಂಘಟನೆಯೊಳಗಿನ ಬಹುಪಾಲು ಸದಸ್ಯರು ಸಿಪಿಐ(ಎಂ) ಬಗ್ಗೆ ಸಹಾನುಭೂತಿ ಹೊಂದಿದ್ದಾರೆ. ಆದರೆ ಎಲ್ಲರೂ ಕೂಡ ಸಿಪಿಐ(ಎಂ)ನ ರಾಜಕೀಯ ದೃಷ್ಠಿಕೋನಗಳನ್ನು ಒಪ್ಪಿಕೊಳ್ಳಬೇಕು ಎಂಬ ಒತ್ತಾಯವೇನಿಲ್ಲ,” ಎಂದಿದ್ದಾರೆ. ನಿವೃತ್ತ ಸಂಸ್ಕೃತ ಶಿಕ್ಷಕರಾದ ತಿಲಕ್‌ರಾಜ, ಸಿಪಿಐ(ಎಂ)ನ ಶಿಕ್ಷಕರ ಸಂಘಟನೆಯ ರಾಜ್ಯ ಕಾರ್ಯದರ್ಶಿಯಾಗಿದ್ದವರು.

ಎಸ್‌ಎಫ್‌ಐನ ರಾಷ್ಟ್ರಾಧ್ಯಕ್ಷರಾಗಿದ್ದ, ಸಿಪಿಐ(ಎಂ)ನ ರಾಜ್ಯ ಸಮಿತಿ ಸದಸ್ಯರಾಗಿರುವ ಡಾ. ವಿ. ಸಿವದಾಸನ್‌ ಕೂಡ ಸಂಘಟನೆಯ ಭಾಗವಾಗಿದ್ದಾರೆ. “ ಸಂಸ್ಕೃತ ಸಂಗಮ, ಪಕ್ಷಕ್ಕೆ ಕಾರ್ಯಕರ್ತರನ್ನು ಪೂರೈಸುವ ಕೆಲಸ ಮಾಡುವುದಿಲ್ಲ. ಬದಲಾಗಿ ಪುರಾಣಗ್ರಂಥಗಳನ್ನು ಸಂಘಪರಿವಾರ ರಾಜಕೀಯ ಹಿತಾಸಕ್ತಿಗೆ ಬಳಸಿಕೊಳ್ಳುವುದನ್ನು ವಿರೋಧಿಸುವ ಜಾತ್ಯಾತೀತ ವಿಚಾರವಾದಿಗಳ ಸಂಘಟನೆ,” ಎನ್ನುತ್ತಾರೆ ಸಿವದಾಸನ್‌.

2016ರಲ್ಲಿ ಎಡಪಂಥೀಯ ವಿಚಾರವಾದಿ ಸುನಿಲ್‌ ಪಿ. ಇಳಯಿಡಮ್‌, ‘ಮಹಾಭಾರತದ ಸಾಂಸ್ಕೃತಿಕ ಇತಿಹಾಸ’ ಎಂಬ ವಿಚಾರದ ಮೇಲೆ ಸರಣಿ ಉಪನ್ಯಾಸಗಳನ್ನು ನೀಡಿದ್ದರು. ಈ ಉಪನ್ಯಾಸ ಕಾರ್ಯಕ್ರಮಗಳು ಕೇರಳದಲ್ಲಿ ಸಹಸ್ರಾರು ಜನರನ್ನು ಸೆಳೆದಿತ್ತು. ಲಕ್ಷಾಂತರ ಆನ್‌ಲೈನ್‌ ವೀಕ್ಷಕರನ್ನು ಹೊಂದಿತ್ತು. ಈ ಉಪನ್ಯಾಸ ಸರಣಿಯ ಸಾಧನೆಯೇ ಸದ್ಯದ ‘ಸಂಸ್ಕೃತ ಸಂಗಮ’ ವಿಚಾರಗೋಷ್ಠಿಗಳಿಗೆ ಪ್ರೇರಣೆ ಎನ್ನಲಾಗಿದೆ.

ರಾಜಕೀಯ ವಿಶ್ಲೇಷಕರು ಹೇಳುವಂತೆ ಸಿಪಿಐ(ಎಂ) ಕೂಡ ರಾಜಕೀಯ ಉದ್ದೇಶಗಳಿಂದಾಗಿ ರಾಮಾಯಣದ ವಿಚಾರಗೋಷ್ಠಿಗಳನ್ನು ನಡೆಸಲು ಮುಂದಾಗಿದೆ. 2016ರಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್‌) ‘ಇಂಡಿಯನ್‌ ಮಾರ್ಷಿಯಲ್‌ ಆರ್ಟ್ಸ್‌’ ಮತ್ತು ‘ಯೋಗ ಸ್ಟಡಿ ಸೆಂಟರ್‌’ ಹೆಸರಿನಲ್ಲಿ ಯೋಗದ ಅಭ್ಯಾಸವನ್ನು ಪ್ರಾರಂಭಿಸಿದೆ.

ಶ್ರೀಕೃಷ್ಣ ಜನ್ಮಾಷ್ಟಮಿ ದಿನದಂದು ಆರ್‌ಎಸ್‌ಎಸ್‌ ಚಿಕ್ಕ ಮಕ್ಕಳಿಗೆ ಕೃಷ್ಣನ ವೇಷಭೂಷಣಗಳನ್ನು ತೊಡಿಸಿ, ನಡೆಸುತ್ತಿರುವ ಮರೆವಣಿಗೆಗಳಲ್ಲಿ ಕಮ್ಯುನಿಸ್ಟ್‌ ಪಕ್ಷದ ಜನರು ಭಾವಹಿಸುತ್ತಿದ್ದಾರೆ. ಸಂಘಪರಿವಾರದೆಡೆಗೆ ವಾಲುತ್ತಿರುವ ಜನರನ್ನು ತಮ್ಮಲ್ಲಿಯೇ ಉಳಿಸಿಕೊಳ್ಳುವ ಸಲುವಾಗಿ ಸಿಪಿಐ(ಎಂ) ಕೃಷ್ಣದ ಜನ್ಮದಿನವನ್ನು ಆಚರಿಸುತ್ತಿದೆ. ಈಗ ನಡೆಸಲು ಮುಂದಾಗಿರುವ ವಿಚಾರಗೋಷ್ಠಿಗಳೂ ಕೂಡ ಇದರ ಭಾಗವೇ ಎನ್ನುವ ಅಭಿಪ್ರಾಯಗಳಿವೆ. ಆದರೆ ಸಿಪಿಐ(ಎಂ) ಈ ಅಭಿಪ್ರಾಯಗಳನ್ನು ಅಲ್ಲಗೆಳೆಯುತ್ತಿದೆ.

ತಿಲಕ್‌ರಾಜ್‌ ಹೇಳುವಂತೆ, ಈ ಗೋಷ್ಠಿಗಳು ಜನರಲ್ಲಿ ಅರಿವು ಮುಡಿಸುವುದಕ್ಕಾಗಿ ನಡೆಸಲಾಗುತ್ತಿದೆ. ಗೋಷ್ಠಿಗಳಲ್ಲಿ ವಿವಿಧ ಬಗೆಯ ರಾಮಾಯಣದ ಕೃತಿಗಳನ್ನು ಮುಂದಿಟ್ಟು ಚರ್ಚೆ ನಡೆಸಲಾಗುತ್ತದೆ. ರಾಮಾಯಣದ ಬಗ್ಗೆ ಜನರಲ್ಲಿರುವ ತಪ್ಪು ತಿಳುವಳಿಕೆಗಳನ್ನು ತಿದ್ದುವುದಷ್ಟೇ ಈ ಗೋಷ್ಠಿಗಳ ಉದ್ದೇಶವಂತೆ.

“ಹಲವಾರು ರೀತಿಯ ರಾಮಯಾಣದ ಆವೃತ್ತಿಗಳಿವೆ. ವಾಲ್ಮಿಕಿ, ಕಬೀರ್‌ದಾಸ್‌, ತುಳಸಿದಾಸ್‌ ಇನ್ನೂ ಹಲವಾರು ಜನ ತಮ್ಮದೇ ದೃಷ್ಠಿಕೋನದ ರಾಮಾಯಣಗಳನ್ನು ರಚಿಸಿದ್ದಾರೆ. ಜತಗೆ ಹಲವಾರು ಪ್ರಾದೇಶಿಕ ರಾಮಾಯಣಗಳೂ ಕೂಡ ಅಸ್ತಿತ್ವದಲ್ಲಿವೆ. ಮಲಯಾಳಂ ಭಾಷೆಯ ತಂದೆ ಎನಿಸಿಕೊಂಡಿರುವ ತುಂಚತ್‌ ರಾಮನುಜನ್ ಎಝುತಚನ್‌ ಭಾಷಾಂತರಿಸಿರುವ ಆಧ್ಯಾತ್ಮ ರಾಮಾಯಣವನ್ನು ಕೇರಳಿಗರು ಓದುತ್ತಾರೆ. ಈ ಎಲ್ಲಾ ರಾಮಾಯಣಗಳ ಮಧ್ಯೆ ಇರುವ ಸಾಮ್ಯತೆ ಮತ್ತು ವ್ಯತ್ಯಾಸಗಳನ್ನು ವಿದ್ವಾಂಸರು ಹುಡುಕಿ, ನಿಜವಾದ ವ್ಯಾಖ್ಯಾನಗಳನ್ನು ಜನರ ಮುಂದಿಡುತ್ತಾರೆ,” ಎನ್ನುತ್ತಾರೆ ತಿಲಕ್‌ರಾಜ್‌.

ರಾಮಾಯಣದ ಸರಣಿ ವಿಚಾರಗೋಷ್ಠಿಗಳಿಗೆ ಉತ್ತಮ ಪ್ರತಿಸ್ಪಂದನೆ ದೊರೆತರೆ, ‘ಸಂಸ್ಕೃತ ಸಂಗಮ’ದ ಮೂಲಕ ಮುಂದಿನ ದಿನಗಳಲ್ಲಿ ಇದೇ ರೀತಿ ಮಹಾಭಾರತ, ವೇದ ಮತ್ತು ಉಪನಿಷತ್ತುಗಳ ಬಗ್ಗೆ ವಿಚಾರಗೋಷ್ಠಿ ಹಮ್ಮಿಕೊಳ್ಳುವ ಉದ್ದೇಶವೂ ಇದೆ.

ವಿಚಾರಗೋಷ್ಠಿಯನ್ನು ಕಾರ್ಕಿಡಕಮ್‌ ಮಾಸದ ಪ್ರಾರಂಭಕ್ಕೂ 2 ದಿನ ಮುಂಚೆಯಿಂದಲೇ ಆರಂಭಿಸಲು ನಿರ್ಧರಿಸಲಾಗಿದೆ. ಕೇರಳದ ಸ್ಥಳೀಯ ಕ್ಯಾಲೆಂಡರ್‌ನಲ್ಲಿನ ಕೊನೆಯ ತಿಂಗಳಾದ ಕಾರ್ಕಿಡಕಮ್‌ ಮಾಸವನ್ನು ರಾಮಾಯಣ ಮಾಸ ಎಂದೂ ಕೂಡ ಕರೆಯಲಾಗುತ್ತದೆ. ಈ ತಿಂಗಳಿನಲ್ಲಿ ರಾಮಾಯಣವನ್ನು ಓದಬೇಕು ಎಂಬ ನಂಬಿಕೆಯಿದೆ. ರಾಜ್ಯದ ಹಲವು ಹಿಂದೂಗಳು ಈ ತಿಂಗಳಿನಲ್ಲಿ ಆಧ್ಯಾತ್ಮ ರಾಮಾಯಣವನ್ನು ಓದುತ್ತಾರೆ. ಇದೇ ಸಮಯದಲ್ಲಿ ರಾಮಾಯಣದ ವಿಚಾರಗೋಷ್ಠಿಗಳನ್ನು ನಡೆಸಲು ಕಮ್ಯುನಿಸ್ಟ್‌ ಪಕ್ಷ ತೀರ್ಮಾನಿಸಿದೆ.

ಕಮ್ಯುನಿಸ್ಟ್‌ ಪಕ್ಷವೂ ಕೂಡ ರಾಮಾಯಣ ಮಾಸವನ್ನು ಆಚರಿಸಲು ಮುಂದಾಯಿತು ಎಂಬ ಗೇಲಿಗಳೂ ಕೂಡ ಕೇಳಿ ಬರುತ್ತಿವೆ. ಕಾರ್ಯಕ್ರಮದ ಮಹತ್ವವನ್ನು ಮರೆಸುವ ಸಲುವಾಗಿ ಈ ಗೇಲಿಗಳನ್ನು ಮಾಡಲಾಗುತ್ತಿದೆ ಎಂದು ಡಾ. ಸಿವದಾಸನ್‌ ಹೇಳಿದ್ದಾರೆ. ಹಲವಾರು ವಿರೋಧಗಳ ನಡುವೆಯೂ ಕೂಡ ಭಾರತೀಯ ಕಮ್ಯುನಿಸ್ಟ್‌ ಪಕ್ಷ (ಮಾರ್ಕ್ಸಿಸ್ಟ್‌) ಜನತೆಗೆ ಹಲವಾರು ರಾಮಾಯಣಗಳ ಬಗ್ಗೆ ತಿಳಿಸಹೊರಟಿದೆ. ಇದರ ರಾಜಕೀಯ ಪರಿಣಾಮಗಳು ಮುಂದಿನ ದಿನಗಳಲ್ಲಿ ದೇಶದ ಎಡಪಂಥೀಯ ವಿಚಾರಧಾರೆಯ ಮೇಲೆ ಹೇಗಾಗುತ್ತವೆ ಎಂಬುದನ್ನು ಕಾದುನೋಡಬೇಕಿದೆ.