ಇನ್ನುಮುಂದೆ ಜೆಎನ್‌ಯು ಪ್ರಾಧ್ಯಾಪಕರಿಗೂ ಹಾಜಾರಾತಿ ಕಡ್ಡಾಯ
ಸುದ್ದಿ ಸಾರ

ಇನ್ನುಮುಂದೆ ಜೆಎನ್‌ಯು ಪ್ರಾಧ್ಯಾಪಕರಿಗೂ ಹಾಜಾರಾತಿ ಕಡ್ಡಾಯ

ಜವಾಹರ್‌ಲಾಲ್‌ ನೆಹರೂ ವಿಶ್ವವಿದ್ಯಾಲಯದ 146ನೇ ಶೈಕ್ಷಣಿಕ ಸಮಿತಿ ಸಭೆಯಲ್ಲಿ ಹಲವಾರು ಗಣನೀಯವಾದ ನಿರ್ಧಾರಗಳನ್ನು ಕೈಗೊಂಡಿದೆ. ಅದರಲ್ಲಿ ಪ್ರಾಧ್ಯಾಪಕರು ಕೂಡ ಕಡ್ಡಾಯವಾಗಿ ಹಾಜಾರಾತಿ ನಿಯಮಗಳನ್ನು ಅನುಸರಿಸಬೇಕು ಎನ್ನುವುದೂ ಒಂದು.

ದೆಹಲಿಯ ಜವಾಹರ್‌ಲಾಲ್‌ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ಪ್ರಾಧ್ಯಾಪಕರ ಹಾಜರಾತಿ ನಿಯಮವನ್ನು ಕಠಿಣಗೊಳಿಸಲಾಗಿದೆ. ಶುಕ್ರವಾರ ನಡೆದ ವಿಶ್ವವಿದ್ಯಾಲಯದ 146ನೇ ಶೈಕ್ಷಣಿಕ ಸಮಿತಿ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.

“ಈಗಾಗಲೇ ಜೆಎನ್‌ಯು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಹಾಜಾರಾತಿ ನಿಯಮಗಳನ್ನು ಅನುಷ್ಠಾನಗೊಳಿಸಿದೆ. ಶುಕ್ರವಾರ ನಡೆದ 146ನೇ ಶೈಕ್ಷಣಿಕ ಸಮಿತಿಯ ಸಭೆಯಲ್ಲಿ ಶಿಕ್ಷಕ ವರ್ಗ ಮತ್ತು ವಿಶ್ವವಿದ್ಯಾಲಯದ ಸಿಬ್ಬಂದಿ ದಿನಕ್ಕೆ ಕನಿಷ್ಠ ಒಂದು ಬಾರಿಯಾದರೂ ತಮ್ಮ ಹಾಜಾರಾತಿಯನ್ನು ದೃಢಪಡಿಸುಬೇಕು ಎಂಬ ತೀರ್ಮಾನವನ್ನು ಕೈಗೊಳ್ಳಲಾಗಿದೆ,” ಎಂದು ಜೆಎನ್‌ಯು ಆಡಳಿತದ ಮುಖ್ಯಾಧಿಕಾರಿ (ರೆಕ್ಟರ್‌ 1) ಪ್ರೊ. ಚಿಂತಾಮಣಿ ಮಹಾಪಾತ್ರ ಹೇಳಿಕೆ ನೀಡಿದ್ದಾರೆ.

ಶೈಕ್ಷಣಿಕ ಸಮಿತಿಯ ಸಭೆ ವೇಳೆ ವಿಶ್ವವಿದ್ಯಾಲಯ ಹಲವಾರು ವಿಷಯಗಳ ಕುರಿತು ನಿರ್ಧಾರಗಳನ್ನು ಕೈಗೊಂಡಿದೆ. ಶೈಕ್ಷಣಿಕ ಮತ್ತು ಸಂಶೋಧನಾ ಕಾರ್ಯಗಳಲ್ಲಿ ಗಣನೀಯ ಸುಧಾರಣೆಗಳನ್ನು ತರಲು ವಿಶ್ವವಿದ್ಯಾಲಯ ಸಂಕಲ್ಪ ಮಾಡಿದೆ.

ನ್ಯಾಯೋಚಿತ ಮತ್ತು ಪಕ್ಷಪಾತವಿಲ್ಲದ ಪ್ರವೇಶ ಪರೀಕ್ಷೆಗಳು ನಡೆಯಬೇಕೆಂಬ ಸಲುವಾಗಿ ಮುಂದಿನ ದಿನಗಳಲ್ಲಿ ಜವಹರ್‌ಲಾಲ್‌ ನೆಹರೂ ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆಗಳನ್ನು ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿ ನಡೆಸಲು ಶೈಕ್ಷಣಿಕ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ.

ವಿಶ್ವವಿದ್ಯಾಲಯದ ಆಡಳಿತ ನೀಡಿರುವ ಹೇಳಿಕೆಯ ಪ್ರಕಾರ, “ಜೆಎನ್‌ಯುನ ಪ್ರವೇಶ ಪರೀಕ್ಷೆಗಳನ್ನು ಸಂಪೂರ್ಣವಾಗಿ ಗಣಕೀಕೃತಗೊಳಿಸಿ, ಆನ್‌ಲೈನ್‌ ಮೂಲಕ ಪರೀಕ್ಷೆ ನಡೆಸಲಾಗುತ್ತದೆ. ಇದು ಶೈಕ್ಷಣಿಕ ಸಮಿತಿ ಸಭೆಯ ಮುಖ್ಯ ನಿರ್ಣಯವಾಗಿದ್ದು, ಹಲವಾರು ಸದಸ್ಯರು ಈ ವಿಷಯದ ಕುರಿತು ಗಂಟೆಗಟ್ಟಲೆ ಚರ್ಚೆ ನಡೆಸಿದ್ದಾರೆ. ವಿಶ್ವವಿದ್ಯಾಲಯದ ದಾಖಲಾತಿ ಪ್ರಕ್ರಿಯೆಯು ನ್ಯಾಯಯುತವಾಗಿ, ಸಮರ್ಥವಾಗಿ ಮತ್ತು ಯಾವುದೇ ಪಕ್ಷಪಾತವನ್ನು ಅನುಸರಿಸದೇ ನಡೆಯಬೇಕು ಎನ್ನುವ ಉದ್ದೇಶದಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.”

ಹೊಸ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಳ್ಳುವ ಮುಂಚೆ ಹಾಗೂ ಈಗಾಗಲೇ ದಾಖಲಾಗಿರುವ ವಿದ್ಯಾರ್ಥಿಗಳು ಮುಂದಿನ ಸೆಮಿಸ್ಟರ್‌ಗೆ ಬರುವ ಮುಂಚೆ ವಿಶ್ವವಿದ್ಯಾಲಯದ ಹಾಜರಾತಿ ನಿಯಮಗಳನ್ನು ಸಂಪೂರ್ಣವಾಗಿ ಒಪ್ಪಿಕೊಂಡಿದ್ದೇನೆ ಎಂದು ಮುಚ್ಚಳಿಕೆ ಬರೆಸಿಕೊಳ್ಳಲು ಸಮಿತಿ ತೀರ್ಮಾನಿಸಿದೆ. ಜತೆಗೆ ವಿದ್ಯಾರ್ಥಿಗಳ, ಪ್ರಾಧ್ಯಾಪಕರ ಮತ್ತು ಸಿಬ್ಬಂದಿಯ ಅಧಿಕಾರ ಮತ್ತು ಹೊಣೆಗಾರಿಕೆಗಳ ಕುರಿತು ಕೆಲವು ನಿಯಮಾವಳಿಗಳು ಮತ್ತು ನಿರ್ಬಂಧಗಳನ್ನು ಅಳವಡಿಸಿಕೊಳ್ಳಲು ನಿರ್ಧರಿಸಲಾಗಿದೆ.

ಶೈಕ್ಷಣಿಕ ಸಮಿತಿ ಮತ್ತೊಂದು ವಿದ್ಯಾರ್ಥಿ ಸ್ನೇಹಿ ನಿರ್ಣಯವನ್ನು ಕೈಗೊಂಡಿದೆ. ಪ್ರಾಧ್ಯಾಪಕರು ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳ ಶ್ರೇಣಿಗಳನ್ನು ನಿರ್ಧರಿಸುವ ಮುಂಚೆ ವಿದ್ಯಾರ್ಥಿಗಳ ಕೈಗೆ ಅವರ ಮೌಲ್ಯಮಾಪನವಾದ ಉತ್ತರ ಪತ್ರಿಕೆಗಳನ್ನು ನೀಡಬೇಕಿದೆ. ಎಲ್ಲಾ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನ್ಯಾಯಯುತವಾಗಿ ನಡೆದಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ವಿಶ್ವವಿದ್ಯಾಲಯ ಹೇಳಿಕೆ ನೀಡಿದೆ.