‘ನಾನಲ್ಲ, ಡೆಡ್ ಬಾಡಿನೂ ಬಿಜೆಪಿಗೆ ಹೋಗಲ್ಲ’ : ಗಾಳಿ ಸುದ್ದಿಗೆ ಮಹದೇವಪ್ಪ ಫುಲ್‌ಸ್ಟಾಪ್
ಸುದ್ದಿ ಸಾರ

‘ನಾನಲ್ಲ, ಡೆಡ್ ಬಾಡಿನೂ ಬಿಜೆಪಿಗೆ ಹೋಗಲ್ಲ’ : ಗಾಳಿ ಸುದ್ದಿಗೆ ಮಹದೇವಪ್ಪ ಫುಲ್‌ಸ್ಟಾಪ್

“ನಾನು ಬಿಜೆಪಿಗೆ ಸೇರುತ್ತೇನೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಇದರ ಹಿಂದೆ ಕಾಂಗ್ರೆಸ್ ತೊರೆದು ಬಿಜೆಪಿ ಬಿಜೆಪಿಗೆ ಸೇರಿರುವ ನಾಯಕರ ಪಿತೂರಿ ಇದೆ,” ಎಂದು ಮಹದೇವಪ್ಪ ಹೇಳಿದ್ದಾರೆ.

ರಾಜ್ಯ ವಿಧಾನಸಭೆ ಚುನಾವಣೆ ಬಳಿಕ ಹೆಚ್ಚೂ ಕಡಿಮೆ ತೆರೆ ಮರೆಗೆ ಸರಿದಿದ್ದ ಮಾಜಿ ಲೋಕೋಪಯೋಗಿ ಸಚಿವ ಎಚ್.ಸಿ. ಮಹದೇವಪ್ಪ ಅವರ ಬಗ್ಗೆ ಸುದ್ದಿಯೊಂದು ಕಳೆದ ಕೆಲವು ದಿನಗಳಿಂದ ಕೇಳಿ ಬರುತ್ತಿತ್ತು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆಗೆ ಮುನಿಸಿಕೊಂಡಿರುವ ಮಹದೇವಪ್ಪ ಬಿಜೆಪಿ ಸೇರಲಿದ್ದಾರೆ ಎಂಬುದು ಆ ಸುದ್ದಿಯ ತಿರುಳಾಗಿತ್ತು. ಇದೀಗ ಈ ಎಲ್ಲಾ ಗಾಳಿ ಸುದ್ದಿಗಳಿಗೆ ಮುಸುಕಿನಿಂದ ಹೊರ ಬಂದು ಪ್ರತಿಕ್ರಿಯೆ ನೀಡಿದ್ದಾರೆ ಮಹದೇವಪ್ಪ.

ಗುರುವಾರ ಮೈಸೂರಿನಲ್ಲಿ ಮಾತನಾಡಿದ ಅವರು, “ನಾನು ಬಿಜೆಪಿಗೆ ಸೇರುತ್ತೇನೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಇದರ ಹಿಂದೆ ಕಾಂಗ್ರೆಸ್ ತೊರೆದು ಬಿಜೆಪಿ ಬಿಜೆಪಿಗೆ ಸೇರಿರುವ ನಾಯಕರ ಪಿತೂರಿ ಇದೆ,” ಎಂದು ಹೇಳಿದ್ದಾರೆ.

ಒಂದೂವರೆ ತಿಂಗಳ ಕಾಲ ವನವಾಸದಲ್ಲಿದ್ದ ಬಗ್ಗೆ ಇದೇ ಸಂದರ್ಭದಲ್ಲಿ ಸ್ಪಷ್ಟನೆ ನೀಡಿರುವ ಮಹದೇವಪ್ಪ, ರಾಜ್ಯ ಚುನಾವಣೆ ಸೋಲಿನಿಂದ ಆಘಾತಕ್ಕೊಳಗಾಗಿದ್ದೆ. ಇದರಿಂದ ಹೊರಬರಲು ಒಂದೂವರೆ ತಿಂಗಳು ಹಿಡಿಯಿತು. ಜತೆಗೆ ಪ್ರಕೃತಿ ಚಿಕಿತ್ಸೆಗೂ ಮಧ್ಯೆ ದಾಖಲಾಗಿದ್ದೆ. ಹಾಗಾಗಿ ಬಹಿರಂಗವಾಗಿ ಕಾಣಿಸಿಕೊಂಡಿರಲಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.

ಮುರಿದಿಲ್ಲ ದೋಸ್ತಿ

ಮಹದೇವಪ್ಪ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿಯ ಜತೆಗೆ ಕೇಳಿ ಬರುತ್ತಿದ್ದ ವಿಚಾರ ಸಿದ್ದರಾಮಯ್ಯ ಜತೆಗಿನ ಸಂಬಂಧ. ಅವರ ಜತೆಗಿನ ಮುನಿಸೇ ಮಹದೇವಪ್ಪ ಪಕ್ಷ ಬಿಡಲು ಕಾರಣ ಎನ್ನಲಾಗಿತ್ತು. ಆದರೆ ನಮ್ಮ ನಡುವಿನ ಸ್ನೇಹ ಸಂಬಂಧ ಹಳಿಸಿದೆ ಎಂದವರು ಯಾರು? ಎಂಬುದಾಗಿ ಮಹದೇವಪ್ಪ ಪ್ರಶ್ನಿಸಿದ್ದಾರೆ. “ನಿಮಗೆ ಸಿದ್ದರಾಮಯ್ಯನವರು ಏನಾದರೂ ಹೇಳಿದ್ದಾರಾ? ನಾವಿಬ್ಬರೂ ಚೆನ್ನಾಗಿಯೇ ಇದ್ದೇವೆ. ನಮ್ಮ ನಡುವಿನ ಸಂಬಂಧ ಹಳಸಿದೆ ಎಂದು ಬಿಂಬಿಸಲು ಯತ್ನಿಸುವ ಪ್ರಯತ್ನ ಯಶಸ್ವಿಯಾಗುವುದಿಲ್ಲ,” ಎಂದು ಕಿಡಿಕಾರಿದ್ದಾರೆ.