samachara
www.samachara.com
ರಾಜ್ಯಸಭೆಗೆ 4 ಜನ ಸಾಧಕರ ನಾಮ ನಿರ್ದೇಶನ ಮಾಡಿದ ರಾಷ್ಟ್ರಪತಿ ರಾಮನಾಥ್‌ ಕೋವಿಂದ್
ಸುದ್ದಿ ಸಾರ

ರಾಜ್ಯಸಭೆಗೆ 4 ಜನ ಸಾಧಕರ ನಾಮ ನಿರ್ದೇಶನ ಮಾಡಿದ ರಾಷ್ಟ್ರಪತಿ ರಾಮನಾಥ್‌ ಕೋವಿಂದ್

ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ನಾಲ್ಕು ಮಂದಿ ಸಾಧಕರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದಾರೆ.

ಶಾಸ್ತ್ರೀಯ ನೃತ್ಯ ಸಾಧಕಿ ಸೊನಾಲ್‌ ಮಾನ್‌ಸಿಂಗ್‌, ಶಿಲ್ಪಿ ರಘುನಾಥ್‌ ಮೊಹಾಪಾತ್ರ, ಮಾಜಿ ಸಂಸದ ಹಾಗೂ ದಲಿತ ನಾಯಕ ರಾಮ್‌ ಶಕಲ್‌ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ರಾಕೇಶ್‌ ಸಿನ್ಹಾ ರಾಜ್ಯಸಭಾ ಸದಸ್ಯರಾಗಿ ನಾಮ ನಿರ್ದೇಶನಗೊಂಡಿದ್ದಾರೆ.

ರಾಷ್ಟ್ರಪತಿ ರಾಮನಾಥ್‌ ಕೋವಿಂಗ್‌ ಈ ನಾಲ್ಕು ಜನ ಸಾಧಕರನ್ನು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಿದ್ದಾರೆ. ರಾಜ್ಯಸಭೆಗೆ 12 ಜನ ಸಂಸದರನ್ನು ನಾಮ ನಿರ್ದೇಶನ ಮಾಡುವ ವಿಶೇಷ ಅಧಿಕಾರವನ್ನು ಭಾರತೀಯ ಸಂವಿಧಾನವು ರಾಷ್ಟ್ರಪತಿಗಳಿಗೆ ನೀಡಿದೆ. ಕಲೆ, ಸಾಹಿತ್ಯ, ವಿಜ್ಞಾನ, ಸಮಾಜ ಸೇವೆ - ಹೀಗೆ ನಾನಾ ವಿಭಾಗಗಳಲ್ಲಿ ಸಾಧನೆ ಮಾಡಿದವರನ್ನು ರಾಷ್ಟ್ರಪತಿಗಳು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಬಹುದು.

ಪ್ರಧಾನಿ ನರೇಂದ್ರ ಮೋದಿ ಮತ್ತು ಪ್ರಧಾನ ಮಂತ್ರಿಗಳ ಕಾರ್ಯಾಲಯದ ಸಲಹೆ ಮೇರೆಗೆ ರಾಮನಾಥ್‌ ಕೋವಿಂದ್‌ ನಾಲ್ಕು ಜನರ ನಾಮ ನಿರ್ದೇಶನ ಮಾಡಿದ್ದಾರೆ.

ಸೋನಾಲ್‌ ಮಾನ್‌ಸಿಂಗ್‌ ಭಾರತದ ಪ್ರಖ್ಯಾತ ನಾಟ್ಯ ಪ್ರವೀಣೆ. ಭರತನಾಟ್ಯ ಮತ್ತು ಒಡಿಸ್ಸಿ ನೃತ್ಯ ಕಲೆಯನ್ನೂ ಕರಗತ ಮಾಡಿಕೊಂಡಿರುವ ಸೋನಾಲ್‌ ಮಾನ್‌ಸಿಂಗ್‌ 6 ದಶಕಗಳಿಂದ ನೃತ್ಯ ಕ್ಷೇತ್ರದಲ್ಲಿದ್ದಾರೆ. ನೃತ್ಯ ತರಬೇತುದಾರರಾಗಿ, ಶಿಕ್ಷಕಿಯಾಗಿ, ಭಾಷಣಕಾರರಾಗಿ ಜತೆಗೆ ಸಾಮಾಜಿಕ ಕಾರ್ಯಕರ್ತೆಯಾಗಿಯೂ ಗುರುತಿಸಿಕೊಂಡಿರುವ ಸೋನಾಲ್‌ ಮಾನ್‌ಸಿಂಗ್‌ ದೆಹಲಿಯಲ್ಲಿ 1977ರಲ್ಲೇ ಸೆಂಟರ್‌ ಫಾರ್‌ ಇಂಡಿಯನ್‌ ಕ್ಲಾಸಿಕಲ್‌ ಡ್ಯಾನ್ಸ್ ಸಂಸ್ಥೆಯನ್ನು ತೆರೆದಿದ್ದರು.

ರಘುನಾಥ್‌ ಮೊಹಾಪಾತ್ರ ಶಿಲ್ಪ ಕಲೆಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವವರು. 1959ರಿಂದಲೂ ಕೂಡ ಶಿಲ್ಪ ಕಲೆಯಲ್ಲಿ ನಿರತರಾಗಿರುವ ರಘುನಾಥ್‌, ಸುಮಾರು 2,000 ಶಿಲ್ಪಕಲಾಕಾರರನ್ನು ತಯಾರುಗೊಳಿಸಿದ್ದಾರೆ. ರಾಷ್ಟ್ರದ ಪ್ರಾಚೀನ, ಸಾಂಪ್ರದಾಯಿಕ ಶಿಲ್ಪಕಲೆಗಳನ್ನು ಉಳಿಸುವಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಘುನಾಥ್‌, ಪುರಿಯ ಶ್ರೀ ಜಗನ್ನಾಥ ದೇವಾಲಯದ ಅಂದ ಹೆಚ್ಚಿಸುವ ಯೋಜನೆಗಳಲ್ಲಿ ದುಡಿದಿದ್ದಾರೆ. ಸಂಸತ್ತಿನಲ್ಲಿರುವ 6 ಅಡಿ ಎತ್ತರದ ಸೂರ್ಯ ದೇವನ ಶಿಲ್ಪ, ಪ್ಯಾರೀಸ್‌ನ ಬೌದ್ಧ ವಿಹಾರದಲ್ಲಿರುವ ಮರದ ಬುದ್ಧನ ಮೂರ್ತಿಗಳು ರಘುನಾಥ್‌ ಮೊಹಾಪಾತ್ರರ ಪ್ರಖ್ಯಾತ ಕಲಾಕೃತಿಗಳಾಗಿವೆ.

ಉತ್ತರ ಪ್ರದೇಶದವರಾದ ರಾಮ್‌ ಶಕಲ್‌ ಭಾರತೀಯ ಜನತಾ ಪಕ್ಷದ ನಾಯಕ. ರೈತರ, ಕಾರ್ಮಿಕರ ಮತ್ತು ನಿರಾಶ್ರಿತರಿಗೆ ಸಂಬಂಧಿಸಿದಂತೆ ಹಲವು ಹೋರಾಟಗಳನ್ನು ಮಾಡಿದ್ದಾರೆ. ಉತ್ತರ ಪ್ರದೇಶದ ರಾಬರ್ಟ್ಸ್‌ಗಂಜ್‌ ಕ್ಷೇತ್ರದಿಂದ 3 ಬಾರಿ ಚುನಾವಣೆಗಳಲ್ಲಿ ಗೆದ್ದು ಸಂಸದರಾಗಿ ಕೆಲಸ ಮಾಡಿದ್ದಾರೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ರಾಕೇಶ್‌ ಸಿನ್ಹಾ ದೆಹಲಿ ಮೂಲದ ‘ಇಂಡಿಯಾ ಪಾಲಿಸಿ ಫೌಂಡೇಷನ್‌’ನ ಸಂಸ್ಥಾಪಕರು ಮತ್ತು ಗೌರವಾಧ್ಯಕ್ಷರು. ದೆಹಲಿ ವಿಶ್ವವಿದ್ಯಾಲಯದ ಮೋತಿಲಾಲ್‌ ನೆಹರು ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ರಾಕೇಶ್‌ ಸಿನ್ಹಾ, ಇಂಡಿಯನ್‌ ಕೌನ್ಸಿಲ್‌ ಆಫ್‌ ಸೋಷಿಯಲ್‌ ಸೈನ್ಸ್ ರಿಸರ್ಚ್‌ನ ಸದಸ್ಯರೂ ಹೌದು.