samachara
www.samachara.com
ಚಿತ್ರ ಕೃಪೆ: ರಾಯ್ಟರ್ಸ್
ಸುದ್ದಿ ಸಾರ

ನ್ಯಾಯಾಲಯ ಪ್ರಕ್ರಿಯೆಗಳ ‘ನೇರ ಪ್ರಸಾರ’: ಸುಪ್ರೀಂ ತೀರ್ಮಾನದಿಂದ ಏನು ಲಾಭ?

ನ್ಯಾಯಾಲಯ ಪ್ರಕ್ರಿಯೆಗಳ ನೇರ ಪ್ರಸಾರ ಕೋರಿ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಸಲ್ಲಿಸಿದ ಪಿಟಿಷನ್ ಗೆ ಮನ್ನಣೆ ನೀಡಿರುವ ಸುಪ್ರೀಂ ಕೋರ್ಟ್ ಇದಕ್ಕೆ ಬೇಕಾದ ನೀಲ ನಕ್ಷೆಯನ್ನು ತಯಾರಿಸುವಂತೆ ಅಟಾರ್ನಿ ಜನರಲ್‌ಗೆ ಸೂಚಿಸಿದೆ. 

ಭಾರತದ ಜನರ ಮಟ್ಟಿಗೆ ‘ನ್ಯಾಯಾಲಯ’ ಎನ್ನುವುದು ನಾಲ್ಕು ಗೋಡೆಗಳ ನಡುವೆ ನಡೆಯುವ ಅಗೋಚರ ಪ್ರಕ್ರಿಯೆ. ಕೆಲವೇ ಕೆಲವು ಪತ್ರಕರ್ತರು, ವಕೀಲರು ಮತ್ತು ಪ್ರಕರಣಗಳಲ್ಲಿ ಭಾಗಿಯಾದವರಿಗೆ ಮಾತ್ರ ಈ ಪ್ರಕ್ರಿಯೆಗಳು ತಿಳಿದಿವೆ. ಉಳಿದವರು ಸಿನಿಮಾ, ಧಾರಾವಾಹಿಗಳಲ್ಲಿ ಅಲ್ಪಸ್ವಲ್ಪ ಕಂಡಿದ್ದಾರೆ.

ಇವೆಲ್ಲದರ ನಡುವೆ ಇದೇ ಮೊದಲ ಬಾರಿಗೆ ಸುಪ್ರೀಂ ಕೋರ್ಟ್ ತನ್ನ ವಿಚಾರಣೆಗಳನ್ನು, ಆದೇಶಗಳನ್ನು ನೇರ ಪ್ರಸಾರ ಮಾಡಲು ಮುಂದಾಗಿದೆ. ಪಾರದರ್ಶಕತೆಯೆಡೆಗಿನ ಹೆಜ್ಜೆ ಎಂಬಂತೆ ಇದನ್ನು ವಿಶ್ಲೇಷಿಸಲಾಗುತ್ತಿದೆ.

ಹಾಗೆ ನೋಡಿದರೆ ವಿದೇಶಗಳಲ್ಲಿ ನ್ಯಾಯಾಲಯಗಳ ಪ್ರಕ್ರಿಯೆಗಳನ್ನು ನೇರ ಪ್ರಸಾರ ಮಾಡುವ ಪರಿಪಾಠಗಳು ಹಿಂದಿನಿಂದಲೂ ನಡೆದು ಬಂದಿವೆ. ಭಾರತದ ಮಟ್ಟಿಗೆ ಈ ರೀತಿಯ ಬೆಳವಣಿಗೆಗಳು ಹೊಸದು. ಬಹಳ ಹಿಂದೆಯೇ ವಿಚಾರಣೆಗಳನ್ನು ನೇರ ಪ್ರಸಾರ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಮುಂದೆ ಬೇಡಿಕೆ ಇಡಲಾಗಿತ್ತು. ಕೊನೆಗೆ ಇದೀಗ ಹಲವು ವರ್ಷಗಳ ನಂತರ ಸುಪ್ರೀಂ ಕೋರ್ಟ್ ನೇರ ಪ್ರಸಾರಕ್ಕೆ ಒಪ್ಪಿಗೆ ಕೊಟ್ಟಿದೆ.

ನ್ಯಾಯಾಲಯ ಪ್ರಕ್ರಿಯೆಗಳ ನೇರ ಪ್ರಸಾರ ಕೋರಿ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಸಲ್ಲಿಸಿದ ಪಿಟಿಷನ್ ಗೆ ಮನ್ನಣೆ ನೀಡಿರುವ ಸುಪ್ರೀಂ ಕೋರ್ಟ್ ಇದಕ್ಕೆ ಬೇಕಾದ ನೀಲ ನಕ್ಷೆಯನ್ನು ತಯಾರಿಸುವಂತೆ ಅಟಾರ್ನಿ ಜನರಲ್ ಕೆ. ಕೆ. ವೇಣುಗೋಪಾಲ್ ಅವರಿಗೆ ಸೂಚನೆ ನೀಡಿದೆ. ನೇರ ಪ್ರಸಾರಕ್ಕೆ ಹೇಗೆ ವ್ಯವಸ್ಥೆ ಮಾಡಬಹುದು, ಇದಕ್ಕೆ ತಗುಲುವ ಖರ್ಚು ಎಷ್ಟು, ತಂತ್ರಜ್ಞಾನವೇನು ಎಂಬುದನ್ನೆಲ್ಲಾ ನ್ಯಾಯಾಲಯ ಅವರಿಂದ ವಿವರವಾಗಿ ಕೇಳಿದೆ.

ಲಾಭವೇನು?

ಹಲವು ಸಂದರ್ಭಗಳಲ್ಲಿ ಕಕ್ಷಿದಾರರು ಕೋರ್ಟ್ ಗೆ ಹೋಗದೆ ಕೇವಲ ವಕೀಲರನ್ನು ಕಳುಹಿಸುತ್ತಾರೆ. ಈ ಸಂದರ್ಭದಲ್ಲಿ ಕೋರ್ಟ್ ಹಾಲ್ ನೊಳಗೆ ನಡೆಯುವ ಪ್ರಕ್ರಿಯೆಗಳನ್ನು ತಿಳಿದುಕೊಳ್ಳಲು ಮೂರನೇ ವ್ಯಕ್ತಿಯನ್ನು ಅವಲಂಬಿಸಬೇಕಾಗುತ್ತದೆ. ನೇರ ಪ್ರಸಾರದಿಂದ ಈ ಮಧ್ಯವರ್ತಿ ಮೇಲಿನ ಅವಲಂಬನೆ ಮಾಯವಾಗಲಿದೆ.

ಕೆಲವೊಮ್ಮೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಒಂದು ರಾಜ್ಯ, ಪ್ರದೇಶಕ್ಕೆ ಸಂಬಂಧಿಸಿದ ತೀರ್ಪುಗಳು ಅಸಂಖ್ಯಾತ ಜನರಿಗೆ ಸಂಬಂಧಿಸಿದ್ದಾಗಿರುತ್ತವೆ. ಉದಾಹರಣೆಗೆ ಕಾವೇರಿ ತೀರ್ಪು. ಈ ಸಂದರ್ಭದಲ್ಲಿ ಕೋರ್ಟ್ ನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಮಾಧ್ಯಮಗಳನ್ನು ಜನರು ಅವಲಂಬಿಸಬೇಕಾಗುತ್ತದೆ. ನೇರ ಪ್ರಸಾರದಿಂದ ಜನರೇ ನೇರವಾಗಿ ನೋಡಿ. ಕೇಳಿ ತೀರ್ಪುಗಳನ್ನು ಅರಿತುಕೊಳ್ಳುವ ಅವಕಾಶ ಇದರಿಂದ ಸೃಷ್ಟಿಯಾಗಲಿದೆ.

ಸರ್ವೋಚ್ಛ ನ್ಯಾಯಾಲಯದ ಈ ನೇರ ಪ್ರಸಾರ ನಿರ್ಧಾರ ಹಲವು ಯುವ ವಕೀಲರಿಗೂ ನೆರವಾಗಲಿದೆ. ಹಿರಿಯರ ವಾದಗಳನ್ನು ನೋಡಿ ಅಭ್ಯಸಿಸುವ ಅವಕಾಶ ಅವರ ಪಾಲಿಗೆ ಒದಗಿ ಬರಲಿದೆ.

ಇದರಿಂದ ಒಂದಷ್ಟು ತೊಂದರೆಯೂ ಇಲ್ಲದ್ದಿಲ್ಲ. ಸಾಮಾಜಿಕವಾಗಿ ಪರಿಣಾಮ ಬೀರುವ ಕಾವೇರಿಯಂಥ ಸಮಸ್ಯೆಗಳ ಸಂದರ್ಭದಲ್ಲಿ ನಾವು ತುಂಬಾ ಶ್ರಮ ವಹಿಸುತ್ತಿದ್ದೇವೆ ಎಂದು ನ್ಯಾಯಾಲಯದಲ್ಲಿ ಬಿಂಬಿಸಿಕೊಳ್ಳಲು ವಕೀಲರು ಮುಂದಾಗುವ ಅಪಾಯವೂ ಇದೇ. ಹೀಗಿದ್ದೂ ನ್ಯಾಯಾಲಯ ಇದನ್ನೆಲ್ಲಾ ಮೀರಿ ನಾಲ್ಕು ಗೋಡೆಗಳ ನಡುವೆ ನಡೆಯುವ ಚಟುವಟಿಕೆಯನ್ನು ಜನರ ಮುಂದಿಡಬೇಕಿದೆ. ಆಗ ಮಾತ್ರ ನ್ಯಾಯಾಂಗ ಎನ್ನುವುದು ಜನರಿಗೆ ಮತ್ತಷ್ಟು ಹತ್ತಿರವಾಗಲಿದೆ.