‘ಕಾಂಗ್ರೆಸ್ ಕಾಮಿಡಿ’: ಗಿನ್ನೆಸ್ ದಾಖಲೆ ಪುಸ್ತಕಕ್ಕೆ ಪ್ರಧಾನಿ ಮೋದಿ ಹೆಸರು ಶಿಫಾರಸ್ಸು
ಸುದ್ದಿ ಸಾರ

‘ಕಾಂಗ್ರೆಸ್ ಕಾಮಿಡಿ’: ಗಿನ್ನೆಸ್ ದಾಖಲೆ ಪುಸ್ತಕಕ್ಕೆ ಪ್ರಧಾನಿ ಮೋದಿ ಹೆಸರು ಶಿಫಾರಸ್ಸು

ಪ್ರಧಾನಿ ನರೇಂದ್ರ ಮೋದಿಯವರ ವಿದೇಶಿ ಪ್ರವಾಸದ ವಿರುದ್ಧ ವಿಡಂಬನಾತ್ಮಕವಾಗಿ ನೆಲೆಯಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿರುವ ಗೋವಾ ಕಾಂಗ್ರೆಸ್ ಘಟಕ ಇದಕ್ಕಾಗಿ ‘ಗಿನ್ನೆಸ್ ದಾಖಲೆ’ಯ ಮೊರೆ ಹೋಗಿದೆ.

ಗಿನ್ನೆಸ್ ದಾಖಲೆಗಳ ಪುಸ್ತಕದಲ್ಲಿ ತಮ್ಮ ಹೆಸರು ದಾಖಲಾಗಬೇಕು ಎಂದು ಎಷ್ಟೋ ಜನರು ಚಿತ್ರ ವಿಚಿತ್ರ ಪ್ರಯತ್ನಗಳನ್ನು ನಡೆಸುತ್ತಾರೆ. ಇದೀಗ ಈ ದಾಖಲೆಗಳಲ್ಲಿ ಸುಲಭವಾಗಿ ತಮ್ಮ ಹೆಸರು ಸೇರಿಸುವ ಅವಕಾಶ ಗಿಟ್ಟಿಸಿದ್ದಾರೆ ಪ್ರಧಾನಿ ನರೇಂದ್ರ ಮೋದಿ. ಅವರ ಹೆಸರು ಗಿನ್ನೆಸ್ ದಾಖಲೆಗಳಲ್ಲಿ ಸೇರಿ ಹೋಗುತ್ತಾ? ಸದ್ಯದ ಉತ್ತರ ‘ಗೊತ್ತಿಲ್ಲ’.

ಪ್ರಧಾನಿ ನರೇಂದ್ರ ಮೋದಿಯವರ ವಿದೇಶಿ ಪ್ರವಾಸದ ವಿರುದ್ಧ ವಿಡಂಬನಾತ್ಮಕವಾಗಿ ನೆಲೆಯಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿರುವ ಗೋವಾ ಕಾಂಗ್ರೆಸ್ ಘಟಕ ಇದಕ್ಕಾಗಿ ‘ಗಿನ್ನೆಸ್ ದಾಖಲೆ’ಯ ಮೊರೆ ಹೋಗಿದೆ. ವಿದೇಶಗಳಿಗೆ ದಾಖಲೆಯ ಪ್ರವಾಸ ಮಾಡಿದ ಬಿರುದನ್ನು ಪ್ರದಾನಿ ನರೇಂದ್ರ ಮೋದಿಯವರಿಗೆ ನೀಡಿ ಎಂದು ಗೋವಾ ಕಾಂಗ್ರೆಸ್ ಗಿನ್ನೆಸ್ ಸಂಸ್ಥೆಯ ಅಧಿಕಾರಿಗಳಿಗೆ ಪತ್ರ ಬರೆದಿದೆ.

ಗಿನ್ನೆಸ್ ಅಧಿಕಾರಿಗಳಿಗೆ ರೆಜಿಸ್ಟರ್ ಪೋಸ್ಟ್ ಮೂಲಕ ರವಾನಿಸಲಾದ ಪತ್ರವನ್ನು ಬುಧವಾರ ಬಿಡುಗಡೆ ಮಾಡಿದ ಗೋವಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಂಕಲ್ಪ್ ಅಮೊನ್ಕರ್, “ಮೋದಿ ಆಳ್ವಿಕೆಯ ಹಾಸ್ಯಾಸ್ಪದತೆ ಬಗ್ಗೆ ನಾವು ಗಮನಸೆಳೆಯಲು ಬಯಸುತ್ತೇವೆ. ಪ್ರಧಾನಿ ಭಾರತಕ್ಕಿಂತ ವಿದೇಶದಲ್ಲೇ ಹೆಚ್ಚಿನ ಸಮಯವನ್ನು ಕಳೆದಿದ್ದಾರೆ,” ಎಂದು ಕಿಡಿಕಾರಿದ್ದಾರೆ.

"ವಿಶ್ವ ದಾಖಲೆ ಬರೆದ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹೆಸರನ್ನು (ಗಿನ್ನೆಸ್ ದಾಖಲೆಗೆ) ಸೂಚಿಸಲು ನಮಗೆ ಹೆಮ್ಮೆಯಾಗುತ್ತದೆ ಮತ್ತು ತುಂಬು ಸಂತೋಷವಾಗುತ್ತದೆ,” ಎಂದವರು ಕಾಲೆಳೆದಿದ್ದಾರೆ. “ಅವರು ಭಾರತದ ಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಂಡು ನಾಲ್ಕು ವರ್ಷಗಳ ಅವಧಿಯಲ್ಲಿ 52 ದೇಶಗಳಿಗೆ 41 ಪ್ರವಾಸಗಳನ್ನು ಕೈಗೊಂಡಿದ್ದಾರೆ. ಇದಕ್ಕಾಗಿ ಈಗಾಗಲೇ ಅವರು 355 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ,” ಎಂಬುದಾಗಿ ಅಮೋನ್ಕರ್ ಟೀಕಿಸಿದ್ದಾರೆ.

“ಭಾರತದ ಭವಿಷ್ಯದ ಪೀಳಿಗೆಗೆ ಅವರು (ಪ್ರಧಾನಿ ಮೋದಿ) ಆದರ್ಶಪ್ರಾಯರಾಗಿದ್ದಾರೆ. ಏಕೆಂದರೆ ಜಗತ್ತಿನ ಯಾವುದೇ ದೇಶದ ಪ್ರಧಾನ ಮಂತ್ರಿಯೂ ತಮ್ಮ ಅಧಿಕಾರಾವಧಿಯಲ್ಲಿ ಇಷ್ಟೊಂದು ದೇಶಗಳಿಗೆ ಪ್ರಯಾಣ ಬೆಳೆಸಿಲ್ಲ,” ಎಂದವರು ವ್ಯಂಗ್ಯವಾಡಿದ್ದಾರೆ.