ಉನ್ನಾವೋ ಅತ್ಯಾಚಾರ ಪ್ರಕರಣ: ಬಿಜೆಪಿ ಶಾಸಕನ ವಿರುದ್ಧ ಸಿಬಿಐ ಚಾರ್ಜ್‌ಶೀಟ್
ಸುದ್ದಿ ಸಾರ

ಉನ್ನಾವೋ ಅತ್ಯಾಚಾರ ಪ್ರಕರಣ: ಬಿಜೆಪಿ ಶಾಸಕನ ವಿರುದ್ಧ ಸಿಬಿಐ ಚಾರ್ಜ್‌ಶೀಟ್

ವಿಶೇಷ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಸಲ್ಲಿಸಲಾದ ಚಾರ್ಜ್‌ಶೀಟ್‌ನಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120ಬಿ, 363, 366, 376(1), 506 ಮತ್ತು ಪೋಕ್ಸೋ ಕಾಯ್ದೆಯಡಿಯಲ್ಲಿ ಸೆಂಗಾರ್ ವಿರುದ್ಧ ಆರೋಪಗಳನ್ನು ಹೊರಿಸಲಾಗಿದೆ.

ದೇಶದಾದ್ಯಂತ ಗಮನ ಸೆಳೆದಿದ್ದ ಉನ್ನಾವೋ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಬಿಜೆಪಿ ಶಾಸಕ ಕುಲ್ದೀಪ್ ಸಿಂಗ್ ಸೆಂಗಾರ್ ವಿರುದ್ಧ ಕೇಂದ್ರ ತನಿಖಾ ದಳ (ಸಿಬಿಐ) ಬುಧವಾರ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದೆ.

ವಿಶೇಷ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಸಲ್ಲಿಸಲಾದ ಚಾರ್ಜ್‌ಶೀಟ್‌ನಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120ಬಿ, 363, 366, 376(1), 506 ಮತ್ತು ಪೋಕ್ಸೋ ಕಾಯ್ದೆಯಡಿಯಲ್ಲಿ ಸೆಂಗಾರ್ ವಿರುದ್ಧ ಆರೋಪಗಳನ್ನು ಹೊರಿಸಲಾಗಿದೆ.

ಉನ್ನಾವೋ ಅತ್ಯಾಚಾರ ಪ್ರಕರಣ ನಡೆದು ಬಂದ ಹಾದಿ

ಉನ್ನಾವೋ ಜಿಲ್ಲೆಯ ಬಂಗಾರ್‌ಮಾವ್ ಕ್ಷೇತ್ರದ ಬಿಜೆಪಿ ಶಾಸಕ ಸೆಂಗಾರ್ ಜೂನ್ 4, 2017ರಂದು ತಮ್ಮ ಉನ್ನಾವೋ ನಿವಾಸದಲ್ಲಿ ಅಪ್ರಾಪ್ತ ಯುವತಿ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎನ್ನಲಾಗಿದೆ. ಉದ್ಯೋಗ ಕೇಳಲೆಂದು ಸೆಂಗಾರ್ ಮನೆಗೆ ಯುವತಿ ತೆರಳಿದ್ದ ವೇಳೆ ಈ ಘಟನೆ ನಡೆದಿತ್ತು.

ಯುವತಿಯ ಕುಟುಂಬಸ್ಥರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ ಉತ್ತರ ಪ್ರದೇಶದ ಪೊಲೀಸರು ಆಕೆಯ ತಂದೆಯ ಮೇಲೆಯೇ ಏಪ್ರಿಲ್ 3ರಂದು ಶಸ್ತ್ರಾಸ್ತ್ರ ಕಾಯ್ದೆಯಡಿ ದೂರು ದಾಖಲಿಸಿ, ಏಪ್ರಿಲ್ 5 ರಂದು ಅವರನ್ನು ಸೆರೆಮನೆಗೆ ತಳ್ಳಿದ್ದರು. ಜೈಲಿನಲ್ಲೇ ಸೆಂಗಾರ್ ಅವರ ಸಹೋದರರು ಸೇರಿ ಇತರರು ಯುವತಿಯ ತಂದೆ ಮೇಲೆ ಮೇಲೆ ಹಲ್ಲೆ ನಡೆಸಿದ್ದರಿಂದ ಏಪ್ರಿಲ್ 8ರಂದು ಅವರು ಆಸ್ಪತ್ರೆಯಲ್ಲಿ ನಿಧನರಾಗಿದ್ದರು.

ಈ ಪ್ರಕರಣದಲ್ಲಿ ನ್ಯಾಯವೇ ಸಿಗದಾದಾಗ ಅಪ್ರಾಪ್ತ ಯುವತಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಿವಾಸದ ಮುಂದೆಯೇ ಆತ್ಮಹತ್ಯೆಗೆ ಯತ್ನಿಸಿದ್ದಳು. ಇದು ದೇಶದಾದ್ಯಂತ ಆಕ್ರೋಶವನ್ನು ಹುಟ್ಟುಹಾಕಿತ್ತು. ಹೀಗಿದ್ದೂ ಸೆಂಗಾರ್ ಅವರನ್ನು ಸಿಬಿಐ ಆಗಲಿ, ಉತ್ತರ ಪ್ರದೇಶ ಪೊಲೀಸರಾಗಲಿ ಬಂಧಿಸದೇ ಇದ್ದಾಗ ಅಲಹಬಾದ್ ಹೈಕೋರ್ಟ್ ಅವರನ್ನು ಬಂಧಿಸುವಂತೆ ಸ್ಪಷ್ಟ ನಿರ್ದೇಶನ ನೀಡಿತ್ತು. ಕೊನೆಗೆ ಅನಿವಾರ್ಯವಾಗಿ ಏಪ್ರಿಲ್ ನಲ್ಲಿ ಸೆಂಗಾರ್ ಅವರನ್ನು ಸಿಬಿಐ ಬಂಧಿಸಿ ಸೆರೆಮನೆಗೆ ತಳ್ಳಿತ್ತು.

ಕಳೆದ ಶನಿವಾರ ಸಿಬಿಐ ಪ್ರಕರಣದಲ್ಲಿ ಮೊದಲ ಚಾರ್ಜ್‌ಶೀಟ್ ಸಲ್ಲಿಸಿದ್ದು, ಇದರಲ್ಲಿ ಸೆಂಗಾರ್ ಸಹೋದರ ಸೇರಿ ಐವರ ಮೇಲೆ ಯುವತಿಯ ತಂದೆಯನ್ನು ಕೊಂದ ಆರೋಪ ಹೊರಿಸಲಾಗಿದೆ.

ಇದೀಗ ಎರಡನೇ ಚಾರ್ಜ್‌ಶೀಟ್‌ನಲ್ಲಿ ಬಿಜೆಪಿ ಶಾಸಕ ಕುಲ್ದೀಪ್ ಸಿಂಗ್ ಸೆಂಗಾರ್ ವಿರುದ್ಧ ಯುವತಿಯ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.