samachara
www.samachara.com
ಬಿಜೆಪಿ ಅಧಿಕಾರಕ್ಕೆ ಬಂದರೆ ಭಾರತ ‘ಹಿಂದೂ ಪಾಕಿಸ್ತಾನ’ ಆಗಲಿದೆ: ಶಶಿ ತರೂರ್
ಸುದ್ದಿ ಸಾರ

ಬಿಜೆಪಿ ಅಧಿಕಾರಕ್ಕೆ ಬಂದರೆ ಭಾರತ ‘ಹಿಂದೂ ಪಾಕಿಸ್ತಾನ’ ಆಗಲಿದೆ: ಶಶಿ ತರೂರ್

ಕೇರಳದಲ್ಲಿ ಭಾಷಣ ಮಾಡುವಾಗ ಶಶಿ ತರೂರ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 2019ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಭಾರತ ‘ಹಿಂದೂ ಪಾಕಿಸ್ತಾನ’ ಆಗಲಿದೆ ಎಂದಿದ್ದಾರೆ.

samachara

samachara

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಗೆದ್ದು ಮತ್ತೆ ಕೇಂದ್ರದಲ್ಲಿ ಅಧಿಕಾರ ಹಿಡಿದರೆ ಸಂವಿಧಾನದ ಜತೆ ಹೊಂದಾಣಿಕೆ ಮಾಡಿಕೊಂಡು ‘ಹಿಂದೂ ಪಾಕಿಸ್ತಾನ’ವನ್ನು ಸೃಷ್ಟಿಸಲಿದೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಮತ್ತು ಕೇಂದ್ರದ ಮಾಜಿ ಸಚಿವ ಶಶಿ ತರೂರ್‌ ಹೇಳಿಕೆ ನೀಡಿದ್ದಾರೆ.

ಕೇರಳದ ಸಭೆಯೊಂದರಲ್ಲಿ ಮಾತನಾಡುವ ವೇಳೆ ಶಶಿ ತರೂರ್‌ ಈ ಹೇಳಿಕೆಯನ್ನು ನೀಡಿದ್ದಾರೆ. “2019ರ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಅಧಿಕಾರ ಸ್ಥಾಪಿಸಿದರೆ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಸಂವಿಧಾನ ನಾವು ತಿಳಿದುಕೊಂಡಂತೆ ಇರುವುದಿಲ್ಲ. ಸಂವಿಧಾನ ಈಗ ಇರುವಂತೆಯೂ ಇರುವುದಿಲ್ಲ. ಅವರಿಗೆ ಅಗತ್ಯವಿರುವಂಥ ಹೊಸ ಸಂವಿಧಾನವನ್ನು ಬರೆದುಕೊಳ್ಳುತ್ತಾರೆ,” ಎಂದು ಶಶಿ ತರೂರ್‌ ಹೇಳಿದ್ದಾರೆ.

“ಬಿಜೆಪಿ ತರುವ ಹೊಸ ಸಂವಿಧಾನ ಹಿಂದೂ ರಾಷ್ಟ್ರದ ತತ್ವಗಳನ್ನು ಒಳಗೊಂಡಿರಲಿದೆ,” ಎಂದು ತರೂರ್ ಹೇಳಿಕೆ ನೀಡಿದ್ದಾರೆ.

“ಬಿಜೆಪಿಯ ಹೊಸ ಸಂವಿಧಾನವು ಅಲ್ಪಸಂಖ್ಯಾತರಿಗೆ ನೀಡಿರುವ ಸಮಾನತೆಯನ್ನು ಕಿತ್ತುಹಾಕುತ್ತದೆ. ಮಹಾತ್ಮ ಗಾಂಧಿ, ಜವಹರ್‌ಲಾಲ್‌ ನೆಹರೂ, ವಲ್ಲಭಬಾಯಿ ಪಟೇಲ್‌, ಮೌಲನಾ ಆಝಾದ್‌ ಸೇರಿದಂತೆ ಸ್ವಾತಂತ್ರಕ್ಕಾಗಿ ಹೋರಾಡಿದ ನೇತಾರರ್ಯಾರೂ ಬಯಸದ ಹಿಂದೂ ರಾಷ್ಟ್ರವನ್ನು ನಿರ್ಮಿಸಲಿದೆ,” ಎಂದಿದ್ದಾರೆ.

ಶಶಿ ತರೂರ್‌ ಹೇಳಿಕೆ ವಿವಾದವನ್ನು ಎಬ್ಬಿಸಿದ್ದು, ಈ ಹೇಳಿಕೆಯ ಕುರಿತು ಕಾಂಗ್ರೆಸ್‌ ಪಕ್ಷದ ರಾಷ್ಟ್ರಾಧ್ಯಕ್ಷ ರಾಹುಲ್‌ ಗಾಂಧಿ ಕ್ಷಮೆ ಕೇಳಬೇಕು ಎಂದು ಬಿಜೆಪಿ ಪಾಳಯ ಪಟ್ಟು ಹಿಡಿದು ಕುಳಿತಿದೆ.

ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ವಕ್ತಾರ ಸಂಬಿತ್‌ ಪಾತ್ರ ಈ ಹೇಳಿಕೆಯ ಕುರಿತು ಪ್ರತಿಕ್ರಿಯೆ ನೀಡಿದ್ದು, “ಕಾಂಗ್ರೆಸ್‌ ಭಾರತದ ಹಿಂದುಗಳಿಗೆ ಅಪಖ್ಯಾತಿ ಬರುವಂತೆ ಮಾಡುತ್ತಿದೆ. ಶಶಿ ತರೂರ್‌ ಹೇಳಿಕೆಗೆ ಸಂಬಂಧಿಸಿದಂತೆ ರಾಹುಲ್‌ ಗಾಂಧಿ ಕ್ಷಮೆ ಕೇಳಬೇಕು. ತನ್ನ ಆಕಾಂಕ್ಷೆಗಳನ್ನು ಸಾಧಿಸಿಕೊಳ್ಳುವ ಸಲುವಾಗಿ ಭಾರತವನ್ನು ಪಾಕಿಸ್ತಾನ ಮಾಡಲು ಹೊರಟಿರುವುದು ಕಾಂಗ್ರೆಸ್‌ ಪಕ್ಷ,” ಎಂದು ಹರಿಹಾಯ್ದಿದ್ದಾರೆ.

ಕೇರಳದಲ್ಲಿನ ತಮ್ಮ ಭಾಷಣದ ಮಧ್ಯೆ ಶಶಿ ತರೂರ್‌ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 377ನ್ನು ಕೂಡ ಪ್ರಸ್ತಾಪಿಸಿದ್ದಾರೆ. “ಸೆಕ್ಷನ್‌ 377ರ ಕುರಿತಾಗಿ ಸುಪ್ರಿಂ ಕೋರ್ಟ್‌ ನ್ಯಾಯಯುತವಾದ ನಿರ್ಧಾರವನ್ನೇ ಕೈಗೊಳ್ಳುತ್ತದೆ ಎಂಬ ನಂಬಿಕೆ ನನಗಿದೆ. ಇದು ಲೈಂಗಿಕತೆಯ ಪ್ರಶ್ನೆಯಲ್ಲ, ದೇಶದ ಜನರ ಸ್ವಾತಂತ್ರದ ಪ್ರಶ್ನೆ,” ಎಂದು ಶಶಿ ತರೂರ್‌ ಹೇಳಿದ್ದಾರೆ.

ಭಾರತದಲ್ಲಿ ಸಲಿಂಗ ರತಿಯನ್ನು ವಿರೋಧಿಸುವ ಈ ಕಾಯ್ದೆಯ ಬಗ್ಗೆ ಸುಪ್ರಿಂ ಕೋರ್ಟ್‌ನಲ್ಲಿ ಚರ್ಚೆ ನಡೆಯುತ್ತಿದೆ. ಈ ಮುಂಚೆ ಶಶಿ ತರೂರ್‌ ಸೆಕ್ಷನ್‌ 377ಕ್ಕೆ ತಿದ್ದುಪಡಿ ತರುವ ಸಲುವಾಗಿ ಸಂಸತ್ತಿನಲ್ಲಿ ಖಾಸಗಿ ಸದಸ್ಯರ ಕರಡನ್ನು (Private member’s bill) ಪ್ರಸ್ತಾಪಿಸಿದ್ದರು. ಆದರೆ ಬಹುಮತ ದೊರೆಯದ ಕಾರಣ ಈ ತಿದ್ದುಪಡಿ ಅಂಗೀಕಾರಗೊಂಡಿರಲಿಲ್ಲ.