samachara
www.samachara.com
ರಾಜಕಾರಣ ವರ್ಸಸ್ ಭಯೋತ್ಪಾದನೆ: ಪಾಕಿಸ್ತಾನ ಚುನಾವಣೆಯಲ್ಲಿ ರಕ್ತದೋಕುಳಿ
ಸುದ್ದಿ ಸಾರ

ರಾಜಕಾರಣ ವರ್ಸಸ್ ಭಯೋತ್ಪಾದನೆ: ಪಾಕಿಸ್ತಾನ ಚುನಾವಣೆಯಲ್ಲಿ ರಕ್ತದೋಕುಳಿ

ಜಾತ್ಯಾತೀತ ಪಕ್ಷಗಳ ವಿರುದ್ಧ ತಾಲಿಬಾನ್ ಮತ್ತು ಇತರ ಉಗ್ರ ಸಂಘಟನೆಗಳು ಗುಟುರು ಹಾಕುತ್ತಲೇ ಬಂದಿವೆ. ಉಗ್ರರ ಭದ್ರ ನೆಲೆಗಳಾದ ಬುಡಕಟ್ಟು ಪ್ರದೇಶಗಳ ಮೇಲಿನ ಸೇನಾ ಕಾರ್ಯಾಚರಣೆಯನ್ನು ಈ ಪಕ್ಷಗಳು ಬೆಂಬಲಿಸುತ್ತಿವೆ ಎಂಬುದು ಇದಕ್ಕೆ ಕಾರಣ.

ಪಾಕಿಸ್ತಾನದಲ್ಲಿ ಜುಲೈ 25 ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಈ ಚುನಾವಣೆಗೂ ಮುನ್ನ ಭರದ ಪ್ರಚಾರ ದೇಶದಾದ್ಯಂತ ಮತ್ತು ಸಾಮಾಜಿಕ ಜಾಲತಾಣಗಳಲ್ಲೂ ನಡೆಯುತ್ತಿದೆ. ಇವುಗಳ ಜತೆ ಜತೆಗೆ ರಕ್ತದೋಕುಳಿಯೂ ಪಾಕಿಸ್ತಾನದ ರಸ್ತೆಗಳಲ್ಲಿ ಹರಿಯುತ್ತಿದೆ. ದೇಶದಲ್ಲಿ ಬೇರು ಬಿಟ್ಟಿರುವ ಭಯೋತ್ಪಾದಕ ಸಂಘಟನೆಗಳು ಚುನಾವಣಾ ಪ್ರಕ್ರಿಯೆಯನ್ನೇ ಗುರಿಯಾಗಿಸಿ ದಾಳಿ ನಡೆಸುತ್ತಿದ್ದು ಹಲವು ರಾಜಕೀಯ ನಾಯಕರು ಮತ್ತು ಕಾರ್ಯಕರ್ತರನ್ನು ಬಲಿ ಪಡೆದಿದೆ.

ಹೀಗೆ ಚುನಾವಣೆಯ ವೇಳೆ ಅತೀ ಹೆಚ್ಚು ದಾಳಿಗೆ ಗುರಿಯಾದ ರಾಜಕೀಯ ಪಕ್ಷವೆಂದರೆ ಎಎನ್‌ಪಿ ಅಥವಾ ಅವಾಮಿ ನ್ಯಾಷನಲ್ ಪಾರ್ಟಿ. ಈ ಪಕ್ಷದ ಪ್ರಚಾರ ಸಭೆಯೊಂದು ಮಂಗಳವಾರ ಪೇಶಾವರದ ಯಾಕಟೂಟ್‌ನಲ್ಲಿ ಆಯೋಜನೆಯಾಗಿತ್ತು. ಈ ಪ್ರಚಾರ ಸಭೆಯ ಮೇಲೆ ಉಗ್ರರು ಬಾಂಬ್ ದಾಳಿ ನಡೆಸಿದ್ದು ಎಎನ್‌ಪಿ ನಾಯಕ ಹರೂನ್ ಬಿಲೌರ್‌ನ್ನು ಹತ್ಯೆಗೈದಿದ್ದಾರೆ. ದಾಳಿಯಲ್ಲಿ 20ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು ಇವರನ್ನು ಇಲ್ಲಿನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈಗಷ್ಟೇ ಬಂದಿರುವ ಮಾಹಿತಿಗಳ ಪ್ರಕಾರ ತೆಹ್ರಿಕ್-ಇ-ತಾಲಿಬಾನ್ ಈ ಘಟನೆಯ ಹೊಣೆ ಹೊತ್ತುಕೊಂಡಿದೆ.

ರಾಜಕಾರಣ ವರ್ಸಸ್ ಭಯೋತ್ಪಾದನೆ: ಪಾಕಿಸ್ತಾನ ಚುನಾವಣೆಯಲ್ಲಿ ರಕ್ತದೋಕುಳಿ
ಹತ್ಯೆಗೀಡಾದ ಹರೂನ್ ಬಿಲೌರ್  (ಚಿತ್ರ: ದಿ ಎಕ್ಸ್‌ಪ್ರೆಸ್‌ ಟ್ರಿಬ್ಯೂನ್)

ಎಎನ್‌ಪಿ ಪಕ್ಷ ವರ್ಸಸ್ ಭಯೋತ್ಪಾದನಾ ಸಂಘಟನೆ:

ಹಾಗೆ ನೋಡಿದರೆ ಎಎನ್‌ಪಿ ಪಕ್ಷಕ್ಕೆ ಭಯೋತ್ಪಾದಕ ದಾಳಿಗಳು ಹೊಸದೇನಲ್ಲ. 2013ರ ಚುನಾವಣೆ ವೇಳೆ ಎಎನ್‌ಪಿ ಪಕ್ಷದ ನೂರಕ್ಕೂ ಹೆಚ್ಚು ಕಾರ್ಯಕರ್ತರು ಮತ್ತು ನಾಯಕರನ್ನು ಭಯೋತ್ಪಾದನಾ ಸಂಘಟನೆಗಳು ಕೊಂದು ಹಾಕಿದ್ದವು.

ಮಂಗಳವಾರದ ದಾಳಿಯಲ್ಲಿ ಮೃತಪಟ್ಟ ಹರೂನ್ ಬಿಲೌರ್ ತಂದೆ ಬಶೀರ್ ಅಹ್ಮದ್ ಬಿಲೌರ್‌ರನ್ನು ಕೂಡ ಈ ಹಿಂದೆ ಕೊಲೆ ಮಾಡಲಾಗಿತ್ತು. 2012ನೇ ಇಸವಿಯಲ್ಲಿ ಇದೇ ಪೇಶಾವರದಲ್ಲಿ ಸಭೆಯೊಂದರಲ್ಲಿ ಬಶೀರ್ ಪಾಲ್ಗೊಂಡಿದ್ದ ವೇಳೆ ತನ್ನನ್ನು ತಾನು ಸ್ಫೋಟಿಸಿಕೊಂಡ ತಾಲಿಬಾನ್ ಉಗ್ರ ಅವರ ಬಲಿ ಪಡೆದಿದ್ದ. ಈ ಘಟನೆಯಲ್ಲೂ 15 ಜನರು ಸಾವನ್ನಪ್ಪಿದ್ದರು. 2013ರಲ್ಲಿ ತೆಹ್ರಿಕ್ ಇ ತಾಲಿಬಾನ್ ಇದರ ಹೊಣೆ ಹೊತ್ತುಕೊಂಡಿತ್ತು. ಜೊತೆಗೆ ತಾನು ಬಶೀರ್ ಅಹ್ಮದ್ ಜೊತೆಗೆ ಹರೂನ್ ಬಿಲೌರ್ ಹತ್ಯೆಗೆ ಸಂಚು ರೂಪಿಸಿದ್ದಾಗಿ ತಾಲಿಬಾನ್ ಬಹಿರಂಗವಾಗಿ ಹೇಳಿಕೊಂಡಿತ್ತು.

ಇದಾದ ಬೆನ್ನಿಗೆ 2013ರ ಸಾರ್ವತ್ರಿಕ ಚುನಾವಣೆಯ ಉದ್ದಕ್ಕೂ ಎಎನ್‌ಪಿ ನಾಯಕರು ಮತ್ತು ಕಾರ್ಯಕರ್ತರ ಮೇಲೆ ಸರಣಿ ದಾಳಿಗಳು ನಡೆದಿದ್ದವು. ಈ ದಾಳಿಗಳಲ್ಲಿ ಎಎನ್‌ಪಿ ಪಕ್ಷದ ನೂರಕ್ಕೂ ಹೆಚ್ಚು ಕಾರ್ಯಕರ್ತರು ಮತ್ತು ನಾಯಕರು ಬಲಿಯಾಗಿದ್ದರು. ಖೈಬರ್ ಪಖ್ತುಂಖ್ವಾ ಪ್ರಾಂತ್ಯವನ್ನು 2008 ರಿಂದ 2013ರವರೆಗೆ ಆಳಿದ ಎಎನ್‌ಪಿ ಪಕ್ಷದ ಜಂಘಾಬಲವನ್ನೇ ಈ ದಾಳಿಗಳು ಉಡುಗಿಸಿ ಹಾಕಿದ್ದವು.

ಜಾತ್ಯಾತೀತ ಪಕ್ಷಗಳೇ ಟಾರ್ಗೆಟ್:

ಭಯೋತ್ಪಾದಕ ಸಂಘಟನೆಯ ದಾಳಿಗಳು ಎಎನ್‌ಪಿ ಪಕ್ಷಕ್ಕೆ ಸೀಮಿತವಾಗಿಲ್ಲ. ಹಲವು ಪಕ್ಷಗಳ ಮೇಲೆ ಇದೇ ರೀತಿ ಭಯೋತ್ಪಾದಕರು ಮುಗಿ ಬೀಳುತ್ತಲೇ ಬಂದಿದ್ದರು. ಈ ತಿಂಗಳ ಆರಂಭದಲ್ಲಿ ಮುತ್ತಹಿದ ಮಜ್ಲಿಸ್-ಇ-ಅಮಾಲ್ ಪಕ್ಷದ ಚುನಾವಣಾ ಮೆರವಣಿಗೆ ಮೇಲೆ ತಖ್ತಿಖೆಲ್ ಪ್ರದೇಶದಲ್ಲಿ ಬಾಂಬ್ ದಾಳಿ ನಡೆದ ಪರಿಣಾಮ ಚುನಾವಣೆಯ ಅಭ್ಯರ್ಥಿ ಸೇರಿ 7 ಜನರು ಗಾಯಗೊಂಡಿದ್ದರು.

ಈ ದಾಳಿಗಳಲ್ಲದೆ ಜಾತ್ಯಾತೀತ ಪಕ್ಷಗಳ ವಿರುದ್ಧ ತಾಲಿಬಾನ್ ಮತ್ತು ಇತರ ಉಗ್ರ ಸಂಘಟನೆಗಳು ಗುಟುರು ಹಾಕುತ್ತಲೇ ಬಂದಿವೆ. ಉಗ್ರರ ಭದ್ರ ನೆಲೆಗಳಾದ ಬುಡಕಟ್ಟು ಪ್ರದೇಶಗಳ ಮೇಲಿನ ಸೇನಾ ಕಾರ್ಯಾಚರಣೆಯನ್ನು ಈ ಪಕ್ಷಗಳು ಬೆಂಬಲಿಸುತ್ತಿವೆ ಎಂಬುದು ಇದಕ್ಕೆ ಕಾರಣ.

ಉಗ್ರರ ಟಾರ್ಗೆಟ್ ನಲ್ಲಿರುವ ರಾಜಕಾರಣಿಗಳು

ನಡೆದಿರುವ ದಾಳಿಗಳ ಕತೆ ಹೀಗಾದರೆ ಪಾಕಿಸ್ತಾನದ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಸಂಸ್ಥೆ ಚುನಾವಣೆ ವೇಳೆ ಮಾಜಿ ಕ್ರಿಕೆಟಿಗ ಮತ್ತು ತೆಹ್ರಿಕ್-ಇ-ಇನ್ಸಾಫ್ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಹಾಗೂ ಹಫೀಸ್ ಸಯೀದ್ ಪುತ್ರನ ಮೇಲೆ ಚುನಾವಣೆಯ ಸಂದರ್ಭದಲ್ಲಿ ದಾಳಿಯಾಗಬಹುದು ಎಂದು ಎಚ್ಚರಿಸಿದೆ. ಇವರಲ್ಲದೆ ಹಲವು ರಾಜಕಾರಣಿಗಳು ಉಗ್ರರ ಟಾರ್ಗೆಟ್‌ನಲ್ಲಿದ್ದಾರೆ ಎಂಬ ಮುನ್ನೆಚ್ಚರಿಕೆಯನ್ನು ಭಯೋತ್ಪಾದನಾ ನಿಗ್ರಹ ಸಂಸ್ಥೆ ನೀಡಿದ್ದು, ಈ ಕುರಿತು ಅಲ್ಲಿನ ಆಂತರಿಕ ಭದ್ರತಾ ಸಚಿವಾಲಯ ಮತ್ತು ಗೃಹ ಸಚಿವಾಲಯಕ್ಕೆ ಸೂಕ್ತ ಮುಂಜಾಗ್ರತೆ ವಹಿಸುವಂತೆ ಸೂಚಿಸಿದೆ.