samachara
www.samachara.com
ಕೊಲೆ ಆರೋಪಿಗಳಿಗೆ ಹಾರಹಾಕಿ ಸ್ವಾಗತ; ಕ್ಷಮೆ ಕೋರಿದ ಕೇಂದ್ರ ಸಚಿವ ಜಯಂತ್‌ ಸಿನ್ಹಾ
ಸುದ್ದಿ ಸಾರ

ಕೊಲೆ ಆರೋಪಿಗಳಿಗೆ ಹಾರಹಾಕಿ ಸ್ವಾಗತ; ಕ್ಷಮೆ ಕೋರಿದ ಕೇಂದ್ರ ಸಚಿವ ಜಯಂತ್‌ ಸಿನ್ಹಾ

ಕೊಲೆ ಆರೋಪಿಗಳಿಗೆ ಹೂಹಾರ ಹಾಕಿ ಸ್ವಾಗತಿಸಿದ್ದಕ್ಕೆ ತೀವ್ರ ಟೀಕೆ ವ್ಯಕ್ತವಾದ ಬಳಿಕ ಕೇಂದ್ರ ಸಚಿವ ಜಯಂತ್‌ ಸಿನ್ಹಾ ಕ್ಷಮೆ ಕೋರಿದ್ದಾರೆ.

ಕೊಲೆ ಆರೋಪಿಗಳಿಗೆ ಹೂವಿನ ಹಾರ ಹಾಕಿ ಸ್ವಾಗತಿಸಿದ್ದ ಕೇಂದ್ರ ಸಚಿವ ಜಯಂತ್‌ ಸಿನ್ಹಾ ತಮ್ಮ ಈ ನಡೆಗಾಗಿ ಕ್ಷಮೆ ಕೋರಿದ್ದಾರೆ. ಮಾಂಸದ ವ್ಯಾಪಾರಿಯನ್ನು ಕೊಂದಿದ್ದ ಆರೋಪಿಗಳ ಪರವಾಗಿ ಮಾತನಾಡಿದ್ದ ಸಿನ್ಹಾ ವಿರುದ್ಧ ಟೀಕೆಗಳ ಸುರಿಮಳೆಯಾಗಿತ್ತು.

ಜೈಲಿನಿಂದ ಬಿಡುಗಡೆಯಾಗಿದ್ದ ಏಳು ಮಂದಿ ಆರೋಪಿಗಳಿಗೆ ಕಳೆದ ವಾರ ಸಿನ್ಹಾ ತಮ್ಮ ನಿವಾಸದಲ್ಲಿ ಹಾರ ಹಾಕಿ ಸ್ವಾಗತಿಸಿದ್ದರು. ಅಲ್ಲದೆ, ಈ ಬಗ್ಗೆ ಟ್ವಿಟರ್‌ನಲ್ಲಿ ಸಮರ್ಥಿಸಿಕೊಂಡಿದ್ದರು.

“ವಿಷಯ ಇನ್ನೂ ನ್ಯಾಯಾಲಯದ ವ್ಯಾಪ್ತಿಯಲ್ಲಿದೆ. ಅವರು ಅಪರಾಧಿಗಳು ಎಂದು ಇನ್ನೂ ಸಾಬೀತಾಗಿಲ್ಲ. ಕಾನೂನು ಏನು ಮಾಡಬೇಕೋ ಅದನ್ನು ಮಾಡುತ್ತದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ನಿಜ. ಆದರೆ, ನಿರಪರಾಧಿಗಳಿಗೆ ಶಿಕ್ಷೆಯಾಗಬಾರದು. ಇದಿಷ್ಟೇ ನನ್ನ ಕಳಕಳಿ” ಎಂದಿದ್ದಾರೆ ಸಿನ್ಹಾ.

“ಆರೋಪಿಗಳಿಗೆ ಹಾರ ಹಾಕಿದ್ದು ಗೋರಕ್ಷಣೆ ಹೆಸರಿನಲ್ಲಿ ಹಲ್ಲೆ ಮಾಡುವವರನ್ನು ಬೆಂಬಲಿಸಿದಂತೆ ಎಂಬ ಸಂದೇಶ ನೀಡುವಂತಿದ್ದರೆ ನಾನು ಅದಕ್ಕಾಗಿ ಕ್ಷಮೆ ಕೋರುತ್ತೇನೆ” ಎಂದು ಸಿನ್ಹಾ ತಿಳಿಸಿದ್ದಾರೆ.

ಕಳೆದ ವರ್ಷ ಜೂನ್‌ ತಿಂಗಳಿನಲ್ಲಿ ಜಾರ್ಖಂಡ್‌ ರಾಜ್ಯದ ರಾಮಘಡ ಜಿಲ್ಲೆಯಲ್ಲಿ ಗೋರಕ್ಷಣೆ ಹೆಸರಿನಲ್ಲಿ ಮಾಂಸದ ವ್ಯಾಪಾರಿ ಅಲೀಮುದ್ದೀನ್‌ ಅನ್ಸಾರಿ ಎನ್ನುವವರ ಕೊಲೆ ನಡೆದಿತ್ತು. ಈ ಕೊಲೆಗೆ ಸಂಬಂಧಿಸಿದಂತೆ ಈ ವರ್ಷದ ಮಾರ್ಚ್‌ ತಿಂಗಳಿನಲ್ಲಿ ಸ್ಥಳೀಯ ಬಿಜೆಪಿ ನಾಯಕ ನಿತ್ಯಾನಂದ್‌ ಮಾಥೋ ಸೇರಿದಂತೆ 11 ಜನರನ್ನು ಬಂಧಿಸಲಾಗಿತ್ತು.

ವಿಚಾರಣಾಧೀನ ನ್ಯಾಯಾಲಯ ಆರೋಪಿಗಳ ವಿಚಾರಣೆ ನಡೆಸಿತ್ತು. ಎಲ್ಲರನ್ನೂ ಕೂಡ ತಪ್ಪಿತಸ್ಥರು ಎಂದಿದ್ದ ನ್ಯಾಯಾಲಯ ಅದೇ ತಿಂಗಳಿನಲ್ಲಿ ಎಲ್ಲರಿಗೂ ಸಹ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು. ಆದರೆ ಕಳೆದ ವಾರ ಜಾರ್ಖಂಡ್‌ನ ಉಚ್ಛ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ರದ್ದುಗೊಳಿಸಿ, ಜಾಮೀನಿನ ಮೇಲೆ ಎಲ್ಲರನ್ನೂ ಬಿಡುಗಡೆಗೊಳಿಸಿತ್ತು.

ಹಝಾರೀಬಾಗ್‌ ಜೈಲಿನಲ್ಲಿದ್ದ ಆರೋಪಿಗಳನ್ನು ಕಳೆದ ಮಂಗಳವಾರ ಬಿಡುಗಡೆಗೊಳಿಸಲಾಗಿತ್ತು. ಈ ಪೈಕಿ 7 ಜನ ಆರೋಪಿಗಳು ಜೈಲಿನಿಂದ ಹೊರ ಬಂದ ನಂತರ ಕೇಂದ್ರ ಸಚಿವ ಹಾಗೂ ಹಝಾರೀಬಾಗ್ ಲೋಕಸಭಾ ಕ್ಷೇತ್ರದ ಸಂಸದ ಜಯಂತ್‌ ಸಿನ್ಹಾ ಮನೆಗೆ ತೆರಳಿದ್ದರು. ಈ ವೇಳೆ ಜಯಂತ್‌ ಸಿನ್ಹಾ ಎಲ್ಲರಿಗೂ ಹೂವಿನ ಹಾರ ಹಾಕುವ ಮೂಲಕ ಸ್ವಾಗತಿಸಿ, ಶುಭಾಷಯ ಕೋರಿದ್ದರು.

ಜಯಂತ್‌ ಸಿನ್ಹಾ ಆರೋಪಿಗಳಿಗೆ ಹಾರ ಹಾಕಿದ್ದ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಕಳೆದ ಶನಿವಾರ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದ ಸಿನ್ಹಾ ನ್ಯಾಯಾಲಯ ಇನ್ನೂ ಅವರು ಅಪರಾಧಿಗಳು ಎಂದು ತೀರ್ಪು ನೀಡಿಲ್ಲ ಎಂದಿದ್ದರು. ಸಿನ್ಹಾ ಈ ರೀತಿ ಆರೋಪಿಗಳನ್ನು ಸಮರ್ಥಿಸಿಕೊಂಡ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಸಿನ್ಹಾ ವಿರುದ್ಧ ತೀವ್ರ ಟೀಕೆ ಮಾಡಿದ್ದರು.