ಪುತ್ರಿ ಮರಿಯಮ್ ಜೊತೆ ತಂದೆ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್
ಸುದ್ದಿ ಸಾರ

‘ಪಾಕಿಸ್ತಾನದ ಬೃಹನ್ನಾಟಕ’: ಪಾತ್ರಧಾರಿ ನವಾಜ್ ಷರೀಫ್ ಆಗಮನ, ಬಂಧನಕ್ಕೆ ಕ್ಷಣಗಣನೆ

ಷರೀಫ್ ಆಗಮನದ ಹಿನ್ನೆಲೆಯಲ್ಲಿ ಲಾಹೋರ್ ನಗರವೇ ಸ್ತಬ್ಧವಾಗಿದ್ದು, ಅಘೋಷಿತ ಬಂದ್ ಜಾರಿಯಲ್ಲಿದೆ. ಎಲ್ಲೆಲ್ಲೂ ಷರೀಫ್‌ಗೆ ಬೆಂಬಲ ವ್ಯಕ್ತವಾಗಿದ್ದು, ನಗರದಲ್ಲಿ 10 ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಭದ್ರತೆ ನೀಡಿದ್ದಾರೆ. 

ಅಪರೂಪದ ಬೃಹನ್ನಾಟಕವೊಂದು ಪಾಕಿಸ್ತಾನದಲ್ಲಿ ಜಾರಿಯಲ್ಲಿದೆ. ರೋಚಕ ಪತ್ತೇದಾರಿ ಕಾದಂಬರಿಯಂತಿರುವ ಈ ನಾಟಕದ ಪ್ರಧಾನ ಪಾತ್ರಧಾರಿ ಮಾಜಿ ಪ್ರಧಾನಿ ನವಾಜ್ ಷರೀಫ್.

ಒಂದು ಕಾಲದಲ್ಲಿ ಪಾಕಿಸ್ತಾನದ ಪ್ರಧಾನಿಯಾಗಿ ಮೆರೆಯುತ್ತಿದ್ದವರು ನವಾಜ್ ಷರೀಫ್. ರಾಜಕಾರಣಿಗಳ ಸಾಮಾನ್ಯ ಬುದ್ಧಿಯಂತೆ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿದ್ದರು. ಕೊನೆಗೊಮ್ಮೆ ಅಂತರಾಷ್ಟ್ರೀಯ ತನಿಖಾ ವರದಿ ‘ಪನಾಮ ಪೇಪರ್ಸ್’ನಲ್ಲಿ ಈ ಗೌಪ್ಯತೆಗಳೆಲ್ಲಾ ಬಯಲಾಯಿತು. ಆರೋಪ ಎದುರಿಸುತ್ತಿದ್ದ ಷರೀಫ್ ಜನರ ಆಕ್ರೋಶಕ್ಕೆ ಗುರಿಯಾದರು. ಒತ್ತಡದ ತೀವ್ರತೆ, ನ್ಯಾಯಾಲಯದ ಆದೇಶಕ್ಕೆ ಮಣಿದು ಅವರು ರಾಜೀನಾಮೆಯನ್ನು ನೀಡಬೇಕಾಯಿತು.

ಅಲ್ಲಿಂದ ಕೋರ್ಟ್, ವಿಚಾರಣೆ, ತನಿಖೆ ಆರಂಭವಾಯಿತು. ಇಷ್ಟೆಲ್ಲಾ ಅಧ್ಯಾಯಗಳು ಮುಗಿದು ಮೊನ್ನೆ ಜುಲೈ 6 ರಂದು ಇಸ್ಲಾಮಾಬಾದ್‌ನ ‘ಭ್ರಷ್ಚಾಚಾರ ನಿಯಂತ್ರಣ ನ್ಯಾಯಾಲಯ’ ಷರೀಫ್‌ಗೆ 10 ವರ್ಷಗಳ ಸೆರೆಮನೆ ವಾಸದ ಶಿಕ್ಷೆ ವಿಧಿಸಿತ್ತು. ಜತೆಗೆ ಷರೀಫ್‌ ಮಗಳು ಮರಿಯಮ್‌ ನವಾಜ್‌ಗೆ 7 ವರ್ಷ ಹಾಗೂ ಅಳಿಯ ನಿವೃತ್ತ ಕ್ಯಾಪ್ಟನ್‌ ಸಫ್ದಾರ್‌ 1 ವರ್ಷದ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಅಲ್ಲದೇ ನ್ಯಾಯಾಲಯ ನವಾಜ್‌ ಶರೀಫ್‌ಗೆ 8 ಮಿಲಿಯನ್‌ ಪೌಂಡ್ಸ್‌ ಹಾಗೂ ಮರಿಯಮ್‌ಗೆ 2 ಮಿಲಿಯನ್‌ ಪೌಂಡ್ಸ್‌ ದಂಡವನ್ನೂ ವಿಧಿಸಿತ್ತು.

ಆದರೆ ನ್ಯಾಯಾಲಯದ ಈ ತೀರ್ಪು ಹೊರ ಬೀಳುವ ಹೊತ್ತಿಗೆ ಅವರೆಲ್ಲಾ ದೇಶದಿಂದ ಹೊರಗೆ ದೂರದ ಲಂಡನ್‌ನಲ್ಲಿದ್ದರು. ಅಲ್ಲಿ ಷರೀಫ್ ಪತ್ನಿ ಚಿಕಿತ್ಸೆ ಪಡೆಯುತ್ತಿದ್ದ ಹಿನ್ನೆಲೆಯಲ್ಲಿ ಕುಟುಂಬವು ಅಲ್ಲೇ ನೆಲೆಸಿತ್ತು. ಅಲ್ಲಿಂದ ಅವರನ್ನು ಕರೆತರುವ ಏರ್ಪಾಟು ಮಾಡಲಾಯಿತು.

ಈ ‘ಮೆರವಣಿಗೆ’ ಇನ್ನೂ ಜಾರಿಯಲ್ಲಿದೆ. ಬೆಳಿಗ್ಗೆ ಲಂಡನ್‌ನಲ್ಲಿ ಷರೀಫ್‌ಗೆ ಆತ್ಮೀಯ ಬೀಳ್ಕೊಡುಗೆ ನೀಡಲಾಯಿತು. ಅಲ್ಲಿಂದ ಪುತ್ರಿಯೊಂದಿಗೆ ಅಬುಧಾಬಿಗೆ ಬಂದಿಳಿದಿದ್ದಾರೆ. ಅಲ್ಲಿಂದ ಪಾಕಿಸ್ತಾನಕ್ಕೆ ಪ್ರಯಾಣ ನಿಗದಿಯಾಗಿದೆ. ಅಬುಧಾಬಿಗೆ ಬಂದಿಳಿದಿರುವ ನವಾಜ್ ಷರೀಫ್ ಪಾಕಿಸ್ತಾನ ಹತ್ತಲಿದ್ದಾರೆ. ಲಾಹೋರ್‌ನ ಅಲ್ಲಮ ಇಕ್ಬಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅವರನ್ನು ಕರೆತರಲು ಭದ್ರತಾ ಪಡೆಗಳು ಅಗತ್ಯ ವ್ಯವಸ್ಥೆ ಮಾಡಿಕೊಂಡಿವೆ. ಜತೆಗೆ ಇಸ್ಲಮಾಬಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಅಗತ್ಯ ಬಿದ್ದರೆ ವಿಮಾನವನ್ನು ಅಲ್ಲಿಗೆ ವರ್ಗಾಯಿಸುವ ಸಾಧ್ಯತೆಗಳೂ ಇವೆ. ವಿಮಾನದಲ್ಲಿ ಪಾಕಿಸ್ತಾನಕ್ಕೆ ಬರುವ ದಾರಿಯಲ್ಲೇ ಷರೀಫ್‌ರನ್ನು ಬಂಧಿಸಲಾಗುತ್ತದೆ. ನಂತರ ಹೆಲಿಕಾಪ್ಟರ್‌ನಲ್ಲಿ ಅವರನ್ನು ಜೈಲಿಗೆ ಕರೆದುಕೊಂಡು ಹೋಗಲಾಗುತ್ತದೆ ಎಂದು ತಿಳಿದು ಬಂದಿದೆ.

ಲಾಹೋರ್‌ನಾದ್ಯಂತ ಷರೀಫ್‌ಗೆ ಬೆಂಬಲ ಸೂಚಿಸಿರುವ ಜನ
ಲಾಹೋರ್‌ನಾದ್ಯಂತ ಷರೀಫ್‌ಗೆ ಬೆಂಬಲ ಸೂಚಿಸಿರುವ ಜನ
ಚಿತ್ರಕೃಪೆ: ಸಿಎನ್ಎನ್

ಷರೀಫ್ ಆಗಮನದ ಹಿನ್ನೆಲೆಯಲ್ಲಿ ಲಾಹೋರ್ ನಗರವೇ ಸ್ತಬ್ಧವಾಗಿದ್ದು, ಅಘೋಷಿತ ಬಂದ್ ಜಾರಿಯಲ್ಲಿದೆ. ಎಲ್ಲೆಲ್ಲೂ ಷರೀಫ್‌ಗೆ ಬೆಂಬಲ ವ್ಯಕ್ತವಾಗಿದ್ದು, ನಗರದಲ್ಲಿ 10 ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯಿಂದ ಭಿಗಿ ಭದ್ರತೆ ಕೈಗೊಳ್ಳಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಷರೀಫ್ ಅವರ ಪಿಎಂಎಲ್‌—ಎನ್ ಪಕ್ಷದ 300ಕ್ಕೂ ಹೆಚ್ಚು ಕಾರ್ಯಕರ್ತರು, ನಾಯಕರನ್ನು ಬಂಧಿಸಲಾಗಿದೆ.

ಏನಿದು ಪ್ರಕರಣ?

ಪನಾಮಾ ಪೇಪರ್ಸ್‌ನಿಂದ ಬೆಳಕಿಗೆ ಬಂದ ಭ್ರಷ್ಟಾಚಾರ ಪ್ರಕರಣದಲ್ಲಿ ನವಾಜ್‌ ಷರೀಫ್‌ ಹೆಸರು ಕೇಳಿ ಬಂದಿತ್ತು. ನವಾಜ್‌ ಶರೀಫ್‌ ಮತ್ತು ಅವರ ಪುತ್ರಿ ಮರಿಯಮ್‌ ಹೆಸರಿನಲ್ಲಿ ಲಂಡನ್‌ನಲ್ಲಿ ಐಶಾರಾಮಿ ಬಂಗಲೆಗಳಿವೆ ಎಂದು ತಿಳಿದು ಬಂದಿತ್ತು. ಈ ಕುರಿತು 2017ರ ಜುಲೈ ತಿಂಗಳಲ್ಲಿ ವಿಚಾರಣೆ ನಡೆಸಿದ್ದ ಪಾಕಿಸ್ತಾನದ ಸುಪ್ರೀಂ ಕೋರ್ಟ್, ಲಂಡನ್‌ನಲ್ಲಿ ಶರೀಫ್‌ ಖರೀದಿಸಿರುವ ಬಂಗಲೆಗಳ ಹಣದ ಮೂಲದ ಬಗ್ಗೆ ಪ್ರಶ್ನೆಯೆತ್ತಿತ್ತು. ಬಂಗಲೆಗಳನ್ನು ತನ್ನ ಸ್ವಂತ ಆದಾಯದಿಂದಲೇ ಕೊಂಡಿರುವುದಾಗಿ ಶರೀಫ್‌ ಕುಟುಂಬ ವಾದಿಸಿತ್ತಾದರೂ, ಅಧಿಕೃತ ದಾಖಲೆಗಳನ್ನು ಒದಗಿಸುವಲ್ಲಿ ಸೋತಿತ್ತು. ಕೊನೆಗೆ ಮತ್ತೊಂದಷ್ಟು ವಿಚಾರಣಾ ಸಂದರ್ಭದ ಹೈಡ್ರಾಮಗಳ ನಂತರ ಅಂತಿಮ ತೀರ್ಪನ್ನು ಪ್ರಕಟಿಸಿದ್ದ ಇಸ್ಲಾಮಾಬಾದ್‌ ನ್ಯಾಯಾಲಯ, ಪುತ್ರಿ ಮರಿಯಮ್‌, ಅಳಿಯ ಸಫ್ದಾರ್‌ಗೆ ಜೈಲು ಶಿಕ್ಷೆ ವಿಧಿಸಿತ್ತು.

‘ಬಿದ್ದರೂ ಮೀಸೆ ಮಣ್ಣಾಗಲಿಲ್ಲ’

ಇದೀಗ ಬಂಧನವನ್ನು ಎದುರು ನೋಡುತ್ತಿರುವ ನವಾಜ್ ಷರೀಫ್ ಲಂಡನ್‌ನಿಂದ ಅಬುಧಾಬಿಗೆ ಬಂದಿಳಿಯುತ್ತಿದ್ದಂತೆ, “ನನ್ನನ್ನು ನೇರ ಜೈಲಿಗೆ ತೆಗೆದುಕೊಂಡು ಹೋಗಲಾಗುತ್ತದೆ. ನಾನು ಪಾಕಿಸ್ತಾನಿಯರಿಗಾಗಿ ಈ ಕೆಲಸ ಮಾಡುತ್ತಿದ್ದೇನೆ. ಮುಂದೆ ಬರಲಿರುವ ಜನಾಂಗಕ್ಕಾಗಿ ತ್ಯಾಗ ಮಾಡುತ್ತಿದ್ದೇನೆ. ಈ ರೀತಿಯ ಅವಕಾಶಗಳು ಮತ್ತೆ ಬರುವುದಿಲ್ಲ. ಪಾಕಿಸ್ತಾನದ ಭವಿಷ್ಯವನ್ನು ಒಟ್ಟಾಗಿ ಕಟ್ಟೋಣ,” ಎಂದು ಸಿನಿಮಾ ನಟನ ಧಾಟಿಯಲ್ಲಿ ಡೈಲಾಗ್‌ಗಳನ್ನು ಉದುರಿಸಿದ್ದಾರೆ.

ಈ ಎಲ್ಲಾ ನಾಟಕೀಯ ಬೆಳವಣಿಗೆಗಳ ಮಧ್ಯೆ ಜುಲೈ 25ರಂದು ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಈ ಚುನಾವಣೆ ಹಿನ್ನೆಲೆಯಲ್ಲಿ ನನ್ನ ವಿರುದ್ಧ ಪಿತೂರಿ ನಡೆಸಲಾಗಿದೆ ಎನ್ನುವುದು ಷರೀಫ್ ವಾದ. ಏನೇ ಆದರೂ ಈ ಚುನಾವಣೆಯಲ್ಲಿ ಷರೀಫ್ ಅವರ ಪಿಎಂಎಲ್-ಎನ್ ಪಕ್ಷವೇ ಮುಂಚೂಣಿಯಲ್ಲಿದೆ. ಅವರ ತಮ್ಮ ಮತ್ತು ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಶೆಹಬಾಜ್ ಷರೀಫ್ ಪಕ್ಷವನ್ನು ಮುನ್ನಡೆಸುತ್ತಿದ್ದು, ಪ್ರಧಾನಿಯಾಗುವ ಎಲ್ಲಾ ಸಾಧ್ಯತೆ ಇದೆ. ಜತೆಗೆ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಮತ್ತು ಬಿಲಾವಲ್ ಬುಟ್ಟೋ ಜರ್ದಾರಿಯ ಪಿಪಿಪಿ ಪಕ್ಷಗಳೂ ಕಣದಲ್ಲಿವೆ.

ಒಂದೊಮ್ಮೆ ಚುನಾವಣೆಯಲ್ಲಿ ಪಿಎಂಎಲ್-ಎನ್ ಪಕ್ಷ ಅಧಿಕಾರಕ್ಕೆ ಬಂದು ಶೆಹಬಾಜ್ ಷರೀಫ್ ಪ್ರಧಾನಿಯಾದರೆ ಈ ಬೃಹನ್ನಾಟಕದ ಒಟ್ಟು ಸಾರಾಂಶ ಏನು ಎಂಬುದು ನಿಮ್ಮ ಆಲೋಚನೆಗೆ ಬಿಟ್ಟದ್ದು.