2019ರ ಚುನಾವಣೆ: ಅಮಿತ್ ಶಾ- ನಿತೀಶ್ ಕುಮಾರ್‌ ಮೈತ್ರಿ ಮಾತುಕತೆ
ಸುದ್ದಿ ಸಾರ

2019ರ ಚುನಾವಣೆ: ಅಮಿತ್ ಶಾ- ನಿತೀಶ್ ಕುಮಾರ್‌ ಮೈತ್ರಿ ಮಾತುಕತೆ

2019ರ ಲೋಕಸಭಾ ಚುನಾವಣೆಗಾಗಿ ಈಗಲೇ ಸಿದ್ಧತೆ ನಡೆಸಿರುವ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಬಿಹಾರದಲ್ಲಿ ಸೀಟು ಹಂಚಿಕೆ ಸಂಬಂಧ ಜೆಡಿಯು ನಾಯಕ ನಿತೀಶ್‌ ಕುಮಾರ್ ಜತೆ ಮಾತುಕತೆ ನಡೆಸಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ಸೀಟು ಹಂಚಿಕೆ ಸಂಬಂಧ ಬಿಜೆಪಿ ಮತ್ತು ಜೆಡಿಯು ನಡುವೆ ಮಾತುಕತೆ ನಡೆಯುತ್ತಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮತ್ತು ಜೆಡಿಯು ನಾಯಕ ನಿತೀಶ್‌ ಕುಮಾರ್‌ ಈ ಸಂಬಂಧ ಗುರುವಾರ ಮಾತುಕತೆ ನಡೆಸಲಿದ್ದಾರೆ.

ಅಮಿತ್ ಶಾ ಗುರುವಾರ ಬೆಳಿಗ್ಗೆಯೇ ಪಟ್ನಾಗೆ ಬಂದಿಳಿದಿದ್ದು ನಿತೀಶ್‌ ಕುಮಾರ್‌ ಜತೆಯಯಲ್ಲಿ ಬೆಳಗಿನ ಉಪಹಾರದಲ್ಲಿ ಭಾಗವಹಿಸಿದ್ದಾರೆ. ನಿತೀಶ್‌ ಕುಮಾರ್‌ ಜತೆಗೆ ಅಮಿತ್‌ ಶಾ ರಾತ್ರಿ ಊಟಕ್ಕೂ ಸಿದ್ಧತೆ ನಡೆದಿದೆ. ಇಡೀ ದಿನ ಪಟ್ನಾದಲ್ಲಿ ಉಳಿಯಲಿರುವ ಅಮಿತ್‌ ಶಾ ಸೀಟು ಹಂಚಿಕೆ ಕುರಿತಂತೆ ನಿತೀಶ್‌ ಕುಮಾರ್‌ ಹಾಗೂ ರಾಜ್ಯ ಬಿಜೆಪಿ ನಾಯಕರ ಜತೆಗೆ ಚರ್ಚೆ ನಡೆಸಲಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಬಿಹಾರದಲ್ಲಿ ಬಿಜೆಪಿ ಜೆಡಿಯು ಜತೆಗೆ ‘ಸಮ ಸೀಟು ಹಾಗೂ ಸಮ ಜವಾಬ್ದಾರಿ’ ಹಂಚಿಕೆಗೆ ಒಲವು ತೋರಿದೆ ಎನ್ನಲಾಗಿದೆ. ರಾಜ್ಯದಲ್ಲಿರುವ 40 ಲೋಕಸಭಾ ಸ್ಥಾನಗಳನ್ನು ಗೆಲ್ಲಲು ಬಿಜೆಪಿ – ಜೆಡಿಯು ಒಟ್ಟಾಗಿ ಕೆಲಸ ಮಾಡಲು ಉತ್ಸುಕತೆ ತೋರುತ್ತಿವೆ.

“ಇಬ್ಬರೂ ರಾಷ್ಟ್ರೀಯ ನಾಯಕರು ಸೀಟು ಹಂಚಿಕೆ ಹಾಗೂ ಚುನಾವಣಾ ಜವಾಬ್ದಾರಿ ಹಂಚಿಕೆ ಕುರಿತಂತೆ ಮಾತುಕತೆ ನಡೆಸಲಿದ್ದಾರೆ. ಈ ಭೇಟಿ ಎರಡೂ ರಾಷ್ಟ್ರೀಯ ಪಕ್ಷಗಳು ಹಾಗೂ ರಾಷ್ಟ್ರೀಯ ನಾಯಕರ ನಡುವಿನ ಸಂಬಂಧ ವೃದ್ಧಿಗೆ ಸಹಕಾರಿಯಾಗಲಿದೆ. ರಾಜ್ಯದ ಎಲ್ಲಾ ಲೋಕಸಭಾ ಕ್ಷೇತ್ರಗಳನ್ನೂ ಬಿಜೆಪಿ- ಜೆಡಿಯು ಮೈತ್ರಿಯಿಂದ ಗೆಲ್ಲುವ ಚರ್ಚೆ ನಡೆಯುತ್ತಿದೆ” ಎಂದು ಬಿಜೆಪಿ ವಕ್ತಾರ ಷಾಹನವಾಜ್‌ ಹುಸೇನ್‌ ತಿಳಿಸಿದ್ದಾರೆ.

ಬಿಹಾರದಲ್ಲಿ ಜೆಡಿಯು- ಬಿಜೆಪಿ ಮೈತ್ರಿಯ ಎರಡನೇ ವರ್ಷಾಚರಣೆಗೆ ಇನ್ನು ಎರಡು ವಾರ ಬಾಕಿ ಇರುವಂತೆ ನಡೆಯುತ್ತಿರುವ ಈ ಭೇಟಿಯು ಬಿಹಾರದ ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಲು ಬಿಜೆಪಿ- ಜೆಡಿಯು ರಣತಂತ್ರಕ್ಕೆ ಸಿದ್ಧವಾಗುತ್ತಿರುವ ಮುನ್ಸೂಚನೆ ಎನ್ನಲಾಗಿದೆ.

2019ರಲ್ಲಿ ಬಿಹಾರ ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಲು 10 ಸಾವಿರ ಬೂತ್‌ ಇನ್‌ಚಾರ್ಜ್‌ಗಳನ್ನು ಬಿಜೆಪಿ ಈಗಲೇ ಸಜ್ಜುಗೊಳಿಸುತ್ತಿದೆ. ಈ ಸಂಬಂಧ 10 ಸಾವಿರ ತಳಮಟ್ಟದ ಕಾರ್ಯಕರ್ತರನ್ನುದ್ದೇಶಿಸಿ ಅಮಿತ್‌ ಶಾ ಮಾತನಾಡುವ ಕಾರ್ಯಕ್ರಮವೂ ಗುರುವಾರ ನಿಗದಿಯಾಗಿದೆ.

ಒಂದು ಕಡೆ ಜೆಡಿಯು ಜತೆಗೆ ಸೀಟು ಹಂಚಿಕೆ ಹಾಗೂ ಮೈತ್ರಿ ಬಲಗೊಳಿಸುವ ಮಾತುಕತೆಯ ಜತೆಗೆ, ಮತ್ತೊಂದು ಕಡೆಗೆ ಪಕ್ಷದ ತಳಮಟ್ಟದ ಕಾರ್ಯಕರ್ತರನ್ನು ಉತ್ತೇಜಿಸುವ ಕಾರ್ಯಕ್ಕೂ ಅಮಿತ್‌‌ ಶಾ ಮುಂದಾಗಿದ್ದಾರೆ. 2019ರಲ್ಲಿ ಮತ್ತೆ ಕೇಂದ್ರದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಲು ಬಿಜೆಪಿ ಈಗಿನಿಂದಲೇ ಚುನಾವಣೆಗೆ ಸಿದ್ಧತೆ ನಡೆಸುತ್ತಿದೆ.