ಮಕ್ಕಳ ಕಳ್ಳರ ವದಂತಿ; ಜನರಿಂದ ಸಾಧುಗಳನ್ನು ರಕ್ಷಿಸಿದ ಸೈನಿಕರು
ಸುದ್ದಿ ಸಾರ

ಮಕ್ಕಳ ಕಳ್ಳರ ವದಂತಿ; ಜನರಿಂದ ಸಾಧುಗಳನ್ನು ರಕ್ಷಿಸಿದ ಸೈನಿಕರು

ಅಸ್ಸಾಂನ ದಿಮಾ ಹಸಾವೊ ಜಿಲ್ಲೆಯ ರೈಲ್ವೇ ನಿಲ್ದಾಣದ ಬಳಿ ಮಕ್ಕಳ ಕಳ್ಳರೆಂಬ ಗುಮಾನಿಯ ಮೇಲೆ ಜನರಿಂದ ಹಲ್ಲೆಗೊಳಗಾಗುತ್ತಿದ್ದ 3 ಜನ ಸಾಧುಗಳನ್ನು ಸೈನಿಕರು ಮತ್ತು ಪೊಲೀಸರು ರಕ್ಷಿಸಿದ್ದಾರೆ.

ಮಕ್ಕಳ ಕಳ್ಳರು ಎಂಬ ಗುಮಾನಿಯಿಂದ ಜನರಿಂದ ಹಲ್ಲೆಗೊಳಗಾಗುತ್ತಿದ್ದ 3 ಜನ ಸಾಧುಗಳನ್ನು ಸೈನಿಕರು ಮತ್ತು ಪೊಲೀಸರು ರಕ್ಷಿಸಿದ್ದಾರೆ. ಅಸ್ಸಾಮ್‌ ರಾಜ್ಯದ ದಿಮಾ ಹಸಾವೊ ಜಿಲ್ಲೆಯ ಮಾಹೂರ್‌ ರೈಲ್ವೇ ನಿಲ್ದಾಣದ ಬಳಿ ಜನರು ಸಾಧುಗಳಿಗೆ ಥಳಿಸಲು ಮುಂದಾಗಿದ್ದರು ಎಂದು ಶುಕ್ರವಾರ ಅಧಿಕಾರಿಗಳು ತಿಳಿಸಿದ್ದಾರೆ. 

ಗುರುವಾರ ಮಾಹೂರ್‌ ರೈಲ್ವೇ ನಿಲ್ದಾಣದ ಬಳಿ ನೂರಾರು ಜನ ಮೂರು ಜನ ಸಾಧುಗಳನ್ನು ಮಕ್ಕಳ ಕಳ್ಳರೆಂದು ಭಾವಿಸಿ ಹೊಡೆಯಲು ಮುಂದಾಗಿದ್ದರು. ಅಲ್ಲೇ ಹತ್ತಿರದ ಕ್ಯಾಂಪ್‌ನಲ್ಲಿದ್ದ ಸೈನಿಕರು ಮತ್ತು ಸ್ಥಳೀಯ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಬಂದು ಜನರಿಂದ ಅನ್ಯಾಯವಾಗಿ ಹಲ್ಲೆಗೊಳಗಾಗುತ್ತಿದ್ದ ಸಾಧುಗಳನ್ನು ರಕ್ಷಿಸಿದ್ದಾರೆ ಎಂದು ದಿಮಾ ಹಸಾವೊ ಜಿಲ್ಲಾಧಿಕಾರಿಗಳು ಹೇಳಿದ್ದಾರೆ.

ಸಾಧುಗಳ ಬಳಿಯಿದ್ದ ಸರಕು ಸರಂಜಾಮುಗಳನ್ನು ಜನ ಬೀದಿಯಲ್ಲಿ ಎಸೆದಾಡಿದ್ದು, ಅದನ್ನು ವಿಡಿಯೋ ಮಾಡಿದ್ದಾರೆ. ಈ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಆರಂಭವಾಗಿದೆ. ನಂತರದಲ್ಲಿ ವಿಷಯ ತಿಳಿದ ಪೊಲೀಸರು ನಡೆಯುತ್ತಿದ್ದ ಕ್ರೌರ್ಯವನ್ನು ತಡೆಯುವಲ್ಲಿ ಸಫಲರಾಗಿದ್ದಾರೆ.

ಜಿಲ್ಲೆಯಲ್ಲಿ ಈ ಘಟನೆ ವರದಿಯಾಗುತ್ತಿದ್ದಂತೆ ಜಿಲ್ಲಾಧಿಕಾರಿ ಅಮಿತಾಬ್‌ ರಾಜ್ಕೋವಾ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠ ಪ್ರಶಾಂತ್ ಸೈಕಿಯಾ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಸಭೆ ನಡೆಸಲಾಗಿದೆ.

ಜಿಲ್ಲೆಯಲ್ಲಿನ ಹಲವಾರು ಸಮುದಾಯಗಳ ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗಿದ್ದಾರೆ. ಜಿಲ್ಲಾ ಜನತೆಯಲ್ಲಿ ಮುಖ್ಯವಾಗಿ ದೀಮಾ ಹಸಾವೋ ನಗರದ ಜನರಲ್ಲಿ ವಂದತಿಗಳಿಗೆ ಕಿವಿಗೊಟ್ಟು ಅನಾಹುತಗಳನ್ನು ನಡೆಸಬೇಡಿ ಎಂದು ಮನವಿ ಮಾಡಿದ್ದಾರೆ. ಜತೆಗೆ ಜವಾಬ್ದಾರಿಯುತವಾಗಿ ನಡೆದುಕೊಳ್ಳುವಂತೆ ಸೂಚಿಸಿದ್ದಾರೆ.

ದಿಮಾ ಹಸಾವೊ ಜನತೆಗೆ ಕಾನೂನನ್ನು ಕೈಗೆತ್ತಿಕೊಳ್ಳದಂತೆ ಸೂಚಿಸಿದ್ದು, ಯಾವುದಾದರೂ ವ್ಯಕ್ತಿ ಅನುಮಾನಾಸ್ಪದವಾಗಿ ಕಂಡರೆ, ಸಂಬಂಧಪಟ್ಟ ಅಧಿಕಾರಿಗಳಿಗೆ ಆ ಕೂಡಲೇ ಮಾಹಿತಿ ನೀಡಿ ಎಂದು ತಿಳಿಸಲಾಗಿದೆ.

ಕಳೆದ ಕೆಲವು ವಾರಗಳ ಹಿಂದೆ ಜಿಲ್ಲಾ ಆಡಳಿತವು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬುತ್ತಿರುವ ವದಂತಿಗಳ ಕುರಿತಾಗಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಕೈಗೊಂಡಿತ್ತು. ಆದರೂ ಕೂಡ ಇಂತಹ ಘಟನೆ ಜಿಲ್ಲೆಯಲ್ಲಿ ಘಟಿಸಿದೆ.

ಜೂನ್‌ 8ರಂದು ಇಂತಹದ್ದೇ ಘಟನೆ ದಿಮಾ ಹಸಾವೊ ಸಮೀಪದಲ್ಲೇ ನಡೆದಿತ್ತು. ಪ್ರವಾಸಿ ತಾಣ ಕರ್ಬಿ ಅಂಗ್ಲಾಂಗ್‌ ಬಳಿ ಬೈಕ್‌ ಮೇಲೆ ತೆರಳುತ್ತಿದ್ದ ಇಬ್ಬರನ್ನು ಮಕ್ಕಳ ಕಳ್ಳರೆಂದು ಅನುಮಾನಿಸಿದ್ದ ಸ್ಥಳೀಯ ಜನ, ಅವರನ್ನು ಬೈಕ್‌ನಿಂದ ಕೆಳಗಿಸಿ ಥಳಿಸಿದ್ದರು.

Also read: ಮಕ್ಕಳ ಕಳ್ಳರ ವದಂತಿಗೆ ಅಮಾಯಕರ ಸಾವು; ರಾಜ್ಯಗಳಿಗೆ ನಿರ್ದೇಶನ ನೀಡಿದ ಕೇಂದ್ರ ಸರಕಾರ