samachara
www.samachara.com
‘ಆತ್ಮಹತ್ಯೆ ಉದ್ದೇಶ’ ಶಿಕ್ಷಾರ್ಹ ಅಪರಾಧವಲ್ಲ: ಕರ್ನಾಟಕ ಹೈಕೋರ್ಟ್
ಸುದ್ದಿ ಸಾರ

‘ಆತ್ಮಹತ್ಯೆ ಉದ್ದೇಶ’ ಶಿಕ್ಷಾರ್ಹ ಅಪರಾಧವಲ್ಲ: ಕರ್ನಾಟಕ ಹೈಕೋರ್ಟ್

ಐಪಿಸಿ ಸೆಕ್ಷನ್‌ 309 ಆತ್ಮಹತ್ಯೆ ಯತ್ನವು ಅಪರಾಧ ಎನ್ನುತ್ತದೆಯೇ ಹೊರತು ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ಉದ್ದೇಶ ಅಪರಾಧವಲ್ಲ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ಉದ್ದೇಶ ಶಿಕ್ಷಾರ್ಹ ಅಪರಾಧವಲ್ಲ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ಆತ್ಮಹತ್ಯೆ ಉದ್ದೇಶದಿಂದ ಮನೆ ಬಿಟ್ಟು ಹೋದ ಯುವಕನ ವಿರುದ್ಧ ಪೊಲೀಸರು ಆತ್ಮಹತ್ಯೆ ಯತ್ನದ ದೂರು ದಾಖಲಿಸಿಕೊಂಡಿದ್ದ ಪ್ರಕರಣದಲ್ಲಿ ಹೈಕೋರ್ಟ್‌ ಈ ರೀತಿ ಹೇಳಿದೆ.

ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್‌ 309 ಆತ್ಮಹತ್ಯೆ ಯತ್ನವು ಶಿಕ್ಷಾರ್ಹ ಅಪರಾಧ ಎನ್ನುತ್ತದೆಯೇ ಹೊರತು ಆತ್ಮಹತ್ಯೆಯ ಉದ್ದೇಶ ಅಪರಾಧ ಎಂಬ ಉಲ್ಲೇಖ ಈ ಸೆಕ್ಷನ್‌ನಲ್ಲಿಲ್ಲ ಎಂದು ಹೈಕೋರ್ಟ್‌ ಹೇಳಿದೆ.

“ಯಾವುದೇ ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿದ್ದರೆ ಅಥವಾ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರೆ ಆ ಅಪರಾಧಕ್ಕಾಗಿ ಆತನಿಗೆ ಒಂದು ವರ್ಷದವರೆಗೆ ಸಾಧಾರಣ ಶಿಕ್ಷೆ ಅಥವಾ ದಂಡ ಅಥವಾ ದಂಡದ ಜತೆಗೆ ಜೈಲು ಶಿಕ್ಷೆ ಎರಡನ್ನೂ ವಿಧಿಸಬಹುದು” ಎನ್ನುತ್ತದೆ ಐಪಿಸಿ ಸೆಕ್ಷನ್‌ 309.

ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದಿದ್ದರೆ ಆತನ ವಿರುದ್ಧ ಐಪಿಸಿ ಸೆಕ್ಷನ್‌ 309 ಅಡಿಯಲ್ಲಿ ದೂರು ದಾಖಲಿಸಬಹುದು. ಆದರೆ, “ಆತ್ಮಹತ್ಯೆಗೆ ತಯಾರಿ ನಡೆಸಿದ್ದರೆ ಅಥವಾ ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ಉದ್ದೇಶ ಹೊಂದಿದ್ದರೆ ಐಪಿಸಿ ಸೆಕ್ಷನ್‌ 309 ಅಡಿ ಶಿಕ್ಷೆ ವಿಧಿಸಲು ಸಾಧ್ಯವಿಲ್ಲ” ಎಂದು ನ್ಯಾಯಮೂರ್ತಿ ಕೆ.ಎನ್‌. ಫಣೀಂದ್ರ ಅವರಿದ್ದ ನ್ಯಾಯಪೀಠ ಆದೇಶಿಸಿದೆ.

ಈ ಪ್ರಕರಣ ಸಂಬಂಧ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ವಾಣಿವಿಲಾಸಪುರದ ನಿವಾಸಿ ಎಸ್‌. ಕವಿರಾಜ್‌ ಎಂಬುವರ ವಿರುದ್ಧ ಪೊಲೀಸರು ದಾಖಲಿಸಿದ್ದ ದೂರನ್ನು ಹೈಕೋರ್ಟ್‌ ವಜಾಗೊಳಿಸಿದೆ.

2016ರ ಅಕ್ಟೋಬರ್‌ 24ರಂದು ಕವಿರಾಜ್‌ ಮನೆ ತೊರೆದಿದ್ದರು. ಸ್ಥಳೀಯ ಪೊಲೀಸರ ಕಿರುಕುಳದಿಂದ ಆತ್ಮಹತ್ಯೆಗೆ ಮುಂದಾಗುತ್ತಿರುವುದಾಗಿ ಕವಿರಾಜ್‌ ತಮ್ಮ ಸ್ನೇಹಿತನ ಬಳಿ ಹೇಳಿಕೊಂಡಿದ್ದರು ಎನ್ನಲಾಗಿದೆ. ಮರುದಿನ ಕವಿರಾಜ್‌ ತಂದೆ ಶಂಕರ್‌ ನಾಯ್ಕ್‌, ಕವಿರಾಜ್‌ ಬರೆದಿಟ್ಟಿದ್ದರು ಎನ್ನಲಾದ ಡೆತ್‌ನೋಟ್‌ ಜತೆಗೆ ಪೊಲೀಸ್‌ ಠಾಣೆಗೆ ಹೋಗಿ ದೂರು ದಾಖಲಿಸಿದ್ದರು.

ಅಲ್ಲದೆ ಮಗ ಮನೆ ತೊರೆಯಲು ಡಿವೈಎಸ್‌ಪಿ ಅರುಣ್‌ ರಂಗರಾಜನ್‌ ಕಾರಣ ಎಂದು ಶಂಕರ್‌ ನಾಯ್ಕ್‌ ಆರೋಪಿಸಿದ್ದರು. ಮಗನಿಗೆ ಏನಾದರೂ ಆದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಅರುಣ್‌ ರಂಗರಾಜನ್‌ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು ಎನ್ನಲಾಗಿದೆ.

ಮನೆ ತೊರೆದಿದ್ದ ಕವಿರಾಜ್‌ ಕೆಲ ದಿನಗಳ ಬಳಿಕ ತುಮಕೂರಿನ ಗಾಯತ್ರಿ ಲಾಡ್ಜ್‌ನಲ್ಲಿ ಪತ್ತೆಯಾಗಿದ್ದರು. ಹಿರಿಯೂರು ಗ್ರಾಮಾಂತರ ಪೊಲೀಸರು ಕವಿರಾಜ್‌ ವಿರುದ್ಧ ಆತ್ಮಹತ್ಯೆ ಯತ್ನ ಪ್ರಕರಣ ಹಾಗೂ ಅವರ ತಂದೆಯ ವಿರುದ್ಧ ಸರಕಾರಿ ಅಧಿಕಾರಿಗೆ ಬೆದರಿಕೆ ಹಾಕಿದ ಪ್ರಕರಣ ದಾಖಲಿಸಿದ್ದರು.

ಸ್ಥಳೀಯ ಪೊಲೀಸರ ಕಿರುಕುಳದ ಕಾರಣಕ್ಕೆ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿರುವುದಾಗಿ ಕವಿರಾಜ್‌ ತಮ್ಮ ಸ್ನೇಹಿತ ಮಂಜುನಾಥ್‌ ಎಂಬುವರ ಬಳಿ ಹೇಳಿಕೊಂಡಿದ್ದರು ಎಂದು ಪೊಲೀಸರ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಇದನ್ನು ಪರಿಗಣಿಸಿರುವ ನ್ಯಾಯಪೀಠ, ಕವಿರಾಜ್‌ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶ ಹೊಂದಿದ್ದರೇ ಹೊರತು ಆತ್ಮಹತ್ಯೆಗೆ ಯತ್ನಿಸಿಲ್ಲ. ಆತ್ಮಹತ್ಯೆಗೆ ಯತ್ನಿಸಿದ ಯಾವುದೇ ಆಧಾರಗಳಿಲ್ಲ. ಹೀಗಾಗಿ ಇದು ಶಿಕ್ಷಾರ್ಹ ಅಪರಾಧವಲ್ಲ ಎಂದು ಹೇಳಿದೆ.

ಕವಿರಾಜ್‌ ತಾನು ಉಳಿದುಕೊಂಡಿದ್ದ ತುಮಕೂರಿನ ಲಾಡ್ಜ್‌ನಲ್ಲೂ ಕೂಡಾ ಆತ್ಮಹತ್ಯೆಗೆ ಯಾವುದೇ ಯತ್ನ ನಡೆಸಿಲ್ಲ ಎಂಬುದು ಸಾಬೀತಾಗಿದೆ ಎಂದು ಕೋರ್ಟ್‌ ಹೇಳಿದೆ.