ಬಾಲಕಿಯ ಮೇಲೆ ಅತ್ಯಾಚಾರ; ಬಿಹಾರದಲ್ಲಿ ಮುಖ್ಯ ಶಿಕ್ಷಕ ಸೇರಿ ನಾಲ್ಕು ಜನರ ಬಂಧನ
ಸುದ್ದಿ ಸಾರ

ಬಾಲಕಿಯ ಮೇಲೆ ಅತ್ಯಾಚಾರ; ಬಿಹಾರದಲ್ಲಿ ಮುಖ್ಯ ಶಿಕ್ಷಕ ಸೇರಿ ನಾಲ್ಕು ಜನರ ಬಂಧನ

ಬಾಲಕಿಯ ಮೇಲೆ ದೌರ್ಜನ್ಯ ನಡೆದಾಗ ಸಂತ್ರಸ್ತ ಬಾಲಕಿಗೆ ನ್ಯಾಯ ಕೊಡಿಸಬೇಕಿದ್ದ ಮುಖ್ಯ ಶಿಕ್ಷಕ, ಸಹ ಶಿಕ್ಷಕರೇ ಬಾಲಕಿಯ ಮೇಲೆ ಕ್ರೌರ್ಯ ಎಸಗಿದ್ದಾರೆ. ಈ ಪ್ರಕರಣ ಇನ್ನು ಮುಂದೆ ಶಾಲಾ ಆಡಳಿತ ಮಂಡಳಿಗಳನ್ನೇ ಅನುಮಾನದಿಂದ ನೋಡುವಂತೆ ಮಾಡಿದೆ.

ಬಿಹಾರ ರಾಜ್ಯದ ಸರನ್‌ ಜಿಲ್ಲೆಯ ಖಾಸಗಿ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಪೊಲೀಸ್‌ ಠಾಣೆಯ ಮೆಟ್ಟಿಲೇರಿದ್ದಾಳೆ. 15 ಜನ ವಿದ್ಯಾರ್ಥಿಗಳು, ಇಬ್ಬರು ಶಿಕ್ಷಕರು ಮತ್ತು ಶಾಲೆಯ ಮುಖ್ಯೋಪಾಧ್ಯರ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾಳೆ.

ಸತತ 7 ತಿಂಗಳಿಂದ ಸಹಪಾಠಿಗಳು ಮಾತ್ರವಲ್ಲದೇ ಶಿಕ್ಷಕರು ಮತ್ತು ಮುಖ್ಯೋಪಧ್ಯಾಯರಿಂದ ದೈಹಿಕ ಹಿಂಸೆ ಅನುಭವಿಸಿದ 14 ವರ್ಷದ ಬಾಲಕಿ, ಇನ್ನು ಸಹಿಸಲು ಸಾಧ್ಯವಾಗದೇ ತನ್ನ ತಂದೆಯ ಜತೆ ಪೊಲೀಸ್‌ ಠಾಣೆಗೆ ತೆರಳಿ ಒಟ್ಟು 18 ಜನರ ವಿರುದ್ಧ ದೂರು ದಾಖಲಿಸಿದ್ದಾಳೆ.

ಉಪ ವಿಭಾಗೀಯ ಪೊಲೀಸ್‌ ಅಧಿಕಾರಿ ಅಜಯ್‌ ಕುಮಾರ್‌ ಸಿಂಗ್‌ ನೇತೃತ್ವದ ತಂಡ ವಿದ್ಯಾರ್ಥಿನಿ ದಾಖಲಾಗಿದ್ದ ಪರ್ಸಾಗರ್‌ನ ದೀಪೇಶ್ವರ್‌ ಬಾಲ ವಿದ್ಯಾನಿಕೇತನಕ್ಕೆ ತೆರಳಿ ನಾಲ್ಕು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಏಕ್ಮಾ ಪೊಲೀಸ್‌ ಠಾಣೆಯಲ್ಲಿ ಇರಿಸಲಾಗಿದೆ.

“ಶಾಲೆಯ ಮುಖ್ಯ ಶಿಕ್ಷಕ ಉದಯ್‌ ಕುಮಾರ್‌ ಸಿಂಗ್‌, ಶಿಕ್ಷಕ ಬಾಲಾಜಿ ಸೇರಿದಂತೆ ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಉಳಿದ 14 ಜನ ಅಪರಾಧಿಗಳು ಸದ್ಯ ನಮ್ಮ ಕೈಯಿಂದ ತಪ್ಪಿಸಿಕೊಂಡಿದ್ದಾರೆ. ಅವರನ್ನು ಬಂಧಿಸಲು ಬೇಕಾದ ಅಗತ್ಯ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ,” ಎಂದು ಏಕ್ಮಾ ಪೊಲೀಸ್‌ ಠಾಣೆಯ ಸ್ಟೇಷನ್ ಹೌಸ್‌ ಆಫೀಸರ್‌ ಅನುಜ್‌ ಕುಮಾರ್‌ ಸಿಂಗ್‌ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ವಿದ್ಯಾರ್ಥಿನಿ ದೂರು ದಾಖಲಿಸುತ್ತಿದ್ದಂತೆ ಮಹಿಳಾ ಪೊಲೀಸ್‌ ಠಾಣೆಯ ಇನ್‌ಚಾರ್ಜ್‌ ಇಂದಿರಾ ರಾಣಿ ವಿದ್ಯಾರ್ಥಿನಿಯನ್ನು ಜೆಲ್ಲಾ ಕೇಂದ್ರ ಸರನ್‌ಗೆ ಕರೆದುಕೊಂಡು ಹೋಗಿ ವೈದ್ಯಕೀಯ ಪರೀಕ್ಷೆ ಮಾಡಿಸಿದ್ದಾರೆ.

ಬಾಲಕಿ ನೀಡಿರುವ ದೂರಿನ ಪ್ರಕಾರ, ವಿದ್ಯಾರ್ಥಿನಿಯ ಈ ಸಂಕಷ್ಟ ಕಳೆದ ವರ್ಷ ಡಿಸೆಂಬರ್‌ ತಿಂಗಳ ಕೊನೆಯಲ್ಲಿ ಪ್ರಾರಂಭಗೊಂಡಿತ್ತು. ಶಾಲೆಯ ಶೌಚಾಲಯದಲ್ಲಿ 5 ಜನ ವಿದ್ಯಾರ್ಥಿಗಳು ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದರು. ವಿದ್ಯಾರ್ಥಿನಿಯ ಮೇಲೆ ನಡೆಸಿದ ಕ್ರೌರ್ಯವನ್ನು ಆರೋಪಿಗಳು ತಮ್ಮ ಮೊಬೈಲ್‌ ಫೋನ್‌ಗಳಿಂದ ಸೆರೆಹಿಡಿದಿದ್ದರು.

ಈ ವಿಷಯವನ್ನು ಬಹಿರಂಗಗೊಳಿಸಿದರೆ ವಿಡಿಯೊ ರಿಲೀಸ್‌ ಮಾಡುವುದಾಗಿ ವಿದ್ಯಾರ್ಥಿನಿಯನ್ನು ಹೆದರಿಸಿದ್ದ ವಿದ್ಯಾರ್ಥಿಗಳು ಹಲವಾರು ಬಾರಿ ಆಕೆಯ ಮೇಲೆ ಕ್ರೌರ್ಯ ಎಸಗಿದ್ದರು. ನಂತರದ ದಿನಗಳಲ್ಲಿ ಇನ್ನಿತರ ವಿದ್ಯಾರ್ಥಿಗಳೂ ಕೂಡ ಈ ಕುಕೃತ್ಯದಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ.

“ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆದು 17 ದಿನಗಳು ಕಳೆದ ಬಳಿಕ ಶಾಲಾ ಮುಖ್ಯ ಶಿಕ್ಷಕರಿಗೆ ಮತ್ತು ಇಬ್ಬರು ಸಹ ಶಿಕ್ಷಕರಿಗೆ ಸುದ್ದಿ ತಲುಪಿತ್ತು. ವಿದ್ಯಾರ್ಥಿಯನ್ನು ಸಂಕಷ್ಟದಿಂದ ಪಾರು ಮಾಡಬೇಕಿದ್ದ ಇವರೇ ವಿದ್ಯಾರ್ಥಿನಿಯನ್ನು ಬಳಸಿಕೊಳ್ಳಲು ಪ್ರಾರಂಭಿಸಿದ್ದರು. ವಿದ್ಯಾರ್ಥಿಗಳ ಜತೆ ಸೇರಿ ಹಲವಾರು ತಿಂಗಳುಗಳಿಂದ ಶಾಲೆಯ ಆವರಣದಲ್ಲೇ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ್ದರು,” ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಸಂತ್ರಸ್ತ ಬಾಲಕಿಯ ತಂದೆ ಹೊರರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಈ ವಾರದ ಮೊದಲ ದಿನಗಳಲ್ಲಿ ತಂದೆ ಮನೆಗೆ ಬಂದಾಗ ಬಾಲಕಿ ತನ್ನ ಕಷ್ಟವನ್ನು ತಂದೆಯ ಮುಂದೆ ಹೇಳಿಕೊಂಡಿದ್ದಳು. ವಿದ್ಯಾರ್ಥಿನಿಯ ಜತೆ ಶಾಲೆಗೆ ತೆರಳಿ ಶಿಕ್ಷಕರಿಗೆ ಎಚ್ಚರಿಕೆ ನೀಡಲು ಮುಂದಾದಾಗ ಸಂತ್ರಸ್ತೆಯ ತಂದೆಯನ್ನು ಶಾಲಾ ಆವರಣದಿಂದ ಹೊರದಬ್ಬಿದ್ದರು. ನಂತರದಲ್ಲಿ ಮಗಳೊಂದಿಗೆ ಬಂದು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಈ ಕುರಿತು ಸುದ್ಧಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಸರನ್ ಜಿಲ್ಲೆಯ ಪೊಲೀಸ್‌ ಅಧೀಕ್ಷಕ ಹರಿ ಕಿಶೋರ್‌ ರಾಯ್‌, “ಪೊಲೀಸ್‌ ಅಧಿಕಾರಿಗಳ ತಂಡವೊಂದು ಈ ದೂರು ಕುರಿತಾಗಿಯೇ ಕೆಲಸ ನಿರ್ವಹಿಸುತ್ತಿದೆ. ಬೇರೆ ಬೇರೆ ಆಯಾಮಗಳಲ್ಲಿ ಈ ಪ್ರಕರಣದ ವಿಚಾರಣೆ ನಡೆಸಲಾಗುತ್ತಿದೆ. ಈಗಾಗಲೇ 4 ಜನರನ್ನು ಬಂಧಿಸಿದ್ದು, ಉಳಿದ 14 ಜನರನ್ನು ಶ್ರೀಘ್ರದಲ್ಲೇ ಬಂಧಿಸಲಾಗುವುದು. ಈ ದೂರನ್ನು ಶೀಘ್ರವಾಗಿ ವಿಚಾರಣೆ ನಡೆಸುವಂತೆ ನ್ಯಾಯಾಲಯದಲ್ಲಿ ಮನವಿ ಮಾಡುತ್ತೇವೆ,” ಎಂದು ತಿಳಿಸಿದ್ದಾರೆ.

ಬಾಲಕಿಯ ಮೇಲೆ ದೌರ್ಜನ್ಯ ನಡೆದಾಗ ಸಂತ್ರಸ್ತ ಬಾಲಕಿಯ ಪರ ನಿಂತು ನ್ಯಾಯ ಕೊಡಿಸಬೇಕಿದ್ದ ಮುಖ್ಯ ಶಿಕ್ಷಕ ಮತ್ತು ಸಹ ಶಿಕ್ಷಕರೇ ಬಾಲಕಿಯ ಮೇಲೆ ಕ್ರೌರ್ಯವನ್ನು ಎಸಗಿದ್ದಾರೆ. ಈ ಪ್ರಕರಣ ಇನ್ನು ಮುಂದೆ ಶಾಲಾ ಆಡಳಿತ ಮಂಡಳಿಗಳನ್ನೇ ಅನುಮಾನದಿಂದ ನೋಡುವಂತೆ ಮಾಡಿರುವುದು ಸುಳ್ಳಲ್ಲ.