ಪೌರ ಕಾರ್ಮಿಕ ಸುಬ್ರಮಣಿ ಆತ್ಮಹತ್ಯೆ; 16 ಬೇಡಿಕೆಗಳನ್ನು ಬಿಬಿಎಂಪಿ ಮುಂದಿಟ್ಟ ಗುತ್ತಿಗೆ ಪೌರಕಾರ್ಮಿಕರು
ಸುದ್ದಿ ಸಾರ

ಪೌರ ಕಾರ್ಮಿಕ ಸುಬ್ರಮಣಿ ಆತ್ಮಹತ್ಯೆ; 16 ಬೇಡಿಕೆಗಳನ್ನು ಬಿಬಿಎಂಪಿ ಮುಂದಿಟ್ಟ ಗುತ್ತಿಗೆ ಪೌರಕಾರ್ಮಿಕರು

ಸತತ 7 ತಿಂಗಳಿಂದ ವೇತನ ದೊರೆಯದೇ ಸುಬ್ರಮಣಿ ಎಂಬ ಪೌರ ಕಾರ್ಮಿಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬೆನ್ನಲ್ಲೇ ಬಿಬಿಎಂಪಿ ಗುತ್ತಿಗೆ ಪೌರಕಾರ್ಮಿಕರ ಸಂಘಟನೆ ಪಾಲಿಕೆಯ ಮುಂದೆ ತನ್ನ 16 ಬೇಡಿಕೆಗಳನ್ನಿಟ್ಟಿದೆ.

ಕಳೆದ 7 ತಿಂಗಳಿಂದ ವೇತನ ದೊರೆಯದ ಕಾರಣದಿಂದಾಗಿ ಬಿಬಿಎಂಪಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 40ರ ಪ್ರಾಯದ ಸುಬ್ರಮಣಿ ಭಾನುವಾರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಬಿಬಿಎಂಪಿ ಗುತ್ತಿಗೆ ಪೌರ ಕಾರ್ಮಿಕರ ಸಂಘ, ಇದು ಸುಬ್ರಮಣಿಯೊಬ್ಬರ ಪರಿಸ್ಥಿತಿಯಲ್ಲ,  ಸಹಸ್ರಾರು ಪೌರ ಕಾರ್ಮಿಕರು ಇದೇ ಸ್ಥಿತಿಯನ್ನು ಅನುಭವಿಸಿದ್ದಾರೆ ಎಂದಿದೆ.

ಸುಬ್ರಮಣಿಯವರ ಸಾವು ಮತ್ತು ಪೌರ ಕಾರ್ಮಿಕರ ಸ್ಥಿತಿಗತಿಗಳನ್ನು ವಿವರಿಸಿ ಸಂಬಂಧಿತ ಅಧಿಕಾರಿಗಳಿಗೆ ಪತ್ರ ಬರೆದಿದ್ದು, ಮತ್ತೊಮ್ಮೆ ತಮ್ಮ ಹಕ್ಕೊತ್ತಾಯಗಳನ್ನು ಬಿಬಿಎಂಪಿ ಅಧಿಕಾರಿಗಳ ಮುಂದಿಟ್ಟಿದ್ದಾರೆ. ಗುತ್ತಿಗೆ ಪದ್ಧತಿಯನ್ನು ನಿಲ್ಲಿಸುವಂತೆ ಕಳೆದ 5 ತಿಂಗಳಿಂದ ಸಂಘಟನೆ ಒತ್ತಾಯ ಮಾಡುತ್ತಿದೆಯಾದರೂ ಈ ಕುರಿತು ಅಧಿಕಾರಿಗಳು ಗಮನ ಹರಿಸಿಲ್ಲ. 7 ತಿಂಗಳುಗಳಿಂದ ಗುತ್ತಿಗೆ ಪೌರ ಕಾರ್ಮಿಕರಿಗೆ ವೇತನವೂ ಸಹ ದೊರೆತಿಲ್ಲ. ಇವುಗಳನ್ನೆಲ್ಲಾ ಪತ್ರದಲ್ಲಿ ಪ್ರಸ್ತಾಪಿಸಿರುವ ಸಂಘಟನೆ, ಶೀಘ್ರವಾಗಿ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಮನವಿ ಮಾಡಿದೆ.

ಬಿಬಿಎಂಪಿ ಗುತ್ತಿಗೆ ಪೌರ ಕಾರ್ಮಿಕರ ಸಂಘ ಪಾಲಿಕೆಯ ಮುಂದಿಟ್ಟಿರುವ ಹಕ್ಕೊತ್ತಾಯಗಳು ಹೀಗಿವೆ:

  • ಸುಬ್ರಮಣಿಯವರ ಕುಟುಂಬಕ್ಕೆ 25 ಲಕ್ಷ ಪರಿಹಾರವನ್ನು ದೊರಕಿಸಿಕೊಡಬೇಕು. ಸುಬ್ರಮಣಿಯವರ ಹೆಂಡತಿಗೆ ಬಿ.ಬಿ.ಎಂ.ಪಿಯಲ್ಲಿ ಖಾಯಂ ಕೆಲಸ ನೀಡಬೇಕು ಹಾಗು ಅವರ ಕುಟುಂಬಕ್ಕೆ ಸರ್ಕಾರಿ ವಸತಿಯನ್ನು ಒದಗಿಸಬೇಕು. ಈ ಸಾವಿಗೆ ಬಿ.ಬಿ.ಎಂ.ಪಿ ಸುಬ್ರಮಣಿಯವರ ಕುಟಂಬದ ಕ್ಷಮೆಯಾಚಿಸಬೇಕು
  • ಗುತ್ತಿಗೆ ಪದ್ದತಿಯನ್ನು ರದ್ದು ಪಡಿಸಲು ಮತ್ತು ನೇರ ವೇತನ ಪಾವತಿ ಮಾಡಲು ಸರ್ಕಾರದ ಆದೇಶವನ್ನು ತಕ್ಷಣದಲ್ಲೆ ಜಾರಿಗೊಳಿಸಬೇಕು.
  • ಪೌರಕಾರ್ಮಿಕರಿಗೆ ವೇತನ ನೀಡುವುದರಲ್ಲಿ ತಡೆ ಏಕಾಯಿತು ಎಂದು ತನಿಖೆ ನಡೆಸಿ ಅದರ ವರದಿಯನ್ನು ಶೀಘ್ರದಲ್ಲೆ ಬಹಿರಂಗಪಡಿಸಬೇಕು
  • 700 ಜನಸಂಖ್ಯೆಗೆ ಓರ್ವ ಪೌರಕಾರ್ಮಿಕ ಎಂಬ ನೀತಿಯನ್ನು ರದ್ದುಗೊಳಿಸಿ, 500:1 ನೀತಿಯನ್ನು ಜಾರಿ ಮಾಡಬೇಕು, ಹಾಗು ‘ರಿಸರ್ವ್ ಲೀವ್’ ನಿಟ್ಟಿನಲ್ಲಿ ಶೇ.16ರಷ್ಟು ಹೆಚ್ಚು ಕಾರ್ಮಿಕರನ್ನು ತೆಗೆದುಕೊಳ್ಳಬೇಕು
  • ನೇರ ಪಾವತಿಯನ್ನು ಎಲ್ಲಾ ಪೌರಕಾರ್ಮಿಕರನ್ನು ಒಳಗೊಂಡಂತೆ ಡ್ರೈವರ್ಸ್ ಮತ್ತು ಸಹಾಯಕರಿಗೆ ವಿಸ್ತರಿಸಬೇಕು
  • ಜನವರಿಯಿಂದ ಜೂನ್ 2018ರ ವೇತನವನ್ನು ತಕ್ಷಣದಲ್ಲೇ ವೇತನ ಚೀಟಿಗಳೊಂದಿಗೆ ನೀಡಬೇಕು
  • ಪ್ರತಿ ತಿಂಗಳ 7ನೇ ತಾರೀಕಿನ ಒಳಗೆ ವೇತನವನ್ನು ವೇತನ ಚೀಟಿಯೊಂದಿಗೆ ನೀಡಬೇಕು
  • ಕಾರ್ಮಿಕರ ಪಟ್ಟಿಯಲ್ಲಿ ನಮೂದು ಆಗದಿರುವ ಪೌರಕಾರ್ಮಿಕರ ಹೆಸರನ್ನು ಸೇರಿಸಬೇಕು
  • ಕನಿಷ್ಠ ವೇತನ ಅಧಿಸೂಚನೆಯಲ್ಲಿ ಹೆಸರಿಸಲಾಗಿರುವ ಎಲ್ಲ ಸಲಕರಣೆಗಳನ್ನು ಹಾಗು ಕಾರ್ಮಿಕರಿಗೆ ಉಚಿತ ಶೌಚಾಲಯ, ಕುಡಿಯುವ ನೀರು ಹಾಗು ವಿಶ್ರಾಂತಿ ಕೊಠಡಿ ತಕ್ಷಣ ನೀಡಬೇಕು
  • ಬೋಗಸ್ ಕಾರ್ಮಿಕರ ಹೆಸರುಗಳನ್ನು ನೊಂದಾಯಿಸಿಕೊಂಡಿರುವ ಬಿ.ಬಿ.ಎಂ.ಪಿ ಅಧಿಕಾರಿಗಳ ವಿರುದ್ಧ ಎಫ್.ಐ.ಆರ್ ಅನ್ನು ದಾಖಲಿಸಬೇಕು
  • ಆರೋಗ್ಯ ನಿರೀಕ್ಷಕರಿಗೆ ಮತ್ತು ಬಿ.ಬಿ.ಎಂ.ಪಿ ಅಧಿಕಾರಿಗಳಿಗೆ ಪೌರಕಾರ್ಮಿಕರಲ್ಲಿ ಭಯದ ವಾತಾವರಣವನ್ನು ಉಂಟು ಮಾಡಬಾರದೆಂದು ಹಾಗೂ ಘನತೆ ಮತ್ತು ಗೌರವದಿಂದ ವರ್ತಿಸಬೇಕೆಂದು ಸೂಚಿಸಬೇಕು.
  • ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರ ಆದೇಶ ದಿನಾಂಕ 22.10.2017 ಅನ್ನು ಪರಿಪೂರ್ಣಗೊಳಿಸುವುದು. ಅದರ ಪ್ರಕಾರ 90,18,81,719 ರೂಪಾಯಿಗಳ ಠೇವಣಿಯನ್ನು ಇಡಬೇಕು
  • ಬಿ.ಬಿ.ಎಂ.ಪಿಯು ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯನ್ನು ಜಾರಿಗೊಳಿಸಬೇಕು
  • ವಾರ್ಡ್ ಸಂಖ್ಯೆ 55ರಲ್ಲಿ ಪೌರಕಾರ್ಮಿಕರ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ವಿರುದ್ಧ ನಡೆದ ವಿಚಾರಣೆ ಆದೇಶವನ್ನು ಘೋಷಿಸಬೇಕು
  • ಈ ಹಿಂದೆ ಇದ್ದಂತಹ ಗುತ್ತಿಗೆದಾರರ ವಿರುದ್ಧ ಸಂಘಟನೆಯು ನೀಡಿದ್ದ ದೂರುಗಳನ್ನು ಆಧರಿಸಿ ಕ್ರಮ ಕೈಗೊಳ್ಳಬೇಕು
  • ನೇರ ಪಾವತಿಯನ್ನು ಅಡ್ಡಿಪಡಿಸಲು ಪ್ರಯತ್ನಿಸುತ್ತಿರುವ ಬಿ.ಬಿ.ಎಂ.ಪಿ ಅಧಿಕಾರಿಗಳ ವಿರುದ್ಧ ಮತ್ತು ನೇರ ಪಾವತಿಯನ್ನು ಜಾರಿ ಮಾಡುವಲ್ಲಿ ವಿಫಲವಾಗಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು

ಒಟ್ಟು 16 ಹಕ್ಕೊತ್ತಾಯಗಳನ್ನು ಪಾಲಿಕೆಯ ಮುಂದಿಟ್ಟಿರುವ ಸಂಘಟನೆ, ತನ್ನ ನ್ಯಾಯಯುತ ಹಕ್ಕುಗಳನ್ನು ಕೇಳುತ್ತಿದೆ. ಪೌರ ಕಾರ್ಮಿಕರೊಬ್ಬರ ಸಾವಿನ ನಂತರವಾದರೂ ಕೂಡ ಬಿಬಿಎಂಪಿ ಈ ಬಗ್ಗೆ ಎಚ್ಚೆತ್ತುಕೊಳ್ಳುತ್ತದೆಯೇ ಎನ್ನುವುದನ್ನು ಕಾದುನೋಡಬೇಕಿದೆ.