samachara
www.samachara.com
ಸುನೀತಾ ಪರ್ಮಾರ್‌: ಪಾಕ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಮೊದಲ ಹಿಂದೂ ಮಹಿಳೆ!
ಸುದ್ದಿ ಸಾರ

ಸುನೀತಾ ಪರ್ಮಾರ್‌: ಪಾಕ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಮೊದಲ ಹಿಂದೂ ಮಹಿಳೆ!

ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಮೊದಲ ಹಿಂದೂ ಮಹಿಳೆ ಸುನೀತಾ ಪರ್ಮಾರ್‌.

Team Samachara

ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದ ಸ್ಥಳೀಯ ಅಲ್ಪಸಂಖ್ಯಾತ ಹಿಂದೂ ಮಹಿಳೆ ಸುನೀತಾ ಪರ್ಮಾರ್‌ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಸುದ್ದಿಯಾಗಿದ್ದಾರೆ.

ಪಾಕಿಸ್ತಾನದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಮೊದಲ ಹಿಂದೂ ಮಹಿಳೆ ಎನಿಸಿದ್ದಾರೆ ಸುನೀತಾ. ಜುಲೈ 25ರಂದು ಸಿಂಧ್‌ ಪ್ರಾಂತ್ಯದಲ್ಲಿ ಚುನಾವಣೆ ನಡೆಯಲಿದೆ. ಹಿಂದೂ ಧರ್ಮದಡಿ ಬರುವ ಮೇಘ್ವಾರ್‌ ಸಮುದಾಯಕ್ಕೆ ಸೇರಿದ 31 ವರ್ಷದ ಸುನೀತಾ ಪಕ್ಷೇತರರಾಗಿ ಈ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದಾರೆ.

ಪಾಕಿಸ್ತಾನದಲ್ಲಿ ಹಿಂದೂಗಳು ಹೆಚ್ಚಾಗಿರುವ ಥಾರ್ಪಾರ್ಕರ್‌ ಜಿಲ್ಲೆಯ ಇಸ್ಲಾಂಕೋಟ್‌ನಿಂದ ಸುನೀತಾ ಚುನಾವಣೆಗೆ ಸ್ಪರ್ಧಿಸಿದ್ದಾರೆ. ತಾವು ಚುನಾವಣೆಯಲ್ಲಿ ಗೆದ್ದರೆ ಹೆಣ್ಣು ಮಕ್ಕಳ ಶಿಕ್ಷಣ ಹಾಗೂ ಸ್ಥಳೀಯ ಪ್ರದೇಶಾಭಿವೃದ್ಧಿಗೆ ಒತ್ತು ನೀಡುವುದಾಗಿ ಸುನೀತಾ ಹೇಳಿದ್ದಾರೆ.

“ಈ ಹಿಂದೆ ಇದ್ದ ಸರಕಾರ ನಮ್ಮ ಪ್ರದೇಶದ ಅಭಿವೃದ್ಧಿಗೆ ಏನನ್ನೂ ಮಾಡಿಲ್ಲ. 21ನೇ ಶತಮಾನದಲ್ಲೂ ನಮಗೆ ಸರಿಯಾದ ಮೂಲ ಸೌಕರ್ಯಗಳು ಸಿಕ್ಕಿಲ್ಲ. ಸೂಕ್ತವಾದ ಆರೋಗ್ಯ ಸೇವೆ ಇಲ್ಲ, ಹೆಣ್ಣು ಮಕ್ಕಳಿಗೆ ಸರಿಯಾದ ಶಿಕ್ಷಣ ಸಂಸ್ಥೆಗಳಿಲ್ಲ. ಈ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಇರುವ ಕೊರತೆಗಳಿಗೆ ಮುಕ್ತಿ ಹಾಡುತ್ತೇನೆ” ಎಂದು ಸುನೀತಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

2017ರ ಪಾಕಿಸ್ತಾನದ ಜನಗಣತಿಯ ಪ್ರಕಾರ ಥಾರ್ಪಾರ್ಕರ್‌ ಜಿಲ್ಲೆಯ ಒಟ್ಟು ಜನಸಂಖ್ಯೆ 16 ಲಕ್ಷ. ಈ ಪೈಕಿ ಅರ್ಧದಷ್ಟು ಜನ ಹಿಂದೂಗಳು. ಆದರೂ ಚುನಾವಣೆಯಲ್ಲಿ ಈ ಪ್ರಾಂತ್ಯದಿಂದ ಹಿಂದೂಗಳ ಪ್ರಾತಿನಿಧ್ಯ ಕಡಿಮೆ ಇದೆ.

ಮಾರ್ಚ್‌ ತಿಂಗಳಲ್ಲಿ ಪಾಕಿಸ್ತಾನ್‌ ಪೀಪಲ್ಸ್‌ ಪಾರ್ಟಿ ಹಿಂದೂ ದಲಿತ ಮಹಿಳೆ ಕೃಷ್ಣ ಕುಮಾರಿ ಕೊಲ್ಹಿ ಅವರನ್ನು ಸೆನೆಟರ್‌ ಆಗಿ ನಾಮನಿರ್ದೇಶನ ಮಾಡಿತ್ತು. ಇದಕ್ಕೂ ಮೊದಲು ಪಾಕಿಸ್ತಾನ ಸೆನೆಟ್‌ಗೆ ಆಯ್ಕೆಯಾಗಿದ್ದ ಮೊದಲ ಹಿಂದೂ ಮಹಿಳೆ ರತ್ನ ಭಗವಾನ್‌ದಾಸ್‌ ಚಾವ್ಲಾ. ಈಗ ಸುನೀತಾ ಸಿಂಧ್‌ ಪ್ರಾಂತ್ಯದ ವಿಧಾನಸಭೆಗೆ ಸ್ಪರ್ಧಿಸುತ್ತಿರುವ ಮೊದಲ ಹಿಂದೂ ಮಹಿಳೆ ಎನಿಸಿದ್ದಾರೆ.