‘ಸಲಿಂಗ ಕಾಮ ಮಾನಸಿಕ ರೋಗವಲ್ಲ’: ಇಂಡಿಯನ್‌ ಸೈಕ್ಯಾಟ್ರಿಕ್‌ ಸೊಸೈಟಿ
ಸುದ್ದಿ ಸಾರ

‘ಸಲಿಂಗ ಕಾಮ ಮಾನಸಿಕ ರೋಗವಲ್ಲ’: ಇಂಡಿಯನ್‌ ಸೈಕ್ಯಾಟ್ರಿಕ್‌ ಸೊಸೈಟಿ

ಸಲಿಂಗ ಕಾಮ ಎನ್ನುವುದು ಯಾವುದೇ ರೀತಿಯ ಮಾನಸಿಕ ರೋಗವಲ್ಲ ಎಂದಿರುವ ಇಂಡಿಯನ್‌ ಸೈಕ್ಯಾಟ್ರಿಕ್‌ ಸೊಸೈಟಿ, ಚಿಕಿತ್ಸೆಗಳ ಮೂಲಕ ಲೈಂಗಿಕ ಆಸಕ್ತಿಗಳನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದಿದೆ. 

ಸಲಿಂಗ ಕಾಮವನ್ನು ಮಾನಸಿಕ ಕಾಯಿಲೆಯಂತೆ ನೋಡುವುದನ್ನು ನಿಲ್ಲಿಸಬೇಕಿದೆ ಎಂದು ಇಂಡಿಯನ್‌ ಸೈಕ್ಯಾಟ್ರಿಕ್‌ ಸೊಸೈಟಿ(ಐಪಿಎಸ್‌) ಹೇಳಿದೆ. ಯಾವುದಾದರೂ ಚಿಕಿತ್ಸೆಯಿಂದ ಲೈಂಗಿಕ ಮನೋಭಿಲಾಷೆಗಳನ್ನು ಬದಲಾಯಿಸಬಹುದು ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ದಾಖಲೆಗಳಿಲ್ಲ ಎಂದು ಹೇಳಿರುವ ಐಪಿಎಸ್‌, ಈ ರೀತಿ ಚಿಕಿತ್ಸೆ ನೀಡಲು ಪ್ರಯತ್ನಿಸಿದರೆ ವ್ಯಕ್ತಿಗಳಲ್ಲಿ ಸ್ವಾಭಿಮಾನ ಕಡಿಮೆಯಾಗಿ ತಾವು ಕಳಂಕಿತರೆಂಬ ಯೋಚನೆ ಶುರುವಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿದೆ.

ಸಲಿಂಗ ಕಾಮದ ಬಗ್ಗೆ ಹೇಳಿಕೆ ನೀಡಿರುವ ಐಪಿಎಸ್‌, “ಸಲಿಂಗ ಕಾಮ ಎನ್ನುವುದು ಮಾನಸಿಕ ರೋಗವಲ್ಲ. ಸಲಿಂಗ ಕಾಮವನ್ನು ನಾವು ಭಿನ್ನಲಿಂಗ ಕಾಮ ಮತ್ತು ಉಭಯಲಿಂಗ ಕಾಮದಂತೆಯೇ ಪರಿಗಣಿಸುತ್ತೇವೆ,” ಎಂದಿದೆ.

ಸಲಿಂಗ ಕಾಮವನ್ನು ಅಪರಾಧವನ್ನಾಗಿ ಪರಿಗಣಿಸಿರುವ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 377ರ ಕುರಿತು ದೇಶಾದ್ಯಂತ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಮಾತನಾಡಿರುವ ಐಪಿಎಸ್‌, ಸಲಿಂಗ ಕಾಮ ತಪ್ಪಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ದೇಶದಲ್ಲಿ ಹಿಂದಿನಿಂದಲೂ ಕೂಡ ನಿರಾಕರಣೆಗೆ ಒಳಪಟ್ಟಿರುವ, ಬಹಿಷ್ಕೃತವೆಂದು ಮಾನಸಿಕವಾಗಿ ಪರಿಗಣಿಸಲ್ಪಟ್ಟಿರುವ ಸಲಿಂಗ ಕಾಮವನ್ನು ಅಪರಾಧದ ಪಟ್ಟಿಯಿಂದ ಹೊರತೆಗೆಯಬೇಕು ಎಂಬ ಹೋರಾಟ ದಶಕಗಳ ಕಾಲದಿಂದ ನಡೆದುಕೊಂಡು ಬಂದಿದೆ. ರಾಜಕೀಯ ಪಕ್ಷಗಳಿಂದ ಹಿಡಿದು, ಜನಸಾಮಾನ್ಯರಾದಿಯಾಗಿಯೂ ಕೂಡ ಹಲವಾರು ಅಭಿಪ್ರಾಯಗಳಿವೆ. ಸುಪ್ರಿಂ ಕೋರ್ಟ್‌ ವಿಚಾರಣೆಯಲ್ಲಿರುವ ಸಲಿಂಗಕಾಮದ ಕುರಿತು, ಕೆಲವರು ಇದು ಸಂಸ್ಕೃತಿ ಮತ್ತು ಪ್ರಕೃತಿ ಎರಡಕ್ಕೂ ವಿರುದ್ಧವಾದದ್ದು ಎಂದರೆ, ಮತ್ತೆ ಕೆಲವರು ಇದು ಮಾನವ ಹಕ್ಕುಗಳಿಗೆ ಸಂಬಂಧಿಸಿದ ವಿಷಯವಾಗಿದ್ದು ಸೆಕ್ಷನ್‌ 377ರ ಅಡಿ ಸಲಿಂಗಕಾಮಿಗಳನ್ನು ಶಿಕ್ಷಿಸುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂಬ ವಾದವನ್ನು ಮಂಡಿಸುತ್ತಾರೆ.

ಅಮೆರಿಕಾದ ಸೈಕ್ಯಾಟ್ರಿಕ್‌ ಅಸೋಸಿಯೇಷನ್‌ 1973ರಲ್ಲಿ ಸಲಿಂಗ ಕಾಮವನ್ನು ಮಾನಸಿಕ ರೋಗಗಳ ಪಟ್ಟಿಯಿಂದ ತೆಗೆದಿತ್ತು. ವಿಶ್ವ ಆರೋಗ್ಯ ಸಂಸ್ಥೆಯೂ ಕೂಡ ತನ್ನ ಮಾನಸಿಕ ರೋಗಗಳ ಪಟ್ಟಿಯಿಂದ ಸಲಿಂಗ ಕಾಮವನ್ನು 1992ರಲ್ಲಿ ತೆಗೆದುಹಾಕಿತ್ತು. ತನ್ನ ವಾದವನ್ನು ಸಮರ್ಥಿಸಲು ಇಂಡಿಯನ್‌ ಸೈಕ್ಯಾಟ್ರಿಕ್‌ ಸೊಸೈಟಿ ಈ ಉದಾಹರಣೆಗಳನ್ನು ಬಳಸಿಕೊಂಡಿದೆ.

ಇಂಡಿಯನ್‌ ಸೈಕ್ಯಾಟ್ರಿಕ್‌ ಸೊಸಯಟಿಯ ಅಧ್ಯಕ್ಷ ಅಜಿತ್‌ ಬಿಂದೆ, “ಕೆಲವು ವ್ಯಕ್ತಿಗಳಿಗೆ ಉಭಯಲಿಂಗ ಕಾಮದಲ್ಲಿ ಆಸಕ್ತಿ ಇರುವುದಿಲ್ಲ. ಸಲಿಂಗಿಗಳ ಜತೆ ಕಾಮತೃಷೆಯನ್ನು ತಿರಿಸಿಕೊಳ್ಳುವ ಮನಸ್ಥಿತಿಯನ್ನು ಕೆಲವರು ಹೊಂದಿರುತ್ತಾರೆ. ಇದರಿಂದಾಗಿ ಆವರನ್ನು ದಂಡಿಸಬೇಕಿಲ್ಲ. ಅವರಿಗೆ ಶಿಕ್ಷೆ ಕೊಡಬೇಕಿಲ್ಲ. ಅವರನ್ನು ಬಹಿಷ್ಕರಿಸಿ ದೂರವಿಡುವ ಅಗತ್ಯವೂ ಇಲ್ಲ,” ಎಂಬ ಅಭಿಪ್ರಾಯವನ್ನು ಮಂಡಿಸಿದ್ದಾರೆ.

“ನಿಮ್ಮ ಕಾಮಸಕ್ತಿಗಳು ಏನೇ ಇರಬಹುದು, ನಿಮ್ಮ ಲೈಂಗಿಕ ಆದ್ಯತೆಗಳು ಕೂಡ ಬೇರೆಯಾಗಿರಬಹುದು. ಅದರೆ ಇತರರು ಅದರಿಂದ ಹಿಂಸೆಗೆ ಒಳಗಾಗುವುದಿಲ್ಲ ಎಂದಾದರೆ, ವ್ಯಕ್ತಿ ತನ್ನ ಇಚ್ಚೆಯಂತೆ ತಾನು ಬದುಕಬಹುದು” ಎಂದು ಅಜಿತ್‌ ಬಿಂದೆ ಹೇಳಿದ್ದಾರೆ.