samachara
www.samachara.com
ಪನಾಮಾ ಪೇಪರ್ಸ್‌: ಪಾಕ್ ಮಾಜಿ ಪ್ರಧಾನಿ ನವಾಜ್‌ ಷರೀಫ್‌ಗೆ 10 ವರ್ಷ ಜೈಲು ಶಿಕ್ಷೆ
ಸುದ್ದಿ ಸಾರ

ಪನಾಮಾ ಪೇಪರ್ಸ್‌: ಪಾಕ್ ಮಾಜಿ ಪ್ರಧಾನಿ ನವಾಜ್‌ ಷರೀಫ್‌ಗೆ 10 ವರ್ಷ ಜೈಲು ಶಿಕ್ಷೆ

ಪನಾಮಾ ಪೇಪರ್ಸ್ ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್‌ 10 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಷರೀಫ್‌ ಜತೆಗೆ ಅವರ ಪುತ್ರಿ ಮತ್ತು ಅಳಿಯನಿಗೂ ಕೂಡ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ.

samachara

samachara

ಇಸ್ಲಾಮಾಬಾದ್‌ನ ಭ್ರಷ್ಚಾಚಾರ ನಿಯಂತ್ರಣ ನ್ಯಾಯಾಲಯ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಶರೀಫ್‌ಗೆ 10 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ. ಜತೆಗೆ ನವಾಜ್‌ ಶರೀಫ್‌ ಮಗಳು ಮರಿಯಮ್‌ ನವಾಜ್‌ಗೆ 7 ವರ್ಷ ಹಾಗೂ ಅಳಿಯ ನಿವೃತ್ತ ಕ್ಯಾಪ್ಟನ್‌ ಸಫ್ದಾರ್‌ 1 ವರ್ಷದ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.

ಜೈಲು ಶಿಕ್ಷೆಯಷ್ಟೇ ಅಲ್ಲದೇ ನ್ಯಾಯಾಲಯ ನವಾಜ್‌ ಶರೀಫ್‌ಗೆ 8 ಮಿಲಿಯನ್‌ ಪೌಂಡ್ಸ್‌ ಹಾಗೂ ಮರಿಯಮ್‌ಗೆ 2 ಮಿಲಿಯನ್‌ ಪೌಂಡ್ಸ್‌ ದಂಡವನ್ನು ವಿಧಿಸಿದೆ. ನವಾಜ್‌ ಶರೀಫ್‌ ಪರ ವಕೀಲರು ಈ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ತಿಳಿಸಿದ್ದಾರೆ.

ಸದ್ಯ ಶರೀಫ್‌ ಪತ್ನಿಯ ಚಿಕಿತ್ಸೆಯ ಕಾರಣಕ್ಕೆ ಕಳೆದ 3 ವಾರಗಳಿಂದ ಲಂಡನ್‌ನಲ್ಲಿದ್ದಾರೆ. ಹೀಗಾಗಿ ತೀರ್ಪನ್ನು ಮುಂದೂಡಬೇಕು ಎಂದು ಷರೀಫ್‌ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಆದರೆ ನ್ಯಾಯಮೂರ್ತಿ ಮೊಹಮ್ಮದ್‌ ಬಶೀರ್‌, ಶರೀಫ್‌ ಮನವಿಯನ್ನು ತಿರಸ್ಕರಿಸಿದ್ದಾರೆ.

ತಮ್ಮ ಪತ್ನಿಗೆ ಚಿಕಿತ್ಸೆ ನೀಡಿಸುತ್ತಿರುವ ಕಾರಣದಿಂದ ತೀರ್ಪನ್ನು 7 ದಿನಗಳ ನಂತರ ನೀಡುವಂತೆ ನವಾಜ್‌ ಶರೀಫ್‌ ಕೋರಿದ್ದರು. ಆದರೆ ಕೋರ್ಟ್ ಮನವಿಯನ್ನು ನಿರಾಕರಿಸಿದ್ದು, ತನ್ನ ಪತ್ನಿ ಚೇತರಿಸಿಕೊಂಡ ನಂತರವಷ್ಟೇ ಪಾಕಿಸ್ತಾನಕ್ಕೆ ಮರಳುವುದಾಗಿ ಷರೀಫ್‌ ಪ್ರತಿಜ್ಞೆ ಮಾಡಿದ್ದಾರೆ ಎನ್ನಲಾಗಿದೆ.

ಪನಾಮಾ ಪೇಪರ್ಸ್‌ನಿಂದ ಬೆಳಕಿಗೆ ಬಂದ ಭ್ರಷ್ಟಾಚಾರದಲ್ಲಿ ನವಾಜ್‌ ಷರೀಫ್‌ ಹೆಸರು ಕೇಳಿ ಬಂದಿತ್ತು. ನವಾಜ್‌ ಶರೀಫ್‌ ಮತ್ತು ಅವರ ಪುತ್ರಿ ಮರಿಯಮ್‌ ಹೆಸರಿನಲ್ಲಿ ಲಂಡನ್‌ನಲ್ಲಿ ಐಶಾರಾಮಿ ಬಂಗಲೆಗಳಿವೆ ಎನ್ನಲಾಗಿತ್ತು. ಜತೆಗೆ ಅಧಿಕೃತ ದಾಖಲೆಗಳೂ ಕೂಡ ದೊರೆತಿದ್ದವು. ಈ ದಾಖಲೆಗಳು ಬಿಡುಗಡೆಯಾದಾಗ ಪಾಕಿಸ್ತಾನದ ಜನ ಪ್ರಧಾನಿ ನವಾಜ್‌ ಶರೀಫ್‌ ವಿರುದ್ಧ ನಿಂತಿದ್ದರು.

ಈ ಕುರಿತು 2017ರ ಜುಲೈ ತಿಂಗಳಲ್ಲಿ ವಿಚಾರಣೆ ನಡೆಸಿದ್ದ ಪಾಕಿಸ್ತಾನದ ಸುಪ್ರಿಂ ಕೋರ್ಟ್, ಲಂಡನ್‌ನಲ್ಲಿ ಶರೀಫ್‌ ಖರೀದಿಸಿರುವ ಬಂಗಲೆಗಳ ಬಗ್ಗೆ ಪ್ರಶ್ನೆಯೆತ್ತಿತ್ತು. ಬಂಗಲೆಗಳನ್ನು ತನ್ನ ಸ್ವಂತ ಆದಾಯದಿಂದಲೇ ಕೊಂಡಿರುವುದಾಗಿ ಶರೀಫ್‌ ಕುಟುಂಬ ವಾದಿಸಿತ್ತಾದರೂ, ಅಧಿಕೃತ ದಾಖಲೆಗಳನ್ನು ಒದಗಿಸುವಲ್ಲಿ ಸೋತ್ತಿತ್ತು.

ಆಗಲೇ ನ್ಯಾಯಾಲಯವು ನವಾಜ್‌ ಶರೀಫ್‌ರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಿತ್ತು. ಈಗ ತನ್ನ ಅಂತಿಮ ತೀರ್ಪನ್ನು ಪ್ರಕಟಿಸಿರುವ ಇಸ್ಲಾಮಾಬಾದ್‌ನ ಭ್ರಷ್ಟಾಚಾರ ನಿಯಂತ್ರಣ ನ್ಯಾಯಾಲಯ, ನವಾಜ್‌ ಶರೀಫ್‌ ಜತೆಗೆ ಅವರ ಪುತ್ರಿ ಮತ್ತು ಅಳಿಯನಿಗೂ ಕೂಡ ಜೈಲು ಶಿಕ್ಷೆ ವಿಧಿಸಿದೆ.

ಇದೇ ಜುಲೈ 25ರಂದು ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಈ ಬಾರಿಯ ಚುನಾವಣೆಯಲ್ಲಿ ಷರೀಫ್‌ ಪುತ್ರಿ ಮರಿಯಮ್‌ ಕೂಡ ಸ್ಪರ್ಧೆಗೆ ನಿಂತಿದ್ದರು. ಆದರೆ ಈಗ ಹೊಣೆಗಾರಿಕಾ ನ್ಯಾಯಾಲಯ ನೀಡಿರುವ ತೀರ್ಪು ಮರಿಯಮ್‌ರನ್ನು ಅಪರಾಧಿ ಎಂದು ಘೋಷಿಸಿದ್ದು, ಚುನಾವಣೆಗೆ ನಿಲ್ಲುವ ಅವಕಾಶವನ್ನು ಮರಿಯಮ್ ಕಳೆದುಕೊಳ್ಳುವ ಸಾಧ್ಯತೆ ಇದೆ.